ಬೆಂಗಳೂರು:ಗುರುವಾರ ಒಂದೇ ದಿನ 36 ಕರೊನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆಯೇ ಎಂಬ ಆತಂಕ ತಲೆದೋರಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡಿನಷ್ಟು ಪರಿಸ್ಥಿತಿ ಗಂಭೀರವಾಗದಿದ್ದರೂ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚಾಗುತ್ತಿರುವುದು ರಾಜ್ಯದ ಚಿಂತೆ ಹೆಚ್ಚಿಸಿದೆ.
ಹಾಗೆ ನೋಡಿದರೆ, ಸರಿ ಸುಮಾರು ಕರ್ನಾಟಕದಷ್ಟೇ ಜನಸಂಖ್ಯೆ ಹೊಂದಿರುವ ಇಟಲಿ, ಇನ್ನೂ ಚಿಕ್ಕದಾಗಿರುವ ಸ್ಪೇನ್​ಗೆ ಹೋಲಿಸಿದರೆ ರಾಜ್ಯದ ಪರಿಸ್ಥಿತಿ ಉತ್ತಮ ಎಂದು ಹೇಳಬಹುದು. ಆದರೂ, ಮಾ.9ರಂದು ಕರ್ನಾಟಕ ದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದ ಬಳಿಕ ಇಲ್ಲೀವರೆಗೆ 45 ದಿನಗಳಲ್ಲಿ ಕರೊನಾ ಹುಟ್ಟಿಸಿದ ಭಯ ಅಷ್ಟಿಷ್ಟಲ್ಲ. ಹಾಗೆಯೇ, ಆರೋಗ್ಯ ಇಲಾಖೆ ದಾಖಲಿಸಿರುವ ಮಾಹಿತಿ ಗಮನಿಸಿದರೆ ಕರೊನಾ ಹರಡುವಿಕೆಯಲ್ಲಿ ಬೆಂಗಳೂರು, ಮೈಸೂರು ಪಾಲು ಕೂಡ ದೊಡ್ಡದಿದೆ. ನಂಜನಗೂಡಿನ ಫಾರ್ವ ಕಂಪನಿಯ ಸಿಬ್ಬಂದಿಯಿಂದ ದೊಡ್ಡ ಪ್ರಮಾಣದಲ್ಲಿ ಹರಡಿಕೆಯಾಗಿದೆ. ದೆಹಲಿ, ಮೆಕ್ಕಾ ಪ್ರವಾಸದ ಪ್ರಕರಣಗಳು ಕೂಡ ರಾಜ್ಯಕ್ಕೆ ದುಬಾರಿಯಾಗಿವೆ.
ಜನವರಿ ಕೊನೆಯಲ್ಲಿ ಕೇರಳದಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾಯಿತು. ಚೀನಾದ ವುಹಾನ್ ನಗರಕ್ಕೆ ತೆರಳಿದ್ದ ವಿದ್ಯಾರ್ಥಿ ಕೇರಳಕ್ಕೆ ಮರಳಿದ್ದು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದಾಗ ದೇಶದಲ್ಲಿ ಕರೊನಾ ಪ್ರವೇಶವಾಗಿರುವುದು ಖಾತ್ರಿಯಾಗಿತ್ತು. ತಕ್ಷಣವೇ ರಾಜ್ಯ ಸರ್ಕಾರ ಯಾವ ರೀತಿ ಮುಂಜಾಗ್ರತೆ ವಹಿಸಬೇಕೆಂದು ಚರ್ಚೆ ನಡೆಸಿತ್ತು. ಕೊನೆಗೂ ಮಾ.10ರಂದು ರಾಜ್ಯದಲ್ಲಿ ಮೊದಲ ಪ್ರಕರಣ ಖಾತ್ರಿಯಾಯಿತು. ಸೋಂಕಿತರ ಸಂಖ್ಯೆಯಲ್ಲಿ ಮಾ. 