|ಶಿವಾನಂದ ತಗಡೂರುಬೆಂಗಳೂರು
ಕೇಂದ್ರ ಗೃಹ ಸಚಿವ ಅಮಿತ್ ಷಾ ಬಂದು ಹೋದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಈ ಬಿರುಗಾಳಿಯಲ್ಲಿ ಸಂಪುಟಕ್ಕೂ ಸರ್ಜರಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವಾಕಾಂಕ್ಷಿಗಳ ಪಟ್ಟಿ ಜತೆಗೆ ವಾರದಲ್ಲಿ ದೆಹಲಿಗೆ ತೆರಳಲಿದ್ದಾರೆ. ವರಿಷ್ಠರ ಮುದ್ರೆ ಒತ್ತಿಸಿಕೊಂಡು ಬಂದ ಬಳಿಕ ಸಂಪುಟಕ್ಕೆ ಸರ್ಜರಿಗೆ ವೇದಿಕೆ ಸಿದ್ಧವಾಗಲಿದೆ.
ಕನಿಷ್ಠ 10 ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಖಾಲಿ ಇರುವ ನಾಲ್ಕು ಸ್ಥಾನಗಳಿಗೂ ಯಾರನ್ನೆಲ್ಲ ತರಬೇಕು ಎನ್ನುವ ನಿಟ್ಟಿನಲ್ಲೂ ಚರ್ಚೆ ತೀವ್ರಗೊಂಡಿದೆ. ಏತನ್ಮಧ್ಯೆ ನಿಗಮ ಮಂಡಳಿಗಳಿಗೆ ಹೊಸ ನೇಮಕ ಪ್ರಕ್ರಿಯೆಗೆ ಒಂದೆರಡು ದಿನದಲ್ಲಿಯೇ ಚಾಲನೆ ನೀಡಲು ಸಿಎಂ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳು ಖಚಿತಪಡಿಸಿವೆ. ಉತ್ತರ ಭಾರತದ ಚುನಾವಣೆಗಳ ಬಳಿಕ ದಕ್ಷಿಣ ಭಾರತದ ಕಡೆಗೆ ಗಮನ ನೀಡಿರುವ ಷಾ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶಪಥ ಮಾಡಿದ್ದಾರೆ. ಈ ನಿಟ್ಟಿನಲ್ಲಿಯೇ ಕಸರತ್ತು ಪ್ರಾರಂಭಿಸಿದ್ದಾರೆ.
ಬಜೆಟ್ ಅಧಿವೇಶನ ಮುಗಿಯಲಿ ಎನ್ನುವ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಸಂಪುಟ ಕಸರತ್ತಿನ ತಾಲೀಮಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲೆಕ್ಕಾಚಾರ ಹಾಕಲಾಗಿದೆ. ಜೊಳ್ಳುಗಳನ್ನು ಬದಿಗಿರಿಸಿ, ಬಲಿಷ್ಠ ಸಂಪುಟ ರೂಪಿಸುವತ್ತ ಹೈಕಮಾಂಡ್ ತೀರ್ವನಿಸಿದೆ. ಸಂಪುಟದಲ್ಲೂ ಹೊಸತನ ತರುವ ಮೂಲಕ ಸರ್ಕಾರದ ವರ್ಚಸ್ಸು ಬದಲಿಸುವುದು ಬಿಜೆಪಿ ಪಾಲಿಗಿರುವ ಪ್ರಧಾನ ಅಸ್ತ್ರ. ಇದನ್ನು ಈಗಲೇ ಪ್ರಯೋಗಿಸುವ ಅವಕಾಶ ಕಳೆದುಕೊಳ್ಳಲು ವರಿಷ್ಠರೂ ಸಿದ್ಧರಿಲ್ಲ.
