ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ: 14 ವರ್ಷದ ಹಿಂದೆ ನಾಪತ್ತೆಯಾಗಿರುವ ಮಗನಿಗಾಗಿ ಹಪಾಹಪಿಸುತ್ತಿರುವ ದಂಪತಿ, ‘ಪಾಕಿಸ್ತಾನದಲ್ಲಿ ಕೈದಿಯಾಗಿರುವ ರಮೇಶ್ ನಮ್ಮ ಮಗನೇ’ ಎಂಬ ಆಶಾಭಾವನೆಯಲ್ಲಿ ಇದ್ದಾರೆ.
ಕೊಡಗಿನ ಕೈಕೇರಿ ನಿವಾಸಿಗಳಾದ ಪಿ.ಎಂ. ಕುಶಾಲಪ್ಪ-ಮೀನಾಕ್ಷಿ ದಂಪತಿ ಪುತ್ರ ಯಶ್ವಂತ್ 2006ರಲ್ಲಿ ಮೈಸೂರಿನಿಂದ ಕಾಣೆಯಾಗಿದ್ದ. ಆಗ ಆತನಿಗೆ 18 ವರ್ಷ ವಯಸ್ಸು. ಇತ್ತೀಚೆಗೆ ಪಾಕಿಸ್ತಾನದಿಂದ ಬಂದಿರುವ ಭಾವಚಿತ್ರ ಮಗನದ್ದೇ ಎಂದು ದಂಪತಿ ಹೇಳುತ್ತಿದ್ದು, ಡಿಎನ್​ಎ ಪರೀಕ್ಷೆ ಮೂಲಕ ಅದನ್ನು ದೃಢಪಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಉಭಯ ರಾಷ್ಟ್ರಗಳ ನಡುವಿನ ಪ್ರತಿಕೂಲ ಪರಿಸ್ಥಿತಿಯಿಂದ ಈ ಪ್ರಯತ್ನಕ್ಕೆ ಹಿನ್ನೆಡೆಯಾಗುತ್ತಿದೆ.
ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶ್ವಂತನನ್ನು ಹಾಜರಾತಿ ಕಡಿಮೆ ಎಂಬ ಕಾರಣಕ್ಕೆ ಕಾಲೇಜಿನಿಂದ ಬಿಡಿಸಿ, ಮೈಸೂರಿನ ಜನಶಿಕ್ಷಣ ಸಂಸ್ಥೆಗೆ ಸೇರಿಸಿದ್ದರು. ನಂತರ ಮೈಸೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ದಿನ ಕಳೆದಂತೆ ಯಶ್ವಂತ ಮನೆಯ ಸಂಪರ್ಕ ಕಡಿಮೆ ಮಾಡಿಕೊಂಡಿದ್ದ. ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ. ಇಂದು ಬರುತ್ತಾನೆ, ನಾಳೆ ಬರುತ್ತಾನೆ ಎಂದು ಪಾಲಕರು ಕಾಯುತ್ತಿದ್ದರು. ಆ ನಿರೀಕ್ಷೆ ಹುಸಿಯಾದಾಗ, 2007ರಲ್ಲಿ ಆತ ಕಾಣೆಯಾಗಿರುವ ಬಗ್ಗೆ ಮೈಸೂರಿನಲ್ಲಿ ದೂರು ದಾಖಲಿಸಿದ್ದರು.
ಈ ನಡುವೆ, ಪಾಕಿಸ್ತಾನದಲ್ಲಿ ಭಾರತೀಯರು ಬಂಧಿಗಳಾಗಿರುವ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯಲ್ಲಿ ಯಶ್ವಂತ್​ನನ್ನು ಹೋಲುವ ಚಿತ್ರ ಇದ್ದಿದ್ದರಿಂದ ಆತ ತಮ್ಮ ಮಗನೇ ಎಂಬ ನಿರ್ಧಾರಕ್ಕೆ ಪಾಲಕರು ಬಂದಿದ್ದಾರೆ. ಈ ಬಗ್ಗೆ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದು, ಅವರ ಪ್ರಯತ್ನಕ್ಕೆ ಪೂರಕ ತೀರ್ಪು ಬಂದಿದೆ.
