ಬೆಂಗಳೂರು:ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯಲಿರುವ ಚುನಾವಣೆಗೆ 3 ಪಕ್ಷಗಳು ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ನಿರೀಕ್ಷೆಯಂತೆ ಏಳು ಜನರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಬಿಜೆಪಿಯಿಂದ 4, ಕಾಂಗ್ರೆಸ್ 2 ಹಾಗೂ ಜೆಡಿಎಸ್​ನಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಹೆಸರಿನಲ್ಲಿ ಎಂ. ನಾಗರಾಜ್, ಪಕ್ಷೇತರರಾಗಿ ಪಿ.ಸಿ.ಕೃಷ್ಣೇಗೌಡ ದಾಖಲಿಸಿದ ಉಮೇದುವಾರಿಕೆಗೆ ನಿಯಮದಂತೆ ಸೂಚಕರಾಗಿ 10 ಶಾಸಕರು ಸಹಿ ಮಾಡಿಲ್ಲ. ಹೀಗಾಗಿ ಪ್ರಮುಖ ಪಕ್ಷಗಳ 7 ಅಭ್ಯರ್ಥಿಗಳ ಮೇಲ್ಮನೆ ಪ್ರವೇಶ ಸಲೀಸು ಎನ್ನುವಂತಾಗಿದೆ. ಕಾಂಗ್ರೆಸ್​ನ ನಸೀರ್ ಅಹ್ಮದ್ 3ನೇ ಬಾರಿ, ಉಳಿದ ಆರು ಮಂದಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ನಿಚ್ಚಳ. ಶುಕ್ರವಾರ ನಾಮಪತ್ರಗಳ ಪರಿಶೀಲನೆ, ಜೂ.22 ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅದೇದಿನ ಅವಿರೋಧ ಆಯ್ಕೆ ಕುರಿತು ಅಧಿಕೃತವಾಗಿ ಪ್ರಕಟಿಸುವುದಕ್ಕೆ ವೇದಿಕೆ ಸಜ್ಜಾಗಲಿದೆ.
ನಿಷ್ಠೆ, ತ್ಯಾಗದ ಸಮ್ಮಿಲನ:ಇಂಜಿನಿಯರ್, ನ್ಯಾಯವಾದಿ ಉದ್ಯಮಿ, ರಿಯಲ್ ಎಸ್ಟೇಟ್ ವ್ಯವಹಾರಸ್ಥ ಹಾಗೂ ವ್ಯಾಪಾರಿ ಜತೆಗೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವವುಳ್ಳ ಇಬ್ಬರನ್ನು ತ್ರಿಪಕ್ಷಗಳು ಈ ಬಾರಿ ವಿಧಾನಪರಿಷತ್ ಚುನಾವಣೆ ಕಣಕ್ಕಿಳಿಸಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದಕ್ಕೆ ಎಂಟಿಬಿ ನಾಗರಾಜ್, ಆರ್.ಶಂಕರ್, ಪಕ್ಷಕ್ಕಾಗಿ ತ್ಯಾಗ ಮಾಡಿದ ವಲ್ಲ್ಯಾಪುರೆ, ಪಕ್ಷ ಸಂಘಟನೆಯ ಸೇವೆಗಾಗಿ ಪ್ರತಾಪಸಿಂಹ ನಾಯಕ್ ಹಾಗೂ ವರಿಷ್ಠರಿಗೆ ನಿಷ್ಠೆಯಿಂದಿದ್ದ ಕಾಂಗ್ರೆಸ್​ನ ಬಿ.ಕೆ.ಹರಿಪ್ರಸಾದ್ ಹಾಗೂ ಜೆಡಿಎಸ್​ನ ಇಂಚರ ಗೋವಿಂದರಾಜ್ ‘ಹಿರಿಯರ ಮನೆ’ ಪ್ರವೇಶಿಸುವುದು ನಿಶ್ಚಿತವಾಗಿದೆ. ಬಿಜೆಪಿ, ಕಾಂಗ್ರೆಸ್ ವರಿಷ್ಠರು ಉಮೇದುವಾರರ ಆಯ್ಕೆ ವಿಷಯದಲ್ಲಿ ಆಶ್ಚರ್ಯಕರ ತೀರ್ಮಾನ ಕೈಗೊಂಡಿದ್ದು, ಕಾರ್ಯಕರ್ತರ ಊಹೆಯನ್ನು ನಿಜಗೊಳಿಸಿದ್ದಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಮೇಲ್ಮನೆ ಕನಸು ಭಗ್ನವಾಗಲಿದೆ ಎಂಬ ಸಂಶಯವೂ ದಿಟವಾಗಿದೆ.
