ಮೈಸೂರು:ಮಾರಕ ಕರೊನಾ ಜೀವ ಕೈಲಿ ಹಿಡಿದು ಬದುಕುವಂತೆ ಮಾಡಿರುವುದಷ್ಟೇ ಅಲ್ಲ, ಜನರ ಜೀವನ ಪದ್ಧತಿಯನ್ನೂ ಅಮೂಲಾಗ್ರವಾಗಿ ಬದಲಿದೆ! ಸೋಕಿನ ಭೀತಿಯಲ್ಲಿ ಇಡೀ ದೇಶ ಲಾಕ್​ಡೌನ್ ಆಗಿದ್ದು, ಅಪ್​ಡೇಟ್ ಜನ ಔಟ್​ಡೇಟೆಡ್ ಅಂದಿಕೊಂಡಿದ್ದೆಲ್ಲ ಇಂದು ಅನಿವಾರ್ಯ ಎನ್ನುವಂತಾಗಿದೆ. ಕರೊನಾ ಮುಂದೆ ಹಣವೂ ಅಪ್ರಸ್ತುತ ಎನ್ನುವ ಮಟ್ಟಿಗೆ ಜಗತ್ತು ತಲುಪಿದ್ದು, ಹಳೇ ಮೈಸೂರು ಭಾಗದಲ್ಲಿ ‘ಸಾಟಿ ವಿನಿಮಯ ಪದ್ಧತಿ’ ಪುನಾರಂಭ ಆಗಿರುವುದು ಇದಕ್ಕೆ ಸಾಕ್ಷಿ.
ಅಕ್ಕಿ ಕೊಟ್ಟು ರಾಗಿ ಪಡೆಯುವುದು, ಹಾಲು ಕೊಟ್ಟು ಮೇವು ಪಡೆಯುವುದು, ತರಕಾರಿ ಕೊಟ್ಟು ಸೊಪ್ಪು ಪಡೆಯುವುದು, ತೆಂಗಿನ ಕಾಯಿ ಕೊಟ್ಟು ಸೌತೆಕಾಯಿ ಪಡೆಯುವುದು ಹೀಗೆ ತರಹೇವಾರಿ ವಸ್ತುಗಳ ವಿನಿಮಯ ಶುರುವಾಗಿದೆ.
ಇಂತಹದ್ದೊಂದು ಪ್ರಕ್ರಿಯೆ ಆರಂಭವಾಗಿದ್ದು ಎಚ್.ಡಿ. ಕೋಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ. ಗುಂಡ್ಲುಪೇಟೆ ತಾಲೂಕಿನ ಹಾಲಾಳು, ಮೈಸೂರು ತಾಲೂಕಿನ ಕೆಂಚಲಗೂಡು, ಮಂಡಕಳ್ಳಿ, ಕಲ್ಲೂರು ನಾಗನಹಳ್ಳಿ ಸೇರಿ ಹಲವು ಕಡೆ ಬುಧವಾರ ವಸ್ತು ವಿನಿಮಯ ನಡೆದಿದೆ. ಇದೊಂದು ಸಾಂಕೇತಿಕ ಪ್ರಯತ್ನವಾದರೂ ಗಮನಾರ್ಹ ಬೆಳವಣಿಗೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲೂ ನಾವು ಕೊಟ್ಟು ತೆಗೆದುಕೊಳ್ಳುವುದು ಮಾಡುತ್ತೇವೆ. ನಮ್ಮ ಮನೆಯಲ್ಲಿ ಒಳ್ಳೆಯ ಸಾಂಬಾರು ಮಾಡಿದರೂ ಪಕ್ಕದ ಮನೆಗೆ ಕೊಟ್ಟು ಬರುತ್ತೇವೆ. ಅವರ ಮನೆಯಲ್ಲೂ ಏನಾದರೂ ವಿಶೇಷ ಮಾಡಿದರೆ ನಮಗೆ ತಂದು ಕೊಡುತ್ತಿದ್ದರು. ಈಗ ರಾಗಿ- ಅಕ್ಕಿ, ಉಪ್ಪು- ಸಕ್ಕರೆ, ಎಣ್ಣೆ- ಬೇಳೆ ಅಂತ ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ. ನೆರೆ-ಹೊರೆಯವರಾಗಿರುವುದರಿಂದ ತೂಕ, ಲೆಕ್ಕವೆಲ್ಲ ಮುಖ್ಯವಲ್ಲ ಎನ್ನುತ್ತಾರೆ ಕೆಂಚಲಗೂಡು ನಿವಾಸಿ ಮಹದೇವಮ್ಮ.
ಅಂಗಡಿಯೂ ಇಲ್ಲ, ಹಣವೂ ಇಲ್ಲ: ಕರೊನಾ ಶುರುವಾದ ನಂತರ ಹಳ್ಳಿಗರ ಬದುಕು ದುಸ್ತರವಾಗಿದೆ. ತಾಲೂಕು ಅಥವಾ ಹೋಬಳಿ ಕೇಂದ್ರಗಳಿಂದ ದಿನಸಿ, ತರಕಾರಿ, ಸೊಪ್ಪು ತಂದು ಮಾರುತ್ತಿದ್ದ ಅಂಗಡಿಯವರು ಈಗ ‘ಹೋಮ್ ಕ್ವಾರಂಟೈನ್’ ಆಗಿದ್ದಾರೆ. ಅಂಗಡಿ ತೆರೆಯುವ ಆಸೆಯಿದ್ದರೂ ಪಟ್ಟಣಗಳಿಗೆ ಹೋಗಿ ವಸ್ತುಗಳನ್ನು ತರಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಲಾಠಿ ಏಟಿನ ಭಯಕ್ಕೆ ವ್ಯಾಪಾರ ಸ್ಥಗಿತಗೊಳಿಸಿದ್ದಾರೆ.