23ರಂದು ಕರ್ನಾಟಕ ದೇಶದಲ್ಲಿ 3ನೇ ಸ್ಥಾನದಲ್ಲಿತ್ತು. ಈ ಬೆಳವಣಿಗೆ ಗಾಬರಿ ಹುಟ್ಟಿಸಿತ್ತು. ಏಕೆಂದರೆ ಅಪಾರ ಪ್ರಮಾಣದಲ್ಲಿ ಕನ್ನಡಿಗರು ವಿದೇಶದಿಂದ ರಾಜ್ಯಕ್ಕೆ ವಾಪಸಾಗಲಾರಂಭಿಸಿದ್ದರು. ಕರೊನಾ ಪರೀಕ್ಷೆ ಯಾವ ರೀತಿ ಮಾಡಬೇಕು ಎಂಬ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಇಷ್ಟರ ನಡುವೆ ಬಲವಂತವಾಗಿ ಕ್ವಾರಂಟೈನ್ ಮಾಡಿಸಿದ ಪ್ರಯತ್ನ ರಾಜ್ಯವನ್ನು ಕಾಪಾಡಿದೆ ಎಂದು ಈವರೆಗಿನ ಅಂಕಿಅಂಶ ವಿಶ್ಲೇಷಿಸಿ ವ್ಯಾಖ್ಯಾನಿಸಬಹುದು. ಒಟ್ಟಾರೆ ರಾಜ್ಯದ ಈವರೆಗಿನ 315 ಪ್ರಕರಣಗಳ ಅಧ್ಯಯನ ನಡೆಸಿದಾಗ ಹತ್ತಾರು ಅಚ್ಚರಿಗಳು ಹೊರಬಿದ್ದಿವೆ.
ಸೋಂಕಿನ ಬಳುವಳಿ:152 ಪ್ರಕರಣದಲ್ಲಿ ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಅವರ್ಯಾರೂ ದೆಹಲಿ ಹೋಗಿ ಬಂದವರಲ್ಲ, ವಿದೇಶಕ್ಕೂ ಹೋಗಿಲ್ಲ. ಸೋಂಕಿತರ ಸಂಪರ್ಕ ಬಂದ ಕಾರಣಕ್ಕೆ ಕರೊನಾ ತಗುಲಿಸಿಕೊಂಡಿರುವುದು ಮೇಲ್ನೋಟಕ್ಕೆ ಕಾಣಿಸಿದೆ. ಅಂದರೆ ರಾಜ್ಯದಲ್ಲಿ ಹೊರಗಿನಿಂದ ಸೋಂಕು ತಂದವರ ಜತೆಗೆ ಶೇ.50ರಷ್ಟು ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗುಲಿದೆ.
31 ಕಡೆ ಸೋಂಕು:ಕಳೆದ 28 ದಿನಗಳಲ್ಲಿ ರಾಜ್ಯದ 31 ನಗರ- ಪಟ್ಟಣಗಳಲ್ಲಿ ಸೋಂಕಿರುವುದನ್ನು ರಾಜ್ಯ ಸರ್ಕಾರ ದೃಢಪಡಿಸಿದೆ. ಈ ಪಟ್ಟಿಯಲ್ಲಿ ಮಹಾ ನಗರ, ಜಿಲ್ಲಾ ಕೇಂದ್ರಗಳಲ್ಲದೇ ತಾಲೂಕು ಕೇಂದ್ರ, ಸಣ್ಣ ಪಟ್ಟಣಗಳೂ ಸೇರಿವೆ. ಬಿಬಿಎಂಪಿ, ಮೈಸೂರು, ನಂಜನಗೂಡು, ಕಲಬುರಗಿ, ಬಾಗಲಕೋಟೆ, ಬೀದರ್, ವಿಜಯಪುರ, ಮಳವಳ್ಳಿ, ಕುಡುಚಿ, ಬಳ್ಳಾರಿ, ಹುಬ್ಬಳ್ಳಿ – ಧಾರವಾಡ, ಭಟ್ಕಳ, ಚಿಕ್ಕಬಳ್ಳಾಪುರ, ಮಂಗಳೂರು, ದಾವಣಗೆರೆ, ಉಡುಪಿ, ಕಾರವಾರ, ಚಿತ್ರದುರ್ಗ, ಸಿರಾ, ಬೆಳಗಾವಿ, ಜಾಲಿ, ಮಂಡ್ಯ, ದೊಡ್ಡಬಳ್ಳಾಪುರ, ಹೊಸಕೋಟೆ, ಮಡಿಕೇರಿ, ಮುಧೋಳ, ಜಮಖಂಡಿ, ಬಸವಕಲ್ಯಾಣ, ಗದಗ, ವಾಡಿ, ಶಹಬಾದ್
ಮೃತಪಟ್ಟವರ ಹಿಸ್ಟರಿ:ಈವರೆಗೆ 13 ಮಂದಿ ರಾಜ್ಯದಲ್ಲಿ ಕರೊನಾದಿಂದ ಮೃತಪಟ್ಟಿದ್ದಾರೆ. ಮೆಕ್ಕಾ ಪ್ರಯಾಣ ಮಾಡಿದವರು, ದೆಹಲಿಗೆ ಹೋಗಿಬಂದವರು ಹೆಚ್ಚಿನವರು.
