ಬೆಂಗಳೂರು:ದೇಶದ ಹಲವೆಡೆ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ರಾಜ್ಯದಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ. ಜೂನ್​ನಲ್ಲಿ ಕೋವಿಡ್ ನಾಲ್ಕನೇ ಅಲೆ ಸಾಧ್ಯತೆ ಬಗ್ಗೆ ತಜ್ಞರ ಹೇಳಿಕೆಗೆ ಪೂರಕವೆಂಬಂತೆ ಇಲ್ಲಿಯೂ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ಕಳೆದ ಒಂದು ವಾರದಲ್ಲಿ ಬೆಂಗಳೂರು ನಗರ ಸೇರಿ ಏಳು ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ದರ ಏರಿಕೆಯಾಗಿದೆ. ಈ ಪೈಕಿ ರಾಜ್ಯದ ಒಟ್ಟು ಸೋಂಕು ಪ್ರಮಾಣ ದರ ಶೇ.1.13ಕ್ಕಿಂತ ಬೆಂಗಳೂರಿನಲ್ಲಿ ಹೆಚ್ಚು ಅಂದರೆ ಶೇ.1.64 ದಾಖಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,623ಕ್ಕೆ ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 2,033 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರೊಂದರಲ್ಲೇ 1,939 ಪ್ರಕರಣಗಳು ದೃಢಪಟ್ಟಿವೆ. ಜತೆಗೆ ಮೈಸೂರು (ಶೇ.0.94), ಉಡುಪಿ (ಶೇ.0.81), ದಕ್ಷಿಣಕನ್ನಡ (ಶೇ.0.78), ಚಿಕ್ಕಮಗಳೂರು (ಶೇ.0.73), ಶಿವಮೊಗ್ಗ (ಶೇ.0.68) ಹಾಗೂ ಬಳ್ಳಾರಿ (ಶೇ.0.59)ಯಲ್ಲಿ ಸೋಂಕು ಪ್ರಮಾಣ ದರ ಏರಿಕೆಯಾಗಿದೆ.
ಉಳಿದ ಜಿಲ್ಲೆಗಳಲ್ಲಿ ಶೇ.0.40ಗಿಂತ ಕಡಿಮೆ ಪ್ರಕರಣಗಳು ವರದಿಯಾಗಿದೆ.ಸಮಾಧಾನದ ಸಂಗತಿ ಎಂದರೆ ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಶೂನ್ಯವಾಗಿದೆ.
ಎರಡು ವಾರಗಳು ನಿರ್ಣಾಯಕ:ಸೋಂಕು ಪ್ರಕರಣಗಳ ಏರಿಕೆ ಬೆನ್ನಲ್ಲೇ ತಜ್ಞರು ಮುಂದಿನ ಎರಡು ವಾರ ನಿರ್ಣಾಯಕ ಎಂದು ಎಚ್ಚರಿಸಿದ್ದಾರೆ. ಸದ್ಯ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಶೇ.10- 15 ಮಂದಿಯಲ್ಲಿ ಮಾತ್ರ ಶೀತ ಜ್ವರ ಲಕ್ಷಣಗಳು ಕಂಡು ಬರುತ್ತಿವೆ. ಸೋಂಕಿನ ತೀವ್ರತೆ ಕಡಿಮೆ ಇದ್ದರೂ, ಹೃದ್ರೋಗ, ಶ್ವಾಸಕೋಶದ ತೊಂದರೆ, ಮಧುಮೇಹ ಸೇರಿ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ನಿರ್ಲಕ್ಷಿಸದೆ ಸೋಂಕು ಲಕ್ಷಣ ಕಂಡುಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜತೆಗೆ ನಿಯಮಗಳನ್ನು ಪಾಲಿಸಬೇಕು ಎನ್ನುತ್ತಾರೆ ತಜ್ಞರು.
