ಬೆಂಗಳೂರು:ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಯೋಜನಾ ವೆಚ್ಚ ಕುಂಠಿತವಾಗಿರುವುದರ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಈ ವರ್ಷ 2.55 ಲಕ್ಷ ಕೋಟಿ ರೂ. ವೆಚ್ಚ ಮಾಡಲು ನಿರ್ಧಾರ ಮಾಡಿತ್ತು. ಆದರೆ ವೆಚ್ಚದ ಪ್ರಮಾಣ ಜನವರಿ ಅಂತ್ಯಕ್ಕೆ ಗಮನಿಸಿದಾಗ ಬಹುತೇಕ ಇಲಾಖೆಗಳಲ್ಲಿ ಗುರಿ ಸಾಧಿಸುವ ಸಾಧ್ಯತೆ ಕಂಡುಬರುತ್ತಿಲ್ಲ. ಜನವರಿ ಅಂತ್ಯಕ್ಕೆ ಶೇ.62.55 ಸಾಧನೆಯಾಗಿದ್ದರೆ, ಮಾರ್ಚ್ ಅಂತ್ಯದೊಳಗೆ ಶೇ.37.45 ವೆಚ್ಚ ಮಾಡಬೇಕಿದೆ. ಜನರಿಗೆ ಹತ್ತಿರವಿರುವ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗುವ ಇಲಾಖೆಗಳಲ್ಲಿಯೇ ನಿರೀಕ್ಷಿತ ಸಾಧನೆ ಆಗಿಲ್ಲದಿರುವುದು ಆತಂಕದ ವಿಷಯವಾಗಿದೆ. ಕೇಂದ್ರದಿಂದ ಬರಬೇಕಾದ ತೆರಿಗೆಯ ಪಾಲು ಬಾರದೆ ಇರುವುದು, ಸಾಲಮನ್ನಾ ಹಾಗೂ ನೆರೆ ಹಾವಳಿ ಪರಿಣಾಮ ಬಹುತೇಕ ಎಲ್ಲ ಇಲಾಖೆಗಳಲ್ಲಿ ಶೇ.30 ಅನುದಾನ ಕಡಿತ ಮಾಡಲಾಗಿದೆ. ಅದು ಸಹ ವೆಚ್ಚದ ಮೇಲೆ ಪರಿಣಾಮ ಬೀರಿದೆ.
ಸರ್ಕಾರದ ಉನ್ನತ ಮೂಲಗಳಿಂದ ಲಭ್ಯ ಮಾಹಿತಿ ಪ್ರಕಾರ, ಜನವರಿ ಅಂತ್ಯಕ್ಕೆ 1.71 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ 1.60 ಲಕ್ಷ ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಬಿಡುಗಡೆಯಾಗಿರುವ ಹಣದಲ್ಲಿಯೇ ಇನ್ನೂ 11 ಸಾವಿರ ಕೋಟಿ ರೂ. ಖರ್ಚಾಗಿಲ್ಲ. ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತದ ನಡುವೆಯೇ ಸರ್ಕಾರ ಅಭಿವೃದ್ಧಿ ಸಾಧಿಸುವ ಬಂಡವಾಳ ಹಾಗೂ ಸರ್ಕಾರ ನಡೆಸುವ ರಾಜಸ್ವ ವೆಚ್ಚಗಳಿಗೆ ಹಣ ಬಿಡುಗಡೆ ಮಾಡಿದೆ. ಆದರೆ ವೆಚ್ಚ ಆಗುತ್ತಿಲ್ಲ. ಆದ್ದರಿಂದ ಅಭಿವೃದ್ಧಿ ಸಾಧಿಸುವುದು ಸಾಧ್ಯವಾಗುತ್ತಿಲ್ಲ. ಬಹುತೇಕ ಇಲಾಖೆಗಳಲ್ಲಿ ಬಿಡುಗಡೆ ಮಾಡಿರುವ ಮೊತ್ತದಲ್ಲಿ ಶೇ.50 ವೆಚ್ಚವಾಗಿಲ್ಲ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಯೋಜನೆಗಳ ಜಾರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಬಹುತೇಕ ಇಲಾಖೆಗಳಲ್ಲಿ ಪ್ರಮುಖ ಯೋಜನೆಗಳಿಗೆ ಹಣವೇ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಭ್ಯ ಸಂಪನ್ಮೂಲದಲ್ಲಿಯೇ ಮುಂದಿನ ಬಜೆಟ್​ನಲ್ಲಿ ಕೆಲವೊಂದು ಸುಧಾರಣೆಗಳಿಗೆ ಮುನ್ನುಡಿ ಬರೆಯಲು ಹಾಗೂ ಹಳಿ ತಪ್ಪಿರುವ ಆರ್ಥಿಕ ಸ್ಥಿತಿ ಸರಿ ದಾರಿಗೆ ತರಲು ಸಾಕಷ್ಟು ಕಸರತ್ತು ನಡೆಸಿದ್ದಾರೆ.
ಯಾವ ಇಲಾಖೆಯಲ್ಲಿ ಎಷ್ಟು ವೆಚ್ಚ?
