|ಮೃತ್ಯುಂಜಯ ಕಪಗಲ್ಬೆಂಗಳೂರು
ಕರೊನಾ ಹಿಡಿತದಿಂದ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಆರ್ಥಿಕತೆ ಚೇತರಿಕೆ ಹಳಿ ಹತ್ತಿದೆ. ಆದರೆ ಸಾಂಕ್ರಾಮಿಕ ಪಿಡುಗಿನಿಂದ ಬಹಳಷ್ಟು ಹಾಸ್ಟೆಲ್, ವಸತಿ ಶಾಲೆಗಳು ಮುಕ್ತವಾಗದಿರುವುದು ಬೆಳಕಿಗೆ ಬಂದಿದೆ. ನಿರ್ಲಕ್ಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಮೊದಲ ಆದ್ಯತೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೆ, ಅನುಷ್ಠಾನ ಹಾಗೂ ಅನುದಾನ ವಿನಿಯೋಗದ ಅಂಕಿ-ಅಂಶಗಳು ಕಟುವಾಸ್ತವಕ್ಕೆ ಕೈಗನ್ನಡಿ ಹಿಡಿದಿವೆ.
ಕರೊನಾ ಹಾವಳಿ ಕಾಲಕ್ಕೆ ನಗರ-ಪಟ್ಟಣಗಳು ಹಾಗೂ ಸಮೀಪದ ಬಹಳಷ್ಟು ಹಾಸ್ಟೆಲ್​ಗಳು, ವಸತಿ ಶಾಲೆಗಳನ್ನು ಲಘು ರೋಗ ಲಕ್ಷಣವುಳ್ಳವರ ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೆಲವೆಡೆ ಹಾಸ್ಟೆಲ್, ವಸತಿಶಾಲೆಗಳ ವಾರ್ಡನ್​ಗಳು ಮುನ್ನೆಚ್ಚರಿಕೆ ಕ್ರಮವಾಗಿ ಹಾಸಿಗೆ-ದಿಂಬುಗಳನ್ನು ಎತ್ತಿಟ್ಟುಕೊಂಡರೆ, ಬಹುತೇಕ ಕಡೆ ರೋಗಿಗಳಿಗೆ ಬಳಕೆಯಾಗಿದೆ. ಸೋಂಕಿನ ಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಕ್ವಾರಂಟೈನ್ ಕೇಂದ್ರಗಳಾಗಿದ್ದ ಹಾಸ್ಟೆಲ್, ವಸತಿ ಶಾಲೆಗಳ ಹಾಸಿಗೆ-ದಿಂಬುಗಳನ್ನು ಸುಟ್ಟು ಹಾಕಲಾಗಿದೆ. ಅಲ್ಲದೆ, ಎರಡೆರಡು ಬಾರಿ ಸ್ಯಾನಿಟೈಸರ್ ಸೇರಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಇಲಾಖೆ ಚಾಚೂತಪ್ಪದೇ ಪಾಲಿಸಿದೆ.
ಹಗರಣದ ಭೀತಿ?:ಕಾಂಗ್ರೆಸ್ ಆಡಳಿತಾವಧಿಯ ‘ಹಾಸಿಗೆ-ದಿಂಬು ಖರೀದಿ ಹಗರಣ’ದ ಭೀತಿಯೇ ಸಮಾಜ ಇಲಾಖೆ ಮೀನಮೇಷ ಕಾರಣವೆಂಬ ವಿಚಿತ್ರ ಸಂಗತಿಯೊಂದು ಬಹಿರಂಗವಾಗಿದೆ. ಕರೊನಾ ಉಪಟಳ ಮುಗಿದಿದ್ದರೂ ತಾತ್ಕಾಲಿಕ ಕ್ವಾರಂಟೈನ್ ಕೇಂದ್ರಗಳು ಮಾತ್ರ ಈ ಶಾಪದಿಂದ ಮುಕ್ತವಾಗದ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿದಾಗ ಈ ವಿಷಯ ಗೊತ್ತಾಗಿದೆ. ಹಗರಣ ಮರುಕಳಿಸಬಹುದು ಎಂಬ ಭೀತಿಯಿಂದ ಹೊಸದಾಗಿ ಹಾಸಿಗೆ-ದಿಂಬು ಖರೀದಿಗೆ ಮೀನಮೇಷ ಎಣಿಸಲಾರಂಭಿಸಿದ್ದು, ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೀಡುಮಾಡಿದೆ.
ಸ್ವಪಕ್ಷದ ಶಾಸಕರು, ಮುಖಂಡರು ಒತ್ತಡದಿಂದ ಶ್ರೀನಿವಾಸ ಪೂಜಾರಿ ಜಾಗೃತರಾಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಆಯಾ ಜಿಲ್ಲಾಧಿಕಾರಿ ಹಂತದಲ್ಲಿ ಟೆಂಡರ್ ಕರೆದು ಖರೀದಿಸಿ ಪೂರೈಕೆಗೆ ತೀರ್ವನಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆ ಅನುದಾನವನ್ನು ಆಯಾ ಡಿಸಿಗಳಿಗೆ ಬಿಡುಗಡೆ ಮಾಡಿದ್ದು, ಕೊರತೆ ಸರಿದೂಗಿಸಲು ತ್ವರಿತವಾಗಿ ಕ್ರಮವಹಿಸಬೇಕೆಂಬ ಸೂಚನೆ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆಯಾಗಿರುವ ಎಲ್ಲ ಹಾಸ್ಟೆಲ್ ಮತ್ತು ವಸತಿ ಶಾಲೆಗಳದ್ದೂ ಇದೇ ದುಃಸ್ಥಿತಿ. ರೋಗಿಗಳ ಬಳಸಿದ ಹಾಸಿಗೆಗಳನ್ನು ಬಳಕೆ ಮಾಡಬಾರದು ಎಂಬ ಸೂಚನೆಯಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದು, ಹೊಸದಾಗಿ ಹಾಸಿಗೆ-ದಿಂಬು ಪೂರೈಕೆ ವಿಳಂಬವಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.
ಹಣ ಬಳಸಲಾಗದ ದುಸ್ಥಿತಿ:ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ ಮೀಸಲಿಟ್ಟ ಹಣ ಬಳಕೆಗೂ ಗ್ರಹಣ ಹಿಡಿದಿದೆ ಎಂಬುದನ್ನು ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಎಸ್​ಸಿಎಸ್​ಪಿಯಡಿ 23,023.37 ಕೋಟಿ ರೂ. ಹಾಗೂ ಟಿಎಸ್​ಪಿಯಡಿ 9,361 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.
ಪರಿಶಿಷ್ಟ ಜಾತಿ ಉಪಯೋಜನೆಯಡಿ ಕಾದಿಟ್ಟ ಅನುದಾನದಲ್ಲಿ 8,496.30 ಕೋಟಿ ರೂ. ಬಿಡುಗಡೆ ಮಾಡಿದ್ದು, ಅಕ್ಟೋಬರ್ ಅಂತ್ಯದವರೆಗೆ 7,529.57 ಕೋಟಿ ರೂ. ವೆಚ್ಚವಾಗಿದೆ. ಒಟ್ಟಾರೆ ಶೇಕಡ 32.70 ಆರ್ಥಿಕ ಪ್ರಗತಿ ಸಾಧ್ಯವಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಹಂಚಿಕೆಯಾಗಿದ್ದ ಅನುದಾನದಲ್ಲಿ 2,744.22 ಕೋಟಿ ರೂ. ಬಿಡುಗಡೆಯಾಗಿದ್ದರೆ, 2,667.83 ಕೋಟಿ ರೂ. ಬಳಕೆಯಾಗಿ ಶೇ.28.33 ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಎಸ್​ಸಿಎಸ್​ಪಿಯಡಿ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್, ವಸತಿ, ಆಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ ಮತ್ತು ಪರಿಸರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಶಿಕ್ಷಣ, ಜಲ ಸಂಪನ್ಮೂಲ ಇಲಾಖೆಗಳು ಶೇ.16 ರಿಂದ 25ರಷ್ಟು ಪ್ರಗತಿ ದಾಖಲಿಸಿವೆ. ಉನ್ನತ ಶಿಕ್ಷಣ, ಐಟಿ-ಬಿಟಿ ಇಲಾಖೆಗಳು ಕೇವಲ ಶೇ.2 ರಿಂದ 6 ಅನುದಾನ ಬಳಸಿವೆ. ಟಿಎಸ್​ಪಿಯಡಿ ಜಲಸಂಪನ್ಮೂಲ ಕೌಶಲಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಾಲಾ ಶಿಕ್ಷಣ, ಕೈಗಾರಿಕೆ ಮತ್ತು ವಾಣಿಜ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಶೇ.10 ರಿಂದ 24 ಹಣ ಬಳಸಿದ್ದರೆ, ಅರಣ್ಯ ಮತ್ತು ಪರಿಸರ, ಗೃಹ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಕಂದಾಯ ಇಲಾಖೆಗಳ ಅನುದಾನ ಬಳಕೆ ಶೇ.0.81 ರಿಂದ 6ರ ಆಸುಪಾಸಿನಲ್ಲಿದೆ.
