ಬೆಂಗಳೂರು:ಹೊಸ ಸರ್ಕಾರದಲ್ಲಿ ವರ್ಗಾವಣೆ ದಂಧೆಯ ಗುರುತರ ಆರೋಪ ಮಾಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಾಖಲೆಗಳನ್ನು ಸರ್ಕಾರಕ್ಕೆ ಒಪ್ಪಿಸುವುದಾಗಿ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರಸ್ತಾಪದ ಚರ್ಚೆಯಲ್ಲಿ ಮಾತನಾಡಿದರು. ಹೊಸ ಸರ್ಕಾರ ಬಂದು ಒಂದು ತಿಂಗಳಾಗಿದೆ, ಅಷ್ಟರಲ್ಲೇ ಭ್ರಷ್ಟಾಚಾರ ಆರಂಭವಾಗಿದೆ ಎಂದರೆ ದಾಖಲೆ ಎಲ್ಲಿದೆ ಎನ್ನುತ್ತಾರೆ? ಚುನಾವಣೆಯಲ್ಲಿ ಸೋತು ಹತಾಶರಾಗಿ ಈ ರೀತಿ ಮಾತನಾಡುತ್ತಾರೆ, ಮೈ ಪರಚಿಕೊಳ್ಳುತ್ತಿದ್ದಾರೆ, ಸಹನೆ ಕಳೆದುಕೊಂಡಿದ್ದಾರೆ ಎಂದೆಲ್ಲ ಹೇಳುತ್ತಾರೆ. ಚುನಾವಣೆ ಸೋಲಿಗೆ ಮೈ ಪರಚಿಕೊಳ್ಳಲ್ಲ, ಇಂತಹ ಅನೇಕ ಚುನಾವಣೆ ಸೋಲನ್ನು ನಮ್ಮ ಕುಟುಂಬ ಕಂಡಿದೆ ಎಂದು ಹೇಳಿದರು.
ಇಲಾಖೆಗಳಲ್ಲಿ ಪರ್ಸೆಂಟೇಜ್ ಫಿಕ್ಸ್ ಆಗಿದೆ ಎಂದು ಚುನಾವಣೆಗೆ ಮುನ್ನ ಕಾಂಗ್ರೆಸ್​ನವರು ರೇಟ್ ಕಾರ್ಡ್​ನ ಜಾಹೀರಾತು ಕೊಟ್ಟಿದ್ದರು. ಅದಕ್ಕೆಲ್ಲ ದಾಖಲೆ ಇದೆಯೇ? ಅದರ ಸತ್ಯಾಸತ್ಯತೆ ಎಷ್ಟು ಎಂದು ಪ್ರಶ್ನಿಸಿದ ಅವರು, ತಾವು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ದಾಖಲೆ ನೀಡುತ್ತೇನೆಂದು ಹೇಳಿದರು.
ವಿದ್ಯುತ್ ಖರೀದಿ ಒಪ್ಪಂದ ಸಿಬಿಐಗೆ ವಹಿಸಿ:ವಿದ್ಯುತ್ ದರ ಏರಿಕೆಗೆ ಈ ಹಿಂದಿನ ವರ್ಷಗಳಲ್ಲಿ ನಡೆದಿರುವ ವಿದ್ಯುತ್ ಖರೀದಿ ಒಪ್ಪಂದಗಳೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ವಿದ್ಯುತ್ ಖರೀದಿಗಳ ಒಂಡಬಡಿಕೆಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಸತ್ಯ ಗೊತ್ತಾಗಲಿದೆ ಎಂದು ಸವಾಲು ಹಾಕಿದರು. ದುಬಾರಿ ಬೆಲೆಗೆ ವಿದ್ಯುತ್ ಖರೀದಿಸಲು ದೀರ್ಘಕಾಲೀನ ಒಪ್ಪಂದ ಮಾಡಿಕೊಂಡಿರುವ ಕಾರಣ ಇಂದು ಬಡವರ ಮೇಲೆ ಹೊರೆ ಹಾಕುವಂತಾಗಿದೆ ಎಂದರು. ಅದು ಯಾರ ಕಾಲದಲ್ಲಿ ಆಗಿದ್ದೆಂದು ಆಡಳಿತ ಪಕ್ಷದ ಶಾಸಕರು ಪ್ರಶ್ನಿಸಿದಾಗ ನಿಮ್ಮ ಉಪಮುಖ್ಯಮಂತ್ರಿಗಳನ್ನು ಕೇಳಿ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಕುಟುಕಿದರು. ಈ ನಡುವೆ ಮಧ್ಯ ಪ್ರವೇಶಿಸಿದ ಎಚ್.ಡಿ. ರೇವಣ್ಣ, ನಮ್ಮ ಸರ್ಕಾರ ಇದ್ದಾಗ ವಿದ್ಯುತ್ ದರ ಏರಿಸಲು ಬಿಟ್ಟಿರಲಿಲ್ಲ. ಈಗ ವಿದ್ಯುತ್ ದರ ಏರಿಸಿ ದರೋಡೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನುಡಿದಂತೆ ಸಂಪೂರ್ಣ ನಡೆದಿಲ್ಲ:ಸರ್ಕಾರ ನುಡಿದಂತೆ ನಡೆದಿಲ್ಲ ಎಂದು ಹೇಳುವುದಿಲ್ಲ. ಆದರೆ ಸಂಪೂರ್ಣ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಚುನಾವಣೆಗೆ ಮುನ್ನ ಕಾಂಗ್ರೆಸ್ ಜನರಿಗೆ ನೀಡಿದ ಗ್ಯಾರಂಟಿಗಳ ಬಗ್ಗೆ ಯಾವುದೇ ನಿಬಂಧನೆ ಇಲ್ಲದೇ ಜಾರಿಗೊಳಿಸಿದರೆ ಎದೆ ತಟ್ಟಿ ಹೇಳಿಕೊಳ್ಳಬಹುದಿತ್ತು. ಆದರೆ ಗ್ಯಾರಂಟಿಯ ಪರಿಣಾಮಗಳ ಬಗ್ಗೆ ಈಗ ಯೋಚಿಸಿ ನಿರ್ಬಂಧ ವಿಧಿಸಲಾಗುತ್ತಿದೆ. ಎಲ್ಲ ನಿರುದ್ಯೋಗಿ ಪದವೀಧರರಿಗೂ 3000 ರೂ. ನೀಡುವುದಾಗಿ ಹೇಳಿ ಈಗ ಷರತ್ತು ವಿಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಭರವಸೆ ನೀಡಿ, ಈಗ ವಾರ್ಷಿಕ ಸರಾಸರಿ ಆಧರಿಸಿ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಿ ನೀಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ 2.14 ಕೋಟಿ ಗ್ರಾಹಕರಿದ್ದಾರೆ. ಎಲ್ಲರನ್ನೂ ಯೋಜನೆ ವ್ಯಾಪ್ತಿಗೆ ತಂದು ಸೌಲಭ್ಯ ಕಲ್ಪಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು. ಆಂಧ್ರ ಪ್ರದೇಶದಲ್ಲಿ ಎರಡು ರೂ.ಗೆ ಕೆ.ಜಿ.ಅಕ್ಕಿ ಕೊಡುವುದು ಮೊದಲಿಗೆ ಪ್ರಾರಂಭವಾಯಿತು. ಇದನ್ನು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲೂ ಜಾರಿಗೆ ತರಲಾಯಿತು. ಆನಂತರ ಬಂದ ಕಾಂಗ್ರೆಸ್ ಸರ್ಕಾರ ನಿಲ್ಲಿಸಿತ್ತು. 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 3.20 ರೂ. ದರದಲ್ಲಿ ನೀಡಿದ್ದರು ಎಂದು ಸದನದ ಗಮನ ಸೆಳೆದರು. 2013ರಲ್ಲಿ ಒಂದು ರೂ.ಗೆ ಪ್ರತಿ ಕೆ.ಜಿ.ಅಕ್ಕಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಘೊಷಣೆ ಮಾಡಿ ಬಳಿಕ ಉಚಿತವಾಗಿ ನೀಡಲು ಆರಂಭಿಸಿದರು. ಈಗ 10 ಕೆ.ಜಿ.ಅಕ್ಕಿ ಪ್ರತಿ ವ್ಯಕ್ತಿಗೆ ಕೊಡುವ ಘೊಷಣೆ ತಪ್ಪಲ್ಲ. 2018ರಲ್ಲಿ ಮಂಡಿಸಿದ ಬಜೆಟ್​ನಲ್ಲಿ ರಾಜ್ಯ ಹಸಿವು ಮುಕ್ತವಾಗಿರುವುದಾಗಿ ಘೋಷಿಸಿ, ಈಗ ಅಕ್ಕಿ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಗಿಫ್ಟ್ ಕಾರ್ಡ್ ಪ್ರದರ್ಶನ:ಚುನಾವಣೆಯಲ್ಲಿ ಮತ ಹಾಕಿದರೆ 5 ಸಾವಿರ ಉಡುಗೊರೆ ಪಡೆದುಕೊಳ್ಳಬಹುದು ಎಂದು ಕಾಂಗ್ರೆಸ್ ಗಿಫ್ಟ್ ಕಾರ್ಡ್ ಹಂಚಿತ್ತು. ಈ ಮೂಲಕ ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದೀರಿ ಎಂದು ಚುನಾವಣೆ ವೇಳೆ ಹಂಚಿದ್ದ ಗಿಫ್ಟ್ ಕಾರ್ಡ್​ಗಳನ್ನು ಸದನದಲ್ಲಿ ಪ್ರದರ್ಶಿಸಿದರು.
ನೇರ ಖಾತೆಗೆ ತಲುಪಿಸುತ್ತೇವೆ:ರಾಜ್ಯದ 4 ಕೋಟಿ 42 ಲಕ್ಷ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ತಲಾ 170 ರೂ. ಗಳನ್ನು ನೇರ ನಗದು ವರ್ಗಾವಣೆ ಮೂಲಕ ತಲುಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಳಿಕ ಮಾತನಾಡಿದ ಕುಮಾರಸ್ವಾಮಿ, ಹೆಚ್ಚುವರಿ 5 ಕೆಜಿ ಅಕ್ಕಿ ನೀಡಲಾಗುತ್ತಿಲ್ಲ ಎಂದು ಸರ್ಕಾರ ಹಣ ನೀಡುತ್ತಿದೆ ಅದಕ್ಕೆ ತಕರಾರು ಇಲ್ಲ. ಆದರೆ ಅನ್ನಭಾಗ್ಯದ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಡೆತಡೆಗಳಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದರು. ಆ ವೇಲೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ ಪಾಟೀಲ್, ಯಾವ ಅಧಿಕಾರಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಅವರ ಹೆಸರು ಹೇಳಿ ಕೇಳಿದರು. ಅದಕ್ಕೆ ಕುಮಾರಸ್ವಾಮಿ, ಆ ಅಧಿಕಾರಿಯನ್ನು ಗುರುತಿಸುವುದು ನಿಮ್ಮ ಜವಾಬ್ದಾರಿ ಎಂದು ತಿರುಗೇಟು ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