ಸಮಾಜ ಕಲ್ಯಾಣ ಇಲಾಖೆಯಲ್ಲಿ ಶೇ.46.86, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.42.38, ಸಾರ್ವಜನಿಕ ಉದ್ದಿಮೆಯಲ್ಲಿ ಶೇ.24.90, ಅಲ್ಪಸಂಖ್ಯಾತರ ಕಲ್ಯಾಣದಲ್ಲಿ ಶೇ.45.76, ಪ್ರವಾಸೋದ್ಯಮದಲ್ಲಿ ಶೇ.46.97, ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ ಶೇ.51.96, ಪಶು ಸಂಗೋಪನೆಯಲ್ಲಿ ಶೇ.58.54, ಕಂದಾಯದಲ್ಲಿ ಶೇ.64.87, ಹಿಂದುಳಿದ ವರ್ಗಗಳ ಕಲ್ಯಾಣದಲ್ಲಿ ಶೇ.67.49, ಆರೋಗ್ಯದಲ್ಲಿ ಶೇ.66.30, ಲೋಕೋಪಯೋಗಿಯಲ್ಲಿ ಶೇ.54.85, ಸಾರಿಗೆಯಲ್ಲಿ ಶೇ.49.08, ವಸತಿಯಲ್ಲಿ ಶೇ.55.32, ಯುವ ಸಬಲೀಕರಣದಲ್ಲಿ ಶೇ.52.76, ಕೃಷಿಯಲ್ಲಿ ಶೇ.57.24 ಪ್ರಗತಿ ಸಾಧಿಸಲಾಗಿದೆ. ಕಾನೂನು, ಮೂಲಸೌಕರ್ಯ ಮತ್ತು ಕಾರ್ವಿುಕ ಇಲಾಖೆಗಳಲ್ಲಿ ಮಾತ್ರ ಪ್ರಗತಿ ಶೇ. 80 ದಾಟಿದೆ. ಪ್ರವಾಹ ಬಂದಿದ್ದರಿಂದ ವಿಪತ್ತು ನಿರ್ವಹಣೆಯಲ್ಲಿ ಶೇ.75.32 ಅನುದಾನ ವೆಚ್ಚವಾಗಿದೆ.
ಕೃಷಿಗೆ ಹೆಚ್ಚುವರಿ
ಕೃಷಿ ವಲಯಕ್ಕೆ ಮಾತ್ರ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ. -ಠಿ;1289.34 ಕೋಟಿ ನಿಗದಿಗಿಂತ ಹೆಚ್ಚಿಗೆ ಬಿಡುಗಡೆ ಮಾಡಲಾಗಿದೆ. ಕೃಷಿ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ಸಹ ತನ್ನ ಪಾಲು ಸೇರಿಸಿದ್ದರಿಂದ ಹೆಚ್ಚವರಿ ಹಣ ಬಿಡುಗಡೆ ಮಾಡಲಾಗಿದೆ. ಆದರೂ ವೆಚ್ಚದಲ್ಲಿ ಪ್ರಗತಿ ಶೇ.57.24 ಮಾತ್ರ.
ವಸತಿ ಮೇಲೆ ಪರಿಣಾಮ
ಸರ್ಕಾರದಲ್ಲಿ ಏಳು ವಸತಿ ಯೋಜನೆಗಳಿವೆ. ಅಷ್ಟು ಯೋಜನೆ ಗಳಿಗೆ ಬಜೆಟ್​ನಲ್ಲಿ 3276.95 ಕೋಟಿ ರೂ. ನಿಗದಿ ಮಾಡಿದ್ದರೂ ಜನವರಿ ಅಂತ್ಯದ ತನಕ ಬಿಡುಗಡೆ ಮಾಡಿರುವ ಮೊತ್ತ 1423.66 ಕೋಟಿ ರೂ. ಮಾತ್ರ. ಇದು ಒಂದು ಇಲಾಖೆಯ ಉದಾಹರಣೆ ಅಷ್ಟೇ. ಬಹುತೇಕ ಇಲಾಖೆಗಳ ಸ್ಥಿತಿ ಇದೆ ಆಗಿದೆ.
ಹೆಚ್ಚುತ್ತಿದೆ ರಾಜಸ್ವ ವೆಚ್ಚ
ರಾಜಸ್ವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಅಭಿವೃದ್ಧಿ ಸಾಧಿಸಬೇಕಾದ ಬಂಡ ವಾಳ ವೆಚ್ಚ ಕಡಿಮೆಯಾಗುತ್ತಿದೆ. ರಾಜಸ್ವ ವೆಚ್ಚದಲ್ಲಿ ಪ್ರಮುಖವಾಗಿ ನೌಕರರ ಸಂಬಳ, ಸಾರಿಗೆ, ಸರ್ಕಾರ ನಡೆಸುವುದು, ಬಡ್ಡಿ ಪಾವತಿ ಪ್ರಮುಖ ವೆಚ್ಚಗಳಾಗಿವೆ. ಈ ಸಾಲಿನಲ್ಲಿ ರಾಜಸ್ವ ವೆಚ್ಚಕ್ಕೆ 1.81 ಲಕ್ಷ ಕೋಟಿ ರೂ. ಬೇಕಾಗಿದೆ ಎಂಬುದು ಸರ್ಕಾರದ ಅಂದಾಜು.
| ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