ಜುಲೈ ಕೊನೇ ವಾರ ಸಂಪುಟ ವಿಸ್ತರಣೆ?:ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಎಂಎಲ್ಸಿಯಾದ ಬಳಿಕ ಬಿಎಸ್​ವೈ ಸಚಿವ ಸಂಪುಟ ಸೇರ್ಪಡೆಗೆ ದಾರಿ ಸುಗಮವಾಗಲಿದೆ. ಜೂ.22ರಿಂದ ಆಷಾಢ ಶುರುವಾಗಲಿರುವ ಕಾರಣ ಜುಲೈ ಅಂತ್ಯಕ್ಕೆ ಸಚಿವ ಸಂಪುಟ ವಿಸ್ತರಿಸಿ, ಈ ಇಬ್ಬರ ಜತೆಗೆ ಖಾಲಿ ಉಳಿದ ಎಲ್ಲ ಸ್ಥಾನಗಳನ್ನು ಸಿಎಂ ಭರ್ತಿ ಮಾಡುವ ಲೆಕ್ಕಾಚಾರಗಳಿವೆ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದು ಜುಲೈನಲ್ಲಿ ಒಂದು ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಬದಲಿಗೆ ಪುನಾರಚನೆ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಪಕ್ಷ ಸಂಘಟನೆ ಕೆಲಸ ಒಪ್ಪಿಸಲೆಂದು ಕೆಲವರನ್ನು ಕೈಬಿಟ್ಟು, ಪಕ್ಷ ಮೂಲದ ಕೆಲವು ಹಿರಿಯರಿಗೆ ಅವಕಾಶ ಕಲ್ಪಿಸುವ ಚಿಂತನೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಭರವಸೆ ಈಡೇರಿಕೆ
ಚಿಂಚೋಳಿ ಕ್ಷೇತ್ರದಲ್ಲಿ ಕೆಜೆಪಿಯಿಂದ ವಲ್ಲ್ಯಾಪುರೆ ಸ್ಪರ್ಧಿಸಿ ಕಾಂಗ್ರೆಸ್​ನ ಡಾ.ಉಮೇಶ ಜಾಧವ್ ವಿರುದ್ಧ ಪರಾಭವಗೊಂಡರು. 2018ರಲ್ಲೂ ಡಾ. ಜಾಧವ್ ವಿರುದ್ಧ ಸೋತಿದ್ದರು. ಬಿಎಸ್​ವೈ ಕಟ್ಟಾ ಬೆಂಬಲಿಗರಾಗಿರುವ ಇವರು, ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಣಿಸಲು ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ ಜಾಧವ್ ಅವರನ್ನು ಕಣಕ್ಕಿಳಿಸಿತು. ಈ ವೇಳೆ ಮಗನಿಗೆ ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಬೇಕೆಂಬ ಜಾಧವ್ ಬೇಡಿಕೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ಕ್ಷೇತ್ರ ತ್ಯಾಗ ಮಾಡಬೇಕು. ಮುಂದೆ ಮೇಲ್ಮನೆಗೆ ನೇಮಿಸುವುದಾಗಿ ನೀಡಿದ್ದ ಭರವಸೆಯನ್ನು ಬಿಎಸ್​ವೈ ಈಡೇರಿಸಿದ್ದಾರೆ.