ಉಸಿರು ಕಟ್ಟಿದ ಮೇಲೆ ಬಂದರು: ಹನ್ನೆರಡು ಪ್ರಕರಣದಲ್ಲಿ ರೋಗಿಗಳು ಉಸಿರಾಟ ತೊಂದರೆ ಇದೆ ಎಂದು ಆಸ್ಪತ್ರೆಗೆ ದಾಖಲಾದ ಬಳಿಕ ಕರೊನಾ ಇದೆ ಎಂದು ಗೊತ್ತಾಗಿದೆ. ಇವರಲ್ಲಿ ಬಹುತೇಕರು ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು. ಕ್ವಾರಂಟೈನ್​ನಲ್ಲಿರುವುದಿರಲಿ ಯಾರಿಗೂ ಮಾಹಿತಿಯೂ ಕೊಟ್ಟಿರಲಿಲ್ಲ. ಒಂದಿಬ್ಬರು ದೆಹಲಿಗೆ ಹೋಗಿ ಬಂದು ಸುಮ್ಮನಿದ್ದರು.
ವಿದೇಶದ ಕೊಡುಗೆ
ಲಂಡನ್​ನಿಂದ ಬಂದವರಲ್ಲಿ 9 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಅವರಲ್ಲಿ ಬಹುತೇಕರು ಚಿಕಿತ್ಸೆ ಕೊನೆ ಹಂತ ತಲುಪಿದ್ದಾರೆ. ಫ್ರಾನ್ಸ್, ಜರ್ಮನಿ, ಬ್ರೆಜಿಲ್, ಪ್ಯಾರಿಸ್, ಇಂಡೋನೇಷ್ಯಾ, ಸ್ವಿಡ್ಜರ್ ಲ್ಯಾಂಡ್​ಗೆ ಹೋಗಿ ಕರೊನಾ ತಂದವರ ಸಂಖ್ಯೆ ಒಟ್ಟಾರೆ 16 ದಾಟಿಲ್ಲ. ಅವರಲ್ಲಿ ಬಹುತೇಕರು ಚಿಕಿತ್ಸೆ ಪಡೆದು ಸುಧಾರಿಸಿದ್ದಾರೆ. ಕೆಲವರು ಇನ್ನೊಂದೆರೆಡು ದಿನಗಳಲ್ಲಿ ಚಿಕಿತ್ಸೆ ಪೂರ್ಣಗೊಂಡು ಮನೆಗೆ ಮರಳುತ್ತಿದ್ದಾರೆ.
ಕೇರಳ ಸಂಬಂಧ
ಗಡಿ ವಿಚಾರದಲ್ಲಿ ತಗಾದೆ ಎತ್ತಿ ಕಿರಿಕಿರಿ ಮಾಡಿದ ಕೇರಳದಿಂದ ಕರೊನಾ ಬಳುವಳಿ ಕರ್ನಾಟಕಕ್ಕೆ ಸಿಕ್ಕಿದೆ. ದುಬೈನಿಂದ ಬಂದ ಕೇರಳವಾಸಿಗಳು ಕರ್ನಾಟಕದಲ್ಲೇ ಚಿಕಿತ್ಸೆ ಪಡೆದರು. ಹೀಗಾಗಿ ರಾಜ್ಯದ ಲೆಕ್ಕ ಹೆಚ್ಚಲು ಅದೂ ಕಾರಣವಾಯಿತು. ಕೇರಳಕ್ಕೆ ಹೋಗಿಬಂದ ಕಾರಣದಿಂದ ಮೂವರಿಗೆ ಸೋಂಕು ಬಂದಿದೆ ಎಂದು ಟ್ರಾವೆಲ್ ಹಿಸ್ಟರಿ ಹೇಳುತ್ತಿದೆ. ಒಟ್ಟು 14 ಪ್ರಕರಣ ಕೇರಳದ ಬಳುವಳಿ. ಇದೇ ರೀತಿ ಆಂಧ್ರ ಪ್ರದೇಶದ ಹಿಂದೂಪುರ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬೇರೆ ಬೇರೆ ನೆಪ ಹೇಳಿ ಬಂದವರು ಇಲ್ಲಿ ಸೋಂಕಿತರಾಗಿದ್ದಾರೆ.
