ರಾಮನಗರ:ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಪದೇಪದೇ ಮತಾಂತರದ ಕೂಗು ಕೇಳಿಬರುತ್ತಿದೆ. ಕನಕಪುರ ಭಾಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಆರೋಪಗಳು ಈಗ ಚನ್ನಪಟ್ಟಣ ಭಾಗಕ್ಕೂ ವ್ಯಾಪಿಸಿದ್ದು ಅನಧಿಕೃತ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಿಕೊಂಡು ಹಿಂದೂ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಯತ್ನಗಳು ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕ್ರಿಶ್ಚಿಯನ್ ಮಿಷನರಿಗಳಿಂದ ಹಿಂದೂಗಳನ್ನ ಮತಾಂತರಗೊಳಿಸಲು ಪ್ರಚೋದನೆ ಮಾಡಲಾಗ್ತಿದೆ ಎಂಬ ಕೂಗು ಹೊಸದೇನಲ್ಲ, ರಾಮನಗರ ಜಿಲ್ಲೆಯಲ್ಲಿ ಈ ಕೂಗು ಕೊಂಚ ಹೆಚ್ಚಾಗಿಯೇ ಇದೆ. ಕಪಾಲಿ ಬೆಟ್ಟದಲ್ಲಿ ಯೇಸು ಶಿಲುಬೆ ನಿರ್ಮಾಣ ವಿಚಾರದಲ್ಲಿ ಆರಂಭವಾದ ವಿವಾದ ಇದೀಗ ಚನ್ನಪಟ್ಟಣ ಭಾಗಕ್ಕೂ ವ್ಯಾಪಿಸಿದೆ. ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಒಂದರಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿ ಪ್ರಾರ್ಥನೆ ಮಾಡುವ ಮುಖಾಂತರ ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಜೊತೆಗೆ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿವರ್ಧಕ ಬಳಸಿಕೊಂಡು ಪ್ರಾರ್ಥನೆ ಮಾಡಲಾಗುತ್ತಾ ಇದೆ. ಇದರಿಂದ ಪಕ್ಕದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಫಾರ್ಮ್ ಹೌಸ್ ನಲ್ಲಿ‌ ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ನಡೆಯುತ್ತಿದೆ ಎಂದು ನಿನ್ನೆ ಫಾರ್ಮ್ ಬಳಿ ಜಮಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರು ಕ್ರೈಸ್ತ ಮುಖಂಡ ಡೆನ್ನಿಸ್ ಜಾರ್ಜ್​ನನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಲಿಖಿತ ದೂರು ನೀಡುವಂತೆ ಸೂಚಿಸಿದ್ದಾರೆ. ಈ‌ ಹಿನ್ನೆಲೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಹಿಂದೂಜಾಗರಣ ವೇದಿಕೆ ಜೊತೆಗೂಡಿ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.
ಕ್ರೈಸ್ತ ಮುಖಂಡ ಡೆನ್ನಿಸ್ ಜಾರ್ಜ್ ಮತ್ತು ಆತನ ಸಹಚರರು ಕನ್ನಮಂಗಲ ಗ್ರಾಮದ ಸರ್ವೆ ನಂ.253ರಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನ ಕರೆತಂದು ಮನಪರಿವರ್ತನೆಗೆ ಯತ್ನಸುತ್ತಿದ್ದಾರೆ. ಡಿಜೆ ಮಾದರಿಯ ಧ್ವನಿವರ್ಧಕ ಬಳಸಿಕೊಂಡು ಪ್ರಾರ್ಥನೆ ಮಾಡುವುದರಿಂದ ಗ್ರಾಮಸ್ಥರಿಗೆ ಕಿರಿಕಿರಿ ಆಗುತ್ತಿದೆ. ಅಲ್ಲದೇ ಗೋಮಾಳದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಯೇಸುವಿನ ಶಿಲಬೆಗಳನ್ನ ಸ್ಥಾಪಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ‌.
ಒಟ್ಟಾರೆ ರಾಮನಗರ ಜಿಲ್ಲೆಯಾದ್ಯಂತ ಪದೇಪದೇ ಈ ರೀತಿಯ ಆರೋಪಗಳು ಕೇಳಿಬರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆಯನ್ನ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
Sign in to your account
Please enter an answer in digits:twenty − seventeen =
Remember me
