| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಹಿಂದಿನ ಸರ್ಕಾರದ ಕೊನೇ ದಿನಗಳಲ್ಲಿ ನಡೆದ ‘ಬೆಂಗಳೂರು ಹಬ್ಬ’ದ ವೇಳೆ ‘ಕೃಷ್ಣನ ಲೆಕ್ಕ’ ಮುಂದಿಟ್ಟು ಹಣ ಲೂಟಿ ಹೊಡೆಯುವ ಪ್ರಯತ್ನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಥಮಿಕ ಮಾಹಿತಿ ಸಂಗ್ರಹದ ವೇಳೆ ಬಟಾಬಯಲಾಗಿದೆ.
2023ರ ಮಾ. 25 ಮತ್ತು 26ರಂದು ನಡೆದ ಬೆಂಗಳೂರು ಹಬ್ಬಕ್ಕೆ ಮಾಡಿದ ವೆಚ್ಚ ಪಾವತಿ ಸಂದರ್ಭದಲ್ಲಿ ಸುಳ್ಳುಲೆಕ್ಕ ಸೇರಿಸಿ ಹೆಚ್ಚು ಹಣ ಕೊಳ್ಳೆ ಹೊಡೆಯುವ ಪ್ರಯತ್ನದ ಕುರಿತು ‘ವಿಜಯವಾಣಿ’ ಬೆಳಕು ಚೆಲ್ಲಿತ್ತು. ಬಳಿಕ ಎಚ್ಚೆತ್ತ ಸರ್ಕಾರ, ಮಾಹಿತಿ ಸಂಗ್ರಹಿಸಿದಾಗ ಅವ್ಯವಹಾರ ನಡೆದಿರುವುದು ಖಚಿತವಾಗಿದೆ. ಈ ವಿಚಾರದಲ್ಲಿ ಇಲಾಖಾ ಸಚಿವರು ಹಾಗೂ ಕಾರ್ಯದರ್ಶಿ ಮುಂದಾಳತ್ವದಲ್ಲಿ ನಡೆದ ಸಭೆಯ ನಡಾವಳಿ ಲಭ್ಯವಾಗಿದ್ದು, ಅದರಲ್ಲಿ ಅನೇಕ ಅಚ್ಚರಿಯ ಸಂಗತಿಗಳು ಕಾಣಿಸಿವೆ.
ಬೆಂಗಳೂರು ಹಬ್ಬ ಆಯೋಜನೆಗೆ ಸೇವೆ ಒದಗಿಸಿದ ಸಂಸ್ಥೆಯಿಂದ ಸಲ್ಲಿಕೆಯಾದ 5.59 ಕೋಟಿ ರೂ. ಬಿಲ್​ನಲ್ಲಿ ಕೆಲವು ಕಾರ್ಯಕ್ರಮಗಳು, ಕಾರ್ಯ ಚಟುವಟಿಕೆಗಳು ಪೂರ್ಣಪ್ರಮಾಣದಲ್ಲಿ ನಡೆಯದೆ ಇರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ 44.27 ಲಕ್ಷ ರೂ. ತಡೆಹಿಡಿಯಬೇಕೆಂಬ ಆರ್ಥಿಕ ಇಲಾಖೆ ಟಿಪ್ಪಣಿಯನ್ನು ಪರಿಗಣಿಸಲಾಗಿದೆ. ಬಿಲ್ ವಿಷಯವಾಗಿ ನಮೂದಿಸಿರುವ ದರಗಳು ಮಾರುಕಟ್ಟೆ ದರಗಳಿಗಿಂತ ಹೆಚ್ಚಾಗಿರುವುದು ಕಂಡುಬರುತ್ತಿರುವುದರಿಂದ, ಸೇವೆ ಒದಗಿಸಿದ ಸಂಸ್ಥೆಯಿಂದ ದರ ನಿಗದಿಪಡಿಸಿದ ಬಗ್ಗೆ ವಿವರ ಪಡೆದು ಮರುಪರಿಶೀಲಿಸಲು ತಿಳಿಸಲಾಗಿದೆ.
