| ಜಗನ್ ರಮೇಶ್ ಬೆಂಗಳೂರು
ಕರೊನಾ ಆತಂಕದಲ್ಲೇ ದಿನದೂಡುತ್ತಿರುವ ಜನರಲ್ಲಿ ಈಗ ಮಾನಸಿಕ ಸಮಸ್ಯೆ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂಬ ವಿಚಾರ ಬಯಲಾಗಿದೆ. ರೋಗ ಹರಡುವ ಆತಂಕ, ಹತ್ತಿರದವರ ಸಾವು, ನಾಲ್ಕು ಗೋಡೆಗಳ ನಡುವಿನ ಜೀವನ, ಒಂಟಿತನ, ಅಸಹಾಯಕತೆ, ಆರ್ಥಿಕ ಸಂಕಷ್ಟ ಮಾನಸಿಕ ಆಘಾತಕ್ಕೆ ಕಾರಣವಾಗುತ್ತಿದೆ. ಲಾಕ್​ಡೌನ್ ಸಂದರ್ಭದಲ್ಲಿ ವೃದ್ಧರು, ಮಕ್ಕಳು ಹಾಗೂ ಯುವಕರು ಮನೋಘಾತಕ್ಕೆ ಒಳಗಾಗುತ್ತಿದ್ದಾರೆ.
ಕರೊನಾ ಮೊದಲ ಅಲೆಯಲ್ಲಿ ಸಾಕಷ್ಟು ಜನ ಕೆಲಸ ಕಳೆದುಕೊಂಡರು, ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಖಿನ್ನತೆಗೆ ಒಳಗಾದರು. 2ನೇ ಅಲೆ ಸಂದರ್ಭದಲ್ಲಿ ಹೊಸ ರೀತಿಯ ಮನೋವೇದನೆಗಳು ಸೃಷ್ಟಿಯಾಗಿವೆ. ಕರೊನಾ ಸೋಂಕು ಹರಡುವ ಭೀತಿ, ಬೆಡ್ ಸಿಗದಿರುವುದು, ಆಕ್ಸಿಜನ್, ಇಂಜೆಕ್ಷನ್ ಸಿಗದಿರುವುದು, ಹತ್ತಿರದವರ ಸಾವು, ಶವ ನೋಡಲೂ ಆಗದಿರುವುದು ಇನ್ನಿತರ ವಿಚಾರಗಳು ಮನಸ್ಸಿಗೆ ಆಘಾತ ಮೂಡಿಸುತ್ತಿವೆ. ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ ಸಮೀಕ್ಷೆ ಪ್ರಕಾರ, ಕರೊನಾ ಲಾಕ್​ಡೌನ್​ನಿಂದಾಗಿ ಶೇ.54ರಷ್ಟು ಜನರಿಗೆ ಏಕಾಂತತೆ (ಪ್ರೖೆವೆಸಿ) ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಶೇ.14.2ರಷ್ಟು ಮಂದಿಗೆ ಭವಿಷ್ಯದ ಬಗೆಗಿನ ಭಯ ಮತ್ತು ಆತಂಕ ಕಾಡಿದೆ. ಶೇ.36ರಷ್ಟು ಜನರಿಗೆ ನಿದ್ರೆ ಸಮಸ್ಯೆ ಕಾಡಿದೆ. ಶೇ.20.4ರಷ್ಟು ಜನರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆ ಎಂಬುದು ಬಹಿರಂಗವಾಗಿದೆ. ನಿಮ್ಹಾನ್ಸ್ ಸೇರಿ ಕೌನ್ಸಿಲಿಂಗ್ ಕೇಂದ್ರಗಳಿಗೆ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿವೆ.