ತಲೆಕೆಳಗಾದ ಇಲಾಖೆ ಲೆಕ್ಕಾಚಾರ
ಆರೋಗ್ಯ ಇಲಾಖೆಯು ತಾನು ಕೈಗೊಂಡ ಕ್ರಮಗಳ ಬಗ್ಗೆ ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದೆ. ಲಾಕ್​ಡೌನ್ ಬಳಿಕ ಕ್ವಾರಂಟೈನ್ ಪ್ರಮಾಣ ಹೆಚ್ಚಿಸಲಾಗಿದ್ದು, ಕ್ವಾರಂಟೈನ್​ನಲ್ಲಿರುವ ಪ್ರಕರಣಗಳಷ್ಟೇ ಬೆಳಕಿಗೆ ಬರುತ್ತವೆ ಎಂದು ನಂಬಿಕೊಂಡಿತ್ತು. ಅದರಂತೆ ಹೆಚ್ಚಿನ ಪ್ರಕರಣಗಳು ಕ್ವಾರಂಟೈನಲ್ಲಿದ್ದವರೇ ಆಗಿದ್ದಾರೆ. ಆದರೆ, ಟ್ರಾವೆಲ್ ಹಿಸ್ಟರಿ ಇಲ್ಲದ ಮತ್ತು ಕ್ವಾರಂಟೈನ್ ಉಲ್ಲಂಘಿಸಿ ಓಡಾಡಿದವರಿಂದ ಲೆಕ್ಕಾಚಾರ ಸ್ವಲ್ಪ ತಲೆಕೆಳಗಾಗಿದೆ.
ಕರೊನಾ ಹೆಜ್ಜೆಗುರುತು
1. ರಾಜ್ಯದಲ್ಲಿ ಈವರೆಗೆ ಸೋಂಕಿತರ ಪೈಕಿ ಶೇ.26 ಮಂದಿ ಚಿಕಿತ್ಸೆ ಫಲಕಾರಿಯಾಗಿ ಮನೆಗೆ ಮರಳಿದ್ದಾರೆ.
2. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿಯ ಸೋಂಕಿತರು ರಾಜ್ಯದ ಒಟ್ಟು ಸೋಂಕಿತರ ಶೇ.60ರಷ್ಟಿದ್ದಾರೆ.
3. 32 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಮಾತ್ರ ಪ್ರಕರಣ ಸಕ್ರಿಯವಾಗಿದೆ. ಕೆಲವು ಜಿಲ್ಲೆಗಳಲ್ಲಿ ಸೋಂಕಿತರಿದ್ದರೂ ಈಗ ಆರೋಗ್ಯವಂತರಾಗಿ ಬಿಡುಗಡೆ ಹೊಂದಿದ್ದಾರೆ.
4. 22 ಜಿಲ್ಲೆಗಳಲ್ಲಿ ಗುರುವಾರ ಹೊಸ ಶಂಕಿತ ಪ್ರಕರಣ ದಾಖಲಾಗಿದ್ದು, ಟೆಸ್ಟಿಂಗ್​ಗೆ ಕಳಿಸಲಾಗಿದೆ. ಹಾಗೆಯೇ ಇದೇ ದಿನ 104 ಪ್ರಕರಣಗಳು ನೆಗೆಟಿವ್ ವರದಿ ಬಂದಿದೆ.
5. ರೋಗಿ 52 ಈವರೆಗಿನ ಅತಿ ಹೆಚ್ಚು ಸೋಂಕು ಹರಡಿದ ವ್ಯಕ್ತಿ. ನಂಜನಗೂಡು ಫಾರ್ವದ ಉದ್ಯೋಗಿಯಾಗಿರುವ ಅವರಿಂದ ಕೆಲಸದ ಸ್ಥಳ, ಮನೆ ಮಂದಿ, ಕುಟುಂಬದ ಇತರ ಸದಸ್ಯರಿಗೂ ತಗುಲಿದೆ.
