|ಕೀರ್ತಿನಾರಾಯಣ ಸಿ.ಬೆಂಗಳೂರು
ಭಯೋತ್ಪಾದನೆಗೆ ನೆರವು ನೀಡುತ್ತಿರುವ ಆರ್ಥಿಕ ಮೂಲಗಳ ಬೇರುಗಳನ್ನೇ ಕತ್ತರಿಸಲು ಕೇಂದ್ರ ಸರ್ಕಾರ ಮಾಸ್ಟರ್​ಪ್ಲಾ್ಯನ್ ಸಿದ್ಧಪಡಿಸಿದೆ. ಟೆರರ್ ಫಂಡಿಂಗ್ ಮೇಲೆ ನಿಗಾ ವಹಿಸಲು ಪ್ರತ್ಯೇಕ ‘ಸಚಿವಾಲಯ’ ಸ್ಥಾಪನೆ ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್​ಗಳ ಆಸ್ತಿ ಜಪ್ತಿ ಮಾಡಲು ‘ಸಿಲ್ವರ್ ನೋಟಿಸ್’ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆದಿದೆ. ಏತನ್ಮಧ್ಯೆ ಮಿತ್ರರಾಷ್ಟ್ರಗಳ ಜತೆ ಭಯೋತ್ಪಾದನೆ ಹಾಗೂ ಇತರ ಗಂಭೀರ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಯಮಕ್ಕಾಗಿ ಸಿಬಿಐಗೆ ಸರ್ಕಾರ ಅನುಮತಿ ನೀಡಿದೆ. ಉಗ್ರರು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಭಯೋತ್ಪಾದಕ ಕೃತ್ಯವೆಸಗಲು ಯತ್ನಿಸುತ್ತಿದ್ದಾರೆ. ಡ್ರೋನ್ ಬಳಕೆ, ಜಿಪಿಎಸ್ ವ್ಯವಸ್ಥೆ ಹಾಗೂ ಎನ್ಕ್ರಿಪ್ಟೆಡ್ ಸಂದೇಶಗಳ ವಿನಿಮಯದ ಮೂಲಕ ಸಂಚು ರೂಪಿಸುತ್ತಿರುವ ವಿಚಾರ ಇಂಟಲಿಜೆನ್ಸ್ ಸಂಸ್ಥೆ ಗಳಿಗೆ ಗೊತ್ತಾಗಿದೆ. ಆದರೆ, ಇದನ್ನು ಪತ್ತೆಹಚ್ಚುವುದು ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿ ನಲ್ಲಿ ಭಾರತ ಸೇರಿ ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು ಎಂಬ ವಿಚಾರವನ್ನು ಕೇಂದ್ರ ಸರ್ಕಾರ ಅಕ್ಟೋಬರ್ 18 ರಿಂದ 21ರವರೆಗೆ ದೆಹಲಿಯಲ್ಲಿ ಆಯೋಜಿಸಿದ್ದ ಇಂಟರ್​ಪೋಲ್ ಸಭೆಯಲ್ಲಿ ಮಂಡನೆಯಾದ ಜಾಗತಿಕ ಅಪರಾಧ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಲ್ವರ್ ನೋಟಿಸ್ ಜಾರಿಗೂ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ವ್ಯವಸ್ಥೆ ಜಾರಿಯಾದರೆ ಹೊರದೇಶಗಳಲ್ಲಿರುವ ಆರ್ಥಿಕ ಅಪರಾಧಿಗಳು, ಉಗ್ರರಿಗೆ ಹಣದ ನೆರವು ಕೊಡುತ್ತಿರುವವರು ಹಾಗೂ ಬಿಟ್ ಕಾಯಿನ್ ವಿನಿಮಯ ಮತ್ತು ಸಂಗ್ರಹ ದಂಧೆ ನಡೆಸುತ್ತಿರುವವರನ್ನು ಪತ್ತೆಹಚ್ಚಲು ಸುಲಭವಾಗಲಿದೆ. ಅಲ್ಲದೇ, ಅಂತಾರಾಷ್ಟ್ರೀಯ ಕ್ರಿಮಿನಲ್​ಗಳನ್ನು ಪತ್ತೆಹಚ್ಚಿ ಅವರು ಹೊಂದಿರುವ ಆಸ್ತಿಗಳನ್ನು ಜಪ್ತಿ ಮಾಡಲು ಇಂಟರ್​ಪೋಲ್​ಗೆ ಇನ್ನಷ್ಟು ಕಾನೂನಿನ ಬಲ ಸಿಗಲಿದೆ. ಇದರೊಂದಿಗೆ ಭಯೋತ್ಪಾದಕ ಕೃತ್ಯವೆಸಗಲು ಸಂಘಟನೆಗಳಿಗೆ ಸಿಗುತ್ತಿರುವ ಹಣಕಾಸಿನ ನೆರವಿನ ಸಂಪರ್ಕ ಶಾಶ್ವತವಾಗಿ ಬಂದ್ ಆಗಲಿದೆ ಎಂಬ ಲೆಕ್ಕಾಚಾರ ನಡೆದಿದೆ.