ಬೊಮ್ಮಾಯಿಗೆ ಸಾಥ್:ಸಿಎಂ ಬೊಮ್ಮಾಯಿ ನಾಯಕತ್ವ ಅಚಲ ಎನ್ನುವುದನ್ನು ವರಿಷ್ಠರು ಸ್ಪಷ್ಟಪಡಿಸಿದ ಬಳಿಕ ಈಗ ಎಲ್ಲರ ಚಿತ್ತ ಸಂಪುಟ ಸರ್ಜರಿಯತ್ತ ಹರಿದಿದೆ. ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟು ನಾಲ್ಕು ಅಧಿವೇಶನಗಳು ಯಶಸ್ವಿಯಾಗಿ ನಡೆದಿದೆ. ತೆರಿಗೆ ಹೊರೆಯಿಲ್ಲದೆ ನೀಡಿದ ಬಜೆಟ್ ಸೇರಿ ಹಲವು ವಿಷಯಗಳ ಬಗ್ಗೆ ಹೈಕಮಾಂಡ್​ಗೆ ತಲುಪಿರುವ ವರದಿಗಳು ಬೊಮ್ಮಾಯಿಗೆ ವರದಾನವಾಗಿವೆ. ಅಮಿತ್ ಷಾ ಅವರ ರಾಜ್ಯ ಪ್ರವಾಸದ ಬಳಿಕ ಬೊಮ್ಮಾಯಿ ನಾಯಕತ್ವಕ್ಕೆ ಇನ್ನಷ್ಟು ಮೆರಗು ಬಂದಿದೆ.
ನಿಗಮ ಮಂಡಳಿ ಪಟ್ಟಿ ರೆಡಿ:ಯಡಿಯೂರಪ್ಪ ಸಿಎಂ ಆಗಿದ್ದಾಗ ನೇಮಕ ಮಾಡಿದ್ದ ನಿಗಮ ಮಂಡಳಿಗಳಿಗೂ ಹೊಸ ನೇಮಕಾತಿ ಮಾಡಲು ಪಟ್ಟಿ ಸಿದ್ಧವಾಗಿದೆ. ಯಾವ ಮಂಡಳಿಗೆ ಯಾರನ್ನು ತರಬೇಕು ಎನ್ನುವ ನಿಟ್ಟಿನಲ್ಲಿ ಪಕ್ಷ ಈಗಾಗಲೇ ಒಂದು ಸುತ್ತು ಸಿಎಂ ಜತೆಯೂ ಚರ್ಚೆ ನಡೆಸಿದೆ. ಬಿಜೆಪಿ ಕಚೇರಿಗೆ ಸಿಎಂ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾವಾರು ಪಟ್ಟಿ ಕೊಡಲಾಗಿದೆ. ಈ ಪಟ್ಟಿಯಲ್ಲಿ ಪಕ್ಷದ ಮುಖಂಡರು, ತಳಮಟ್ಟದ ಕಾರ್ಯಕರ್ತರ ಹೆಸರುಗಳಿವೆ. ಇನ್ನು ಪಕ್ಷದ ಸಂಘಟನೆ, ಆಡಳಿತ ದೃಷ್ಟಿಯಿಂದ ಶಾಸಕರು ಮತ್ತು ಮಾಜಿ ಶಾಸಕರನ್ನು ನಿಗಮ ಮಂಡಳಿ ಹುದ್ದೆಗಳಿಗೆ ನೇಮಕ ಮಾಡುವ ಅಧಿಕಾರವನ್ನು ಸಿಎಂಗೆ ಬಿಡಲಾಗಿದೆ.
ಶಾಸಕರ ಸ್ಥಾನ ಬದಲಿಲ್ಲ:ಈಗಾಗಲೇ ನಿಗಮ ಮಂಡಳಿಗಳಿಗೆ ನೇಮಕಗೊಂಡಿರುವ ಶಾಸಕರ ಸ್ಥಾನಮಾನ ಬದಲಿಸದಿರಲು ನಿರ್ಧರಿಸಲಾಗಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರಿಗೆ ಅಲ್ಲಿ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಯಲ್ಲಿಯೇ ಸ್ಥಾನ ಗಟ್ಟಿ ಎನ್ನುವುದೂ ಸತ್ಯ. ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರಾಗಿರುವ ಮೂರ್ನಾಲ್ಕು ಜನರಿಗೆ ಸಚಿವ ಸ್ಥಾನ ಸಿಕ್ಕರೂ ಆಶ್ಚರ್ಯವಿಲ್ಲ. ಖಾಲಿ ಸ್ಥಾನಗಳಿಗೆ ಬೇರೆ ಶಾಸಕರನ್ನು ತಂದು ಸಮಾಧಾನಿಸುವ ಲೆಕ್ಕಾಚಾರವೂ ಇದೆ.
