ಬೆಂಗಳೂರು:ಬದಲಾದ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ಜೀವನದಿಂದಾಗಿ ಆರೋಗ್ಯ ಕಾಳಜಿ ಕಡಿಮೆಯಾಗಿ ಕ್ಯಾನ್ಸರ್​ಕಾರಕ ಅಂಶಗಳು ಮಾನವನನ್ನು ರೋಗದತ್ತ ದೂಡುತ್ತಿವೆ. ಈ ರೋಗ ನಿವಾರಣೆಗೆ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಲಭ್ಯವಿದ್ದರೂ ಅರಿವಿನ ಕೊರತೆಯಿಂದಾಗಿ ಅರ್ಬುದ ರೋಗ ಆರ್ಭಟಿಸುತ್ತಿದೆ. ಅದರಲ್ಲೂ ಸುಶಿಕ್ಷಿತರೆಂದು ಕರೆಯಿಸಿಕೊಳ್ಳುವ ನಗರವಾಸಿಗಳಲ್ಲಿರುವ ನಿರ್ಲಕ್ಷ್ಯ, ನಿರಾಸಕ್ತಿ ಹಾಗೂ ರೋಗ ತಪಾಸಣೆಗೆ ಒಳಗಾಗದಿರುವುದು ಕ್ಯಾನ್ಸರ್ ಉಲ್ಬಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಕ್ಯಾನ್ಸರ್ ಜಾಗೃತಿ ದಿನದ (ನ.7) ಅಂಗವಾಗಿ ‘ವಿಜಯವಾಣಿ’ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ಪಲ್ಲವಿ ರಾಮಚಂದ್ರ ಅವರು ಈ ಆಘಾತಕಾರಿ ಅಂಶವನ್ನು ಹೊರಹಾಕಿದರು. ಇದೇ ವೇಳೆ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕ್ಯಾನ್ಸರ್​ಗೆ ಕಾರಣ, ವಿಧಗಳು, ತಪಾಸಣೆ, ಚಿಕಿತ್ಸೆ ಹಾಗೂ ಸಾರ್ವಜನಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್​ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದರಿಂದ ಗುಣಪಡಿಸಬಹುದಾಗಿದೆ. ಈ ಬಗ್ಗೆ ಅರಿವಿದ್ದರೂ, ವಿದ್ಯಾವಂತ ಮಹಿಳೆಯರೇ ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಲ್ಲೂ ಅರಿವಿನ ಕೊರತೆಯಿಂದಾಗಿ ರೋಗಪತ್ತೆ ಹಾಗೂ ಚಿಕಿತ್ಸೆ ವಿಳಂಬವಾಗುತ್ತಿದೆ. ಇದರಿಂದಾಗಿ ಬಹಳಷ್ಟು ಮಂದಿ ಗಂಭೀರ ಹಂತ ತಲುಪಿದಾಗ ಚಿಕಿತ್ಸೆಗೆ ಬರುತ್ತಾರೆ. ಆಗ ಗುಣಪಡಿಸುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.
ಜೀವನಶೈಲಿ ಹಾಗೂ ಆಹಾರ ಕ್ರಮ:ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮ ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು ಕಾರಣವಾಗಿವೆ. ಸಸ್ಯಾಹಾರವಾಗಲಿ, ಮಾಂಸಾಹಾರವಾಗಲಿ ಯಾವುದೂ ಸಂಪೂರ್ಣವಾಗಿ ಸುರಕ್ಷಿತವಲ್ಲ. ಎಲ್ಲವೂ ಸ್ವಲ್ಪಮಟ್ಟಿಗೆ ಕಲಬೆರಕೆಯಿಂದ ಕೂಡಿದ್ದು, ಕ್ಯಾನ್ಸರ್ ಉಲ್ಬಣಕ್ಕೆ ಕಾರಣವಾಗುತ್ತಿವೆ. ಜತೆಗೆ ಇಂದಿನ ಜನರಲ್ಲಿ ಚಟುವಟಿಕೆ ಕಡಿಮೆಯಾಗುತ್ತಿದ್ದು, ನಿಯಮಿತವಾದ ವ್ಯಾಯಾಮ, ಸರಿಯಾದ ನಿದ್ರೆ ಇಲ್ಲದೆ ಬೊಜ್ಜು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆರೋಗ್ಯಕರ ಜೀವನಶೈಲಿ ಹಾಗೂ ಉತ್ತಮ ಆಹಾರ ಸೇವನೆ ಮತ್ತು ಮುನ್ನೆಚ್ಚರಿಕೆ ಕ್ರಮ (ಸ್ಕ್ರೀನಿಂಗ್)ಗಳನ್ನು ಕೈಗೊಳ್ಳುವ ಮೂಲಕ ಕ್ಯಾನ್ಸರ್ ತಡೆಯಬಹುದಾಗಿದೆ.
