ಹರೀಶ್ ಬೇಲೂರು ಬೆಂಗಳೂರು
ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಜಾರಿಗೆ ತಂದಿರುವ ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಭ್ರಷ್ಟ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ತಾವು ಮಾಡಿದ ಅಕ್ರಮವನ್ನು ಮುಚ್ಚಿಕೊಳ್ಳಲು ಆರ್​ಟಿಐ ಯೋಜನೆಯನ್ನೇ ಬುಡಮೇಲು ಮಾಡುತ್ತಿದ್ದು, ಅಕ್ರಮದ ವಾಸನೆ ಬಡಿದಿರುವ ಸರ್ಕಾರಿ ಯೋಜನೆಗಳ ಮಾಹಿತಿ ಕೇಳಿ ಸಾರ್ವಜನಿಕರು ಹಾಕುವ ಅರ್ಜಿಗಳಿಗೆ ಸಮರ್ಪಕ ಮಾಹಿತಿ ಕೊಡದೆ ಕಳ್ಳಾಟ ಆಡುತ್ತಿರುವ ಆರೋಪ ಕೇಳಿಬಂದಿದೆ. ಏತನ್ಮಧ್ಯೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಆರ್​ಟಿಐ ‘ಬೆದರಿಕೆ ಅಸ್ತ್ರ’ವಾಗಿ ದುರ್ಬಳಕೆಯಾಗುತ್ತಿರುವ ಆರೋಪವೂ ಇದೆ. ದೇಶದಲ್ಲಿ ಭ್ರಷ್ಟಾಚಾರ ಹೊರಗೆಳೆಯಲು ಪ್ರಯತ್ನಿಸಿದ 101 ಆರ್​ಟಿಐ ಕಾರ್ಯಕರ್ತರ ಹತ್ಯೆ ನಡೆದಿದೆ.
ಆರ್​ಟಿಐನಡಿ ಮಾಹಿತಿ ಕೋರಿ ಸಲ್ಲಿಕೆಯಾಗುವ ಶೇ.80 ಅರ್ಜಿಗಳಲ್ಲಿ ಅಧಿಕಾರಿಗಳು ಅನಗತ್ಯವಾಗಿ ಯಾವುದೋ ಒಂದು ಕಾರಣ ಕೊಟ್ಟು ಮಾಹಿತಿ ನೀಡದೆ ಅರ್ಜಿದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಲಾಖೆಗಳಲ್ಲಿ ಯೋಜನೆಗಳ ಅನುಷ್ಠಾನ, ಕಾಮಗಾರಿಗಳಿಗೆ ಅನುದಾನ ಸೇರಿ ಸರ್ಕಾರದ ಹಣ ಬಳಕೆಯಾಗುವಂತಹ ಯಾವುದೇ ಸಂಸ್ಥೆಗೆ ಸಂಬಂಧಿಸಿದ ಖರ್ಚು-ವೆಚ್ಚಗಳ ಕುರಿತು ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕರು ಮಾಹಿತಿ ಪಡೆಯುವ ಅಧಿಕಾರ ಇದೆ. ಪ್ರತಿವರ್ಷ ರಾಜ್ಯಾದ್ಯಂತ ಮಾಹಿತಿ ಕೋರಿ ಸರಾಸರಿ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಆರ್​ಟಿಐನಡಿ ಅರ್ಜಿ ಸಲ್ಲಿಸುವವರಿಗೆ ಮಾಹಿತಿ ನೀಡಬೇಕೆಂದು ಸುಪ್ರೀಂಕೋರ್ಟ್​ನ ಆದೇಶವಿದೆ. ಹೀಗಿದ್ದರೂ ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರು, ಸಾರ್ವಜನಿಕರು ಸಲ್ಲಿಸುವ ಎಷ್ಟೋ ಅರ್ಜಿಗಳಿಗೆ ಯಾವುದೋ ಆದೇಶ ಅಥವಾ ಸೆಕ್ಷನ್ ಉಲ್ಲೇಖಿಸಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನಮೂದಿಸಿ ಪ್ರತಿಕ್ರಿಯಿಸುತ್ತಿದ್ದಾರೆ. ಅದರಲ್ಲೂ, ಗೋಲ್‍ಮಾಲ್ ನಡೆದಿರುವ ಯೋಜನೆಗಳ ಕುರಿತು ಸಲ್ಲಿಕೆಯಾಗುವ ಅರ್ಜಿಗಳಿಗೆ ಅಧಿಕಾರಿಗಳು ಅಸಂಬದ್ಧ ಉತ್ತರ ಕೊಟ್ಟು ಸಾಗಹಾಕುತ್ತಿರುವ ಆರೋಪಗಳು ಕೇಳಿಬಂದಿವೆ.