6. ವಿಜಯಪುರದಲ್ಲಿ ಎರಡು ಕುಟುಂಬದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಕುಟುಂಬಸ್ಥರ ಸಂಪರ್ಕಕ್ಕೆ ಬಂದವರ ಹುಡುಕಾಟ ಕಷ್ಟವಾಗಿದೆ.
ರಾಜ್ಯಕ್ಕೆ ದೆಹಲಿ ಘಾಟು
ಸರ್ಕಾರದ ದಾಖಲೆಗಳ ಪ್ರಕಾರ ದೆಹಲಿಯ ಧರ್ಮಸಭೆ ಮತ್ತು ದೆಹಲಿ ಪ್ರವಾಸದಿಂದ ಹಿಂದಿರುಗಿದವರ ಪೈಕಿ 46 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಅವರ ಪ್ರಾಥಮಿಕ ಸಂರ್ಪತರು 48 ಜನರಿದ್ದಾರೆ. ಇವರಿಂದ ಸೋಂಕು ವಿಸ್ತರಣೆಗೊಂಡಿದ್ದೇ ಹೆಚ್ಚು. ಒಟ್ಟು ಪ್ರಕರಣದಲ್ಲಿ ಶೇ.15 ಕೊಡುಗೆ ನಂಜನಗೂಡು ಫಾರ್ವದ್ದಾಗಿದೆ. ಅಲ್ಲಿ 49 ಜನರಲ್ಲಿ ಸೋಂಕು ದೃಢವಾಗಿದೆ. ದುಬೈ ಮೆಕ್ಕಾ ಪಾತ್ರ ಅಷ್ಟೇ ಇದೆ. ಶೇ.30ಕ್ಕಿಂತ ಹೆಚ್ಚು ಸೋಂಕಿತರು ಸೃಷ್ಟಿಯಾಗಲು ದೆಹಲಿಯಿಂದ ಬಂದವರು ಕಾರಣವಾಗಿದ್ದಾರೆ. ಒಟ್ಟಾರೆ ಈಗಿನ ಪ್ರಾಥಮಿಕ ಮಾಹಿತಿ ಪ್ರಕಾರ ದುಬೈ, ಮೆಕ್ಕಾ ಪ್ರವಾಸ ಮುಗಿಸಿ ಮರಳಿದ 28 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದ್ದು, ಅವರನ್ನು ಭೇಟಿ ಮಾಡಿದವರು, ಆಶೀರ್ವಾದ ಪಡೆದವರಿಗೂ ಸೋಂಕು ಕಾಣಿಸಿಕೊಂಡಿದೆ.
ಸಿಗದ ಸೋಂಕಿನ ಮೂಲ
ಹನ್ನೆರಡಕ್ಕಿಂತ ಹೆಚ್ಚು ಪ್ರಕರಣದಲ್ಲಿ ಆರೋಗ್ಯ ಇಲಾಖೆ ಸೋಂಕಿತರ ಇತಿಹಾಸ ಕೆದಕಲು ಬೆವರು ಹರಿಸಿದೆ. ಯಾರಿಂದ ಸೋಂಕು ಹರಡಿದೆ ಎಂದು ಪತ್ತೆ ಹಚ್ಚಲು ಕಷ್ಟಪಟ್ಟಿದೆ. ಕೆಲವರಂತೂ ತಮಗೆ ಹೇಗೆ ಸೋಂಕು ಬಂದಿತೆಂದು ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಮೂಲ ಹುಡುಕುವುದು ಸವಾಲಾಗಿದೆ.
| ಶ್ರೀಕಾಂತ್ ಶೇಷಾದ್ರಿ
ಕರೊನಾ ನಿಯಂತ್ರಿಸುವಲ್ಲಿ ಮುಂದುವರಿದ ರಾಷ್ಟ್ರಗಳಿಗಿಂತ ಭಾರತವೇ ಮೇಲು ಎನ್ನುತ್ತಿವೆ ಅಂಕಿ ಅಂಶಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
