ಬೆಂಗಳೂರು:ಇಡೀ ವಿಶ್ವವನ್ನೇ ಕರೊನಾ ಮಹಾಮಾರಿ ಹಿಂಡುತ್ತಿದೆ. ಕರೊನಾ ಕರಾಳತೆಗೆ ಮನುಕುಲವೇ ಕುಗ್ಗಿ ಹೋಗಿದೆ. ವೈರಸ್ ವಿರುದ್ಧ ಯುದ್ಧದ ರೀತಿಯಲ್ಲಿ ಹೋರಾಡಲಾಗುತ್ತಿದೆ. ಜನರ ಆರೋಗ್ಯ ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿರುವ ವೈದ್ಯರಿಗಿದೋ ಸಲಾಂ…!
ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮಕುಟುಂಬದವರ ಹಿತವನ್ನು ನಿರ್ಲಕ್ಷಿ್ಯಸಿ ಕರೊನಾ ಪೀಡಿತರನ್ನು, ಶಂಕಿತರನ್ನು ಕಾಪಾಡಲು ಸಲ್ಲಿಸುತ್ತಿರುವ ವೈದ್ಯರ ಸೇವೆ ಪ್ರಶಂಸೆಗೆ ಪಾತ್ರವಾಗಿದೆ. ದಿನದ 24 ಗಂಟೆಯೂ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ಕೇಂದ್ರ, ಇಎಸ್​ಐ ಆಸ್ಪತ್ರೆ, ವಿಕ್ಟೋರಿಯಾ, ಕೆಸಿ ಜನರಲ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿ ತಂಡಗಳು ಸಮರೋಪಾದಿಯಲ್ಲಿ ಸೋಂಕು ತಡೆಗೆ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಆಸ್ಪತ್ರೆ ವೈದ್ಯರೆಂದರೆ ಆಸ್ಪತ್ರೆಯಲ್ಲಿ ಇರುವುದೇ ಇಲ್ಲ, ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ, ರೋಗಿಗಳ ಬಗ್ಗೆ ಕಾಳಜಿಯೇ ತೋರುವುದಿಲ್ಲ ಎಂಬಿತ್ಯಾದಿ ಅರೋಪಗಳು ಸಾಮಾನ್ಯವಾಗಿದ್ದವು. ಆದರೆ, ಕೋವಿಡ್ – 19 ನಿಂದಾಗಿ ಜೀವದ ಹಂಗು ತೊರೆದು ಸೇವೆ ನೀಡುತ್ತಿದ್ದಾರೆ. ಮುಂಜಾನೆಯಿಂದ ಸಂಜೆವರೆಗೂ ಪಾಳಿ ಅನುಸಾರ ಕೆಲಸ ಮಾಡುತ್ತಿದ್ದವರು ರಾಜ್ಯದಲ್ಲಿ ಕೋವಿಡ್ ಆವರಿಸಿದಾಗಿನಿಂದಲೂ ಸಮಯದ ಲೆಕ್ಕವಿಲ್ಲದೆ ಹಗಲಿರುಳು ರೋಗಿಗಳ ಸೇವೆ ಮಾಡುತ್ತಿದ್ದಾರೆ.
ಬಹಳಷ್ಟು ವೈದ್ಯರು ವಾರಗಟ್ಟಲೆ ಮನೆಗೆ ಹೋಗದೆ ಸೇವೆ ನೀಡಿರುವುದೂ ಉಂಟು. ಹೀಗೆ ಶ್ರಮದ ಪರಿವೆಯೇ ಇಲ್ಲ ರೋಗಿಗಳ ಆರೈಕೆಯಲ್ಲಿ ತೊಡಗಿರುವ ವೈದ್ಯರು ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ವೈದ್ಯಕೀಯ ಕಾಲೇಜು ಅಸ್ಪತ್ರೆಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಪಾಲಿಕೆ ಆರೋಗ್ಯ ಕೇಂದ್ರಗಳು ಒಳಗೊಂಡಂತೆ ಎಲ್ಲೆಡೆ ವೈದ್ಯರು ದಣಿವರಿಯದೆ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಚಪ್ಪಾಳೆ ತಟ್ಟಿ ಅಭಿನಂದನೆ
ಕರೊನಾ ಸೋಂಕು ಆವರಿಸಿ ದಂದಿನಿಂದ ತಮ್ಮೆಲ್ಲ ರಜೆಯನ್ನೂ ರದ್ದುಪಡಿಸಿ, ಜೀವವನ್ನೂ ಲೆಕ್ಕಿಸದೆ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಈ ಹಿಂದೆ ಜನತಾ ಕರ್ಫ್ಯ ಘೋಷಣೆ ವೇಳೆ ಪ್ರಧಾನಿ ಮೋದಿ ಅವರೇ ಎಲ್ಲರೂ ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಲು ಕರೆ ನೀಡಿದ್ದರು. ಅದರಂತೆ ಜನ ಚಪ್ಪಾಳೆ ತಟ್ಟಿ ಶ್ಲಾಘನೆ ವ್ಯಕ್ತಪಡಿಸಿದ್ದರು.