101 ಜನರ ಹತ್ಯೆ, 183 ಜನರ ಮೇಲೆ ಹಲ್ಲೆ: ಆರ್​ಟಿಐ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವ ಆರೋಪ ಒಂದೆಡೆಯಾದರೆ, ಭ್ರಷ್ಟ ಅಧಿಕಾರಿಗಳಿಂದ ಹತ್ಯೆಯಾಗಿರುವ ಆರ್​ಟಿಐ ಕಾರ್ಯಕರ್ತರೂ ಇದ್ದಾರೆ. ಖಾಸಗಿ ಸಂಸ್ಥೆಯೊಂದರ ಮಾಹಿತಿ ಪ್ರಕಾರ ದೇಶದಲ್ಲಿ 101 ಆರ್​ಟಿಐ ಕಾರ್ಯಕರ್ತರ ಹತ್ಯೆಯಾಗಿದೆ. 183 ಜನರ ಮೇಲೆ ಗಂಭೀರ ಹಲ್ಲೆಗಳಾಗಿದ್ದು, 188 ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಲಾಗಿದೆ. ಜತೆಗೆ, ಜೀವ ಬೆದರಿಕೆ ಹಾಗೂ ಕಿರುಕುಳದ ಹಿನ್ನೆಲೆಯಲ್ಲಿ 7 ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ ರಾಜ್ಯವೊಂದರಲ್ಲೇ 20 ಆರ್​ಟಿಐ ಕಾರ್ಯಕರ್ತರ ಹತ್ಯೆಯಾಗಿದೆ.
2012ರ ನ.2ರಂದು ಆರ್​ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆಯಾಗಿತ್ತು. ಬೆಂಗಳೂರಿನಲ್ಲಿ ‘ಮಹಾ ಪ್ರಚಂಡ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದು, ಆರ್​ಟಿಐನಡಿ ದಾಖಲೆಗಳನ್ನು ತೆಗೆದು ದೂರು ನೀಡುತ್ತಿದ್ದರು. ಅಂದಿನ ಪಾಲಿಕೆ ಸದಸ್ಯೆ ಗೌರಮ್ಮ ಪತಿ ಗೋವಿಂದರಾಜು ಭೂ ಅಕ್ರಮ ಕುರಿತು 2010ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ರಾಜಿಗೆ ಗೋವಿಂದರಾಜು ಯತ್ನಿಸಿ ವಿಫಲರಾದಾಗ ಕೊಲೆ ಮಾಡಿಸಿದ್ದ ಆರೋಪ ಕೇಳಿಬಂದಿತ್ತು. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಗೌರಮ್ಮ ಸೇರಿ 10 ಮಂದಿ ಖುಲಾಸೆಯಾಗಿದ್ದಾರೆ.
ಪ್ರತಿ ಇಲಾಖೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿದ್ದು, ಅವರಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗಿದೆ. ಅವರ ಲಾಗಿನ್​ಗೆ ಬರುವ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸುವ ಕೆಲಸ ನೋಡಲ್ ಅಧಿಕಾರಿಗಳದ್ದು. ಆದರೆ, ಕೆಲವರು ಸ್ವೀಕೃತವಾಗುವ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸುವುದೇ ಇಲ್ಲ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