ದಂಡ ವಿಧಿಸಲು ಶಿಫಾರಸು:ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸಬೇಕು. ನಿಯಮ ಪಾಲನೆಗೆ ಒಂದು ವಾರ ಗಡುವು ನೀಡಬೇಕು. ನಂತರ ಯಾರು ಪಾಲನೆ ಮಾಡುವುದಿಲ್ಲವೋ ಅಂತಹವರ ವಿರುದ್ಧ ವಿಪ್ಪತ್ತು ನಿರ್ವಹಣಾ ಕಾಯ್ದೆ ಅನ್ವಯ ದಂಡ ವಿಧಿಸಬೇಕು ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮುನ್ನೆಚ್ಚರಿಕೆ ಡೋಸ್ ಅರಿವು ಮೂಡಿಸಿ:ಸದ್ಯದ ಪರಿಸ್ಥಿತಿಯಲ್ಲಿ ವೃದ್ಧರು ಹಾಗೂ ಅನಾರೋಗ್ಯಪೀಡಿತರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಕೋವಿಡ್ ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಾಜ್ಯದಲ್ಲಿ ಶೇ.25 ಮಾತ್ರವೇ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. ಈ ಬಗ್ಗೆ ಅರಿವು ಮೂಡಿಸಿ ಎಲ್ಲರಿಗೂ ಲಸಿಕೆ ಒದಗಿಸಬೇಕು. ಹಾಗೆಯೇ ಮಕ್ಕಳ ಲಸಿಕೆ ವಿತರಣೆಯಲ್ಲೂ ಹಿನ್ನಡೆಯಾಗಿರುವ ಕಾರಣ ಈ ಬಗ್ಗೆ ಪಾಲಕರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದೆ.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ನಂತರ ಹೊಸ ತಳಿ ಪತ್ತೆಯಾಗಿಲ್ಲ. ಆದರೆ ಸಂಭಾವ್ಯ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಶೇ.2 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ಸೋಂಕಿತರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲು ಸೂಚಿಸಲಾಗಿದೆ.
|ಡಾ.ಎಂ.ಕೆ. ಸುದರ್ಶನ್ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ
ವಾರದ ಸೋಂಕು ಪ್ರಮಾಣ ದರ:ರಾಜ್ಯದಲ್ಲಿ ಜೂ.1ರಿಂದ ದಿನದ ಸೋಂಕು ಪ್ರಮಾಣ ದರ ಏರುಮುಖವಾಗಿದ್ದು, ಜೂ.1ರಂದು ಶೇ. 1.46, ಜೂ.2ರಂದು ಶೇ.2.07, ಜೂ.3ರಂದು ಶೇ.0.94, ಜೂ.4ರಂದು ಶೇ. 1.41, ಜೂ.5ರಂದು ಶೇ. 1.92, ಜೂ. 6ರಂದು ಶೇ.1.92 ಹಾಗೂ ಜೂ.7ರಂದು ಶೇ.2.11 ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಕೇವಲ ಒಂದು ಸಾವು ಸಂಭವಿಸಿದ್ದು, 1,410 ಸೋಂಕಿತರು ಚೇತರಿಸಿಕೊಂಡಿದ್ದಾರೆ.
2,623 ಸಕ್ರಿಯ ಕೇಸ್:ರಾಜ್ಯದಲ್ಲಿ ಬುಧವಾರ 376 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲಿ 358 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.ದಿನದ ಸೋಂಕು ಪ್ರಮಾಣ ದರ ಶೇ.1.61 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 2,623ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 231 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.11 ಲಕ್ಷ ಮೀರಿದೆ. ಈವರೆಗೂ 40,066 ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, 39.54 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.
ನವದೆಹಲಿ:ಭಾರತದಲ್ಲಿ ಕರೊನಾ ಸೋಂಕಿನ ಪ್ರಕರಣದಲ್ಲಿ ಒಂದೇ ದಿನ ಶೇ.40 ಜಿಗಿತವಾಗಿದ್ದು ಬುಧವಾರ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ 5,233 ಹೊಸ ಕೇಸ್​ಗಳು ದೃಢಪಟ್ಟಿವೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಏಳು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶೇ.80 ಹಾಗೂ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಶೇ.83 ಏರಿಕೆಯಾಗಿದ್ದು ಕಳವಳ ಸೃಷ್ಟಿಸಿದೆ. ಸೋಂಕಿನ ದೈನಿಕ ಪಾಸಿಟಿವಿಟಿ ದರ ಶೇ.1.67 ಹಾಗೂ ಸಾಪ್ತಾಹಿಕ ದರ ಶೇ.1.12 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಮಾನದಲ್ಲಿ ಮಾಸ್ಕ್ ಮಸ್ಟ್:ವಿಮಾನ ಪ್ರಯಾಣಿಕರು ಮಾಸ್ಕ್ ಧರಿಸದಿರು ವುದನ್ನು ‘ಅಶಿಸ್ತು’ ಎಂದು ಪರಿಗಣಿಸುವುದಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಎಚ್ಚರಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸಲು ಪದೇಪದೆ ಮಾಡಿಕೊಂಡ ವಿನಂತಿಗಳನ್ನು ಉಲ್ಲಂಘಿಸಿದರೆ ಅಂಥ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗುತ್ತದೆ ಅಥವಾ ವಿಮಾನ ಏರಲು ಬಿಡುವುದಿಲ್ಲ ಎಂದು ಡಿಜಿಸಿಎ ಬುಧವಾರ ತಿಳಿಸಿದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಇದಕ್ಕೆ ವಿನಾಯ್ತಿ ನೀಡಲಾಗುತ್ತದೆ ಎಂದು ಹೇಳಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 4 =
Remember me
