ಬೆಂಗಳೂರು:ಕರೊನಾ ಕಾರಣದಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗ ಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ ‘ವಿದ್ಯಾಗಮ’ ಯೋಜನೆ ಮೇಲೂ ಇದೀಗ ಕೋವಿಡ್-19 ಕರಿಛಾಯೆ ಆವರಿಸಿದೆ. ಈ ಯೋಜನೆಯಡಿ ಹಳ್ಳಿಗೆ ತೆರಳಿ ಮಕ್ಕಳನ್ನು ಒಗ್ಗೂಡಿಸಿ ಪಾಠ ಮಾಡುತ್ತಿದ್ದ ಶಿಕ್ಷಕರ ಜತೆಗೆ ಬೆಳಗಾವಿ, ಕಲಬುರಗಿ ಜಿಲ್ಲೆಯ 36 ವಿದ್ಯಾರ್ಥಿಗಳಿಗೂ ಸೋಂಕು ದೃಢಪಟ್ಟಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂಬ ಕೂಗು ಪ್ರತಿಧ್ವನಿಸಲಾರಂಭಿಸಿರುವುದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ರಾಜ್ಯದಲ್ಲಿ ಈವರೆಗೆ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಮತ್ತು ಅಧಿಕಾರಿಗಳು ಸೇರಿ ದಂತೆ 190ಕ್ಕೂ ಹೆಚ್ಚು ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ಕಲಬುರಗಿ ಜಿಲ್ಲೆಯ ಅಫಜಲ ಪುರದ ಮಾಶಾಳ ಗ್ರಾಮದಲ್ಲಿ 6 ವಿದ್ಯಾರ್ಥಿ ಗಳಿಗೆ ಕರೊನಾ ದೃಢವಾಗುತ್ತಿದ್ದಂತೆಯೇ ವಿದ್ಯಾಗಮದಡಿ ಆರಂಭವಾಗಿರುವ ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರಿಗೂ ಆತಂಕ ಕಾಡುತ್ತಿದೆ. ‘ವಿದ್ಯಾಗಮ’ದಲ್ಲಿ ಭಾಗವಹಿಸಿದ್ದೇ ಸೋಂಕು ತಗುಲಿರುವುದಕ್ಕೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ’ ಎಂದು ಅಲ್ಲಿನ ಜಿಲ್ಲಾ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದರೂ ಆತಂಕ ದೂರಾಗಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಆರಂಭವಾದ ವಿದ್ಯಾಗಮ ಯೋಜನೆ ಉತ್ತಮವಾಗಿ ನಡೆಯುತ್ತಿದೆ. ಶಿಕ್ಷಕರೇ ವಿದ್ಯಾರ್ಥಿ ಗಳಿರುವ ಪ್ರದೇಶಕ್ಕೆ ಹೋಗಿ ಅಲ್ಲಿ ಲಭ್ಯವಿರುವ ಜಾಗದಲ್ಲಿ ಬೋಧಿಸು ತ್ತಾರೆ. ಸರ್ಕಾರ ಮತ್ತು ಖಾಸಗಿ ಶಾಲೆಗಳು ಎಂದು ತಾರತಮ್ಯ ಮಾಡದೆ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಕಲಿಸಲಾಗುತ್ತಿದೆ.
ಯಾವುದೇ ಕಾರಣಕ್ಕೂ ವಿದ್ಯಾಗಮ ಯೋಜನೆ ನಿಲ್ಲಿಸುವುದಿಲ್ಲ. ಮಹತ್ವದ ಯೋಜನೆ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ನಿಲ್ಲಬೇಕು. ಯಾವ ಶಾಲೆಯಲ್ಲೂ ಯೋಜನೆ ದುರುಪಯೋಗ ಆಗುತ್ತಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಮಕ್ಕಳು ಸಹ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಬೆರೆತು ಪಾಠ ಕೇಳುತ್ತಿದ್ದಾರೆ.
ಬೆಂಗಳೂರಲ್ಲಿ ಹೆಚ್ಚು:ಕರೊನಾಕ್ಕೆ ಬೆಂಗಳೂರು ಒಂದರಲ್ಲೇ 18 ಶಿಕ್ಷಕರು ಬಲಿಯಾಗಿದ್ದಾರೆ. ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 51 ಶಿಕ್ಷಕರು ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲೂ ಕರೊನಾಗೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಭಯ ವಾತಾವರಣ ಸೃಷ್ಟಿ ಮಾಡಿದೆ.