ಸರ್ಕಾರಕ್ಕೆ ಸಲ್ಲಿಕೆಯಾದ ಬಿಲ್​ನಲ್ಲಿ ವೇದಿಕೆ ವೆಚ್ಚ, ಧ್ವನಿ-ಬೆಳಕು ವೆಚ್ಚ, ಕಲಾವಿದರ ಸಂಭಾವನೆ ಎಲ್ಲವನ್ನೂ ಒಟ್ಟುಗೂಡಿಸಲಾಗಿದೆ. ವಿವರವನ್ನು ಪ್ರತ್ಯೇಕಗೊಳಿಸಿ ಅಧಿಕಾರಿ ಅಥವಾ ತಜ್ಞರ ಸಮಿತಿ ರಚಿಸಿ ಮರು ಪರಿಶೀಲಿಸಿ ಬಿಲ್​ನಲ್ಲಿ ನಮೂದಿಸಿದ ವೆಚ್ಚಗಳ ನೈಜತೆ ಪರಿಶೀಲಿಸಿ ಸಂಸ್ಥೆಗೆ ಪಾವತಿಸಬಹುದಾದ ಮೊತ್ತದೊಂದಿಗೆ ಕಡತ ಸಲ್ಲಿಸಲೂ ನಿರ್ಣಯ ಕೈಗೊಳ್ಳಲಾಗಿದೆ.
ಮಾಹಿತಿ ಸಂಗ್ರಹ: 2023ರ ಮಾ. 25ರಂದು ಕಬ್ಬನ್ ಪಾರ್ಕ್ ಆವರಣದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಸಂತೆ, ಶಿಲ್ಪಕಲಾ ಕೃತಿಗಳ ಪ್ರದರ್ಶನ, ಪುಸ್ತಕ ಮೇಳ, ಆಹಾರ ಮೇಳ ಇತ್ಯಾದಿ ಕಾರ್ಯಕ್ರಮಗಳನ್ನು ಸಂಗೀತ ನೃತ್ಯ ಅಕಾಡೆಮಿ, ರವೀಂದ್ರ ಕಲಾಕ್ಷೇತ್ರ, ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿ ವಿವಿಧ ನಿಗಮಗಳು ಜವಾಬ್ದಾರಿ ತೆಗೆದುಕೊಂಡಿದ್ದವು. ಅವುಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವರದಿ ಪಡೆದುಕೊಂಡಿದೆ. ಎಷ್ಟು ಟೇಬಲ್, ಕುರ್ಚಿ ಹಾಕಲಾಗಿತ್ತು, ಏನೆಲ್ಲ ವ್ಯವಸ್ಥೆ ಮಾಡಲಾಗಿತ್ತು ಎಂಬುದು ಆ ವರದಿಯಲ್ಲಿದೆ. ಸರ್ಕಾರಕ್ಕೆ ಪಾವತಿಗಾಗಿ ಸಲ್ಲಿಕೆಯಾದ ಬಿಲ್​ನಲ್ಲಿ ನಮೂದಿಸಿರುವ ಅಂಕಿ-ಸಂಖ್ಯೆಗೂ ಅಕಾಡೆಮಿ ನೀಡಿದ ವರದಿಯಲ್ಲಿನ ಅಂಶಕ್ಕೂ ತಾಳೆಯಾಗುತ್ತಿಲ್ಲ. ದರದ ಬಗ್ಗೆ ಅನುಮಾನ ಸಾಕಷ್ಟಿದೆ. ಕಾರ್ಯಕ್ರಮದ ಎರಡು ಸಾವಿರ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದು, ಆಹ್ವಾನ ಪತ್ರಿಕೆಯನ್ನೇ ಮುದ್ರಿಸಿಲ್ಲ ಎಂಬುದು ಸಹ ಖಚಿತವಾಗಿದೆ.
