ಬೆಂಗಳೂರು:ಇಟಲಿ, ಫ್ರಾನ್ಸ್, ಅಮೆರಿಕದ ಕರೊನಾ ಕರಾಳ ಕಥೆಗಳನ್ನು ಕೇಳುತ್ತಿದ್ದವರ ಕಣ್ಣಮುಂದೆ ಈಗ ಕರೊನಾ ಬಂದು ನಿಂತಿದೆ. ನಗರ ಪ್ರದೇಶದಲ್ಲಿ ಸಾವಿನ ಸಂಖ್ಯೆ ಬೆಳೆಯುತ್ತಿದ್ದರೆ, ‘ಮಹಾ ವಲಸೆ’ಯಿಂದ ಹಳ್ಳಿಗಳ ಬೀದಿಗಳಲ್ಲೂ ಆತಂಕದ ಮೋಡಕಟ್ಟಿದೆ. ನಾವು ಸೇಫ್ ಎಂದು ಬೀಗುತ್ತಿದ್ದ ರಾಜ್ಯವಿಡೀ ಅಪಾಯಕ್ಕೆ ಸಿಲುಕಿದೆ.
ಬೆಂಗಳೂರಿನಿಂದ ಮಹಾವಲಸೆ ಪ್ರಾರಂಭವಾಗಿ ಈಗ ಹಳ್ಳಿಗಳಲ್ಲೂ ಸಹ ಆತಂಕದ ಕರಿಛಾಯೆ ಆವರಿಸಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಕರೊನಾ ಸಾವಿನ ನಾಗಾಲೋಟ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.
ಇದು ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಜನ ಮತ್ತು ಸರ್ಕಾರ ಕೊಂಚ ಯಾಮಾರಿದರೂ ದೊಡ್ಡ ಬೆಲೆ ತೆರಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾ ಗಿದೆ ಎಂದು ನಿರಾಳವಾಗಿದ್ದ ಕರ್ನಾಟಕ ಈಗ ಅಪಾಯದಂಚಿಗೆ ಬಂದು ನಿಂತಿದೆ.
ಕೇವಲ 5 ದಿನಗಳಲ್ಲಿ (ಜು.1ರಿಂದ 5ರವರೆಗೆ) 119 ಜನರು ಸೋಂಕಿಗೆ ಬಲಿಯಾಗಿದ್ದರೆ, ಹೊಸದಾಗಿ 6957 ಮಂದಿಗೆ ಸೋಂಕು ತಗುಲಿದೆ. ಸದ್ಯ ರಾಜ್ಯಾದ್ಯಂತ 13251 ಸಕ್ರಿಯ ಪ್ರಕರಣಗಳಿದ್ದು, ಕೆಲವು ಜಿಲ್ಲೆಗಳಲ್ಲಿ ಜನರೇ ಸ್ವಯಂ ದಿಗ್ಬಂಧನ ಹೇರಿಕೊಂಡಿರುವಂತೆ ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವುದು ನಿಶ್ಚಿತವಾಗಿದೆ. ಸರ್ಕಾರ ಏನೂ ಆಗಿಲ್ಲ ಎಂದು ಅಂಕಿ ಸಂಖ್ಯೆಯ ಸಮಾಧಾನದ ಮಾತು ಹೇಳುತ್ತಿದ್ದರೂ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಕಂಡುಬರುತ್ತಿದೆ. ಈಗಾಗಲೇ ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕರೊನಾ ಕಾಣಿಸಿಕೊಂಡಿದ್ದು ಸ್ಥಳೀಯ ಅಧಿಕಾರಿಗಳಲ್ಲಿ ಕಳವಳ ಹೆಚ್ಚಾಗಿದೆ. ಸೋಂಕು ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಅಗತ್ಯ ಸೌಲಭ್ಯಗಳು ಹಳ್ಳಿಗಳಲ್ಲಿಲ್ಲ. ತಾಲೂಕು ಕೇಂದ್ರಗಳಲ್ಲಿ ನಿಯಮಿತ ವ್ಯವಸ್ಥೆ ಇದೆ. ಆರೋಗ್ಯ ಸಿಬ್ಬಂದಿಯನ್ನು ಎಲ್ಲಿಂದ ಹೊಂದಿಸುವುದು ಎಂಬ ಚಿಂತೆ ಶುರುವಾಗಿದೆ.
