ಬೆಂಗಳೂರು: ಸರ್ಕಾರ ಮೀನು ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಮತ್ಸ್ಯ ದರ್ಶನಿ ತರುವಾಯ ಮನೆ ಬಾಗಿಲಿಗೆ ಮೀನು ಸರಬರಾಜು ಮಾಡುವ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ‘ಮತ್ಸ್ಯ ವಾಹಿನಿ’ ಯೋಜನೆ ರೂಪಿಸಿದ್ದು, ದಸರಾ ಕೊಡುಗೆಯಾಗಿ ಈ ಯೋಜನೆ ಜಾರಿಗೊಳ್ಳಲಿದೆ. ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ 150 ಮತ್ಸ್ಯಾಹಿನಿಗಳಿಗೆ ಮಾಸಾಂತ್ಯದಲ್ಲಿ ಚಾಲನೆ ನೀಡಲಾಗುತ್ತದೆ. ಬಳಿಕ ರಾಜ್ಯಾದ್ಯಂತ ಪ್ರತಿ ಜಿಲ್ಲೆಗೆ 5ರಂತೆ 150 ಮತ್ಸ್ಯ ವಾಹಿನಿ ಕೊಡಲಾಗುತ್ತಿದೆ.
‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ್ ವೈದ್ಯ ಈ ಕುರಿತು ಮಾಹಿತಿ ನೀಡಿದರು. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮತ್ಸ್ಯಾಹಿನಿ ಯೋಜನೆ ರೂಪಿಸಲಾಗಿದೆ. ಈಗಾಗಲೆ ನೂರು ವಾಹನ ಬಂದಿದ್ದು, ಸರ್ಕಾರದ ಹೆಸರಿನಲ್ಲಿ ನೋಂದಣಿ ಕೂಡ ಆಗಿವೆ. ಆನ್​ಲೈನ್ ಅರ್ಜಿ ಆಹ್ವಾನಿಸಿ ಮತ್ಸ್ಯಾಹಿನಿ ನಿರ್ವಹಣೆ ಮಾಡುವ ಸ್ವ-ಉದ್ಯೋಗಾಸಕ್ತರನ್ನು ಗುರುತಿಸಲಾಗಿದೆ. ಈ ವಾಹನ ಪಡೆಯುವವರು ತಿಂಗಳಿಗೆ 3000 ರೂ. ಪಾವತಿಸಬೇಕು. ವಾಹನದ ಸಣ್ಣಪುಟ್ಟ ದುರಸ್ತಿಗಳನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನೋಡಿಕೊಳ್ಳಲಿದೆ. ಮಹಿಳೆ ಮತ್ತು ಪರಿಶಿಷ್ಟರು 1.50 ಲಕ್ಷ ರೂ. ಇತರ ವರ್ಗದವರು 2 ಲಕ್ಷ ಠೇವಣಿ ಇಡಬೇಕಾಗುತ್ತದೆ. ಈ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
23 ದ್ವೀಪಗಳಿಗೆ ಕಾಯಕಲ್ಪ: ಆರ್ಥಿಕ, ಔದ್ಯೋಗಿಕ ಮತ್ತು ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಕರ್ನಾಟಕ ಜಲಸಾರಿಗೆ ಮಂಡಳಿ ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ರಾಜ್ಯದ 23 ನಡುಗಡ್ಡೆಗಳನ್ನು (ದ್ವೀಪ) ಗುರುತಿಸಲಾಗಿದೆ.
ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ: ರಾಜ್ಯದಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಶ್ವವಿದ್ಯಾಲಯವಿಲ್ಲ. ಬೀದರ್​ನಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯವಿದೆ. ಈ ವಿಶ್ವವಿದ್ಯಾಲಯದಡಿ ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಪ್ರತ್ಯೇಕ ವಿವಿ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಂಗೀಕಾರವಾಗಿ ಪ್ರತ್ಯೇಕ ವಿಶ್ವವಿದ್ಯಾಲಯವಾದರೆ ಕಾರವಾರದಲ್ಲಿ ಮೀನುಗಾರಿಕೆ ಕಾಲೇಜು ಸ್ಥಾಪಿಸಲಾಗುವುದು. ಅಲ್ಲದೆ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಮಾಡುವ ಚಿಂತನೆ ಕೂಡ ಸರ್ಕಾರದ ಮುಂದಿದೆ ಎಂದರು.