ಗೆಲುವಿನ ಹುಮ್ಮಸ್ಸು:ಪಂಚರಾಜ್ಯ ಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ವರಿಷ್ಠರು ರಾಜ್ಯದ ಸಂಪುಟ ವಿಚಾರದಲ್ಲಿ ಖಡಕ್ ಆಗಿಯೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆಂದು ಉನ್ನತ ಮೂಲಗಳು ಖಚಿತಪಡಿಸಿವೆ.
ವಲಸಿಗರ ಬಗ್ಗೆ ಎಚ್ಚರ:ವಲಸಿಗರ ಪೈಕಿ ನಾಲ್ಕೈದು ಜನ ಮರಳಿ ಕಾಂಗ್ರೆಸ್​ಗೆ ಹೋಗಲಿದ್ದಾರೆಂಬ ಗುಸುಗುಸು ಬಲವಾಗಿದೆ. ಕಾಂಗ್ರೆಸ್ ನಾಯಕರೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾಹಿತಿ ವರಿಷ್ಠರಿಗೆ ತಲುಪಿದೆ. ವಲಸಿಗರಲ್ಲಿ ಅರ್ಧದಷ್ಟು ಜನರು ಪಕ್ಷಕ್ಕೆ ಹೊಂದಿಕೊಂಡಿದ್ದು, ಇನ್ನುಳಿದವರು ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಅದಕ್ಕಾಗಿಯೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲ ಸಾಧ್ಯತೆಗಳನ್ನು ದೆಹಲಿ ನಾಯಕರು ಲೆಕ್ಕಾಚಾರ ಹಾಕಲಿದ್ದಾರೆ.
ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮಿತ್ ಷಾ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನದ ಬಗ್ಗೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಂಪುಟ ವಿಷಯ ಸಿಎಂ ವಿವೇಚನೆಗೆ ಬಿಡಲಾಗಿದೆ. ಹೈಕಮಾಂಡ್ ಜತೆ ಸಮಾಲೋಚಿಸಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ.
|ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ನಿಗಮ ಮಂಡಳಿಗಳ ಪಟ್ಟಿಯನ್ನು ಪಕ್ಷ ಮುಖ್ಯಮಂತ್ರಿಗೆ ನೀಡಿದೆ. ಈ ಬಗ್ಗೆ ಸಮಾಲೋಚಿಸಿ ಸಿಎಂ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತಾರೆ. ಸಚಿವ ಸಂಪುಟ ವಿಷಯವೂ ಚರ್ಚೆಯಲ್ಲಿದೆ. ಈ ಬಗ್ಗೆ ಹೈಕಮಾಂಡ್ ಜತೆ ಸಮಾಲೋಚಿಸಿ, ಸಿಎಂ ತೀರ್ವನಿಸುತ್ತಾರೆ.