ಇನ್ನೊಂದೆಡೆ ಜಾತಿ, ಸಮುದಾಯ ಸಂಘರ್ಷವೂ ಅಲ್ಲಲ್ಲಿ ಶುರುವಾಗಿದೆ. ಪ್ರಭಾವಿ ಸಮುದಾಯಗಳಿರುವ ಕಡೆ ಅನ್ಯ ಜಾತಿಯವರು ಊರಿಗೆ ಬರದಂತೆ ತಡೆಯುವ, ಬಂದವರನ್ನು ವಾಪಾಸು ಕಳಿಸುವ ಪ್ರಯತ್ನಗಳು ನಡೆದಿವೆ. ಹೀಗಾಗಿ ಕಳೆದ ಎರಡು ದಿನಗಳಲ್ಲಿ ಘರ್ಷಣೆ ನಡೆದ ಉದಾಹರಣೆಗಳಿವೆ. ಕೈಕೈಮಿಲಾವಣೆ ನಡೆದಿದ್ದು, ಈ ಬೆಳವಣಿಗೆ ಮತ್ತಷ್ಟು ಕಡೆ ಹರಡುವ ಸಾಧ್ಯತೆಯೂ ಇದೆ. ಉದ್ಯೋಗ ಅವಲಂಬಿಸಿ ನಗರ ಪ್ರದೇಶಗಳಲ್ಲಿ ನೆಲೆಸಿದ್ದವರು ಹಳ್ಳಿಗಳಿಗೆ ಸಾಲು ಸಾಲಾಗಿ ಮರಳುತ್ತಿರುವ ಕಾರಣ, ತುಂಬು ಕುಟುಂಬಗಳಲ್ಲಿ ಕಲಹಕ್ಕೂ ಕಾರಣವಾಗಿದೆ. ಜಮೀನು, ಆಸ್ತಿ ಬಿಟ್ಟು ಹೋಗಿದ್ದವರು ಮತ್ತೆ ಜಮೀನಿನತ್ತ ಚಿತ್ತ ಹರಿಸಿರುವುದು ಹೊಸ ಸಮಸ್ಯೆಯೂ ತಂದೊಡ್ಡಿದೆ.
ಕಳವಳಕಾರಿ ಸ್ಥಿತಿ:ರಾಜ್ಯದಲ್ಲಿ ಸೋಂಕು ಹರಡು ವಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಈಗಾಗಲೇ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸೋಂಕಿತರು ಸಾವನ್ನಪ್ಪಿರುವ ಘಟನೆಗಳು ಜರುಗಿವೆ. ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಗರದ 73 ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 (2598) ಬೆಡ್​ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿದೆ. ಪ್ರತಿನಿತ್ಯ 1000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಈ ಹಾಸಿಗೆಗಳು 2 ದಿನದಲ್ಲೇ ಭರ್ತಿಯಾಗುತ್ತವೆ. ರೋಗಿಗಳು ಚಿಕಿತ್ಸೆಗೆ ಪರದಾಡುವ ಸ್ಥಿತಿ ಸನ್ನಿಹಿತವಾಗಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್, ಆಕ್ಸಿಜನ್ ವಾರ್ಡ್ ಹಾಗೂ ತುರ್ತು ನಿಗಾ ಘಟಕಗಳು ಭರ್ತಿಯಾಗಿವೆ. ಬಹುತೇಕ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಈಗಾಗಲೇ ತುಂಬಿ ಹೋಗಿವೆ.
ಹಸಿರು ಜಿಲ್ಲೆಗಳು ಬಲಿ:ಸರ್ಕಾರದ ಕೆಲ ಎಡವಟ್ಟು ತೀರ್ವನಗಳಿಗೆ ಹಸಿರು ವಲಯ ಬಲಿಯಾಗಿವೆ. ರಾಜ್ಯದಲ್ಲಿ ಚಾಮರಾಜನಗರ, ಹಾಸನ, ದಾವಣಗೆರೆ, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳು ಕರೊನಾ ಮುಕ್ತವಾಗಿದ್ದವು. ಅದಕ್ಕೆ ಅಲ್ಲಿನ ಜಿಲ್ಲಾಡಳಿತ ತೆಗೆದುಕೊಂಡಿದ್ದ ಗಟ್ಟಿಯಾದ ತೀರ್ಮಾನ ಕಾರಣವಾಗಿತ್ತು. ಜಿಲ್ಲೆಗಳ ಗಡಿಯನ್ನು ನಾಕಾಬಂದಿ ಮಾಡಲಾಗಿತ್ತು. ಆದರೆ, ಈ ಎಲ್ಲಾ ಕಟ್ಟುಪಾಡುಗಳನ್ನು ಸರ್ಕಾರವೇ ತೆಗೆದು, ಜನ ಸಂಚಾರಕ್ಕೆ ಮುಕ್ತ ಮಾಡಿದ ಮೇಲೆ ಕರೊನಾ ರಣಕೇಕೆ ಹಾಕಲು ಕಾರಣವಾಯಿತು.