ಮತ್ಸ್ಯವಾಹಿನಿಯಲ್ಲಿ ಏನೇನಿದೆ?: ಮತ್ಸ್ಯವಾಹಿನಿಯಲ್ಲಿ ಫ್ರಿಜ್, ಕಟಿಂಗ್, ಫ್ರೈ ಮಾಡಿಕೊಡುವ ವ್ಯವಸ್ಥೆ ಇದೆ. ಗ್ರಾಹಕರು ಮೀನು ಕಟ್ ಮಾಡಿಸಿಕೊಂಡು ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗಬಹುದು ಎಂದ ತಿಳಿಸಿದ ಸಚಿವರು, ಮೀನುಗಾರರು ಹಾಗೂ ಗ್ರಾಹಕರ ನಡುವೆ ಸರ್ಕಾರ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಮೀನುಗಾರರಿಗೆ ಒಳ್ಳೆಯ ಬೆಲೆ ಸಿಗಬೇಕಾದರೆ ಸರ್ಕಾರದಿಂದಲೇ ವ್ಯವಸ್ಥೆ ಮಾಡಿ ಗ್ರಾಹಕರಿಗೆ ಮೀನು ಪೂರೈಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇದರಿಂದ ಮಧ್ಯಸ್ಥಿಕೆದಾರರು ಇಲ್ಲದೆ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಮೀನು ದೊರೆಯಲಿದೆ ಎಂದರು.
ಸಮಸ್ಯೆ ಅರಿವಿದೆ: ನಾನು ಸಚಿವನಾಗಿ ನಾಲ್ಕು ತಿಂಗಳು ಕಳೆದಿದೆ. ನಾನು ಸ್ವತಃ ಮೀನುಗಾರ, ಮೀನುಗಾರರ ಕಷ್ಟದ ಅರಿವಿದೆ. ಒಳನಾಡು ಮೀನುಗಾರಿಕೆಯಲ್ಲಿ ಒಂದು ರೀತಿಯ ಸಮಸ್ಯೆ ಇದ್ದರೆ ಸಮುದ್ರ ಮೀನುಗಾರಿಕೆಯಲ್ಲಿ ಬೇರೆ ರೀತಿಯ ಸವಾಲಿದೆ. ಒಟ್ಟಾರೆ ಕಷ್ಟದ ಜೀವನ. ಒಮ್ಮೆ ಮೀನುಗಾರಿಕೆಗೆ ಹೋದರೆ ಪುನಃ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಖಾತ್ರಿಯೂ ಇರುವುದಿಲ್ಲ. ಹದಿನೈದು ದಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸ್ ಬಂದರೆ ಬೆಲೆ ಇರುವುದಿಲ್ಲ. ಸಂಗ್ರಹಿಸಿಡುವ ವ್ಯವಸ್ಥೆಯೂ ಇಲ್ಲ. ನಿಜವಾಗಿ ಹೇಳಬೇಕೆಂದರೆ ಯಾವುದೂ ಸರಿ ಇಲ್ಲ. ಬೋಟ್ ಇದ್ದರೆ ಬಂದರು ವ್ಯವಸ್ಥೆ ಇಲ್ಲ. ಬಂದರಿದ್ದರೆ ರಸ್ತೆ ಇಲ್ಲ. ಹೀಗಾಗಿ ಒಂದು ಮಟ್ಟಿಗೆ ಮೀನುಗಾರರಿಗೆ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮಂಕಾಳ್ ವೈದ್ಯ ತಿಳಿಸಿದರು.
1015 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಗರ ಮಾಲಾ ಕೇಂದ್ರ ಸರ್ಕಾರದ ಸಾಗರ ಮಾಲಾ ಯೋಜನೆಯಡಿ 1015 ಕೋಟಿ ರೂ. ಅಂದಾಜು ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದೆ. ಬಂದರುಗಳ ಸಮಗ್ರ ಅಭಿವೃದ್ಧಿ, ಬಂದರು ಸಂರ್ಪಸುವ ರಸ್ತೆ ಸುಧಾರಣೆ ಮೂಲಸೌಕರ್ಯಕ್ಕೆ ಈ ಹಣ ಬಳಸಲಾಗುತ್ತದೆ.
1. ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕೆರೆಗಳನ್ನು ಮೀನುಗಾರಿಕೆಗಾಗಿ ಗುತ್ತಿಗೆ ನೀಡುವ ಹೊಸ ನಿಯಮಾವಳಿಯ ಕರಡು ಸಿದ್ಧವಾಗಿದೆ. ಶೀಘ್ರ ಜಾರಿ ಮಾಡಲಾಗುತ್ತದೆ.
2. ತಾಲೂಕಿಗೊಂದು ಸುಸಜ್ಜಿತ ಮೀನು ಮಾರುಕಟ್ಟೆ ನಿರ್ವಿುಸುವ ಯೋಜನೆ ರೂಪಿಸಲಾಗುತ್ತದೆ. ಜಿಲ್ಲಾ ವಲಯ ಯೋಜನೆಯಡಿ ಮಾರುಕಟ್ಟೆ ನಿರ್ವಿುಸಲು ಸಹ ಅವಕಾಶ ಕಲ್ಪಿಸಲಾಗಿದೆ.