ಪ್ರತಾಪಸಿಂಹ ನಾಯಕ್:ವಯಸ್ಸು: 61 ವರ್ಷ ಊರು: ಉಜಿರೆ, ಬೆಳ್ತಂಗಡಿ ವಿದ್ಯಾರ್ಹತೆ: ಕಾನೂನು ಪದವಿ, 4 ದಶಕಗಳಿಂದ ಆರ್​ಎಸ್​ಎಸ್ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ, 2014ರಲ್ಲಿ ವಿಭಾಗ ಸಹ ಪ್ರಭಾರಿ
ಸಂಘ ಪರಿವಾರ ನಿಷ್ಠೆ:ಸಂಘ ಪರಿವಾರ, ಜನಸಂಘದ ಸಂಪ್ರದಾಯದಲ್ಲಿ ಬೆಳೆದ ಪ್ರತಾಪ್​ಸಿಂಹ ನಾಯಕ್ ಹೆಸರು ಈ ಹಿಂದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಸಂದರ್ಭ ಅಭ್ಯರ್ಥಿಗಾಲು ಪ್ರಸ್ತಾವನೆಯಾಗಿದ್ದರೂ, ಅವಕಾಶ ದೊರೆತಿರಲಿಲ್ಲ. ಸಂಘ ಪರಿವಾರದ ಹಿನ್ನೆಲೆ, ವಿವಾದಗಳಿಲ್ಲದ ನಾಯಕತ್ವದ ಗುಣದ ನಾಯಕ್ ಕೊನೆಗೂ ಮೇಲ್ಮನೆ ಪ್ರವೇಶಿಸಲಿದ್ದಾರೆ.
ಎಂ.ಟಿ.ಬಿ. ನಾಗರಾಜ್:ವಯಸ್ಸು: 69 ವರ್ಷ ಊರು: ಮಹದೇವಪುರ, ಬೆಂಗಳೂರು ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ ಉದ್ಯೋಗ: ಕೃಷಿ ಮತ್ತು ವ್ಯಾಪಾರ, ಹೊಸಕೋಟೆ ಕ್ಷೇತ್ರದಿಂದ 2 ಬಾರಿ ಶಾಸಕ, ವಿಮಾನನಿಲ್ದಾಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಸಚಿವ
ಸುನೀಲ್ ವಲ್ಲ್ಯಾಪುರೆ:ವಯಸ್ಸು: 50 ವರ್ಷ ಊರು: ಚಿಂಚೋಳಿ, ಕಲಬುರಗಿ ವಿದ್ಯಾರ್ಹತೆ: ಬಿಇ ರಾಜಕೀಯ ಹಾದಿ: ಕಲಬುರಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜ್ಯ ಬಿಜೆಪಿ ಎಸ್​ಸಿ ಮೋರ್ಚಾ ಕಾರ್ಯದರ್ಶಿ, 2004ರಲ್ಲಿ ಶಹಬಾದ್, 2008ರಲ್ಲಿ ಚಿಂಚೋಳಿಯಿಂದ ಶಾಸಕ, 2008ರ ಬಿಜೆಪಿ ಸರ್ಕಾರದಲ್ಲಿ ಸಚಿವ
ಆರ್.ಶಂಕರ್:ವಯಸ್ಸು: 55 ವರ್ಷ ಊರು: ಕಾಚರಕನಹಳ್ಳಿ, ಬೆಂಗಳೂರು ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ ಉದ್ಯೋಗ: ರಿಯಲ್ ಎಸ್ಟೇಟ್, 2001ರಲ್ಲಿ ಬಿಬಿಎಂಪಿ ಉಪಮೇಯರ್, 2018ರಲ್ಲಿ ರಾಣಿಬೆನ್ನೂರು ಕ್ಷೇತ್ರದ ಶಾಸಕ, ಮಾಜಿ ಸಚಿವ
ಶಂಕರ್ ಭಾವುಕ:ಬಿ ಫಾರಂ ಪಡೆಯಲು ಬಿಜೆಪಿ ಕಚೇರಿಗೆ ಆಗಮಿಸಿದ್ದ ಆರ್.ಶಂಕರ್ ಭಾವುಕರಾಗಿ ಕಣ್ಣಲ್ಲಿ ನೀರು ತರಿಸಿಕೊಂಡರು. ರಾಣೆಬೆನ್ನೂರು ಕ್ಷೇತ್ರದ ಜನ ವಿಶ್ವಾಸದಿಂದ ಪಕ್ಷೇತರ ಶಾಸಕನನ್ನಾಗಿ ಗೆಲ್ಲಿಸಿದ್ದರು. ಅಂಥ ಕ್ಷೇತ್ರವನ್ನೇ ಒಂದು ಪಕ್ಷವನ್ನು ಅಧಿಕಾರಿಕ್ಕೆ ತರಲು ಧಾರೆ ಎರೆದೆ. ಮತ್ತೆ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಸಿಎಂ ಕೊಟ್ಟ ಮಾತನ್ನು ಉಳಿಸಿಕೊಂಡರು ಎಂದವರು ಹೇಳಿದರು.