ಲಸಿಕೆ ನಿರ್ಲಕ್ಷಿಸದಿರಿ:ಗರ್ಭಕಂಠದ ಕ್ಯಾನ್ಸರ್ ಭಾರತೀಯ ಮಹಿಳೆಯರಿಗೆ ತೀವ್ರವಾಗಿ ಕಾಡುತ್ತಿದೆ. ಗರ್ಭಕಂಠದ ದ್ವಾರ ಅಥವಾ ಅದರ ಸುತ್ತಮುತ್ತ ಕಂಡುಬರುವ ತೀವ್ರ ಸ್ವರೂಪದ ಗೆಡ್ಡೆಯನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್​ಪಿವಿ) ಸೋಂಕಿನಿಂದ ಬರುವ ಈ ಕಾಯಿಲೆಗೆ ಅಸುರಕ್ಷಿತ ಲೈಂಗಿಕತೆ, ಸ್ವಚ್ಛತೆ ಇಲ್ಲದ ಶೌಚಗೃಹ ಬಳಕೆ ಕಾರಣ. ನಿಯಮಿತ ಪ್ಯಾಪ್ ಸ್ಮರಿಯರ್ ಪರೀಕ್ಷೆ ಮಾಡಿಸುವುದರಿಂದ ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ. ಅಲ್ಲದೆ ಕಾಲ್ಪಸ್ಕೋಪಿ, ಪೆಟ್ ಸಿಟಿ ಸ್ಕಾ್ಯನ್ ಮೂಲಕವೂ ರೋಗ ಪತ್ತೆ ಹಚ್ಚಬಹುದಾಗಿದೆ. ಇದನ್ನು ತಡೆಯಲು ಲಸಿಕೆ ಲಭ್ಯವಿದ್ದು, 9ರಿಂದ 25 ವರ್ಷ ವಯಸ್ಸಿನ ಮಹಿಳೆಯರು ಈ ಲಸಿಕೆ ಪಡೆಯಹುದಾಗಿದೆ.
ನಿಯಂತ್ರಣ ಹೇಗೆ?:ಉತ್ತಮ ಆಹಾರ ಹಾಗೂ ಚಟುವಟಿಕೆ ಯುಕ್ತ ಜೀವನಶೈಲಿಯಿಂದ ಕ್ಯಾನ್ಸರ್ ತಡೆಯಬಹುದಾಗಿದೆ. ಕೆಲವೊಮ್ಮೆ ಹವಾಮಾನ, ವಂಶವಾಹಿನಿಯಿಂದಲೂ ಬರುವ ಸಾಧ್ಯತೆ ಇರುವುದರಿಂದ ಕ್ಯಾನ್ಸರ್ ಹಿನ್ನೆಲೆ ಹೊಂದಿರುವ ಕುಟುಂಬದ ಸದಸ್ಯರು ಜೆನಿಟಿಕ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಇದಲ್ಲದೆ 40 ವರ್ಷ ಪೂರೈಸಿದ ಪ್ರತಿಯೊಬ್ಬರೂ ನಿಯಮಿತವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮೂಲಕ ಗುಣ ಹೊಂದಬಹುದಾಗಿದೆ.