3. ಕೇಂದ್ರದ ಪಾಲುದಾರಿಕೆಯಲ್ಲಿ ಮಲ್ಪೆ, ಗಂಗೊಳ್ಳಿ, ಮಂಗಳೂರು ಬಂದರುಗಳ ಆಧುನೀಕರಣಕ್ಕಾಗಿ ಡಿಪಿಆರ್ ಅನುಮೋದನೆ ಮತ್ತು ಅನುದಾನಕ್ಕೆ ಕೇಂದ್ರವನ್ನು ಕೋರಲಾಗಿದೆ.
4. ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ಉಳಿಕೆ ಕಾಮಗಾರಿಗಳನ್ನು 49.50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಕ್ರಮಕೈಗೊಳ್ಳಲಾಗಿದೆ.
5. ಕರ್ನಾಟಕ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ದೂರ ದೃಷ್ಟಿಕೋನದ ಯೋಜನೆಯನ್ನು ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
6. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯ ನಿಯಮ ಪರಿಷ್ಕರಣೆಗೆ ಸೂಚಿಸಲಾಗಿದೆ. ಮೀನುಗಾರಿಕೆಗೆ ಹೋಗಿ ಮೃತಪಟ್ಟವರ ಕುಟುಂಬಕ್ಕೆ 6 ಲಕ್ಷ ರೂ. ನೆರವು ತಲುಪಿಸುವ ಉದ್ದೇಶ.
7. ಉತ್ತರ ಕನ್ನಡ ಜಿಲ್ಲೆ ಶಿರೂರಿನಲ್ಲಿ ಫುಡ್​ಪಾರ್ಕ್​ಗಾಗಿ 60 ಎಕರೆ ಜಾಗ ಗುರುತಿಸಿದ್ದು, ಮೀನು ಶೇಖರಣೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟಕ್ಕೆ ಅವಕಾಶವಾಗಲಿದೆ.
ಹೈಬ್ರಿಡ್ ಇಂಜಿನ್​ನತ್ತ ಒಲವು: ಮೀನುಗಾರಿಕೆ ನಾಡ ದೋಣಿಗಳಿಗೆ ಹೈಬ್ರಿಡ್ ಇಂಜಿನ್ ಒದಗಿಸುವ ಬಗ್ಗೆ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಸಿಎನ್​ಜಿ, ಗ್ಯಾಸ್ ಸೇರಿ ಹೈಬ್ರಿಡ್ ಇಂಜಿನ್ ಬಳಕೆಗೆ ಒತ್ತು ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಸುಮಾರು 8000 ನಾಡ ದೋಣಿಗಳು ಸೀಮೆ ಎಣ್ಣೆ ಅವಲಂಬಿಸಿವೆ. ಪ್ರಸ್ತುತ ಸೀಮೆ ಎಣ್ಣೆ ಸಬ್ಸಿಡಿಗೆಂದು ಸರ್ಕಾರ ವರ್ಷಕ್ಕೆ 100 ಕೋಟಿ ರೂ. ವೆಚ್ಚ ಮಾಡುತ್ತಿದೆ. ಹೀಗಾಗಿ ಸರ್ಕಾರವೇ ಹೈಬ್ರಿಡ್ ಇಂಜಿನ್ ಖರೀದಿಸಲು ಬಯಸಿದ್ದು ಕಂಪನಿಗಳೊಂದಿಗೆ ಚರ್ಚೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಸಚಿವರು ವಿವರಿಸಿದರು. ವಾರ್ಷಿಕ 1.5 ಲಕ್ಷ ಲೀಟರ್ ಡೀಸೆಲ್ ಸಬ್ಸಿಡಿ ಕೊಡಲಾಗುತ್ತಿತ್ತು, ಆಗಸ್ಟ್​ನಿಂದ 2ಲಕ್ಷ ಲೀಟರ್​ಗೆ ವಿಸ್ತರಿಸಲಾಗಿದೆ. ಇನ್ನು ಸೀಮೆ ಎಣ್ಣೆ ಸಿಗದೇ ನಾಡ ದೋಣಿ ಮೀನುಗಾರರು ಅಲ್ಲಲ್ಲಿ ಪ್ರತಿಭಟಿಸಿದ್ದರು. ಹೀಗಾಗಿ ಕೈಗಾರಿಕೆಯಲ್ಲಿ ಬಳಸುವ ಸೀಮೆ ಎಣ್ಣೆಯನ್ನು ಮೀನುಗಾರಿಗೆ ನೀಡಲಾಗುತ್ತಿದೆ. ಮೀನುಗಾರರ ಅವಶ್ಯಕತೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದು, ಅಲ್ಲಿಂದ ನಮ್ಮ ಕೋಟಾ ಬಂದರೆ ಪ್ರತಿ ಲೀಟರ್​ಗೆ 35 ರೂ.ನಂತೆ ಲಭ್ಯವಾಗಲಿದೆ. ಅಲ್ಲಿಯವರೆಗೂ ಪ್ರತಿ ಲೀಟರ್​ಗೆ 55 ರೂ.ನಂತೆ ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳಬಹುದಾಗಿದೆ ಎಂದರು.