ಔಪಚಾರಿಕ ಶಿಕ್ಷಣಕ್ಕೆ ಪರ್ಯಾಯವಾಗಿ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವ ಹಾಗೂ ಸ್ವಯಂ ಕಲಿಕಾ ವಿಧಾನಗಳ ಮೂಲಕ ಕಲಿಕಾ ಪ್ರಕ್ರಿಯೆ ಮುಂದುವರಿಸುವುದಕ್ಕಾಗಿ ರಾಜ್ಯ ಸರ್ಕಾರ ಆರಂಭಿಸಿದ ಯೋಜನೆಯೇ ವಿದ್ಯಾಗಮ. ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು 20ರಿಂದ 25 ಮಕ್ಕಳಿಗೆ ಒಬ್ಬರಂತೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ಕೋಣೆ ರೂಪಿಸಿ ಬೋಧಿಸಲಾಗುತ್ತಿದೆ. ಇದು ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದ ತರಗತಿಯಾಗಿದೆ. ಭೌತಿಕವಾಗಿ ಶಾಲೆಗಳನ್ನು ಆರಂಭಿಸುವವರೆಗೂ ಈ ಯೋಜನೆ ಜಾರಿಯಲ್ಲಿರಲಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಶಿಕ್ಷಕರಿಗೆ 22 ಪುಟಗಳ ಮಾರ್ಗಸೂಚಿಯನ್ನು ನೀಡಿದೆ. ರಾಜ್ಯದಲ್ಲಿ 50,066 ಸರ್ಕಾರಿ, 7,330 ಅನುದಾನಿತ ಮತ್ತು 19,645 ಖಾಸಗಿ ಶಾಲೆಗಳಿವೆ. ಇದರಲ್ಲಿ ಕ್ರಮವಾಗಿ 49.73 ಲಕ್ಷ, 15.83 ಲಕ್ಷ ಹಾಗೂ 45.71 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಟ್ಟಾರೆ 1.03 ಕೋಟಿ ವಿದ್ಯಾರ್ಥಿಗಳು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ.
ಒಂದು ಜಿಲ್ಲೆಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಮಾತ್ರಕ್ಕೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಸಲಾಗುತ್ತಿರುವ ವಿದ್ಯಾಗಮ ಯೋಜನೆಯನ್ನೇ ವೈಫಲ್ಯವೆಂಬಂತೆ ಬಿಂಬಿಸಿರುವುದು ವಿಷಾದನೀಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಶಾಳ ಗ್ರಾಮದ ಮುಖ್ಯೋಪಾಧ್ಯಾಯರಿಗೆ ತಿಂಗಳ ಹಿಂದೆ ಸೋಂಕು ತಗುಲಿತ್ತು. ಈಗ ಪೂರ್ಣ ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ ಶಾಲೆಯ ಯಾವುದೇ ಶಿಕ್ಷಕರಿಗೆ ಯಾವುದೇ ರೀತಿಯ ಸೋಂಕು ತಗುಲಿಲ್ಲ. ಸೆ.22ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರ್ಯಾಂಡಮ್ ಆಗಿ ಸುಮಾರು 203 ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಕೆಲವು ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಈ ಸೋಂಕು ತಗುಲಿಸಿಕೊಂಡಿರುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾರೆ.
ಎಲ್ಲ ಸುರಕ್ಷತೆ ಅನುಸರಿಸಿ ಬೋಧನೆ ಮಾಡಲಾಗುತ್ತಿದೆ. ವಿದ್ಯಾಗಮದಿಂದಲೇ ಸೋಂಕು ತಗುಲಿದೆ ಎಂದು ಹೇಳುವುದು ಸರಿಯಲ್ಲ. ಅಲ್ಲದೆ, ಇದು ವಿದ್ಯಾರ್ಥಿ ಸಮೂಹಕ್ಕೆ ಎಸಗುವ ಅನ್ಯಾಯವಾಗುತ್ತದೆ. ಈಗಾಗಲೇ ಹೆಚ್ಚುತ್ತಿರುವ ಸಾಮಾಜಿಕ ಪಿಡುಗುಗಳ ನಡುವೆ ವಿದ್ಯಾರ್ಥಿಗಳನ್ನು ಸುರಕ್ಷಿತವಾದ ವಾತಾವರಣದಲ್ಲಿ ಕಲಿಕೆಗೆ ತೊಡಗಿಸಿಕೊಳ್ಳದೇ ಹೋದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಚಾರವಾದಂತಾಗುತ್ತದೆ. ರಾಜ್ಯದ ಯಾವುದೇ ಶಾಲೆಯಲ್ಲಿಯೂ ವಿದ್ಯಾಗಮ ದುರುಪಯೋಗವಾಗುತ್ತಿಲ್ಲ. ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ತರಬೇತಿ ಹೊಂದಿದ ವೃತ್ತಿಪರರಾಗಿದ್ದಾರೆ. ಹಾಗೇ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಸೂಕ್ತ ಅರ್ಹತೆ ಹೊಂದಿದವರಾಗಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಮಾಡುವುದು ನಿಲ್ಲಬೇಕೆಂದು ಆಗ್ರಹಿಸಿದ್ದಾರೆ.