|ಎನ್.ರವಿಕುಮಾರ್ಬಿಜೆಪಿ ಪ್ರಧಾನ ಕಾರ್ಯದರ್ಶಿ
ಶೀಘ್ರವೇ ದೆಹಲಿಗೆ ತೆರಳುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ. ಮೇಕೆದಾಟು ನೀರಾವರಿ ಯೋಜನೆ ವಿಷಯದಲ್ಲಿ ಇತ್ತೀಚೆಗಷ್ಟೇ ಸರ್ವ ಪಕ್ಷಗಳ ಸಭೆ ನಡೆಸಿದ್ದ ಸಿಎಂ, ಈ ಬಗ್ಗೆ ಭಾನುವಾರ ಅಡ್ವೋಕೇಟ್ ಜನರಲ್ ಜತೆ ರ್ಚಚಿಸಿದರು. ದೆಹಲಿಯಲ್ಲಿ ಜಲ ಶಕ್ತಿ ಸಚಿವರನ್ನು ಭೇಟಿಮಾಡಬೇಕಾದ ಸಂದರ್ಭದಲ್ಲಿ ಪ್ರಸ್ತಾಪಿಸಬೇಕಾದ ವಿಚಾರ, ಅಲ್ಲಿನ ಕಾನೂನು ತಂಡಕ್ಕೆ ನೀಡಬೇಕಾದ ಅಭಿಪ್ರಾಯಗಳ ಬಗ್ಗೆ ಮಾತುಕತೆ ನಡೆದಿದೆ. ಏತನ್ಮಧ್ಯೆ ಸೋಮವಾರ ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮಗಳ ಸಭೆ ನಡೆಸಲಿದ್ದಾರೆ. ಎರಡು ದಿನದ ಪ್ರವಾಸದಲ್ಲಿ ಒಂದು ದಿನ ಜಲ ವಿವಾದ ಮತ್ತು ಬಾಕಿ ಇರುವ ರಾಜ್ಯದ ಯೋಜನೆ ಕುರಿತು ಕೆಲ ಸಚಿವರ ಭೇಟಿ ಹಾಗೂ ಮತ್ತೊಂದು ದಿನ ರಾಜಕೀಯ ನಿರ್ಧಾರಗಳ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಭೇಟಿ ನಡೆಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರ ಸುಸೂತ್ರವಾಗಿ ನಡೆಯಬೇಕಾದರೆ, ಯಾವುದೇ ಹಂತದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎನ್ನುವ ಸ್ಪಷ್ಟ ಅರಿವು ಸಿಎಂ ಬೊಮ್ಮಾಯಿ ಅವರಿಗಿದೆ. ಆ ಕಾರಣಕ್ಕಾಗಿಯೇ ಅವರು ಸರ್ಕಾರದ ಹಲವು ತೀರ್ವನಗಳ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಸಂಪುಟ ಸಂದರ್ಭದಲ್ಲಿಯೂ ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡಬೇಕು ಎನ್ನುವ ಅಂಶವನ್ನು ಹೈಕಮಾಂಡ್​ಗೆ ಮನದಟ್ಟು ಮಾಡಿಕೊಡಲು ಸಿಎಂ ಮುಂದಾಗಿದ್ದಾರೆ. ಬಿಎಸ್​ವೈ ವಿರುದ್ದ ಧ್ವನಿ ಎತ್ತಿದವರಿಗೆ ಈ ಬಾರಿ ಸ್ಥಾನ ಸಿಗಬಹುದು. ಹಾಗೆಯೇ ಬಿಎಸ್​ವೈ ಅಸಮಾಧಾನ ತಣಿಸಲು ಅವರ ಪುತ್ರ ವಿಜಯೇಂದ್ರಗೂ ಮಣೆ ಹಾಕಬಹುದು ಎನ್ನುವ ಚರ್ಚೆಯೂ ಇದೆ. ಬಿಜೆಪಿ ಅಧ್ಯಕ್ಷ ಹುದ್ದೆಗೆ ಯಂಗ್ ಅಂಡ್ ಎನರ್ಜಿಟಿಕ್ ವಿಜಯೇಂದ್ರ ಅವರನ್ನು ತರಬೇಕು ಎನ್ನುವ ಬಿಎಸ್​ವೈ ಬೆಂಬಲಿಗರ ಒತ್ತಡ ಹೆಚ್ಚಿರುವುದನ್ನು ಪಕ್ಷ ಲಘುವಾಗಿ ಪರಿಗಣಿಸಿಲ್ಲ. ಪಕ್ಷ, ಸರ್ಕಾರದ ಸಮತೋಲನ ಕಾಯ್ದುಕೊಳ್ಳಲು ಹೆಜ್ಜೆ ಇಡಬೇಕು ಎನ್ನುವ ಹೈಕಮಾಂಡ್ ಪಾಠದಿಂದ ಸಿಎಂ ಕೂಡ ಎಚ್ಚರಿಕೆ ಹೆಜ್ಜೆಯನ್ನೇ ಇಡುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fourteen =
Remember me