26 ಯುವ ವೈದ್ಯ ಅಧಿಕಾರಿಗಳ ನೇಮಕ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕರೊನಾ ಚಿಕಿತ್ಸೆ ನೀಡಲು ಅನುಕೂಲವಾಗು ವಂತೆ, ವೈದ್ಯಕೀಯ ಕೋರ್ಸ್ ಮುಗಿಸಿದ ಯುವ ವೈದ್ಯಾಧಿಕಾರಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 24 ವೈದ್ಯಾಧಿಕಾರಿ ಹುದ್ದೆಗಳು ಖಾಲಿಯಿದ್ದವು. ಈಗ ಕರೊನಾ ಕಾರಣದಿಂದ 2 ಹುದ್ದೆಗಳನ್ನು ಹೆಚ್ಚುವರಿಯಾಗಿ, ಅಂದರೆ 26 ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲರನ್ನೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಂದರ್ಶನದ ಮೂಲಕ 6 ತಿಂಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಕರೊನಾಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ಸಿಬ್ಬಂದಿ ಬಳಕೆ ಹಾಗೂ ಸುರಕ್ಷತೆ ಬಗ್ಗೆ ಈಗಾಗಲೇ ವಿಶೇಷ ಆಯುಕ್ತ ಡಾ. ರವಿಕುಮಾರ್ ಸುರಪುರ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ.
ಉಸಿರುಕಟ್ಟಿದರೂ ಜಗ್ಗದವರು
ಕೋವಿಡ್ ರೋಗಿಗಳ ಸೇವೆ ಮಾಡುತ್ತಿರುವ ವೈದ್ಯರು ಉಸಿರುಕಟ್ಟುವ ಪಿಪಿಇ ಕಿಟ್ ಒಳಗೆ ದಿನವಿಡೀ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಗೆ ಎಷ್ಟೇ ಒತ್ತಡಗಳಿದ್ದರೂ, ಕರೊನಾದಿಂದ ಭೀತಿಗೊಳಗಾದ ರೋಗಿಗಳಿಗೆ ಸೇವೆ ನೀಡುವುದರ ಜತೆಗೆ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ. ಒಂದುವಾರ ರೋಗಿಗಳ ಸೇವೆ ಮಾಡಿದರೆ ಮತ್ತೊಂದು ವಾರ ಕ್ವಾರಂಟೈನ್​ಗೆ ಒಳಗಾಗಬೇಕು. ಹೀಗೆ ವಾರ ತಿಂಗಳುಗಟ್ಟಲೆ ಕುಟುಂಬದಿಂದ ದೂರ ಉಳಿದು ಜನರ ಸೇವೆಗೆ ನಿಂತಿದ್ದಾರೆ.
ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಹಾಸಿಗೆ ಮೀಸಲು
ಮತ್ತೊಂದೆಡೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕೋವಿಡ್ ಆಸ್ಪತ್ರೆಗಳಲ್ಲಿ ಮೂರನೇ ಒಂದು ಭಾಗದಷ್ಟು ಹಾಸಿಗೆಗಳನ್ನು ಸೋಂಕಿಗೆ ಒಳಗಾಗುವ ವೈದ್ಯರು ಹಾಗೂ ಆಸ್ಪತ್ರೆಗಳ ಇತರೆ ಸಿಬ್ಬಂದಿಗೆ ಮೀಸಲಿಡುವಂತೆ ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ಅದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗಾಗಿ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮೂರನೇ ಒಂದು ಭಾಗದಷ್ಟು ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯವುಳ್ಳ ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
