ಬೆಂಗಳೂರು:ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ನಗರದಲ್ಲಿ ಬೀದಿಬದಿ ವ್ಯಾಪಾರ ನಿಷೇಧಿಸಿರುವ ಪರಿಣಾಮ 10 ಸಾವಿರಕ್ಕೂ ಹೆಚ್ಚು ಮಂದಿ ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಅಗ್ಗದ ದರದಲ್ಲಿ ದೊರೆಯುವ ಬೀದಿಬದಿ ತಳ್ಳುಗಾಡಿಗಳ ಊಟ, ತಿಂಡಿಯನ್ನೇ ಆಶ್ರಯಿಸಿದ್ದ ನೂರಾರು ಕಾರ್ವಿುಕರ ಬದುಕೂ ದುಸ್ತರವಾಗಿದೆ.
ಕರೊನಾ, ಕಾಲರಾದಂತಹ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ 8 ವಲಯಗಳಲ್ಲಿನ ಬೀದಿಬದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡೇ ಬದುಕು ಸಾಗಿಸುತ್ತಿದ್ದ ಸಾವಿರಾರು ಮಂದಿಯ ಕುಟುಂಬವೀಗ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೆಲವರು ಸಾಲ ಮಾಡಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಏನೇನು ಬಂದ್?:ಅಶುದ್ಧ ನೀರು, ಶುಚಿತ್ವ ಇಲ್ಲದ ಆಹಾರ ಸೇವನೆಯಿಂದ ಕಾಲರಾ ಬರುತ್ತದೆ. ಈ ನಿಟ್ಟಿನಲ್ಲಿ ಬೀದಿ, ರಸ್ತೆ ಇಕ್ಕೆಲ, ಪಾದಚಾರಿ ಮಾರ್ಗ, ಮಾರುಕಟ್ಟೆ, ಬಸ್​ನಿಲ್ದಾಣಗಳ ಬಳಿ ವ್ಯಾಪಾರ ಮಾಡುತ್ತಿದ್ದ ತಿಂಡಿ-ತಿನಿಸು, ಟೀ ಅಂಗಡಿ, ಗೋಬಿ, ಪಾನಿಪೂರಿ, ಚಾಟ್ಸ್, ಬಜ್ಜಿ-ಬೋಂಡಾ ಅಂಗಡಿ, ಫ್ರೂಟ್ ಸಲಾಡ್ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸಿದ್ದಾರೆ.
ಕಾರ್ವಿುಕರಿಗೆ ಹಸಿವು:ರಸ್ತೆಬದಿ ಮಾರುತ್ತಿದ್ದ ಆಹಾರವನ್ನೇ ಬಹುತೇಕ ಆಟೋ-ಕ್ಯಾಬ್ ಚಾಲಕರು, ಕೂಲಿ ಕಾರ್ವಿುಕರು, ಸಣ್ಣ ಅಂಗಡಿ ಮುಂಗಟ್ಟು ವ್ಯಾಪಾರಿಗಳು, ಸೇಲ್ಸ್​ಮನ್​ಗಳು, ಗಾರ್ವೆಂಟ್ಸ್ ಮತ್ತು ಇತರ ಸಣ್ಣ ಕಾರ್ಖಾನೆಗಳ ಕಾರ್ವಿುಕರು, ಹಮಾಲರು ಆಶ್ರಯಿಸಿದ್ದರು. ಇಲ್ಲಿ ಕಡಿಮೆ ಹಣಕ್ಕೆ ಹೆಚ್ಚು ಆಹಾರ ಸಿಗುತ್ತಿತ್ತು. ಈಗ ಬೀದಿಬದಿ ಆಹಾರ ವ್ಯಾಪಾರಿಗಳಿಲ್ಲದ ಕಾರಣ, ಹೆಚ್ಚುಹಣ ಪಾವತಿಸಿ ಹೋಟೆಲ್​ಗಳಿಗೆ ಹೋಗಲು ಸಾಧ್ಯವಾಗದ ಬಡ ಕಾರ್ವಿುಕರು ಹಸಿವಿನಿಂದ ಬಳಲುತ್ತಿದ್ದಾರೆ.
