ನವದೆಹಲಿ:ಭಾರತದಲ್ಲಿ ಲಾಕ್​ಡೌನ್ ತೆರವು ಮಾಡಿದ ನಂತರ ಕೆಲವು ವಾರಗಳ ಕಾಲ ಕೋವಿಡ್-19 ಪ್ರಕರಣಗಳು ಕಡಿಮೆಯಾಗಬಹುದು. ಆದರೆ ಜುಲೈ ಅಂತ್ಯ ಅಥವಾ ಆಗಸ್ಟ್​ನಲ್ಲಿ, ಅಂದರೆ ಮಳೆಗಾಲದಲ್ಲಿ ಮಹಾಮಾರಿ ಮತ್ತೆ ದೊಡ್ಡ ಪ್ರಮಾಣದಲ್ಲಿ ತಲೆಯೆತ್ತಬಹುದು ಎಂದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ‘ದೈನಂದಿನ ಪ್ರಕರಣಗಳ ಪಥವನ್ನು ನೋಡಿದರೆ ಅವು ಒಂದೇ ಸಮತಟ್ಟು ಮಟ್ಟ ತಲುಪಿದೆ ಅಥವಾ ಅದರ ಪರಿಣಾಮವಾಗಿ ಕೆಳಮುಖ ವಾಗಲೂಬಹುದು. ಈ ಪ್ರವೃತ್ತಿ ಕೆಲವು ವಾರ ಅಥವಾ ಕೆಲವು ತಿಂಗಳ ಕಾಲವೂ ಇರಬಹುದು’ ಎಂಬುದು ಶಿವ ನಾಡಾರ್ ವಿಶ್ವ ವಿದ್ಯಾಲಯದ ಗಣಿತ ವಿಭಾಗದ ಸಹಾಯಕ ಪೊ›ಫೆಸರ್ ಸಮಿತ್ ಭಟ್ಟಾಚಾರ್ಯ ಅಭಿಪ್ರಾಯ. ಆದಾಗ್ಯೂ ಇದೇ ಕರೊನಾ ವೈರಸ್ ಇನ್ನೊಂದು ಸುತ್ತಿನಲ್ಲಿ ಬಾಧಿಸಬಹುದು. ಇದನ್ನು ಎರಡನೇ ಅಲೆ ಎಂದು ಭಾವಿಸಬಹುದಾಗಿದೆ ಎಂದವರು ಹೇಳಿದ್ದಾರೆ. ‘ಮಳೆಗಾಲದ ಜುಲೈ ಅಂತ್ಯ ಅಥವಾ ಆಗಸ್ಟ್​ನಲ್ಲಿ ಕರೊನಾ ಮರಳಿ ಬರಬಹುದು. ಆ ಅವಧಿಯಲ್ಲಿ ಸಾಮಾಜಿಕ ಅಂತರವನ್ನು ನಾವು ಹೇಗೆ ಕಾಪಾಡುತ್ತೇವೆ ಎನ್ನುವುದನ್ನು ಅದು ಅವಲಂಬಿಸಿದೆ’ ಎಂದು ಸಮಿತ್ ಹೇಳಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ರಾಜೇಶ್ ಸುಂದರೇಶನ್ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಚೀನಾ ಉದಾಹರಣೆ:ಸಹಜ ಚಟುವಟಿಕೆಗಳ ಮಟ್ಟಕ್ಕೆ ನಾವು ಮರಳಿದ ನಂತರ ಸೋಂಕು ಮತ್ತೆ ತಲೆಯೆತ್ತುವ ಸಂಭವವಿದೆ. ಚೀನಾದಲ್ಲಿ ಪ್ರಯಾಣ ನಿರ್ಬಂಧಗಳ ಸಡಿಲಿಕೆಯ ನಂತರ ಈ ರೀತಿಯ ಪ್ರವೃತ್ತಿ ಕಂಡು ಬಂದಿದ್ದನ್ನು ಗಮನಿಸಬಹುದಾಗಿದೆ ಎಂದು ಸುಂದರೇಶನ್ ಹೇಳಿದ್ದಾರೆ. ಐಐಎಸ್ಸಿ ಮತ್ತು ಮುಂಬೈಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ (ಟಿಐಎಫ್​ಆರ್) ಸಂಶೋಧಕರು ಮಂಡಿಸಿದ ಪ್ರಬಂಧದ ಲೇಖಕರಲ್ಲಿ ಸುಂದರೇಶನ್ ಕೂಡ ಒಬ್ಬರು.