ಬಿಲ್​ನಲ್ಲಿರುವುದೇನೇನು?ಸರ್ಕಾರಕ್ಕೆ ಸಲ್ಲಿಕೆಯಾದ ಬಿಲ್​ನಲ್ಲಿ ಅನೇಕ ಅನುಮಾನಾಸ್ಪದ ಅಂಶಗಳಿವೆ. ವಿಧಾನಸೌಧ ಮುಂಭಾಗದ ಕಾರ್ಯಕ್ರಮಕ್ಕೆ ಬರುವ ಜನರು ಆಸೀನರಾಗುವುದಕ್ಕೆ 8 ಸಾವಿರ ಪ್ಲಾಸ್ಟಿಕ್ ಚೇರ್ ಹಾಕಿಸಲಾಗಿತ್ತು, ಅದಕ್ಕಾಗಿ 4 ಲಕ್ಷ ರೂ. (ಪ್ರತಿಯೊಂದಕ್ಕೆ 50 ರೂ.), ಎರಡು ಪ್ರವೇಶ ದ್ವಾರ, ಬ್ಯಾಕ್​ಡ್ರಾಪ್​ಗೆ 32.50 ಲಕ್ಷ ರೂ., ಫುಡ್ ಸ್ಟಾಲ್​ನಲ್ಲಿ 100 ಚೇರ್​ಗೆ 7,500 ರೂ. (ಪ್ರತಿಯೊಂದಕ್ಕೆ 75 ರೂ.), ಇನ್ನೊಂದು ಸ್ಥಳದಲ್ಲಿ 200 ಚೇರ್​ಗೆ 15 ಸಾವಿರ ರೂ. (ತಲಾ 75 ರೂ.), ಒಂದು ದಿನದ ಪುರುಷ ಹೌಸ್ ಕೀಪಿಂಗ್ (50 ಸಂಖ್ಯೆ) 1,90,000 (ತಲಾ 3,800 ರೂ.), ಮಹಿಳಾ ಹೌಸ್ ಕೀಪಿಂಗ್ (20) 1,80,000 ರೂ. ನಿಗದಿಪಡಿಸಲಾಗಿತ್ತು. ಸ್ವಚ್ಛತಾ ಸಾಮಗ್ರಿ (ಡಸ್ಟ್​ಬಿನ್ ವಾಕ್ಯೂಮ್ ಮಷಿನ್) 65 ಸಾವಿರ ರೂ., 200 ಡಸ್ಟ್​ಬಿನ್​ಗೆ 40 ಸಾವಿರ ರೂ. (ಪ್ರತಿಯೊಂದಕ್ಕೆ 200 ರೂ.), 10 ಜನ ಸೂಪರ್​ವೈಸರ್​ಗಳಿಗೆ 50 ಸಾವಿರ ರೂ., ಸಾಮಾನ್ಯ ಲೈಟಿಂಗ್ (400 ಸಂಖ್ಯೆ) 2,80,000 ರೂ., ಕಬ್ಬನ್ ಪಾರ್ಕ್​ನಲ್ಲಿ 300 ಚೇರ್ ಹಾಕಿದ್ದಕ್ಕೆ 22,500 ರೂ., ನೂರು ಟೇಬಲ್​ಗೆ 75,000, ಚಿತ್ರಸಂತೆಯಲ್ಲಿ 400 ಚೇರ್ ಹಾಕಿದ್ದಕ್ಕೆ 30 ಸಾವಿರ ರೂ., 200 ಟೇಬಲ್​ಗೆ 90,000 ರೂ. ನಿಗದಿಪಡಿಸಲಾಗಿದೆ (ಪ್ರತಿಯೊಂದಕ್ಕೆ 400 ರೂ.). ಅಷ್ಟೇ ಅಲ್ಲ ಜನರೇಟರ್​ಗೆ 1,50,000, ಆಂಪ್ಲಿಫೈರ್​ಗೆ (10) 3,25,000 ರೂ., ಇಬ್ಬರು ಸೌಂಡ್ ಟೆಕ್ನಿಶಿಯನ್​ಗೆ 40 ಸಾವಿರ ರೂ. ಎಂದು ಬಿಲ್ ಸಲ್ಲಿಕೆಯಾಗಿದೆ.
ದೊಡ್ಡ ಅಕ್ರಮ ನಡೆದಿದೆ ಎಂಬುದು ಇಲಾಖೆ ಗಮನಕ್ಕೆ ಬಂದಿದೆ. ಇನ್ನಾದರೂ ಸ್ವತಂತ್ರ ತನಿಖಾ ಸಂಸ್ಥೆ ಮೂಲಕ ತನಿಖೆಯಾಗಲೇ ಬೇಕು. ಯಾವುದೇ ಕಾರಣಕ್ಕೂ ಇದನ್ನು ಇಷ್ಟಕ್ಕೆ ಮುಗಿಸಲು ಬಿಡಬಾರದು.
| ಜಯಸಿಂಹ ಕಲಾ ಸಂಘಟಕ
ಉದ್ಯಾನ ನಗರಿಯಲ್ಲಿ ಕಂಬಳ ಚಿತ್ತಾರದ ಮೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
