| ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್) ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾಮನ್ ಕೇಡರ್ ಅಥಾರಿಟಿ (ಸಿಸಿಎ) ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಆ ಮೂಲಕ ರೈತರಿಗೆ ನೀಡುವ ಸಾಲ ಯೋಜನೆಗಳಲ್ಲಿ ನಡೆಯುವ ಅಕ್ರಮಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ.
ಸಹಕಾರ ಸಂಘಗಳ ಸುಧಾರಣೆಗೆ ಸಂಬಂಧಿಸಿದಂತೆ 2009-10ರಲ್ಲಿ ವೈದ್ಯನಾಥನ್ ವರದಿಯ ಶಿಫಾರಸುಗಳನ್ನು ಒಪ್ಪಿದ ನಂತರ ಶಿಸ್ತು ಪ್ರಾಧಿಕಾರಗಳಾಗಿ ಪ್ಯಾಕ್ಸ್​ಗಳ ಆಡಳಿತ ಮಂಡಳಿಗಳೇ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಅಕ್ರಮ ಹೆಚ್ಚಲು ಕಾರಣವಾಗಿದೆ. ರೈತರಿಗೆ ವಿವಿಧ ಯೋಜನೆಗಳಲ್ಲಿ ಪ್ರತಿ ವರ್ಷ 20 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತದೆ. ಅದನ್ನು ಕೆಲ ಸಹಕಾರ ಸಂಘಗಳು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಮೂಲಗಳು ಹೇಳುತ್ತವೆ.
ರಾಜ್ಯದಲ್ಲಿ ಒಟ್ಟಾರೆ 6040 ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಇವುಗಳ ನಿರ್ವಹಣೆಯಲ್ಲಿ ಸಿಇಒ ಪಾತ್ರ ದೊಡ್ಡದಿದೆ. ಆದ್ದರಿಂದಲೇ ಪ್ಯಾಕ್ಸ್ ಮತ್ತು ಹಾಲು ಉತ್ಪಾದಕರ ಸಂಘಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಅದು ಹಣ ದುರುಪಯೋಗ ತಡೆಯಲು ಸಾಧ್ಯವಾಗದ ಸ್ಥಿತಿಯನ್ನು ತಂದಿಟ್ಟಿದೆ.
ಇಂತಹ ಅಕ್ರಮಗಳಿಗೆ ಕಡಿವಾಣ ಹಾಕದೇ ಇದ್ದರೆ ಭ್ರಷ್ಟಾಚಾರ ಇನ್ನಷ್ಟು ಮಿತಿ ಮೀರುತ್ತದೆ ಎಂಬುದನ್ನು ಮನಗಂಡು ಕಾಮನ್ ಕೇಡರ್ ಅಥಾರಿಟಿಯನ್ನು ತರುವ ಪ್ರಯತ್ನಕ್ಕೆ ಸರ್ಕಾರ ತೀರ್ಮಾನ ಮಾಡಿದೆ. ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕಾರ್ಯದರ್ಶಿಗಳ ಮೇಲೆ ನಿಯಂತ್ರಣ ಸಾಧಿಸಬಹುದೆಂಬ ಉದ್ದೇಶವನ್ನು ಸರ್ಕಾರ ಹೊಂದಿದೆ.
ಕಾಮನ್ ಕೇಡರ್ ಅಥಾರಿಟಿ ಬಹಳ ವರ್ಷಗಳ ಹಿಂದೆ ಜಾರಿಯಲ್ಲಿತ್ತು. ವೈದ್ಯನಾಥನ್ ವರದಿ ಶಿಫಾರಸುಗಳು ಜಾರಿಗೆ ಬಂದ ನಂತರ ರದ್ದಾಗಿತ್ತು. ಇದು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿತ್ತು. ಆದ್ದರಿಂದ ಮತ್ತೆ ಸಿಸಿಎ ಜಾರಿಯ ಮೂಲಕವೇ ನಿಯಂತ್ರಣ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸಹಕಾರ ಸಂಘಗಳ ರಿಜಿಸ್ಟ್ರಾರ್ ಸಹಕಾರ ಚಳವಳಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿಸಿಎ ಅನ್ನು ರಚನೆ ಮಾಡಲಿದ್ದಾರೆ. ರಾಜ್ಯ ಮಟ್ಟದಲ್ಲಿರುವ ಒಕ್ಕೂಟಗಳ ಹಿರಿಯ ಅಧಿಕಾರಿಯನ್ನು ಸಿಸಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಅದರ ಜತೆಗೆ ಇಲಾಖೆಯ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಲಾಗುತ್ತದೆ. ಅವರು ಸಿಸಿಎಯಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ. ಸಹಕಾರ ಸಂಘಗಳ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತುಕ್ರಮಗಳ ಅಧಿಕಾರ ಚಲಾಯಿಸಲು ಈ ಅಥಾರಿಟಿಗೆ ಅಧಿಕಾರ ನೀಡಲಾಗುತ್ತದೆ. ಆರೋಪ ಇರುವ ಸಂಘಗಳು ನೇರವಾಗಿ ಪತ್ರ ವ್ಯವಹಾರ ಮಾಡುವಂತಿಲ್ಲ. ಪ್ರತಿ ವರ್ಷ ಒಕ್ಕೂಟಗಳಿಗೆ ವಂತಿಕೆ ನೀಡುವ ಸಂಘಗಳನ್ನು ಈ ಅಥಾರಿಟಿಯ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಅಥಾರಿಟಿಯು ಕೇವಲ ಶಿಸ್ತುಕ್ರಮಗಳನ್ನು ಮಾತ್ರ ಕೈಗೊಳ್ಳುವುದಿಲ್ಲ, ಬದಲಾಗಿ ನೌಕರರ ಹಿತವನ್ನು ಕಾಯುತ್ತದೆ. ಆ ರೀತಿಯಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಸಹಕಾರ ಇಲಾಖೆಯ ಮೂಲಗಳು ಹೇಳುತ್ತವೆ.