ಹೂದೋಟದಲ್ಲಿ ಪತ್ತೆ: ಲಾಹೋರ್​ನ ಹೂದೋಟದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯಶ್ವಂತ್ ತನ್ನ ಹೆಸರನ್ನು ರಮೇಶ್ ಎಂದು ಹೇಳಿಕೊಂಡಿದ್ದು, ಪಾಲಕರ ಹೆಸರು ನೀಡಿಲ್ಲ. ಹೆಸರಿನ ಗೊಂದಲ ತಾಂತ್ರಿಕ ಸಮಸ್ಯೆಯಾಗಿದ್ದು, ರಮೇಶ್ ಮಗನೆ ಎಂದು ಪಾಲಕರು ಹೇಳುತ್ತಿದ್ದಾರೆ. ರಮೇಶ್ ಲಾಹೋರ್​ನ ಜೈಲಿನಲ್ಲಿದ್ದು, ಅಲ್ಲಿಗೆ ಹೇಗೆ ತಲುಪಿದ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಹಿಂದೆ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಹೆಚ್ಚು ಮುತುವರ್ಜಿ ವಹಿಸಿದ್ದರು. ವೈದ್ಯಕೀಯ ಪರೀಕ್ಷೆ ಮೂಲಕ ವಾರಸುದಾರನ ಪತ್ತೆ, ಭಾರತೀಯ ಎಂಬುದನ್ನು ದೃಢಪಡಿಸಿಕೊಳ್ಳಲು ಪತ್ರ ವ್ಯವಹಾರ ನಡೆಯುತ್ತಿದೆ. ಶಾಸಕ ಕೆ.ಜಿ. ಬೋಪಯ್ಯ, ಸಂಸದ ಪ್ರತಾಪ್ ಸಿಂಹ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಪ್ರಧಾನಿ ಮೋದಿ ಮೂಲಕ ಮತ್ತಷ್ಟು ಒತ್ತಡ ಹೇರಲು ಪಾಲಕರು ಮುಂದಾಗಿದ್ದಾರೆ.
ವಿಶ್ವಾಸ ಮೂಡಿಸಿರುವ ಪತ್ರ:ಭಾರತೀಯ ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಶ್ವೇತಾ ಸಿಂಗ್ ಪಾಕಿಸ್ತಾನದೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದಾರೆ ಎಂದು ವಕೀಲ ಸಿ.ಎನ್. ಶ್ರೀನಿವಾಸ್​ರಾವ್ ಅವರಿಗೆ ಅಧಿಕೃತ ಮಾಹಿತಿ ಬಂದಿದೆ. ಭಾರತೀಯ ಎಂಬುದನ್ನು ನಿರ್ಧರಿಸಬೇಕಿದ್ದು, ಈ ಬಗ್ಗೆ ಪಾಕಿಸ್ತಾನ ಸರ್ಕಾರದ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ. ಅದರಂತೆ, ಭಾರತೀಯ ವೈದ್ಯಕೀಯ ತಂಡಕ್ಕೆ ಅಲ್ಲಿಗೆ ತೆರಳಲು ಅನುಮತಿ ಕೇಳಲಾಗುತ್ತಿದೆ.
ಯಶ್ವಂತ್​ನನ್ನು ಪಾಕಿಸ್ತಾನ ದಿಂದ ಬಿಡಿಸಿಕೊಂಡು ಬಂದು ವರದಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇಲ್ಲಿಂದ ಒಂದು ತಂಡ ಕೂಡ ಅಲ್ಲಿಗೆ ತೆರಳಿ, ಅವನ ಪರಿಸ್ಥಿತಿ ತಿಳಿದುಕೊಂಡು ಬಂದಿದೆ. ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಬಗ್ಗೆ ತಿಳಿಸಿದೆ. ಶಿಕ್ಷೆ ಕೂಡ ಮುಗಿದಿದೆ.
|ಶ್ರೀನಿವಾಸ್​ರಾವ್, ಹೈಕೋರ್ಟ್ ವಕೀಲ, ಬೆಂಗಳೂರು
ಪಾಕಿಸ್ತಾನ ಜೈಲಿನಿಂದ ಬಂದಿರುವ ಭಾವಚಿತ್ರ ನನ್ನ ಮಗನನ್ನು ಹೋಲುವಂತೆ ಇದೆ. ಕಾಣೆಯಾಗುವಾಗ 18 ವರ್ಷ ವಯಸ್ಸಾಗಿತ್ತು. ಈಗ 32 ವರ್ಷ ವಯಸ್ಸಾಗಿದೆ. ಅವನನ್ನು ಬಿಡಿಸಿಕೊಂಡು ಬರಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ.
|ಪಿ.ಎಂ.ಕುಶಾಲಪ್ಪ, ಯಶ್ವಂತ್ ತಂದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eleven =
Remember me