ಕರೊನಾ ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆಯಾಗಿರುವ ವಸತಿ ಶಾಲೆಗಳು, ಹಾಸ್ಟೆಲ್​ಗಳಲ್ಲಿ ಹಾಸಿಗೆ-ದಿಂಬಿನ ಕೊರತೆಯಿದೆ. ಸಚಿವರಿಗೆ ಖುದ್ದು 2-3 ಸಲ ಭೇಟಿ ಮಾಡಿ ಗಮನಸೆಳೆದಿದ್ದು, ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
|ಛಲವಾದಿ ನಾರಾಯಣಸ್ವಾಮಿಬಿಜೆಪಿ ವಿಧಾನ ಪರಿಷತ್ ಸದಸ್ಯ
ಸಮರ್ಪಕ ಹಾಸ್ಟೆಲ್ ಸೌಲಭ್ಯದಿಂದ ಸಾವಿರಾರು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆಯಾದ ಹಾಸ್ಟೆಲ್, ವಸತಿ ಶಾಲೆಗಳ ಮಕ್ಕಳು ನೆಲದ ಮೇಲೆ ಮಲಗುವ ಪರಿಸ್ಥಿತಿ ಉಂಟಾಗಿದೆ. ತುರ್ತಾಗಿ ಹಾಸಿಗೆ, ದಿಂಬುಗಳನ್ನು ಸರ್ಕಾರ ಪೂರೈಸಬೇಕು.
|ಅಜಯ್ ಕಾಮತ್ರಾಜ್ಯ ಕಾರ್ಯದರ್ಶಿ, ಎಐಡಿಎಸ್​ಒ
ಹಾಸ್ಟೆಲ್, ವಸತಿ ಶಾಲೆಗಳ ಕಟ್ಟಡಗಳು ಸುಸಜ್ಜಿತವಾಗಿದ್ದು, ಹೊರಗಿನಿಂದ ಚೆನ್ನಾಗಿ ಕಾಣುತ್ತಿವೆ. ಆದರೆ ಒಳಗೆ ಹಾಸಿಗೆ-ದಿಂಬು, ಪೀಠೋಪಕರಣಗಳ ಕೊರತೆಯಿಂದ ಬಳಲುತ್ತಿವೆ. ವಿಪರೀತ ಮಳೆಯಿಂದ ಚಳಿಯೂ ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಮನೆಯಿಂದ ತಂದಿರುವ ದಿಂಬು, ಚಾಪೆಯೇ ಗತಿಯಾಗಿದೆ. ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆಯಾದ ಬಹುಪಾಲು ವಸತಿ ಶಾಲೆಗಳು, ಹಾಸ್ಟೆಲ್ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಚಳಿಗಾಲದ ಆತಂಕ ಕಾಡಲಾರಂಭಿಸಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸ್ವಪಕ್ಷದ ಶಾಸಕರು ಹಾಗೂ ಮುಖಂಡರು ಖುದ್ದು ಭೇಟಿಯಾಗಿ ಈ ಸಮಸ್ಯೆ ತುರ್ತಾಗಿ ಬಗೆಹರಿಸಲು ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಸಿಗೆ-ದಿಂಬು ಇಲ್ಲದ ಬವಣೆಯನ್ನು ಸಚಿವ-ಶಾಸಕರ ಗಮನಕ್ಕೆ ತಂದಿದ್ದಾರೆ.
ಗಣಿತದ ಟೇಬಲ್​ ಹೇಳಿಲ್ಲ ಎಂದು ವಿದ್ಯಾರ್ಥಿ ಕೈಗೆ ಡ್ರಿಲ್ಲಿಂಗ್ ಮಷಿನ್ ಇಟ್ಟು ಗಾಯಗೊಳಿಸಿದ ಟೀಚರ್!

ಎರಡೂವರೆ ವರ್ಷದ ಮಗಳಿಗೆ ತಿನ್ನಲೂ ಕೊಡಿಸಲಾಗದೆ ಕೊಂದ ಟೆಕ್ಕಿ!; ಕೆಲಸವೂ ಇರಲಿಲ್ಲ, ಆರ್ಥಿಕ ನಷ್ಟ ಜತೆಗೆ ರಾಬರಿ ಕೇಸ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