ಕಾಡುವ ಒಂಟಿತನ:81 ವರ್ಷದ ವೃದ್ಧರೊಬ್ಬರು ಲಸಿಕೆ ಪಡೆದರು. ಆದರೆ, ಬೇರೆ ಔಷಧ ಪಡೆಯುತ್ತಿದ್ದ ಕಾರಣಕ್ಕೆ ಪತ್ನಿ ಲಸಿಕೆ ಪಡೆಯಲಿಲ್ಲ. ಬೆಂಗಳೂರಿನಿಂದ ದೆಹಲಿಗೆ ಹೋದ ಮಗನಿಗೆ ಕರೊನಾ ಬಂದು ಆಸ್ಪತ್ರೆಗೆ ಸೇರಿದ. ಇತ್ತ ಪತ್ನಿಗೂ ಕರೊನಾ ದೃಢಪಟ್ಟ ಕೆಲವೇ ದಿನಕ್ಕೆ ಮೃತಪಟ್ಟಳು. ಈಕೆ ನಿಧನಳಾದ ಎರಡೇ ದಿನಕ್ಕೆ ಮಗ ಕೂಡ ಕೊನೆಯುಸಿರೆಳೆದ. ಈಗ ಆ ವೃದ್ಧರಿಗೆ ಒಂಟಿತನ ಕಾಡುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಅಭಯ್ ಆಸ್ಪತ್ರೆ ವೈದ್ಯರು.
ಏಕಾಂತಕ್ಕೆ ಸಮಯವಿಲ್ಲ:ಕಳೆದ ವರ್ಷವೇ ನಿಗದಿಯಾಗಿದ್ದ ಮದುವೆ ಕೋವಿಡ್ ಕಾರಣದಿಂದ ಒಮ್ಮೆ ಮುಂದೂಡಲ್ಪಟ್ಟಿತ್ತು. ತಕ್ಷಣಕ್ಕೆ ಕರೊನಾ ಹಾವಳಿ ಕಡಿಮೆಯಾಗುವುದಿಲ್ಲ ಎಂದು ಮನೆಯವರು ಹೆಚ್ಚು ಜನ ಸೇರಿಸದೇ ಸರಳವಾಗಿ ಮದುವೆ ಮುಗಿಸಿದ್ದರು. ಗಂಡನ ಮನೆಗೆ ಬಂದವಳಿಗೆ ಯಾವುದೂ ಸರಿ ಕಾಣುತ್ತಿಲ್ಲ. ಸದಾ ಕೆಲಸದಲ್ಲಿ ಮಗ್ನನಾಗಿರುವ ಪತಿ. ಅತ್ತೆ, ಮಾವ, ಮೈದುನ ಅದೇ ಮನೆಯಲ್ಲಿದ್ದಾರೆ. ಪತಿಯೊಂದಿಗೆ ಏಕಾಂತದಿಂದಿರಲು ಸಮಯ ಸಿಗುತ್ತಿಲ್ಲ. ಮನೆ ಕೆಲಸ, ಅತ್ತೆ ಮಾವನ ಆರೈಕೆ ಮಾಡುವುದಷ್ಟೇ ಜೀವನ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಗಂಡನ ಜತೆ ಪ್ರತಿನಿತ್ಯ ಪತ್ನಿಗೆ ಮುನಿಸು.
ಒಂದು ವರ್ಷಕ್ಕೇ ವಿಚ್ಚೇದನ!:ಅವರಿಬ್ಬರೂ ಸಾಫ್ಟ್​ವೇರ್ ಉದ್ಯೋಗಿಗಳು. ಮದುವೆಯಾಗಿ ವರ್ಷವೂ ಕಳೆದಿಲ್ಲ. ಇಬ್ಬರಿಗೂ ಮನೆಯಿಂದಲೇ ಕೆಲಸ. ನಾಲ್ಕು ಗೋಡೆಗಳ ಮಧ್ಯೆ ಲ್ಯಾಪ್​ಟಾಪ್ ಹಿಡಿದು ಕೂತರೆ ಮುಗಿಯಿತು. ಮಾತಿಲ್ಲ ಕತೆಯಿಲ್ಲ. ಕೆಲಸದ ಒತ್ತಡ ಒಬ್ಬರ ಮೇಲೊಬ್ಬರು ತೋರಿಸಿಕೊಳ್ಳುತ್ತಾ ಸಣ್ಣಪುಟ್ಟ ಜಗಳದಿಂದ ಮನಸ್ಸಿಗೆ ನೆಮ್ಮದಿಯೇ ಇಲ್ಲದೆ ವಿಚ್ಛೇದನದವರೆಗೂ ತಲುಪಿದೆ. ಇದು ಜನರ ಮನಸ್ಸಿನ ಮೇಲೆ ಕರೊನಾ ಬೀರುತ್ತಿರುವ ಪ್ರಭಾವಕ್ಕೊಂದು ಚಿಕ್ಕ ಉದಾಹರಣೆ ಅಷ್ಟೇ.