3 ವರ್ಷದಲ್ಲಿ 52 ಸಂಘಟನೆ ನಿಷ್ಕ್ರಿಯ:ವಿಶ್ವದಲ್ಲಿ ಕಳೆದ 3 ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ಉಗ್ರ ಸಂಘಟನೆಗಳು ನಿಷ್ಕ್ರಿಯಗೊಂಡಿವೆ. 2015ರಲ್ಲಿ 84 ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿದ್ದವು. 2021ರಲ್ಲಿ 32 ಸಂಘಟನೆಗಳು ಸಕ್ರಿಯವಾಗಿದ್ದು, ಉಳಿದ 52 ಸಂಘಟನೆಗಳು ನಿಷ್ಕ್ರಿಯಗೊಂಡಿವೆ ಎಂದು ಗ್ಲೋಬಲ್ ಟೆರರಿಸಂ ಇಂಡೆಕ್ಸ್​ನಲ್ಲಿ ಹೇಳಲಾಗಿದೆ.
ಫಿನ್-ಲೆಕ್ಸ್​ಗೆ ಸಿಬಿಐ ಎಂಟ್ರಿ:ಇಂಟರ್​ಪೋಲ್ ಅಭಿವೃದ್ಧಿಪಡಿಸಿರುವ ಫಿನ್-ಲೆಕ್ಸ್ (ಫೈನಾನ್ಸ್ ಟು ಲಾ ಎನ್​ಫೋರ್ಸ್​ವೆುಂಟ್ ಎಕ್ಸ್​ಚೇಂಜ್) ವೇದಿಕೆಗೆ ಸೇರಲು ಸಿಬಿಐಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಫಿನ್-ಲೆಕ್ಸ್​ನ ಉದ್ದೇಶವು ಭಯೋತ್ಪಾದನೆಯನ್ನು ಪತ್ತೆಹಚ್ಚಲು ಸದಸ್ಯ ರಾಷ್ಟ್ರಗಳ ಜತೆಗೆ ಮಾಹಿತಿ ವಿನಿಮಯ ಮಾಡಿಕೊಂಡು ನೆರವಾಗುವ ಜತೆಗೆ ಈಗಾಗಲೇ ಪ್ರಗತಿಯಲ್ಲಿರುವ ಪ್ರಕರಣಗಳ ತನಿಖೆಗೆ ಬೇಕಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಮಕ್ಕಳ ಲೈಂಗಿಕ ಶೋಷಣೆ (ಐಸಿಎಸ್​ಇ) ಡೇಟಾಬೇಸ್​ಗೂ ಸಿಬಿಐ ಸೇರ್ಪಡೆಗೊಂಡಿದ್ದು, ಮಾನವ ಕಳ್ಳಸಾಗಣೆ, ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಸಹಕಾರಿಯಾಗಲಿದೆ. ಯಾವುದೇ ರೀತಿಯ ಮಾಹಿತಿ ಸಿಬಿಐಗೆ ಸಿಗಲಿದೆ.
ನೋ ಮನಿ ಫಾರ್ ಟೆರರ್!:ನವೆಂಬರ್ 18-19 ರಂದು ದೆಹಲಿಯಲ್ಲಿ ನಡೆದ ಸಚಿವರ ಮಟ್ಟದ 3ನೇ ಸಮ್ಮೇಳನದಲ್ಲಿ ‘ನೋ ಮನಿ ಫಾರ್ ಟೆರರ್’ ಕುರಿತು ಮಾತುಕತೆ ನಡೆದಿದೆ. ಭಯೋತ್ಪಾದಕ ಸಂಘಟನೆಗಳ ಆರ್ಥಿಕ ಮೂಲಗಳ ಕಡಿತಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಬಗ್ಗೆ ಗಂಭೀರ ಚರ್ಚೆಯಾಗಿದೆ. ಉಗ್ರ ಸಂಘಟನೆಗಳಿಗೆ ಬೇರೆ ಬೇರೆ ಮೂಲಗಳಿಂದ ಆರ್ಥಿಕ ನೆರವು ಸಿಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ನಿಗಾ ಇರಿಸಬೇಕಾದ ಅಗತ್ಯವಿದೆ. ಆದ್ದರಿಂದ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂಬ ದನಿ ಎದ್ದಿದೆ. ಎಲ್ಲ ರಾಷ್ಟ್ರಗಳ ಒಪ್ಪಿಗೆ ಪಡೆದ ನಂತರ ಸಚಿವಾಲಯ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಸಚಿವಾಲಯ ತನಿಖಾ ಸಂಸ್ಥೆಯಾಗಿ ಕೆಲಸ ನಿರ್ವಹಿಸುವುದಿಲ್ಲ. ಬದಲಾಗಿ ಸದಸ್ಯ ರಾಷ್ಟ್ರಗಳ ಜತೆ ಮಾಹಿತಿ ಹಂಚಿಕೊಂಡು ಸಹಕಾರ ಹಾಗೂ ಸಮನ್ವಯ ಸಾಧಿಸಲಿದೆ.