ಕ್ಯಾನ್ಸರ್​ಗೆ ನಾಟಿ ಔಷಧ ಸೂಕ್ತವೇ?:ಯಾವುದೇ ಪರೀಕ್ಷೆ ಮಾಡದೆ, ಕ್ಯಾನ್ಸರ್ ಗಡ್ಡೆಯ ಸ್ವರೂಪ ತಿಳಿಯದೆ ನೀಡುವ ನಾಟಿ ಔಷಧದಿಂದ ಗುಣ ಹೊಂದುವುದು ಕಷ್ಟ. ಈ ಬಗ್ಗೆ ಈವರೆಗೂ ವೈಜ್ಞಾನಿಕವಾಗಿ ಯಾವುದೇ ಪುರಾವೆ ಲಭ್ಯವಿಲ್ಲ.
ಸಂಶೋಧನೆಗೆ ಒತ್ತು ನೀಡಬೇಕು:ದೇಶದಲ್ಲಿ ಕ್ಯಾನ್ಸರ್ ಕಾಯಿಲೆ ಗುಣಪಡಿಸಲು ಹೊಸ ಹೊಸ ಔಷಧಗಳು ಲಭ್ಯವಿವೆ. ಹಾಗೆಯೇ ರೋಗಪತ್ತೆ ಮತ್ತು ಚಿಕಿತ್ಸೆಗೆ ಹೊಸ ವೈದ್ಯಕೀಯ ಉಪಕರಣಗಳು ಬಂದಿವೆ. ಪ್ರಮುಖವಾಗಿ ನಿಯಮಿತ ತಪಾಸಣೆ ಮೂಲಕ ಆರಂಭದಲ್ಲೇ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಆದರೆ ಈ ಎಲ್ಲವೂ ಹೊರದೇಶಗಳ ಸಂಶೋಧನೆಯ ಫಲವಾಗಿದೆ. ಭಾರತದಲ್ಲಿ ಕ್ಯಾನ್ಸರ್ ಕುರಿತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನವೀನ ರೀತಿಯ ಪ್ರಯೋಗಗಳನ್ನು ಕೈಗೊಳ್ಳಬೇಕಿದೆ. ಕೊನೆಯ ಹಂತದ ರೋಗಿಗಳ ಆರೈಕೆಗೆ ಪ್ಯಾಲಿಯೇಟಿವ್ ಕೇರ್ ಅಗತ್ಯವಿದ್ದು, ಈ ದಿಕ್ಕಿನಲ್ಲಿ ಸರ್ಕಾರ ಆಲೋಚನೆ ನಡೆಸುವ ಅಗತ್ಯವಿದೆ ಎಂದು ಡಾ. ಪಲ್ಲವಿ ಹೇಳಿದರು.
ಮಹಿಳೆಯರು ಸೇರಿದಂತೆ ಎಲ್ಲರೂ ನಿರ್ಲಕ್ಷ್ಯ ಹಾಗೂ ಮುಜುಗರ ಭಾವನೆ ತೊರೆದು ಕ್ಯಾನ್ಸರ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ಹಿನ್ನೆಲೆ ಹೊಂದಿರುವ ಕುಟುಂಬದ ಸದಸ್ಯರು ಜೆನಿಟಿಕ್ ಪರೀಕ್ಷೆಗೆ ಒಳಗಾಗಬೇಕು. 40 ವರ್ಷ ದಾಟಿದ ಎಲ್ಲ ಮಹಿಳೆಯರೂ ವರ್ಷಕ್ಕೊಮ್ಮೆ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಯುಕ್ತ. ಉತ್ತಮ ಆಹಾರ ಪದ್ಧತಿ ಹಾಗೂ ಚಟುವಟಿಕೆ ಜೀವನಶೈಲಿ ಅಳವಡಿಸಿಕೊಂಡಲ್ಲಿ ಕ್ಯಾನ್ಸರ್ ನಿಯಂತ್ರಿಸಬಹುದಾಗಿದೆ.