ಬೀದಿಬದಿ ವ್ಯಾಪಾರ ನಡೆಸುತ್ತಿದ್ದರೂ ಉತ್ತಮ ಆದಾಯ ಗಳಿಸುತ್ತಿದ್ದ ಬಹುತೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಮಕ್ಕಳ ಪ್ರವೇಶದ ವೇಳೆ ಅರ್ಧ ಶುಲ್ಕ ಪಾವತಿಸಿ, ಪರೀಕ್ಷಾ ದಿನಗಳಲ್ಲಿ ಉಳಿದ ಶುಲ್ಕ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರು. ಈಗ ಶಾಲೆಗಳಿಂದ ಬಾಕಿ ಶುಲ್ಕ ಪಾವತಿಸುವಂತೆ ಫೋನ್ ಕರೆಗಳು ಬರುತ್ತಿವೆ. ವ್ಯಾಪಾರ ನಿಲ್ಲಿಸಿರುವ ಕಾರಣ ಅವರಿಗೆಲ್ಲ ದಿಕ್ಕುತೋಚದಂತಾಗಿದೆ.
ಬಡವರ ದುಡಿಮೆ ನಷ್ಟ:ನಗರ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿದ್ದಾರೆ. ಪ್ರತಿ ವ್ಯಾಪಾರಿಯೂ ಕನಿಷ್ಠ 500-2,000 ರೂ.ವರೆಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಇದರಿಂದ 2 ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ನಾಲ್ಕು ದಿನಗಳಿಂದ ಬೀದಿಬದಿ ವ್ಯಾಪಾರ ನಿಷೇಧಿಸಲಾಗಿದ್ದು, ಅಂದಾಜು 8 ಕೋಟಿ ರೂ. ನಷ್ಟವಾದಂತಾಗಿದೆ.
ಬಡವರ ಬಂಧು ಯೋಜನೆ ಸ್ಥಗಿತ:ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ ರೂ. ವರೆಗೆ ಸಾಲ ನೀಡಲು ‘ಬಡವರ ಬಂಧು’ ಯೋಜನೆ ಜಾರಿಗೊಳಿಸಿದ್ದರು. ಇದರಡಿ ಸುಮಾರು 53 ಸಾವಿರ ವ್ಯಾಪಾರಿಗಳು ಸಾಲ ಪಡೆದಿದ್ದರು. ಅದರ ಮರುಪಾವತಿಯೂ ಆಗುತ್ತಿದೆ. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಈ ಯೋಜನೆ ಸ್ಥಗಿತವಾಗಿದೆ. ಈಗಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಬಡವರ ಬಂಧು ಯೋಜನೆಯ ಆಸರೆಯೂ ಸಿಗುತ್ತಿಲ್ಲ.
ಒಂದು ವಾರದೊಳಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡದಿದ್ದರೆ ಬೀದಿಗಿಳಿದು ವ್ಯಾಪಾರ ಮಾಡುತ್ತೇವೆ. ಎಲ್ಲ ವ್ಯಾಪಾರಿಗಳು ಸ್ವಚ್ಛತೆಯಿಂದ ಆಹಾರ ತಯಾರಿಸಿ ಮಾರಾಟ ಮಾಡುವ ತರಬೇತಿ ಪಡೆದು, ಪ್ರಮಾಣಪತ್ರ ಹೊಂದಿದ್ದೇವೆ. ಸ್ವಚ್ಛತೆ ಕೊರತೆಯಿದ್ದರೆ ಅಂತಹ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಿ.
| ರಂಗಸ್ವಾಮಿ ಕರ್ನಾಟಕ ಬೀದಿಬದಿ
ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ
ಕೈತೊಳೆಯಲು ಕೈಜೋಡಿಸ್ತಾರಾ ತಾರೆಯರು?

https://www.vijayavani.net/the-agony-of-infection-in-government-offices/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
