ಬೆಂಗಳೂರು:ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವಾಗ ವ್ಯಕ್ತವಾದ ಅನುಮಾನಗಳ ಬಗ್ಗೆ ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ಹಾಗೂ ಮಾತಿನ ಚಕಮಕಿ ನಡೆಯಿತು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಪ್ರಸ್ತಾಪ ಸಲ್ಲಿಸುವ ವೇಳೆ ಬಿಜೆಪಿಯ ಪಿ. ರಾಜೀವ್ ವಿಷಯ ಪ್ರಸ್ತಾಪಿಸಿ, ಪ್ರ್ರಾನಿ ದೇಶದ ಜನತೆಗೆ ಕೋವಿಡ್ ಲಸಿಕೆ ನೀಡಲು ಮುಂದಾದಾಗ ಕೆಲವರು ಇದಕ್ಕೆ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲ ಕುಹಕವಾಡಿದರು ಎಂದು ಕಾಂಗ್ರೆಸ್ ಸದಸ್ಯರ ಕಾಲೆಳೆದರು.
ಇದಕ್ಕೆ ಕಾಂಗ್ರೆಸ್​ನ ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ ಮತ್ತಿತರರು ಆಕ್ಷೇಪಿಸಿದರು. ನಾವು ಕೋವಿಡ್ ಲಸಿಕೆ ನೀಡಲು ವಿರೋಧಿಸಿಲ್ಲ. ಲಸಿಕೆ ಉತ್ಪಾದನೆ ಮಾಡಿದವರೋ ಯಾರು? ಕಂಡು ಹಿಡಿದವರು ಯಾರು? ಆದರೆ, ಇದು ಮೋದಿಯವರದ್ದೇ ಎಂದು ಬಿಂಬಿಸಲಾಗಿತ್ತು. ಹಾಗಾಗಿ ಇದನ್ನು ನಾವು ಆಕ್ಷೇಪಿಸಿದೆವು ಎಂದರು. ದೀಪ ಹಚ್ಚಿ, ಜಾಗಟೆ ಬಾರಿಸಿ ಎಂದು ಹೇಳಿದ್ದು ನಿಜ. ಇದರಿಂದ ಕೋವಿಡ್ ಹೋಗುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿತ್ತು. ಆದರೆ, ಇದರ ವಿರುದ್ಧ ಒಟ್ಟಾಗಿದ್ದರೆ ಮಾತ್ರ ಹೋರಾಟ ಮಾಡಲು ಸಾಧ್ಯ ಎಂಬ ಕಾರಣಕ್ಕಾಗಿ ದೇಶದ ಜನತೆಗೆ ಮೋದಿ ಕರೆಕೊಟ್ಟಿದ್ದರು. ಇದಕ್ಕೂ ಸಹ ಕೆಲವರು ಕುಹಕವಾಡಿದರು ಎಂದು ರಾಜೀವ್ ಟೀಕಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಲಸಿಕೆ ಕಂಡು ಹಿಡಿದ ಖಾಸಗಿ ಕಂಪನಿಯ ಮಾಲೀಕರು ಏಕೆ ದೇಶ ಬಿಟ್ಟು ಹೋದರು? ದೀಪ ಹಚ್ಚಿಸಿ, ಜಾಗಟೆ ಬಾರಿಸಿ, ಹೋಮ-ಹವನ ಮಾಡಿಸಿದ್ದು ಯಾರು ಎಂದು ಕೆಣಕಿದರು.
ಆಗ ರಾಜೀವ್ ಉದ್ದೇಶಿಸಿ ಕಾಂಗ್ರೆಸ್​ನ ಪ್ರಿಯಾಂಕ್ ಖರ್ಗೆ, ನೀವು ವೈಜ್ಞಾನಿಕವಾಗಿ ಚಿಂತನೆ ಮಾಡುತ್ತೀರೆಂದು ಅಂದುಕೊಂಡಿದ್ದೆವು. ಆದರೆ, ಬಿಜೆಪಿ ಸೇರಿದ ಮೇಲೆ ನೀವು ಕೂಡ ಆ ಪಕ್ಷದಂತೆ ಮಾತನಾಡುತ್ತೀದ್ದೀರಿ ಎಂದು ಕಿಚಾಯಿಸಿದರು. ಜಾಗಟೆ ಬಾರಿಸುವುದರಿಂದ ಇಲ್ಲವೇ ದೀಪ ಹಚ್ಚುವುದರಿಂದ ಕೋವಿಡ್ ಹೋಗುವುದಿಲ್ಲ. ವೈಜ್ಞಾನಿಕವಾಗಿ ಅಭ್ಯಸಿಸಿ ಲಸಿಕೆಯನ್ನು ಕಂಡುಹಿಡಿಯಬೇಕು. ಇದರಲ್ಲಿ ವಿಫಲರಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದಾಗ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಶೇ.100 ಮೊದಲ ಡೋಸ್ ನೀಡಲಾಗಿದೆ. ಶೇ.80 2ನೇ ಡೋಸ್ ಆಗಿದೆ. ಆದರೆ ಪ್ರಾರಂಭದಲ್ಲಿ ಲಸಿಕೆ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ. ಇಡೀ ವಿಶ್ವವೇ ಈ ವಿಚಾರದಲ್ಲಿ ನಿಬ್ಬೆರಗಾಗಿದೆ ಎಂದರು. 130 ಕೋಟಿ ಜನರಿಗೆ ಲಸಿಕೆ ಕೊಟ್ಟ ಯಾವುದೇ ಉದಾಹರಣೆ ಇಲ್ಲ. ಮೋದಿ ನಾಯಕತ್ವಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ರಾಜಕೀಯ ಇಚ್ಚಾಶಕ್ತಿ ಇಟ್ಟು ಕೊಂಡೇ ಪ್ರಧಾನಿ ಈ ಕೆಲಸ ಮಾಡಿದ್ದಾರೆ ಎಂದು ಸುಧಾಕರ್ ಹೇಳಿದರು.