ಕರೊನಾ ಒಂದನೇ ಅಲೆಯಲ್ಲಿ ಆರ್ಥಿಕ ಸಂಕಷ್ಟದ ಸಮಸ್ಯೆ ಹೆಚ್ಚಿತ್ತು. ಈಗ ಕನಿಷ್ಠ ಸೌಲಭ್ಯದಲ್ಲೂ ಬದುಕು ವುದನ್ನು ಜನ ಕಲಿತಿದ್ದಾರೆ. ಆದರೆ, ಕುಟುಂಬಸ್ಥರು, ಸಂಬಂಧಿಕರನ್ನು ಕಳೆದುಕೊಂಡ ನೋವು, ಬೆಡ್, ಆಕ್ಸಿಜನ್ ಸಿಗದೆ ಸಾಯುವ ಆತಂಕ ಹೆಚ್ಚು ಕಾಡಿದೆ. ಈ ಬಗ್ಗೆಯೇ ಹೆಚ್ಚು ಕರೆಗಳು ಬರುತ್ತಿವೆ.
|ಡಾ.ಜಗದೀಶ್ಮನೋವೈದ್ಯರು, ಅಭಯ್ ಆಸ್ಪತ್ರೆ
ಕೋವಿಡ್ ಕಾರಣದಿಂದ ಹೊಸದಾಗಿ ಮದುವೆಯಾದವರಿಗೆ ಬೇಕಾದ ಪ್ರೖೆವೆಸಿ ಸಿಗುತ್ತಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಮೂಡುತ್ತಿಲ್ಲ. ಕಳೆದೊಂದು ವರ್ಷದ ಅವಧಿಯಲ್ಲಿ ಮದುವೆಯಾದ ಎಷ್ಟೋ ಜನರ ದಾಂಪತ್ಯದಲ್ಲಿ ಆಗಲೇ ಸಮಸ್ಯೆ ಉಂಟಾಗಿದೆ. ಮದುವೆಯಾಗಿ ಕನಿಷ್ಠ ಒಂದು ವರ್ಷದವರೆಗೆ ವಿಚ್ಛೇದನಕ್ಕೆ ಅವಕಾಶವಿಲ್ಲವಾದರೂ, ಆ ಒಂದು ವರ್ಷ ಕಳೆಯುವ ತಾಳ್ಮೆಯೂ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಕಾನೂನು ಸಲಹೆಗಾಗಿ ಕರೆ ಮಾಡುತ್ತಿದ್ದಾರೆ, ಕಚೇರಿಗೆ ಬರುತ್ತಿದ್ದಾರೆ. ಅವರೆಲ್ಲರಿಗೂ ತಿಳಿವಳಿಕೆ ಹೇಳಿ ಕಳುಹಿಸುವಂತಾಗಿದೆ.
|ರಾಜರಾಜೇಶ್ವರಿಹೈಕೋರ್ಟ್ ವಕೀಲರು
ಇಂದಿನ ಯುವಕ-ಯುವತಿಯರಿಗೆ ಪ್ರಪಂಚದ ಜ್ಞಾನ ಚೆನ್ನಾಗಿದೆಯಾದರೂ, ಸಂಸಾರ ನಿಭಾಯಿಸುವ ಜ್ಞಾನ ಕಡಿಮೆ ಎಂದೇ ಹೇಳಬಹುದು. ಸದ್ಯದ ಸನ್ನಿವೇಶದಲ್ಲಿ ಪತಿಯ ಅಸಹಾಯಕತೆಯನ್ನು ಪತ್ನಿ, ಪತ್ನಿಯ ಪರಿಸ್ಥಿತಿಯನ್ನು ಪತಿ ಅರ್ಥಮಾಡಿಕೊಳ್ಳಬೇಕು. ಈ ಸಮಯದಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸಿದರೆ, ಸಂಬಂಧಗಳನ್ನು ಮತ್ತೆ ಸರಿಪಡಿಸಲಾಗದಂಥ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
|ರೂಪಾ ಸತೀಶ್ಆಪ್ತ ಸಮಾಲೋಚಕಿ
ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ಅಂಗಡಿ ಮುಚ್ಚಿ ಎಂದ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಅಪ್ಪ-ಮಕ್ಕಳ ಬಂಧನ








ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