| ಡಾ. ಪಲ್ಲವಿ ರಾಮಚಂದ್ರ, ಕ್ಯಾನ್ಸರ್ ತಜ್ಞೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ
ಕರೆಗಳಿಗೆ ಸ್ಪಂದಿಸಿದ ತಜ್ಞೆ:ಫೋನ್ ಇನ್ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜನರು ಕರೆ ಮಾಡಿ ಕ್ಯಾನ್ಸರ್ ಕುರಿತು ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆದರು. ಕೆಲವರು ತಮ್ಮ ಕುಟುಂಬಸ್ಥರಿಗೆ ಎದುರಾಗಿರುವ ಮಾರಣಾಂತಿಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲಾಗುತ್ತಿಲ್ಲ ಎಂಬ ಅಸಾಯಕತೆ ಯನ್ನು ತೋಡಿಕೊಂಡರು. ಅಂಥವರಿಗೆಲ್ಲ ಡಾ. ಪಲ್ಲವಿ ರಾಮಚಂದ್ರ ಅವರು ತಮ್ಮ ಅನುಭವದ ಮಾತುಗಳ ಮೂಲಕ ಸಾಂತ್ವನ ಹೇಳಿದರು. ಹೆಚ್ಚಿನ ಚಿಕಿತ್ಸೆಗೆ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿ ಕೊಂಡು ರೋಗದಿಂದ ಮುಕ್ತವಾಗುವಂತೆ ಮಾರ್ಗದರ್ಶನ ಮಾಡಿದರು.
ಮಕ್ಕಳಲ್ಲಿ ಹೆಚ್ಚಳ:ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್​ಗಳಲ್ಲಿ ಲುಕೇಮಿಯಾ ಹಾಗೂ ಅಂಡಾಶಯ ಕ್ಯಾನ್ಸರ್ ಹೆಚ್ಚಿನದ್ದಾಗಿದೆ. ಇದು ಹುಟ್ಟಿನಿಂದಲೇ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಪೂರ್ಣವಾಗಿ ಗುಣಪಡಿಸಲು ಚಿಕಿತ್ಸೆ ಲಭ್ಯವಿದೆ. ಅನುವಂಶಿಕ ವಾಗಿ ಬರುವ ಹಾಗೂ ಕಾರಣವೇ ತಿಳಿಯದೆ ಬರುವ ಕೆಲ ಕ್ಯಾನ್ಸರ್​ಗಳನ್ನು ಗುಣಪಡಿಸುವುದು ಕಷ್ಟ.
ಯಾವುದು ಅಪಾಯ?:ಯಾವುದೇ ಕ್ಯಾನ್ಸರ್ 3 ಮತ್ತು 4ನೇ ಹಂತದಲ್ಲಿದ್ದರೆ ಗುಣಪಡಿಸುವುದು ಕಷ್ಟ. ಮುಖ್ಯವಾಗಿ ಶ್ವಾಸಕೋಶದ ಕ್ಯಾನ್ಸರ್​ನಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ ತಂಬಾಕು ಹಾಗೂ ಪರಿಸರ ಮಾಲಿನ್ಯ. ತಂಬಾಕು ಹಾಗೂ ಗುಟ್ಕಾ ಸೇವನೆಯಿಂದ ಬಾಯಿಕ್ಯಾನ್ಸರ್ ಸಹ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಜತೆಗೆ ಅಂಡಾಶಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಅತಿಯಾದ ಬೊಜ್ಜು, ವಿವಾಹ ಹಾಗೂ ಮಕ್ಕಳನ್ನು ಪಡೆಯುವಲ್ಲಿ ವಿಳಂಬ ಮಾಡುತ್ತಿರುವುದು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಒಳಪದರದ ಕ್ಯಾನ್ಸರ್​ಗೆ ಕಾರಣವಾಗುತ್ತಿದೆ.