ಅಸಹಾಯಕವಾದ ಜಿಲ್ಲಾಡಳಿತಗಳು:ಸರ್ಕಾರ ಪದೇಪದೇ ನಿಯಮಗಳನ್ನು ಬದಲಿಸಿದ್ದರಿಂದಾಗಿ ಜಿಲ್ಲಾಡಳಿತಗಳು ಗೊಂದಲಕ್ಕೀಡಾಗಿ ಕೈಚೆಲ್ಲಿದವು. ಯುದ್ದೋಪಾದಿಯಲ್ಲಿ ಕೆಲಸ ಮಾಡಿದ್ದ ಸಚಿವರು, ಶಾಸಕರು, ಅಧಿಕಾರಿಗಳ ತಂಡದಲ್ಲಿ ಮೊದಲಿದ್ದ ಉತ್ಸಾಹ ಕಾಣದಾಗಿದೆ. ಏತನ್ಮಧ್ಯೆ ಹಿರಿಯ ಅಧಿಕಾರಿಗಳು ಜಿಲ್ಲಾ ಗಡಿ ಚೆಕ್​ಪೋಸ್ಟ್ ಮುಂದುವರಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಒಂದೊಮ್ಮೆ ಚೆಕ್​ಪೋಸ್ಟ್ ಇದ್ದರೆ ಹೊರಜಿಲ್ಲೆಗಳಿಂದ ಬರುವವರ ಮೇಲೆ ನಿಗಾ ಇಡಲು ಸಾಧ್ಯ. ಜಿಲ್ಲಾ ಗಡಿಗಳಿಂದ ಗ್ರಾಮದ ಜಾಗೃತ ದಳಗಳಿಗೆ ಮಾಹಿತಿ ರವಾನಿಸಿದರೆ ಎಲ್ಲರೂ ಎಚ್ಚರಿಕೆಯಿಂದಿರಲು ಸಾಧ್ಯವಿದೆ ಎಂಬ ಅಭಿಪ್ರಾಯವೂ ಸರ್ಕಾರಕ್ಕೆ ಬಂದಿದೆ.
ಲಕ್ಷಣರಹಿತ ಸೋಂಕಿತರ ನಿರ್ಲಕ್ಷ್ಯ:ಲಕ್ಷಣರಹಿತ ಸೋಂಕಿತರಿಂದ ಇತರರಿಗೆ ಹರಡುವಿಕೆ ಪ್ರಮಾಣ ಕಡಿಮೆ ಎಂದಷ್ಟೇ ಅಂದಾಜಿಸಲಾಗಿತ್ತು. ಆದರೆ, ಇವರಿಂದ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಹಾಗೂ ವೃದ್ಧರಿಗೆ ಹರಡುವ ಸಾಧ್ಯತೆಗಳ ಬಗ್ಗೆ ಹಾಗೂ ಹರಡಿದರೆ ಆಗುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಲಿಲ್ಲ. ಸದ್ಯದ ಪ್ರಕರಣಗಳಲ್ಲಿ ಸೋಂಕು ಹರಡುವಿಕೆ ಹಿನ್ನೆಲೆ ಕುರಿತು ಮಾಹಿತಿಯೇ ದೊರೆಯುತ್ತಿಲ್ಲ.
ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಅವರಿಂದ ಶಹಭಾಸ್​ಗಿರಿ ಪಡೆದ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳು. ಪ್ರತಿದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕರೊನಾ ನಿಯಂತ್ರಣದ ವೈಫಲ್ಯಗಳ ಸರಣಿ ವರದಿಗಳನ್ನೂ ಅವರಿಗೆ ತೋರಿಸಿದ್ದರೆ ಇನ್ನಷ್ಟು ಶಹಭಾಸ್ ಅನ್ನುತ್ತಿದ್ದರೋ ಏನೋ?
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ರಾಜ್ಯದಲ್ಲಿ ಒಟ್ಟು 80 ಕೋವಿಡ್ ಪರೀಕ್ಷಾ ಲ್ಯಾಬ್​ಗಳಿದ್ದು ದಿನಕ್ಕೆ ಸುಮಾರು 20,000 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಇದನ್ನು ಪರಿಪೂರ್ಣವಾಗಿ ಬಳಸಿಕೊಂಡು ಹೆಚ್ಚು ಪರೀಕ್ಷೆ ನಡೆಸಲಾಗುವುದು.
| ಡಾ. ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