ಇನ್ನು ದಿನಗೂಲಿ, ರೈತ ಕಾರ್ವಿುಕರಾಗಿ ದುಡಿಯುತ್ತಿದ್ದ ಬಹುತೇಕರು, ಮನೆ ಸೇರಿಕೊಂಡು ಎರಡು ವಾರ ಮೇಲಾಗಿದೆ. ಕೈಯಲ್ಲಿದ್ದ ಬಿಡಿಗಾಸು ಈಗಾಗಲೇ ಖರ್ಚಾಗಿದೆ. ಹಣವೂ ಇಲ್ಲ, ಅಂಗಡಿಯೂ ಇಲ್ಲ ಎಂಬುದು ಬಹುತೇಕ ಗ್ರಾಮಗಳ ಪರಿಸ್ಥಿತಿಯಾಗಿದೆ. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಲಾಕ್​ಡೌನ್ ಅವಧಿ ಮುಗಿಸಬೇಕಾದ ಸಂಕಷ್ಟ ಎದುರಾಗಿದೆ. ಹೀಗಾಗಿ ಅಕ್ಕಪಕ್ಕದ ಮನೆಯವರ ಬಳಿ ವಸ್ತು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಏನಿದು ವಸ್ತು ವಿನಿಮಯ?
ಮನುಷ್ಯ ನಾಗರಿಕತೆಯ ಪ್ರಾರಂಭಿಕ ಹಂತದಲ್ಲಿ ವಸ್ತು ವಿನಿಮಯ ಪದ್ಧತಿ ಕಲಿತಿದ್ದ. ತನ್ನಲ್ಲಿರುವ ವಸ್ತುವನ್ನು ಬೇರೆಯವರಿಗೆ ಕೊಟ್ಟು, ತನಗೆ ಬೇಕಿರುವ ವಸ್ತುವನ್ನು ಪಡೆಯುತ್ತಿದ್ದ. ಕರೆನ್ಸಿ ಕಾಲಿಟ್ಟ ಮೇಲೆ ಎಲ್ಲವನ್ನೂ ಮಾರುವ ಹಾಗೂ ಕೊಳ್ಳುವ ಪ್ರವೃತ್ತಿ ಹೆಚ್ಚಾಯ್ತು. ಇತ್ತೀಚೆಗೆ ರೈತ ಆಹಾರ ಬೆಳೆಗಳಿಗಿಂತಲೂ ವಾಣಿಜ್ಯ ಬೆಳೆಗಳತ್ತ ಹೆಚ್ಚಿನ ಆಸಕ್ತಿ ತೋರಿದ್ದು, ಕರೊನಾ ಪರಿಣಾಮವಾಗಿ ಈಗ ‘ಅಗತ್ಯತೆ’ ಅರಿವಾಗುತ್ತಿದೆ. ದುಡ್ಡಿನಿಂದಲೇ ಎಲ್ಲವೂ ಸಿಗುತ್ತೆ ಅಂದುಕೊಂಡಿದ್ದವರ ಮನಸ್ಥಿತಿ ಬದಲಾಗುತ್ತಿದೆ. ಹಳ್ಳಿಗಾಡಿನ ಜನರ ಬಡತನವೂ ವಸ್ತು ವಿನಿಮಯಕ್ಕೆ ಕಾರಣವಾಗಿದೆ.
ನಗರ ಪ್ರದೇಶದಲ್ಲಿ ಮನೆ ಹತ್ತಿರವೇ ಮಾರುಕಟ್ಟೆ ಎನ್ನುವ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಂತಹ ಸೌಲಭ್ಯಗಳು ಇಲ್ಲ. ರೈತರು ಹಾಗೂ ಹಳ್ಳಿಗಾಡಿನ ಜನರ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ನಿಭಾಯಿಸುವುದು ಹೇಗೆ ಎಂದು ಚರ್ಚೆ ನಡೆಯಿತು. ರೈತ ಸಂಘದ ಪ್ರಮುಖರ ಚರ್ಚೆ ಸಂದರ್ಭದಲ್ಲಿ ವಸ್ತು ವಿನಿಮಯದ ಬಗ್ಗೆ ಪ್ರಸ್ತಾಪವಾಯಿತು. ಪ್ರಾಯೋಗಿಕವಾಗಿ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಗದಗ, ಚಿತ್ರದುರ್ಗ ಸೇರಿದಂತೆ ಎಲ್ಲ ಕಡೆ ಪ್ರಾರಂಭ ಮಾಡುತ್ತೇವೆ.
| ಬಡಗಲಪುರ ನಾಗೇಂದ್ರ ರಾಜ್ಯಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ
| ರಂಗಸ್ವಾಮಿ ಎಂ.ಮಾದಾಪುರ
ರೈತರು ಆತುರ ಪಡಬೇಡಿ, ಅಪಪ್ರಚಾರಕ್ಕೆ ಕಿವಿಗೊಟ್ಟು ಬೆಳೆ ನಾಶ ಮಾಡಬೇಡಿ: ಕೃಷಿ ಸಚಿವ ಬಿ‌.ಸಿ.ಪಾಟೀಲ್ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