ಹಂತ ಗುರುತಿಸುವಿಕೆ:ಸ್ಕ್ರೀನಿಂಗ್ ಮೂಲಕ ಕ್ಯಾನ್ಸರ್ ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ತೆಗೆದು ಅದನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇದರಿಂದ ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬುದು ತಿಳಿದು, ಅದನ್ನು ಆಧರಿಸಿ ರೋಗಿಗೆ ಕಿಮೋಥೆರಪಿ, ರೇಡಿಯೋಥೆರಪಿ ಹಾಗೂ ಔಷಧ ಮತ್ತು ಇತರ ಚಿಕಿತ್ಸೆ ನೀಡಲಾಗುತ್ತದೆ. ಒಂದು ಮತ್ತು 2ನೇ ಹಂತದಲ್ಲಿ ಇದ್ದರೆ ಗುಣಪಡಿಸಬಹುದು. ಮೂರನೇ ಹಂತದಲ್ಲಿ ಕಷ್ಟ. ನಾಲ್ಕನೇ ಹಂತದಲ್ಲಿ ಚಿಕಿತ್ಸೆ ಫಲಕಾರಿ ಆಗುವುದಿಲ್ಲ ಹಾಗೂ ರೋಗಿ ಬದುಕುಳಿಯುವುದೂ ಕಷ್ಟವಾಗಬಹುದು.
ರೋಗ ಲಕ್ಷಣಗಳು:ಯಾವುದೇ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಗ್ಯಾಸ್ಟ್ರಿಕ್ ಸಾಮಾನ್ಯ ರೋಗಲಕ್ಷಣ ಆಗಿರುತ್ತದೆ. ಇದಲ್ಲದೆ ವಾಂತಿ, ಬೇಧಿ, ಹೊಟ್ಟೆಉಬ್ಬರ, ತಲೆಸುತ್ತುವಿಕೆ, ಎದೆಯಲ್ಲಿ ಉರಿ ಹೀಗೆ ಯಾವುದೇ ರೋಗಲಕ್ಷಣಗಳು ಒಂದು ವಾರಕ್ಕೂ ಹೆಚ್ಚು ಸಮಯ ಕಾಣಿಸಿಕೊಂಡರೆ ಕೂಡಲೇ ವೈದ್ಯರ ಸಲಹೆ ಪಡೆದು ಪರೀಕ್ಷೆ ಮಾಡಿಸಿಕೊಳ್ಳಬೇಕು.
ಚಿಕಿತ್ಸೆಯ ವೆಚ್ಚ:ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಕುಟುಂಬದ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಿದೆ. ಉಳಿದವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯುತ್ತದೆ. ಇದಲ್ಲದೆ ಎಲ್ಲ ಕ್ಯಾನ್ಸರ್ ರೋಗಿಗಳಿಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ರಿಯಾಯಿತಿ ದರದಲ್ಲಿ ಔಷಧ ಸಿಗುತ್ತದೆ. ತಪಾಸಣೆಯೂ ಉಚಿತವಾಗಿ ಮಾಡಲಾಗುತ್ತದೆ. ಜನರು ಇದರ ಉಪಯೋಗ ಪಡೆದುಕೊಳ್ಳಬಹುದು.
ನಾವು ಸನಾತನ ಧರ್ಮವನ್ನು ಎಂದೆಂದಿಗೂ ವಿರೋಧಿಸುತ್ತೇವೆ: ಕಾನೂನುಕ್ರಮಕ್ಕೆ ಸಿದ್ಧ ಎಂದು ಮತ್ತೆ ನಾಲಗೆ ಹರಿಬಿಟ್ಟ ಉದಯನಿಧಿ

ನಿಮ್ಮಂಥ ನಾಯಕರಿರುವ ದೇಶದಲ್ಲಿ ನಾನು ಸುರಕ್ಷಿತ: ನಟಿ ರಶ್ಮಿಕಾ ಮಂದಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 9 =
Remember me
