| ರಮೇಶ ದೊಡ್ಡಪುರ ಬೆಂಗಳೂರು
ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದ್ದರೂ, ಅತೀ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿರುವ ದೇಶದ ಇತರ 10 ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಪ್ರಕರಣಗಳ ಬೆಳವಣಿಗೆ ಸಂಖ್ಯೆ ಅತ್ಯಂತ ನಿಧಾನವಾಗಿರುವುದು ನೆಮ್ಮದಿಯ ಸಂಗತಿ.
ದೇಶದ 16 ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಆ ಪೈಕಿ 11 ರಾಜ್ಯಗಳಲ್ಲಿ 500ರ ಗಡಿ ದಾಟಿದೆ. ಇತರ 10 ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ 100ರಿಂದ 500 ಪ್ರಕರಣಗಳವರೆಗಿನ ಬೆಳವಣಿಗೆಯ ವೇಗವನ್ನು ಗಣನೀಯವಾಗಿ ತಗ್ಗಿಸುವಲ್ಲಿ ಯಶಸ್ಸು ಕಂಡಿದೆ. ರಾಜ್ಯದಲ್ಲಿ ಮಾರ್ಚ್ 9ಕ್ಕೆ ಮೊದಲ ಪ್ರಕರಣ ದಾಖಲಾಗಿ ಮಾ.31ಕ್ಕೆ ಅಂದರೆ 22 ದಿನದಲ್ಲಿ ಶತಕಕ್ಕೆ ಏರಿತ್ತು. ಅದಾದ 25 ದಿನ ಬಳಿಕ ಅಂದರೆ, ಏ. 25ರಂದು (ಒಟ್ಟಾರೆ 47 ದಿನ) 500 ಪ್ರಕರಣಗಳ ಗಡಿ ದಾಟಿತ್ತು.
ಬೇರೆ 10 ರಾಜ್ಯಗಳ ಕುರಿತು ಹೇಳುವುದಾದರೆ, ಮೊದಲ ಪ್ರಕರಣದಿಂದ 100ನೇ ಪ್ರಕರಣಗಳ ನಡುವೆ 30 ದಿನಗಳ ಅಂತರ ಹೊಂದಿದ್ದ ದೆಹಲಿ, ನಂತರ ನಾಲ್ಕೇ ದಿನದಲ್ಲಿ 500 ಪ್ರಕರಣಕ್ಕೆ ಜಿಗಿದಿದೆ. ತಮಿಳು ನಾಡು ಕೇವಲ 5 ದಿನಗಳಲ್ಲಿ 100 ಕೇಸ್​ಗಳಿಂದ 500 ಪ್ರಕರಣಗಳಿಗೆ ಜಿಗಿತ ಕಂಡಿದೆ. ತೆಲಂಗಾಣ, ಮಧ್ಯಪ್ರದೇಶ ಮತ್ತು ಗುಜರಾತ್​ಗಳು ತಲಾ 9 ದಿನಗಳ ಅವಧಿಯಲ್ಲಿ 100ರಿಂದ 500ಕ್ಕೇರಿವೆ. ಮಹಾರಾಷ್ಟ್ರ 10, ರಾಜಸ್ಥಾನ 9, ಆಂಧ್ರ ಪ್ರದೇಶ 12, ಉತ್ತರ ಪ್ರದೇಶ 14, ಪಶ್ಚಿಮ ಬಂಗಾಳದಲ್ಲಿ 16 ದಿನಗಳ ಅವಧಿಯಲ್ಲಿ ಸೋಂಕು ಪ್ರಕರಣಗಳು 100ರಿಂದ 500ಕ್ಕೇರಿವೆ. ಇದಕ್ಕೆ ತಾಳೆ ಹಾಕಿದರೆ, ಕರ್ನಾಟಕ ಸೋಂಕು ಬೆಳವಣಿಗೆಯನ್ನು 25 ದಿನಗಳಿಗೆ ವಿಸ್ತರಿಸುವ ಮೂಲಕ ಗಮನ ಸೆಳೆದಿದೆ ಎಂದೇ ಹೇಳಬೇಕು. ಭಾನುವಾರದ 3 ಹೊಸ ಪ್ರಕರಣ ಸೇರಿ ಕರ್ನಾಟಕದಲ್ಲಿ ಸದ್ಯ 503 