ಸಾವು ಇಳಿದರೂ ದಾಳಿಗಳು ಏರಿಕೆ!:ವಿಶ್ವದಾದ್ಯಂತ 2021ರಲ್ಲಿ ಉಗ್ರರ ದಾಳಿಯಿಂದ 7,142 ಮಂದಿ ಹತರಾಗಿದ್ದಾರೆ. 2020ಕ್ಕೆ ಹೋಲಿಸಿದರೆ ಶೇ.1.1ರಷ್ಟು ಇಳಿಕೆಯಾಗಿದೆ. ಆದರೆ, 5,226 ಭಯೋತ್ಪಾದಕ ದಾಳಿಗಳಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ.17ರಷ್ಟು ಹೆಚ್ಚಾಗಿದೆ. ಮಧ್ಯಪ್ರಾಚ್ಯ, ಯುರೋಪ್, ರಷ್ಯಾ ಮತ್ತು ಯುರೇಷಿಯಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಉಗ್ರ ದಾಳಿಯ ಸಾವುಗಳು ಹೆಚ್ಚು ದಾಖಲಾಗಿವೆ. 2021ರಲ್ಲಿ 44 ದೇಶಗಳಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಭಯೋತ್ಪಾದಕ ದಾಳಿಗೆ ಬಲಿಯಾಗಿದ್ದಾನೆ. 2015ರಲ್ಲಿ 55 ದೇಶಗಳಲ್ಲಿ ಉಗ್ರ ದಾಳಿಯಿಂದ ಕನಿಷ್ಠ ಒಬ್ಬ ಮೃತಪಟ್ಟಿದ್ದ.
ಫಂಡಿಂಗ್ ಸಂಬಂಧ 64 ಕೇಸ್:ಕೇಂದ್ರ ಗೃಹ ಇಲಾಖೆ ಮಾಹಿತಿ ಪ್ರಕಾರ 2018ರಿಂದ 2021ರ ನವೆಂಬರ್ ಅಂತ್ಯದವರೆಗೆ ಕರ್ನಾಟಕ ಸೇರಿ ದೇಶಾದ್ಯಂತ ಉಗ್ರರಿಗೆ ಹಣ ವರ್ಗಾವಣೆ ಹಾಗೂ ನಕಲಿ ನೋಟು ಚಲಾವಣೆಗೆ ಸಂಬಂಧಿಸಿದಂತೆ ಎನ್​ಐಎ 64 ಪ್ರಕರಣಗಳನ್ನು ದಾಖಲಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆ 2022ರ ಅನ್ವಯ 24 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಉಳಿದ ಪ್ರಕರಣಗಳಲ್ಲಿ ಸಾಕ್ಷ್ಯಸಂಗ್ರಹ ಪ್ರಕ್ರಿಯೆ ಮುಂದುವರಿದಿದೆ.
77 ರಾಷ್ಟ್ರಗಳು, 700 ಪ್ರತಿನಿಧಿಗಳು:ದೆಹಲಿಯಲ್ಲಿ ನಡೆದ 90ನೇ ಇಂಟರ್​ಪೋಲ್ ಸಭೆಯಲ್ಲಿ ಇಂಟರ್​ಪೋಲ್​ನ 166 ಸದಸ್ಯ ರಾಷ್ಟ್ರಗಳ 700ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು. ಸಚಿವರ ಮಟ್ಟದ 3ನೇ ಸಮ್ಮೇಳನದಲ್ಲಿ 77 ರಾಷ್ಟ್ರಗಳ ಪ್ರತಿನಿಧಿಗಳು ಇದ್ದರು.
ಯಾವೆಲ್ಲ ನೋಟಿಸ್​ಗಳಿವೆ?:ರೆಡ್ ನೋಟಿಸ್, ಯೆಲ್ಲೋ ನೋಟಿಸ್, ಬ್ಲ್ಯೂ ನೋಟಿಸ್, ಬ್ಲಾ್ಯಕ್ ನೋಟಿಸ್, ಗ್ರೀನ್ ನೋಟಿಸ್, ಆರೆಂಜ್ ನೋಟಿಸ್, ಪರ್ಪಲ್ ನೋಟಿಸ್. ಈ ಪಟ್ಟಿಗೆ ಸಿಲ್ವರ್ ನೋಟಿಸ್ ಸೇರ್ಪಡೆಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