ತೆಲಂಗಾಣದಲ್ಲಿ ಅಧ್ಯಯನ: ಆಂಧ್ರಪ್ರದೇಶ ಮತ್ತು ತೆಲಂಗಾಣ ಮೀನುಗಾರಿಕೆಯಲ್ಲಿ ಮುಂದಿದ್ದು, ಅಲ್ಲಿನ ವ್ಯವಸ್ಥೆ ನೋಡಲು ನಮ್ಮ ಅಧಿಕಾರಿಗಳು ಹೋಗಿ ಬಂದಿದ್ದಾರೆ. ಮುಂದಿನ ತಿಂಗಳು ನಾನು ಅಲ್ಲಿಗೆ ಹೋಗಿ ನೋಡುತ್ತೇನೆ ಎಂದು ತಿಳಿಸಿದ ಸಚಿವರು, ವಿಶೇಷವೆಂದರೆ ಅಲ್ಲಿ ಮೀನುಗಾರರಿಗೆ ಉಚಿತ ಕರೆಂಟ್ ಕೊಡುತ್ತಿದ್ದಾರೆ. ಆ ರೀತಿ ಪ್ರೋತ್ಸಾಹ ಸಿಕ್ಕಾಗ ಅಭಿವೃದ್ಧಿಯಾಗುತ್ತದೆ. ಒಂದು ಕಾಲದಲ್ಲಿ ಸೀಗಡಿ ಉತ್ಪಾದನೆಯಲ್ಲಿ ನಮ್ಮ ರಾಜ್ಯ ಇಡೀ ದೇಶದಲ್ಲಿ ನಂ.1 ಇತ್ತು. ಈಗ ನೆರೆ ರಾಜ್ಯವಿದೆ. ನಮ್ಮಲ್ಲೂ ಅವಕಾಶವಿದ್ದು, ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಹಾಕುತ್ತೇವೆ ಎಂದರು.
ಮತ್ಸ್ಯ ಸಂಪದ ಪ್ರಗತಿ ಎಲ್ಲಿಗೆ ಬಂತು?: 2020-21ರಿಂದ 2024-25ವರೆಗೆ 5 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುವ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಕೇಂದ್ರವು ಈವರೆಗೆ 779.79 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿದೆ. 252.24 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 123.86 ಕೋಟಿ ರೂ. ವೆಚ್ಚವಾಗಿದೆ. ಶೇ.77 ಪ್ರಗತಿ ಸಾಧಿಸಲಾಗಿದೆ. ಮತ್ಸ್ಯ ಸಂಪದ ಯೋಜನೆಯನ್ನು ರಾಜ್ಯದಲ್ಲಿ ತ್ವರಿತವಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನ ಮಾಡಲು ಅಧಿಕಾರ ವಿಕೇಂದ್ರೀಕರಣ ಮಾಡಿ ವಲಯ ಮಟ್ಟದ ಮೀನುಗಾರಿಕೆ ಜಂಟಿ ನಿರ್ದೇಶಕರಿಗೆ ಮಂಜೂರಾತಿ ನೀಡುವ ಅಧಿಕಾರ ನೀಡಲಾಗಿದೆ. ಈ ಯೋಜನೆಯಡಿ ಹೆಜಮಾಡಿ ಕೋಡಿ, ಅಳ್ವೆಕೋಡಿ- ತೆಂಗಿನಗುಂಡಿ, ಗಂಗೊಳ್ಳಿ ಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳ ನವೀಕರಣ, ಅಭಿವೃದ್ಧಿಗಾಗಿ ಕೇಂದ್ರವು 66.91 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಅತ್ಯಾಧುನಿಕ ಬಂದರು ಅಭಿವೃದ್ಧಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಪ್ರತಿವರ್ಷ 30 ಮಿಲಿಯನ್ ಟನ್ ಸರಕು ನಿರ್ವಹಿಸುವ ಸಾಮರ್ಥ್ಯದ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಸರ್ವ ಋತು ಬಂದರನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಆಸಕ್ತ ಬಿಡ್ಡುದಾರರಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ. ಒಂದು ಬಂದರು ಅಭಿವೃದ್ಧಿಯಾದರೆ ಒಂದು ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 5 =
Remember me
