ಬೆಂಗಳೂರು:ಅಂಗನವಾಡಿ ಮಕ್ಕಳಿಗೆ ನೀಡುವ ಉಚಿತ ಔಷಧ ಖರೀದಿಯಲ್ಲೂ ಕಮಿಷನ್ ಘಾಟು ಹೊಡೆಯುತ್ತಿದೆ. 10 ಕೋಟಿ ರೂ. ವ್ಯವಹಾರದ ಈ ಖರೀದಿ ಅಕ್ರಮಕ್ಕೆ ತೆರೆಮರೆಯಲ್ಲಿ ರಾಜಕೀಯ ಒತ್ತಡ ಹೆಚ್ಚಾಗಿದ್ದು, ಅಧಿಕಾರಿಗಳಿಗೂ ಇದು ತಲೆನೋವಾಗಿದೆ.
ಪ್ರತಿವರ್ಷ ರಾಜ್ಯದಲ್ಲಿರುವ 65 ಸಾವಿರ ಅಂಗನವಾಡಿಗಳಿಗೆ ಶೀತ, ಜ್ವರ, ಕೆಮ್ಮು, ಜಂತುಹುಳು, ಅಲರ್ಜಿ ಸೇರಿ ಹಲವು ಮಾತ್ರೆ, ಪೌಷ್ಟಿಕಾಂಶಗಳನ್ನೊಳಗೊಂಡ ಕಿಟ್ ಸರಬರಾಜು ಮಾಡುವ ಯೋಜನೆ ಬಾಲಗ್ರಹಪೀಡಿತವಾಗಿದೆ. ಅಷ್ಟಕ್ಕೂ ಇದು ರಾಜ್ಯ ಸರ್ಕಾರದ ಪ್ರಾಯೋಜಿತವಲ್ಲ. ಕೇಂದ್ರ ಸರ್ಕಾರವೇ ಇದಕ್ಕೆ ಅನುದಾನ ಒದಗಿಸುತ್ತದೆ. ಆದರೂ ಇಲ್ಲಿ ಕಮಿಷನ್ ವ್ಯವಹಾರಕ್ಕಾಗಿ ರಾಜಕೀಯ ಕಸರತ್ತು ನಡೆಯುತ್ತಿದೆ.
ಮಕ್ಕಳಿಗೆ ಔಷಧ ನೀಡುವಲ್ಲಿ ಡೀಲ್ ವ್ಯವಹಾರ ಕುದುರಿಲ್ಲ ಎನ್ನುವ ಕಾರಣಕ್ಕೆ 3-4 ಸಲ ಕಡತ ವಾಪಸ್ ಬಂದಿದ್ದು, ಅಧಿಕಾರಿಗಳಿಗೂ ಈ ಬಗ್ಗೆ ಅಚ್ಚರಿಯಾಗಿದೆ. ಈ ಬಗ್ಗೆ ಮುತುವರ್ಜಿ ವಹಿಸಿ ಅಂಗನವಾಡಿಗಳಿಗೆ ಔಷಧ ಸರಬರಾಜಾಗುವಂತೆ ಜವಾಬ್ದಾರಿ ವಹಿಸಬೇಕಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಚಿವರತ್ತ ಕೈ ತೋರಿಸಿ ನಿರುಮ್ಮಳಾಗಿದ್ದಾರೆ.
ಮುದ್ದುಮಕ್ಕಳಿಗೆ ಸಿಗದ ನ್ಯಾಯ: ಕಳೆದ ವರ್ಷವೂ ಇದೇ ತಿಕ್ಕಾಟದಿಂದಾಗಿ ಅಂಗನವಾಡಿಗಳಿಗೆ ಔಷಧ ಸರಬರಾಜು ನಿಂತು ಹೋಗಿರುವುದಕ್ಕೆ ಅಂಗನವಾಡಿ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ, ಸರ್ಕಾರ ಗಮನ ಹರಿಸಿಲ್ಲ ಎನ್ನುವುದು ಅವರ ದೂರು. ಒಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಚಿವರ ನಡುವಿನ ಗುದ್ದಾಟದಲ್ಲಿ ಮಕ್ಕಳಿಗೆ ನ್ಯಾಯ ಸಿಗದಂತಾಗಿದೆ.