ಇಂಚರ ಗೋವಿಂದರಾಜು:ವಯಸ್ಸು: 62 ಊರು: ಕೋಲಾರ ವಿದ್ಯಾರ್ಹತೆ: ಬಿಕಾಂ ಉದ್ಯೋಗ: ಗ್ರಾ್ಯನೈಟ್ ಉದ್ಯಮ ಹಾಗೂ ಕೃಷಿ 1985ರಲ್ಲಿ ಕೆಎಸ್​ಆರ್​ಟಿಸಿಯಲ್ಲಿ ಸಂಚಾರ ನಿಯಂತ್ರಣಾಧಿಕಾರಿ, 1996ರಲ್ಲಿ ನಿವೃತ್ತಿ, ಖಾಸಗಿ ಹಣಕಾಸು ಸಂಸ್ಥೆ, ಕೋಳಿ ಫಾರಂ, ಕಲ್ಯಾಣ ಮಂದಿರ, ಚಿತ್ರಮಂದಿರ ಮಾಲೀಕ, 2006ರಿಂದಲೂ ಎಚ್.ಡಿ.ದೇವೇಗೌಡರ ಮನೆಗೆ ಹತ್ತಿರ
ನಸೀರ್ ಅಹಮದ್:ವಯಸ್ಸು: 61ವರ್ಷ ಊರು: ಕೋಲಾರ ವಿದ್ಯಾರ್ಹತೆ: ಬಿಕಾಂ ಉದ್ಯೋಗ: ವ್ಯಾಪಾರ, 3 ಬಾರಿ ಎಂಎಲ್​ಸಿ, 2004ರಲ್ಲಿ ಸಣ್ಣ ಕೈಗಾರಿಕೆ ಸಚಿವ, ಪಕ್ಷದಲ್ಲಿ ಅನೇಕ ಹುದ್ದೆಗಳ ಜವಾಬ್ದಾರಿ
ಬಿ.ಕೆ.ಹರಿಪ್ರಸಾದ್:ವಯಸ್ಸು: 66 ವರ್ಷ ಊರು: ಬೆಂಗಳೂರು ವಿದ್ಯಾರ್ಹತೆ: ಬಿಕಾಂ ಉದ್ಯೋಗ: ರಾಜಕೀಯ ಮತ್ತು ಸಮಾಜ ಸೇವೆ, 1981ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, 1990ರಲ್ಲಿ ಮೊದಲ ಬಾರಿ ರಾಜ್ಯಸಭೆ ಸದಸ್ಯ, ಒಟ್ಟು ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆ. ಎಐಸಿಸಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೇರಿ 13 ರಾಜ್ಯಗಳ ಉಸ್ತುವಾರಿ ಹಾಗೂ ವಿವಿಧ ಹುದ್ದೆಗಳ ಜವಾಬ್ದಾರಿ ನಿರ್ವಹಣೆ
ಪಕ್ಷಕ್ಕಾಗಿ ದುಡಿದ ನನ್ನಂತಹ ಸಹಸ್ರಾರು ಮಂದಿ ಇದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಮುಂದೆ ಹೋಗಲು ಅವಕಾಶ ನೀಡುವಂಥ ಪಕ್ಷ ಯಾವುದಾದರೂ ಇದ್ದಲ್ಲಿ ಅದು ಬಿಜೆಪಿ ಮಾತ್ರ.
| ಪ್ರತಾಪ್​ಸಿಂಹ ನಾಯಕ್
ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ತ್ರಿಮೂರ್ತಿಗಳೇ ಕಾರಣ. ಸಿದ್ದರಾಮಯ್ಯ, ಕುಮಾರಸ್ವಾಮಿ ,ಡಿ.ಕೆ.ಶಿವಕುಮಾರ್ ಒಟ್ಟಿಗೆ ಸೇರಿ ನನ್ನನ್ನ ಸೋಲಿಸಿದ್ದರು. ವಿಶ್ವನಾಥ್ ಸೋಲಿಗೂ ಅವರೇ ಕಾರಣ. ಈಗ ಮತ್ತೆ ಅವಕಾಶ ಸಿಕ್ಕಿದೆ. ಜನರ ಸೇವೆ ಮಾಡುತ್ತೇನೆ.
| ಎಂ.ಟಿ.ಬಿ.ನಾಗರಾಜ್
ಗೋವಿಂದರಾಜು ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತ. ಕೋಲಾರ ಭಾಗದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗಿದೆ.
| ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನಾಯಕ
ಕುಮಾರಣ್ಣ ಜತೆ ನನ್ನ ಸಂಬಂಧ ಚೆನ್ನಾಗಿದೆ. ಅವರ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದೇನೆ. ಕರೆದು ಟಿಕೆಟ್ ಕೊಟ್ಟಿದ್ದಾರೆ. ನನಗೆ ಯಾವ ಹಿನ್ನೆಲೆ ಇಲ್ಲ, ಪ್ರಭಾವವೂ ಇಲ್ಲ. ನಾನೊಬ್ಬ ಸಾಮಾನ್ಯ ಪ್ರಜೆ.
| ಗೋವಿಂದರಾಜ್ ಜೆಡಿಎಸ್ ಅಭ್ಯರ್ಥಿ
1986ರಿಂದಲೂ ಕಾಂಗ್ರೆಸ್​ನಲ್ಲಿದ್ದೇನೆ. ಎನ್​ಎಸ್​ಯುುಐನಿಂದ ಬಂದವನು. ಶಾಸಕನಾಗಿ, ಎಂಎಲ್​ಸಿಯಾಗಿ ಕೆಲಸ ಮಾಡಿದ್ದೇನೆ. ಎರಡು ಭಾರಿ ಸ್ಥಳೀಯ ಚುನಾವಣೆಯಲ್ಲೂ ಗೆದ್ದಿದ್ದೆ. ಈಗ ಮತ್ತೊಮ್ಮೆ ಎಂಎಲ್​ಸಿ ಆಗಲು ಅವಕಾಶ ಸಿಕ್ಕಿದೆ. ರಾಜ್ಯದ ಜನರ ಪರ ಕೆಲಸ ಮಾಡುತ್ತೇನೆ.
| ನಸೀರ್ ಅಹ್ಮದ್ ಕಾಂಗ್ರೆಸ್ ಅಭ್ಯರ್ಥಿ
ನಾನು ನಿರೀಕ್ಷೆ ಮಾಡಿರಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವಕಾಶ ಕೊಟ್ಟಿದ್ದಾರೆ. ರಾಜ್ಯ ರಾಜಕಾರಣ ಬೆಂಗಳೂರಿನಿಂದ ನಡೆಯುತ್ತದೆ. ಕೇಂದ್ರದ ರಾಜಕಾರಣ ದೆಹಲಿಯಿಂದ ನಡೆಯುತ್ತದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕಳುಹಿಸಿದ್ದ ಪಟ್ಟಿಯನ್ನ ಗಮನಿಸಿ ಹೈಕಮಾಂಡ್ ತೀರ್ಮಾನ ಮಾಡಿದೆ.
| ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ
ಸುಮಾರು 270 ಅರ್ಜಿಗಳು ಬಂದಿದ್ದವು. ಎಲ್ಲವನ್ನೂ ಹೈ ಕಮಾಂಡ್​ಗೆ ಕಳುಹಿಸಿದ್ದೆವು. ಅಂತಿಮವಾಗಿ ಹೈಕಮಾಂಡ್ ಇಬ್ಬರನ್ನು ಆಯ್ಕೆ ಮಾಡಿದೆ. ಇಬ್ಬರೂ ಒಮ್ಮತದ ಅಭ್ಯರ್ಥಿಯೇ.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ಎಚ್.ವಿಶ್ವನಾಥ್ ಹೆಸರು ಇತ್ತು. ಆದರೆ, ಅಂತಿಮ ಕ್ಷಣದಲ್ಲಿ ಕೈ ಬಿಡಲಾಗಿದೆ. ಯಾವ ಕಾರಣಕ್ಕೆ ಕೈಬಿಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು. ವಿಶ್ವನಾಥ್ ಜೆಡಿಎಸ್ ಸೇರುವ ಮುನ್ನ ಅವರಿಗೆ ಯಾವುದೇ ಅಧಿಕಾರ ಇರಲಿಲ್ಲ. ಹಾಗಾಗಿ ಈಗಲೂ ಅವರು ಹತಾಶರಾಗುವ ಅವಶ್ಯಕತೆ ಇಲ್ಲ.
| ವಿ.ಶ್ರೀನಿವಾಸಪ್ರಸಾದ್ ಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
