ಮುಖ್ಯಮಂತ್ರಿ ಬದಲಾವಣೆ ಮಾತು, ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಮಾತಿನ ಫೈಟ್ ತೀವ್ರಗೊಂಡಿದೆ. ಬಣ ಬಡಿದಾಟಕ್ಕೂ ಇದು ವೇದಿಕೆಯಾಗುವ ಲಕ್ಷಣ ಕಾಣಿಸಿದೆ. ಶನಿವಾರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಅವರ ಸಹೋದರ ಡಿ.ಕೆ.ಸುರೇಶ್, ಸಚಿವ ಕೆ.ಎನ್. ರಾಜಣ್ಣ, ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿ ಚರ್ಚೆಯ ಕಾವು ಹೆಚ್ಚಿಸಿದ್ದಾರೆ.
ಬೆಂಗಳೂರು:ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಮಾತನಾಡುವವರಿಗೆ ವಿಧಿಯಿಲ್ಲದೆ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷದ ನಾಯಕರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಹಾಗೆಯೇ, ಹೆಚ್ಚುವರಿ ಡಿಸಿಎಂ ಹೇಳಿಕೆ ಕೊಡುತ್ತಿರುವುದರ ಬಗ್ಗೆ ನನಗೆ ಗೊತ್ತಿಲ್ಲ, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ ಎಂದು ಗಡಸು ದನಿಯಲ್ಲಿ ಚಾಟಿ ಬೀಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಸುಖಾಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ ಎಂದು ಪರೋಕ್ಷವಾಗಿ ರಾಜಣ್ಣ ಹಾಗೂ ಇತರರಿಗೆ ಎಚ್ಚರಿಕೆ ನೀಡಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾನು, ಸಿದ್ದರಾಮಯ್ಯ ಪಕ್ಷದ ಹಿತದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ತೀರ್ವನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಮಂತ್ರಿಗಳು, ಶಾಸಕರು, ಮಾತನಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ. ಅವರ ಆಶೀರ್ವಾದ ಇದ್ದರೆ ಸಾಕು. ಎಲ್ಲ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ರಾಜಕಾರಣದ ಸುದ್ದಿಗೆ ನೀವು ಬರಲೇಬೇಡಿ. ಒಳಗಿನಿಂದಲೇ ಹರಸಿದರೆ ಸಾಕು. ನನ್ನ ಕೆಲಸ ನೋಡಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ ಎಂದು ಹೇಳಿದರು. ಲೋಕಸಭಾ ಅಧಿವೇಶನ ಜು.3ರಂದು ಮುಗಿಯಲಿದ್ದು, ಆ ನಂತರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು.
ವಾರ್ನಿಂಗ್​ನ ಕೇಳ್ತೀನೇನ್ರೀ…
ಬೆಂಗಳೂರು:ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂಥ ಹೇಳಿದರೆ ಕೇಳಿಕೊಂಡು ಸುಮ್ಮನೆ ಇರಬೇಕಾ? ಹೆಚ್ಚುವರಿ ಡಿಸಿಎಂ ಕೇಳಬಾರದೇ..? ಕೇಳಿದರೆ ತಪ್ಪಾಗುತ್ತಾ..? ವಾರ್ನಿಂಗ್​ನ ನಾನ್ ಕೇಳ್ತೀನೇನ್ರೀ… ರಾಜಣ್ಣ ರಾಜಣ್ಣನೇ. ಬಾಯಿಗೆ ಬೀಗ ಎಲ್ಲರೂ ಹಾಕಿಕೊಳ್ಳಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಗುಡುಗಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನೋಟಿಸ್ ಕೊಡುತ್ತಾರಾ? ಕೊಡಲಿ.. ಕೊಟ್ಟಾದ್ಮೇಲೆ ಮಾತಾಡುತ್ತೇನೆ. ಕಾಂಟ್ರವರ್ಸಿ ಆಗಬಾರದು ಎಂದು ಹೇಳಿರುತ್ತಾರೆೆ ಎಂದರು. ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಮಾಡಿ ಎಂದು ಅವರವರ ಸ್ವಾಮೀಜಿಗಳು ಹೇಳುತ್ತಾರೆ. ಸ್ವಾಮೀಜಿಗಳು ಹೇಳೋದನ್ನು ಕೇಳೋದಕ್ಕೆ ಆಗುತ್ತಾ..? ಚಂದ್ರಶೇಖರ ಸ್ವಾಮೀಜಿ ಹೇಳಿರೋದು ಪ್ರಜಾಪ್ರಭುತ್ವಕ್ಕೆ ಅವಮಾನ. ನಾನು ಪ್ರಜಾಪ್ರಭುತ್ವದ ಪರವಾಗಿ ಇದ್ದೀನಿ. ಹಗರಣ ಮಾಡಿದ್ದರೆ ತನಿಖೆ ಮಾಡಲಿ ಎಂದು ಸವಾಲು ಹಾಕಿದ ರಾಜಣ್ಣ, ಬಡವರ ಪರ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಜತೆ ನಾವಿದ್ದೇವೆ ಎಂದರು. ಸಂಸದರಾಗಿ ಡಿ.ಕೆ.ಸುರೇಶ್ ಪರಿಣಾಮಕಾರಿಯಾಗಿ ಕೆಲಸ ಮಾಡಿರೋರಲ್ಲಿ ಪ್ರಥಮ. ಆದರೂ ಯಾರು ಸೋಲಿಸಿದ್ದು? ಇವರೆಲ್ಲಾ ಸ್ವಾಮೀಜಿಗಳು ಒಂದಾಗಿ ಸೋಲಿಸಿದ್ದರು. ದೇವೇಗೌಡರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು. ಯಾರನ್ನು ಸಿಎಂ ಮಾಡಬೇಕೆಂದು ಶಾಸಕರು, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಪ್ರತ್ಯೇಕ ಭೇಟಿ:ಕೇಂದ್ರ ಸಚಿವರ ಭೇಟಿ, ಸಂಸದರ ಸಭೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ಸಿಎಂ, ಡಿಸಿಎಂ ಪಕ್ಷದ ನಾಯಕರನ್ನು ಭೇಟಿ ಮಾಡುವಾಗ ಅಂತರ ಕಾಯ್ದುಕೊಂಡಿದ್ದು ವಿಶೇಷ. ಖಾಸಗಿ ಕಾರ್ಯಕ್ರಮದ ನಿಮಿತ್ತ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ತೆರಳಿ ಪುನಃ ದೆಹಲಿಗೆ ಮರಳುವಾಗ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಭೇಟಿ ಮುಗಿಸಿದ್ದರು. ಡಿಕೆಶಿ ಪ್ರತ್ಯೇಕವಾಗಿ ಭೇಟಿ ಮಾಡಿ ರಾಜ್ಯದ ಆಗು-ಹೋಗುಗಳ ಬಗ್ಗೆ ವಿವರಣೆ ನೀಡಿದರು.
. ಜಾತ್ಯತೀತತೆ ಅಂತ ಹೇಳಿ ಅಧಿಕಾರಕ್ಕೆ ಬಂದು ಜಾತಿವಾದ ಮಾಡಿದರೆ ಹೇಗೆ? ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡೋದು ಎಷ್ಟು ಸರಿ? ಕಳೆದ ಚುನಾವಣೆಯಲ್ಲಿ ಎಲ್ಲ ಜಾತಿ, ಧರ್ಮದವರೂ ಮತ ಹಾಕಿದ್ದಾರೆ.

. ಪ್ರಾದೇಶಿಕತೆ, ಜನಾಂಗಕ್ಕೆ ಡಿಸಿಎಂ ಬೇಕು ಅಂದರೆ ಚುನಾವಣೆ ಎದುರಿಸಲಿ. ಅಧಿಕಾರದ ಆಸೆ ಇತ್ತು ಅಂದರೆ ಯಾರ ನಾಯಕತ್ವದಲ್ಲಿ ಬೇಕಾದರೂ ಚುನಾವಣೆ ಎದುರಿಸಲಿ. ಆಮೇಲೆ ಎಷ್ಟು ಡಿಸಿಎಂ ಬೇಕಾದರೂ ಮಾಡಲಿ.
. ಉಪ ಮುಖ್ಯಮಂತ್ರಿಗಳನ್ನು, ಸಚಿವರನ್ನು ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಇದೆ. ಸಿಎಂಗೆ ಅವಶ್ಯಕತೆ ಇದ್ದರೆ ಎಂಟು ಡಿಸಿಎಂ ಮಾಡಲಿ. 33 ಜನರೂ ಸಿಎಂ, ಡಿಸಿಎಂ ಆಗಲಿ ಬೇಡ ಅಂದವರು ಯಾರು?
ಬೆಂಗಳೂರು:ಲೋಕಸಭೆ ಫಲಿತಾಂಶ ನೋಡಿ ಡಿಸಿಎಂ ಹುದ್ದೆ ಕೇಳುತ್ತಿರಬಹುದು ಎಂದು ವ್ಯಂಗ್ಯವಾಡಿರುವ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್, ಇಷ್ಟೊಂದು ಕಳಪೆ ಫಲಿತಾಂಶ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ, ಮಂತ್ರಿಗಳ ಕ್ಷೇತ್ರದಲ್ಲಿ ಲೀಡ್ ಕಡಿಮೆ ಆಗಿದೆ ಎಂದರು. ಲೋಕಸಭೆ ಚುನಾವಣೆ ಯಲ್ಲಿ ಇಬ್ಬರು ಬಲಾಢ್ಯರು ನಾಯಕತ್ವ ವಹಿಸಿದ್ದರು. ಎಐಸಿಸಿ ಇದನ್ನು ಗಂಭೀರವಾಗಿ ತೆಗೆದು ಕೊಂಡಿದೆ ಎಂದು ಹೇಳಿದರು. ಒನ್ ಮ್ಯಾನ್ ಒನ್ ಪೋಸ್ಟ್ ರೂಲ್ಸ್ ರಾಜಣ್ಣ ಅವರದ್ದಲ್ಲ. ಅದು ಎಐಸಿಸಿ ನಿರ್ಣಯ. ಇದರ ಪಾಲನೆ ಆಗಬೇಕು ಎಂದಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ವನಿಸಲಿದೆ ಎಂದರು.