ಸೋಂಕಿತರಿದ್ದರೂ, ಸೇಫ್ ಝೋನ್​ನಲ್ಲಿದೆ ಎನ್ನಬಹುದು ಸರ್ಕಾರ ಕೈಗೊಂಡ ವಿವಿಧ ಕಟ್ಟುನಿಟ್ಟಿನ ಕ್ರಮಗಳು, ವೈದ್ಯಕೀಯ ಮತ್ತಿತರ ಅತ್ಯಗತ್ಯ ಸೇವೆಗಳ ಸಿಬ್ಬಂದಿ ಪರಿಶ್ರಮ ಫಲ ನೀಡುತ್ತಿರುವ ಮುನ್ಸೂಚನೆ ಇದಾದರೂ ಮುಂದಿನ ಒಂದೆರಡು ವಾರದ ಸಂಯಮವೇ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬಲ್ಲದು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಆ ಎರಡು ವಾರ್ಡ್​ಗಳ ಆಘಾತ: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏ.20ರಂದು 400ರ ಗಡಿ ದಾಟಿತ್ತು. ಅಲ್ಲಿವರೆಗೆ ಪ್ರತಿದಿನ ಸರಾಸರಿ 9.7ರಂತೆ ಸೋಂಕಿತರು ಪತ್ತೆಯಾಗುತ್ತಿದ್ದರು. ಅದೇ ವೇಗದಲ್ಲಿ ಮುಂದುವರಿದಿದ್ದರೆ 51 ದಿನದಲ್ಲಿ ಅಂದರೆ ಏಪ್ರಿಲ್ ಅಂತ್ಯಕ್ಕೆ 500 ತಲುಪಬಹುದಿತ್ತು. ಆದರೆ ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಮತ್ತೆ ಮತ್ತೆ ಪತ್ತೆಯಾಗುತ್ತಿರುವ ಪ್ರಕರಣಗಳಿಂದಾಗಿ ವೇಗ ತುಸು ಹೆಚ್ಚಳವಾಗಿದೆ. ಏ.20ರಿಂದ 25ರವರೆಗೆ 6 ದಿನದಲ್ಲಿ ಪ್ರತಿದಿನ 18.3ರ ಸರಾಸರಿಯಲ್ಲಿ 110 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದಾಗಿ ಪ್ರತಿದಿನದ ಸರಾಸರಿ ಸೋಂಕಿತರ ಸಂಖ್ಯೆ 10.6ಕ್ಕೆ ಏರಿಕೆಯಾಗಿದೆ. ಆದರೂ ಈ ಪ್ರಕರಣಗಳಲ್ಲಿ ಸೋಂಕಿತರು, ಸಂರ್ಪತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿರುವುದರಿಂದ ಇನ್ನು ಮುಂದೆ ಹರಡುವುದಿಲ್ಲ ಎಂಬ ಭರವಸೆ ಅಧಿಕಾರಿಗಳದ್ದು.
ಕೇರಳದಲ್ಲಿ ಜ.30ರಂದು ದೇಶದ ಮೊದಲ ಸೋಂಕಿತ ಪತ್ತೆಯಾಗಿದ್ದ. ಬಳಿಕ ಆ ರಾಜ್ಯ ತೆಗೆದುಕೊಂಡ ಹಲವು ಕಟ್ಟು ನಿಟ್ಟಿನ ಕ್ರಮಗಳಿಂದಾಗಿ 56 ದಿನದ ಬಳಿಕ ಸೋಂಕಿತರ ಸಂಖ್ಯೆ 100ರ ಗಡಿ ತಲುಪಿತ್ತು. 88 ದಿನಗಳ ಬಳಿಕವೂ 457 ಪ್ರಕರಣಗಳಿಗೆ ಸೀಮಿತ ಗೊಳಿಸಿರುವುದು ಮಹತ್ಸಾಧನೆಯೇ ಸರಿ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