ಬೆಂಗಳೂರು, ಮುಂಬೈ ಆಧಾರ:ಐಸೋಲೇಷನ್, ಕ್ವಾರಂಟೈನ್, ಸಾಮಾಜಿಕ ಅಂತರ ಮತ್ತಿತರ ಲಾಕ್​ಡೌನ್ ನಂತರದ ಕ್ರಮಗಳ ಪರಿಣಾಮಗಳನ್ನು ವಿಶ್ಲೇಷಿಸಿ ಸಂಶೋಧಕರು ವರದಿ ಸಿದ್ಧಪಡಿಸಿದ್ದಾರೆ. ಬೆಂಗಳೂರು ಮತ್ತು ಮುಂಬೈ ಮಾದರಿಯಾಗಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. 2ನೇ ಅಲೆ, ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಮುಂದುವರಿಯಲಿದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.
ಹರ್ಷ ತಂದ ವರ್ಷಧಾರೆ:ಬೆಂಗಳೂರು, ಮೈಸೂರು ಹಾಸನ, ಚಾಮರಾಜನಗರ, ತುಮಕೂರು, ಗದಗ ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ರಾತ್ರಿಯಿಂದ ಶುಕ್ರವಾರದ ಸಂಜೆವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜನಸಾಮಾನ್ಯರ ಜತೆಗೆ ಅನ್ನದಾತರೂ ಸಂತಸಗೊಂಡಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದೆ. ಕೊಡಗಿನಲ್ಲಿ ಲಾಕ್​ಡೌನ್ ನಡುವೆಯೂ ಶುಕ್ರವಾರ ಅನುಮತಿ ನೀಡಲಾಗಿದ್ದ ಸಂತೆಗೆ ಬರುವುದಕ್ಕೂ ಗ್ರಾಹಕರಿಗೆ ಮಳೆ ಅಡ್ಡಿಪಡಿಸಿತು. ಮಂಡ್ಯ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ 12.2 ಮಿ.ಮೀ ಮಳೆಯಾಗಿದೆ.
29ವರೆಗೆ ಮಳೆ:ರಾಜ್ಯದಲ್ಲಿ ಏ.29ರವರೆಗೆ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ ಗ್ರಾ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ರಾಮನಗರದಲ್ಲಿ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆ ಹೊರತಾಗಿಯೂ ಬೆಂಗಳೂರು, ಬೆಂ.ಗ್ರಾ, ಕಲಬುರಗಿ, ವಿಜಯಪುರ, ರಾಯಚೂರು, ಹಾವೇರಿ, ಬೆಳಗಾವಿ, ಗದಗ, ಧಾರವಾಡ, ಬೀದರ್, ಚಿತ್ರದುರ್ಗ ಸೇರಿ ಹಲವೆಡೆ ಗರಿಷ್ಠ ತಾಪಮಾನ ಗುರುವಾರಕ್ಕೆ ಹೋಲಿಸಿದಲ್ಲಿ ಶುಕ್ರವಾರ 1 ಡಿಗ್ರಿ ಏರಿಕೆಯಾಗಿದೆ.
ಬೆಚ್ಚಿದ ಬೆಂಗಳೂರು:ಗುರುವಾರ ತಡರಾತ್ರಿಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ಸುರಿದ ಒಂದೇ ಮಳೆಗೆ ರಾಜಧಾನಿ ಬೆಂಗಳೂರು ಬೆಚ್ಚಿದೆ. ಲಗ್ಗೆರೆ ಸ್ಲಂ ಬೋರ್ಡ್ ಮನೆಗಳ ಕಾಂಪೌಂಡ್ ಹಾಗೂ ರಸ್ತೆ ಕುಸಿದು ಹಲವು ವಾಹನಗಳು ಗುಂಡಿಯಲ್ಲಿ ಬಿದ್ದಿವೆ. ಭೂಕುಸಿತದಿಂದ ಅಪಾಯದಲ್ಲಿದ್ದ 32 ಮನೆಗಳ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಜಾಜಿನಗರ, ನಂದಿದುರ್ಗ ರಸ್ತೆ ಸೇರಿ ಹಲವೆಡೆ ಒಟ್ಟು 25ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 8 =
Remember me