ಡಿಕೆ ವೀಕ್ ತಂತ್ರ? :ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಏಕಮಾತ್ರ ಡಿಸಿಎಂ ಹಾಗೂ ಲೋಕಸಭೆ ಚುನಾವಣೆವರೆಗೂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಎಂಬುದು ಹೈಕಮಾಂಡ್ ವರ್ಷದ ಹಿಂದೆ ರೂಪಿಸಿದ ಅಧಿಕಾರ ಹಂಚಿಕೆ ಸೂತ್ರ. ಇದೀಗ ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂಬ ಕೂಗಿನ ಹಿಂದೆ ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ತಂತ್ರ ಅಡಗಿದೆ ಎಂಬ ವಾದವಿದೆ. ಈ ಬೆಳವಣಿಗೆಯ ಹಿಂದೆ ಕಾಂಗ್ರೆಸ್​ನ ದೆಹಲಿ ನಾಯಕರೊಬ್ಬರ ಕೈವಾಡವೂ ಇದೆ ಎಂದು ಹೇಳಲಾಗುತ್ತಿದೆ. ಒಂದೊಮ್ಮೆ ಡಿಕೆಶಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಅವರ ಪ್ರಭಾವ ತಗ್ಗಲಿದೆ, ಇದು ಭವಿಷ್ಯದ ಬೆಳವಣಿಗೆಗೂ ಪ್ರಮುಖ ಕಾರಣವಾಗಲಿದೆ ಎಂಬ ಚರ್ಚೆ ಕೈ ಪಾಳಯದಲ್ಲಿದೆ.
ಬೆಂಗಳೂರು: ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿ, ಸಿಎಂ ಬದಲಾವಣೆ, ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಆಗಬೇಕೆಂಬ ಚರ್ಚೆಯು ಕಾಂಗ್ರೆಸ್​ನಲ್ಲಿ ಬಣ ಬಡಿದಾಟ ತೀವ್ರಗೊಳ್ಳಲು ಕಾರಣವಾಗಿದೆ. ಮುಖ್ಯಮಂತ್ರಿ ಪರ ಒಂದಷ್ಟು ಮಂದಿ ಗಟ್ಟಿಯಾಗಿ ನಿಂತಿದ್ದರೆ, ಡಿಸಿಎಂ ಪರ ಕೆಲವು ಮಂದಿ ದನಿ ಮೊಳಗಿಸುತ್ತಿದ್ದಾರೆ. ಈ ನಡುವೆ ಹೈಕಮಾಂಡ್​ಗೆ ಪರಸ್ಪರ ದೂರು ಕೂಡ ಸಲ್ಲಿಕೆಯಾಗಿದೆ.
ಮತ್ತಷ್ಟು ಡಿಸಿಎಂ ಸೃಷ್ಟಿ ಮಾಡಬೇಕೆಂದು ಅನಗತ್ಯವಾಗಿ ಕೆದಕುತ್ತಿದ್ದಾರೆ, ಆಯಾ ಸಮಾಜವನ್ನು ಎತ್ತಿಕಟ್ಟುವ ಕೆಲಸ ನಡೆದಿದೆ. ಇದರಿಂದ ಸರ್ಕಾರದ ಇಮೇಜ್​ಗೆ ಧಕ್ಕೆ. ಕೂಡಲೇ ಕಡಿವಾಣ ಹಾಕಲು ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕೆಂದು ಒಂದು ತಂಡ ದೂರಿತ್ತಿದೆ. ಪ್ರತಿಯಾಗಿ, ಸಿಎಂ ಅಧಿಕಾರ ಹಸ್ತಾಂತರದ ಬಗ್ಗೆ ಸ್ವಾಮೀಜಿಗಳ ಬಾಯಲ್ಲಿ ಹೇಳಿಸಿ ಗೊಂದಲ ಸೃಷ್ಟಿಸಲಾಗಿದೆ. ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂಬುದು ಶಾಸಕರ ಒತ್ತಾಯ, ಅದನ್ನು ಈಡೇರಿಸುವುದು ಬಿಡುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದು ಸಿಎಂ ಆಪ್ತರು ಪ್ರತಿಪಾದಿಸಿದ್ದಾರೆ. ಒಂದು ವೇಳೆ ದೆಹಲಿ ನಾಯಕರ ಸೂಚನೆಯಂತೆ ಟೀಕೆ ಟಿಪ್ಪಣಿ ನಿಲ್ಲಿಸಿದರೂ ಬೂದಿಮುಚ್ಚಿದ ಕೆಂಡದ ವಾತಾವರಣ ಇರಲಿದೆ.
ಮೇಕೆದಾಟು ಯೋಜನೆಗೆ ಶೀಘ್ರ ಅನುಮೋದನೆ ನೀಡಿ; ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