ಶಾಲೆ ಪುನರಾರಂಭದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾಗಮ ಯೋಜನೆಯಡಿ ಕಲಿಯುತ್ತಿದ್ದ 36 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ 6 ಹಾಗೂ ಬೆಳಗಾವಿಯ ರಾಮದುರ್ಗ ತಾಲೂಕಿನ ಎಂ.ತಿಮ್ಮಾಪುರದಲ್ಲಿ 30 ಮಕ್ಕಳಿಗೆ ವೈರಸ್ ತಗುಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಮಾಶಾಳದ ಶಾಲೆಯನ್ನು ಬಂದ್ ಮಾಡಿಸಿದ್ದಾರೆ. ಇನ್ನೂ 25 ಮಕ್ಕಳ ಕರೊನಾ ಪರೀಕ್ಷಾ ವರದಿ ಬರಬೇಕಿದೆ. ಎಂ.ತಿಮ್ಮಾಪುರ ಗ್ರಾಮದ ಶಾಲೆಯಲ್ಲಿ 30 ಮಕ್ಕಳ ಜತೆಗೆ 6 ಪಾಲಕರಿಗೂ ಸೋಂಕು ದೃಢಪಟ್ಟಿದೆ. ಒಟ್ಟಾರೆ ಶಾಲೆಯಲ್ಲಿ 190 ವಿದ್ಯಾರ್ಥಿಗಳು ಓದುತ್ತಿರುವುದರಿಂದ ಉಳಿದವರಲ್ಲೂ ಆತಂಕ ಶುರುವಾಗಿದೆ.
ಮಹಾಮಾರಿ ಕರೊನಾಗೆ ಈವರೆಗೂ ರಾಜ್ಯದಲ್ಲಿ 193 ಶಿಕ್ಷಕರು, ಉಪನ್ಯಾಸಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಬಲಿಯಾಗಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲೇ 35 ಪ್ರಕರಣ ವರದಿಯಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ 18, ಹಾವೇರಿ, ಬಾಗಲಕೋಟೆ ಯಲ್ಲಿ ತಲಾ 16, ಕಲಬುರಗಿ ಯಲ್ಲಿ 13 ಶಿಕ್ಷಕರು ಸಾವನ್ನಪ್ಪಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ 10 ವರ್ಷದೊಳಗಿನ 20,320 ಮತ್ತು 11 ರಿಂದ 20 ವರ್ಷದೊಳಗಿನ 48,301 ಮಕ್ಕಳು ಈಗಾಗಲೇ ಕರೊನಾ ಸೋಂಕಿತರಾಗಿದ್ದಾರೆ. ಈ ಎರಡೂ ಗುಂಪಿನಿಂದ ಒಟ್ಟಾರೆ 61 ಮಕ್ಕಳು ಮೃತಪಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯಾಗಮ ಯೋಜನೆ ನಿಲ್ಲಿಸುವುದಿಲ್ಲ. ಮಹತ್ವದ ಯೋಜನೆ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ನಿಲ್ಲಬೇಕು. ಯಾವ ಶಾಲೆಯಲ್ಲೂ ಯೋಜನೆ ದುರುಪಯೋಗ ಆಗುತ್ತಿಲ್ಲ.
| ಎಸ್.ಸುರೇಶ್ ಕುಮಾರ್,ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ
ವಿದ್ಯಾಗಮ ಯೋಜನೆಯನ್ನು ಎಲ್ಲೆಂದರಲ್ಲಿ ನಡೆಸುವ ಬದಲು ಶಾಲೆಗಳಲ್ಲೇ ಸುರಕ್ಷತಾ ಕ್ರಮ ಅನುಸರಿಸಿ ನಡೆಸುವುದು ಉತ್ತಮ. ಶಿಕ್ಷಣ ಇಲಾಖೆ ಎಸ್​ಒಪಿ ನೀಡಿದರೆ ನಾವು ಅನುಸರಿಸಲು ಸಿದ್ಧರಿದ್ದೇವೆ.
| ವಿ.ಎಂ.ನಾರಾಯಣಸ್ವಾಮಿ,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 + eight =
Remember me
