ಬೆಂಗಳೂರು:ಬೆಂಗಳೂರಿನಿಂದ ತೆಲಂಗಾಣಕ್ಕೆ ತೆರಳಿದ್ದ ಟೆಕ್ಕಿಗೆ ಕರೊನಾ ವೈರಸ್ ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಕರ್ನಾಟಕದಲ್ಲೂ ಕೊರೊನಾ ಆತಂಕ ಶುರುವಾಗಿದೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಕರೊನಾಸೋಂಕುಪೀಡಿತ ಟೆಕ್ಕಿ ಕೆಲಸ ನಿರ್ವಹಿಸುತ್ತಿದ್ದ ಕಚೇರಿಯ 25 ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿ ಅವರನ್ನು 28 ದಿನಗಳ ಕಾಲ ಮನೆಯಲ್ಲೇ ನಿಗಾದಲ್ಲಿರಿಸಲಾಗುತ್ತದೆ. ಜತೆಗೆ ಆತ ವಾಸವಿದ್ದ ಅಪಾರ್ಟ್​ವೆುಂಟ್​ನ ಎಲ್ಲ 98 ಫ್ಲಾಟ್​ಗಳ ನಿವಾಸಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಟೆಕ್ಕಿಯನ್ನು ಏರ್​ಪೋರ್ಟ್​ಗೆ ಕರೆದೊಯ್ದ ಕ್ಯಾಬ್ ಚಾಲಕನನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಿಂದ ತೆಲಂಗಾಣಕ್ಕೆ ಆತನೊಂದಿಗೆ ಪ್ರಯಾಣ ಮಾಡಿದ್ದ 23 ಪ್ರಯಾಣಿಕರ ತಪಾಸಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರಾದ ಬಿ. ಶ್ರೀರಾಮುಲು, ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ಸೋಂಕಿತನೊಂದಿಗೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯನ್ನು ನಿಗಾದಲ್ಲಿರಿಸಿದ್ದು, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕಿತ ವ್ಯಕ್ತಿ ವಾಸವಿದ್ದ ಅಪಾರ್ಟ್ ಮೆಂಟ್, ಕಚೇರಿ ಸೇರಿ ಬೆಂಗಳೂರಿನಿಂದ ತೆಲಂಗಾಣಕ್ಕೆ ಪ್ರಯಾಣಿಸಿದ್ದ ಬಸ್ಸನ್ನೂ ಸ್ವಚ್ಛಗೊಳಿಸಲಾಗಿದೆ. ಆತನ ಸಂಪರ್ಕದಲ್ಲಿದ್ದ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದರು. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಟೆಕ್ಕಿ ಫೆ. 16ರಂದು ದುಬೈಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬಂದಾಗ ವಿಮಾನ ನಿಲ್ದಾಣದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಿದ ವೇಳೆ ಸೋಂಕು ದೃಢಪಟ್ಟಿರಲಿಲ್ಲ.
ಎರಡು ದಿನಗಳ ಹಿಂದೆ ಆತ ಬೆಂಗಳೂರಿನಿಂದ ತೆಲಂಗಾಣಕ್ಕೆ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ಅಲ್ಲಿ ನಡೆಸಿರುವ ತಪಾಸಣೆ ವೇಳೆ ಆ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.
ಪ್ರತ್ಯೇಕ ವಾರ್ಡ್ ವ್ಯವಸ್ಥೆ:ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆಸ್ಪತ್ರೆಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿ ಕರೊನಾ ಶಂಕಿತರು ಹಾಗೂ ಸೋಂಕಿತರ ಚಿಕಿತ್ಸೆಗಾಗಿ 630 ಹಾಸಿಗೆಗಳ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.
ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, 1,689 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸದ್ಯ ರಾಜ್ಯಕ್ಕೆ ಕರೊನಾ ಭೀತಿ ಇಲ್ಲ. ಮುಂದೆಯೂ ಬಾರದಂತೆ ತಡೆಯಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ 24 ಗಂಟೆಗಳೂ ಕೆಲಸ ಮಾಡಲಿವೆ ಎಂದು ಸಚಿವರು ತಿಳಿಸಿದರು.