ಸಂಘಗಳಿಂದಲೇ ವೆಚ್ಚ:ಸಿಸಿಎ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಸಹಕಾರ ಸಂಘಗಳ ಮೂಲಕ ವಂತಿಕೆ ಭರಿಸಲಾಗುತ್ತದೆ. ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ವಂತಿಕೆ ನಿರ್ಧಾರ ಮಾಡಬೇಕು.
ಐತೀರ್ಪಿನ ರೀತಿ:ಅಕ್ರಮ ಮಾಡುವ ಯಾವುದೇ ಸಹಕಾರ ಸಂಘಗಳ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಸಿಸಿಎ ನೀಡುವ ತೀರ್ಪು ವಿವಿಧ ನ್ಯಾಯಮಂಡಳಿಗಳು ನೀಡುವ ಐತೀರ್ಪಿನ ರೀತಿಯಲ್ಲಿ ಜಾರಿಯೋಗ್ಯವಾಗಿರುತ್ತವೆ ಎಂದು ಮೂಲಗಳು ಹೇಳುತ್ತವೆ.
ಕಾನೂನು ತಿದ್ದುಪಡಿ:ಸಹಕಾರ ಸಂಘಗಳಲ್ಲಿ ಸಿಸಿಎಯನ್ನು ಜನರಿಗೆ ತರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ಕ್ಕೆ ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿ ಕಾಯ್ದೆಗೆ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ಇದೇ ಅಧಿವೇಶನದಲ್ಲಿಯೇ ಈ ಕಾಯ್ದೆ ಮಂಡನೆಯಾಗಲಿದೆ. ಕೇಂದ್ರದಲ್ಲಿ ಜಾರಿಯಲ್ಲಿರುವ ಸಹಕಾರ ಕಾಯ್ದೆಗೆ ಇದು ವ್ಯತಿರಿಕ್ತ ಅಲ್ಲದೇ ಇರುವುದರಿಂದ ರಾಷ್ಟ್ರಪತಿ ಒಪ್ಪಿಗೆಯ ಅಗತ್ಯವಿಲ್ಲವೆಂದು ಮೂಲಗಳು ಸ್ಪಷ್ಟಪಡಿಸಿವೆ.
ಎಷ್ಟು ದುರುಪಯೋಗ?:ಇಲಾಖೆಯಲ್ಲಿ ಲಭ್ಯ ಮಾಹಿತಿಯ ಪ್ರಕಾರ ಕಳೆದ ಹಲವು ವರ್ಷಗಳಿಂದ 487 ಪ್ರಕರಣಗಳಲ್ಲಿ 114.09 ಕೋಟಿ ರೂ.ಗಳಷ್ಟು ಮೊತ್ತದ ಹಣ ದುರುಪಯೋಗ ಪತ್ತೆಯಾಗಿದೆ. ಅಕ್ರಮಗಳ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇದ್ದರೂ ಶಿಸ್ತು ಪ್ರಾಧಿಕಾರಗಳಾದ ಆಡಳಿತ ಮಂಡಳಿಗಳು ಆ ನಿಟ್ಟಿನಲ್ಲಿ ವಿಫಲವಾಗಿವೆ. ಅದು ರೈತರಿಗೆ ಆಗುತ್ತಿರುವ ಅನ್ಯಾಯವೂ ಆಗಿದೆ ಎಂದೇ ಭಾವಿಸಲಾಗಿದೆ.
ಮೋಸ ಹೇಗೆ?::ಪ್ಯಾಕ್ಸ್​ಗಳಲ್ಲಿ ರೈತರ ಹೆಸರಿನಲ್ಲಿ ಸಾಲ ನೀಡದೇ ಕೇವಲ ಬುಕ್ ಅಡ್ಜೆಸ್ಟ್​ಮೆಂಟ್ ನಡೆಯುವುದೇ ಹೆಚ್ಚು. ಆಡಳಿತ ಮಂಡಳಿ, ಸಿಬ್ಬಂದಿ ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆದ್ದರಿಂದ ಹೊಸ ರೈತರಿಗೆ ಸಾಲ ಸಿಗುವುದೇ ಕಡಿಮೆ. ಆದ್ದರಿಂದಲೇ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ತಾಯಿ ಜೊತೆಗಿದ್ದಾಗಲೇ ಮಗಳ ಅಪಹರಣ; ಸಂಜೆಯ ಸುಮಾರಿಗೆ ಮಹತ್ವದ ತಿರುವು ಪಡೆದ ಪ್ರಕರಣ!

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಮುಂದುವರಿಕೆ!; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