ಎಲ್ಲವೂ ಕಮಿಷನ್ ಕರಾಮತ್ತು:ಕೋವಿಡ್-19 ಕಾಲದಲ್ಲೂ ಅಂಗನವಾಡಿ, ಕಿರು ಅಂಗನವಾಡಿಗಳಿಗೆ ಔಷಧ ಖರೀದಿ ವಿಷಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಒಂದೆಡೆ ಎಳೆದರೆ, ಅಧಿಕಾರಿಗಳು ಮತ್ತೊಂದೆಡೆಗೆ ಜಗ್ಗುತ್ತಿರು ವುದು ಗುಟ್ಟಾಗಿ ಉಳಿದಿಲ್ಲ. ಕಮಿಷನ್​ಗಾಗಿ ಭಾರಿ ಲಾಬಿ ನಡೆಯುತ್ತಿ ರುವುದು ಹಣಕಾಸು ಇಲಾಖೆ ಅಧಿಕಾರಿಗಳ ಗಮನಕ್ಕೂ ಬಂದಿದೆ. ಅಲ್ಲದೆ, ಮುಖ್ಯಮಂತ್ರಿಗಳ ತನಕವೂ ದೂರು ಹೋಗಿದೆ.
ರಾಜ್ಯದ ಕಂಪನಿ ಕಡೆಗಣನೆ: ಕೇಂದ್ರ ಸರ್ಕಾರ ಅನುಮೋದಿಸಿ ರುವ ನಿಗದಿತ ಕಂಪನಿಗಳಲ್ಲೇ ಈ ಔಷಧ ಖರೀದಿಸಬೇಕು ಎನ್ನುವ ನಿಯಮವಿದೆ. ಇದರಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಆಂಟಿಬಯಾಟಿಕ್ಸ್ ಆಂಡ್ ಫಾರ್ವಸ್ಯೂಟಿಕಲ್ಸ್ ಲಿ. (ಕೆಎಪಿಎಲ್) ಸಂಸ್ಥೆಯೂ ಇದೆ. ನೆರೆ ರಾಜ್ಯದ ಕಂಪನಿಗೆ ಈ ಆರ್ಡರ್ ನೀಡಲು ಮುಂದಾಗುವ ಮೂಲಕ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಪಿಎಲ್ ಕಂಪನಿಯನ್ನು ನಿರ್ಲಕ್ಷಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಧಿಕೃತ ಮಾನ್ಯತೆ ಪಡೆದಿರುವ ರಾಜ್ಯದ ಕಂಪನಿಯನ್ನು ಕಡೆಗಣಿಸಿ, ನೆರೆರಾಜ್ಯದ ಕಂಪನಿಗೆ ಮಣೆ ಹಾಕಲು ತರಾತುರಿಯಲ್ಲಿ ಹೊರಟಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಗ್ಗೆ ಗುಸುಗುಸು ಪ್ರಾರಂಭವಾಗಿದೆ. ಅಚ್ಚರಿ ಎಂದರೆ, ಸಚಿವರು ಕೂಡ ಮೌನಕ್ಕೆ ಶರಣಾಗಿದ್ದಾರೆ.
ಹಠಕ್ಕೆ ಬಿದ್ದ ಇಲಾಖೆ
ಹೊರರಾಜ್ಯದ ಕಂಪನಿಗಳಿಗೆ ಮಣೆ ಹಾಕುವುದಕ್ಕೆ ಹಣಕಾಸು ಇಲಾಖೆ ಅಧಿಕಾರಿಗಳು ಸುತರಾಂ ಒಪ್ಪಿಲ್ಲ. ಮೂರ್ನಾಲ್ಕು ಬಾರಿ ಕಡತ ಹಿಂದಿರುಗಿಸಿದ್ದರೂ ಅದಕ್ಕೆ ಕ್ಯಾರೇ ಎನ್ನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾವು ಹೇಳಿದ್ದಲ್ಲಿಂದಲೇ ಖರೀದಿಸಬೇಕು ಎಂಬ ಹಠಕ್ಕೆ ಬಿದ್ದಿದೆ. ಇದೇ ಕಾರಣಕ್ಕೆ ಮಕ್ಕಳ ಕಲ್ಯಾಣ ಯೋಜನೆಯೂ ಸೊರಗಿದೆ.

| ಶಿವಾನಂದ ತಗಡೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