ಜಾಗೃತಿ ಕಾರ್ಯಕ್ರಮ :ಸಾರ್ವಜನಿಕರಿಗೆ ಕೊರೊನಾವೈರಸ್ ಕುರಿತು ಅರಿವು ಮೂಡಿಸಲು ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಜತೆಗೆ 24 ಗಂಟೆಗಳ ಸಹಾಯವಾಣಿಯನ್ನು ತೆರೆದು ಜನರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ದೇಶಾದ್ಯಂತ ಹೈ ಅಲರ್ಟ್
ಭಾರತದಲ್ಲಿ ಇಟಲಿಯ ಪ್ರವಾಸಿಗರೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಜೈಪುರ ಪ್ರವಾಸಕ್ಕಾಗಿ ಬಂದಿದ್ದ 23 ಜನರ ತಂಡದಲ್ಲಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇವರಲ್ಲಿ 21 ಮಂದಿ ಹಾಗೂ ಮೂವರು ಭಾರತೀಯರನ್ನು ದೆಹಲಿ ಬಳಿಯ ಐಟಿಬಿಪಿ ಶಿಬಿರಕ್ಕೆ ಕಳುಹಿಸಲಾಗಿದೆ. ಆಗ್ರಾದಲ್ಲಿ ಕರೊನಾ ಸೋಂಕು ಪೀಡಿತ ಆರು ಮಂದಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ರೋಗ ಲಕ್ಷಣಗಳು
ವಿಪರೀತ ಜ್ವರ, ಎದೆ ನೋವಿನಿಂದ ಕೂಡಿದ ಉಸಿರಾಟದ ತೊಂದರೆ, ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತ, ನ್ಯುಮೋನಿಯ.
ಎಚ್ಚರಿಕೆ ಕ್ರಮಗಳೇನು?
ಅಪಾರ್ಟ್​ವೆುಂಟ್ ನಿವಾಸಿಗಳ ಆರೋಗ್ಯ ತಪಾಸಣೆ
ಕೊರೊನಾ ಸೋಂಕಿತ ಟೆಕ್ಕಿ ವಾಸವಿದ್ದ ಅಪಾರ್ಟ್ ಮೆಂಟ್​ನಲ್ಲಿ 98 ಮನೆಗಳಿದ್ದು, ಬುಧವಾರ ಬೆಳಗ್ಗೆ ಆಶಾ ಕಾರ್ಯಕರ್ತೆಯರಿಂದ ಹಾಗೂ ಆರೋಗ್ಯ ಇಲಾಖೆ ಸಹಾಯಕಿಯರಿಂದ ಪ್ರತಿ ಮನೆಯಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಾಗುವುದು. ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಂಡದ ನೇತೃತ್ವ ವಹಿಸಿರುವ ಆರೋಗ್ಯಾಧಿಕಾರಿ ಡಾ. ಎಂ. ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಬಗ್ಗೆ ಜಾಗೃತಿ
ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್​ಗಳ ಒಳ ಹಾಗೂ ಹೊರಭಾಗಗಳು, ಬಸ್ ನಿಲ್ದಾಣಗಳು, ವಿಶ್ರಾಂತಿ ಕೊಠಡಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಬಸ್​ಗಳ ಒಳಭಾಗವನ್ನು ರಾಸಾಯನಿಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಬೇಕು. ಕೆಎಸ್​ಆರ್​ಟಿಸಿಯ ವೋಲ್ವೋ ಬಸ್ ಹಾಗೂ ವಿಮಾನ ನಿಲ್ದಾಣದಿಂದ ಸೇವೆ ನೀಡುವ ಫ್ಲೈ ಬಸ್​ಗಳನ್ನು ಆಂಟಿ ಬ್ಯಾಕ್ಟೀರಿಯಾ ಕೆಮಿಕಲ್ ಬಳಸಿ ಫ್ಯೂಮಿಗೇಷನ್ ಮಾಡಬೇಕು. ಸಾಂಕ್ರಾಮಿಕ ರೋಗ ಮತ್ತು ಸೋಂಕು ಹೊರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ರಕ್ತದ ಮಾದರಿ ಪರೀಕ್ಷೆ
ಕರೊನಾ ಸೋಂಕಿತ ಟೆಕ್ಕಿ ಜತೆ ನಗರದ ಅಪಾರ್ಟ್​ವೆುಂಟ್​ನಲ್ಲಿ ಒಂದೇ ಕೊಠಡಿಯಲ್ಲಿ ವಾಸವಿದ್ದ ವ್ಯಕ್ತಿಗೂ ಸೋಂಕು ತಗುಲಿರಬಹುದೆಂದು ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಕೊರೊನಾ ಕುರಿತಂತೆ ಕೇಂದ್ರ ಹಾಗೂ ರಾಜ್ಯದ ಎಲ್ಲ ಆರೋಗ್ಯ ಸಚಿವಾಲಯಗಳ ಜತೆ ಸಂಪರ್ಕದಲ್ಲಿದ್ದೇನೆ. ಈ ಮಹಾಮಾರಿ ಬಗ್ಗೆ ಜನ ಭಯಪಡುವ ಅಗತ್ಯವಿಲ್ಲ. ನಾವೆಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡೋಣ.
| ನರೇಂದ್ರ ಮೋದಿ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 12 =
Remember me