ಸಿಎಂ ಜತೆ ಶಾಸಕರ ಮಾತು ಸ್ಪೀಕರ್ ಗರಂ:ಗುಂಪು ಗುಂಪಾಗಿ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸನದ ಬಳಿ ತೆರಳಿ ಮಾತನಾಡುತ್ತಿರುವುದನ್ನು ಕಂಡು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲಿ ಕೆಲ ಶಾಸಕರು ಬೊಮ್ಮಾಯಿ ಜತೆ ಮಾತನಾಡಲು ಮುಂದಾಗಿದ್ದರು. ಇದನ್ನು ನೋಡಿದ ಸ್ಪೀಕರ್, ಗಂಭೀರವಾಗಿ ವಿಚಾರ ಪ್ರಸ್ತಾಪವಾಗುತ್ತಿದ್ದಾಗ ನೀವು ಮುಖ್ಯಮಂತ್ರಿ ಬಳಿ ಹೋಗಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಸದನದಲ್ಲಿ ಶಿಸ್ತಿನಿಂದ ವರ್ತಿಸಬೇಕೆಂದು ಹೇಳಿದರು.
ಎಂಡೋಸಲ್ಪಾನ್ ಪೀಡಿತರತ್ತ ಗಮನ ನೀಡಿ:ಎಂಡೋಸಲ್ಪಾನ್ ಪೀಡಿತರ ಮನೆಯಲ್ಲಿ ಆರೋಗ್ಯವಾಗಿರು ವವರಿಗೂ ಮದುವೆ ಆಗುತ್ತಿಲ್ಲ. ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಸರ್ಕಾರ ತಕ್ಷಣ ಇವರಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಒದಗಿಸಿಕೊಡಬೇಕೆಂದು ಕಾಂಗ್ರೆಸ್​ನ ಹರೀಶ್ ಕುಮಾರ್ ಒತ್ತಾಯಿಸಿದರು. ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಒಂದು ಸಾವಿರ ರೈತ ಕುಟುಂಬಗಳು ಎಂಡೋಸಲ್ಪಾನ್ ಪೀಡಿತರಾಗಿದ್ದಾರೆ. ಇತ್ತೀಚಿಗೆ ಮನನೊಂದು ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಸರ್ಕಾರ ಇವರ ಬಗ್ಗೆ ಸ್ವಲ್ಪವೂ ಕಾಳಜಿವಹಿಸಿದೇ ಇರುವುದರಿಂದ ಅವರು ಪ್ರತಿ ನಿತ್ಯ ಸಾವು-ನೋವಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇವರಿಗಾಗಿ ಇರುವ ಮೂರು ಆರೈಕೆ ಕೇಂದ್ರಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಇಂತಹ ಗಂಭೀರ ವಿಚಾರಗಳನ್ನು ಸರ್ಕಾರ ಬಗೆಹರಿಸಬೇಕೆಂದು ಆಗ್ರಹಿಸಿದರು.
ಕಾರ್ವಿುಕರ ನೋಂದಣಿಗೆ ಕಾಯ್ದೆ ಬದಲು:ಕಾರ್ವಿುಕ ಇಲಾಖೆ ಅಧೀನ ಬರುವ ವಿವಿಧ ಮಂಡಳಿಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಡಿ ಕಾರ್ವಿುಕರ ನೋಂದಣಿ ಕಾನೂನು ಬದಲಾವಣೆ ಮಾಡಲಾಗುವುದು ಎಂದು ಕಾರ್ವಿುಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಸಿಎಂ ನಿಂಬಣ್ಣನವರ್ ಪ್ರಶ್ನೆಗೆ ಉತ್ತರಿಸಿದರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕ ಕಲ್ಯಾಣ ಮಂಡಳಿಯಲ್ಲಿ ಕಾರ್ವಿುಕರು ನೋಂದಾಯಿಸಿಕೊಳ್ಳುವಾಗ ಕೆಲವು ಖಾಸಗಿ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಕಾರಣ ಹಾಲಿ ಇರುವ ನಿಯಮಗಳಲ್ಲಿ ಬದಲಾವಣೆ ಮಾಡಿ ಕೊಟ್ಟಿಯಾಗುವುದನ್ನು ತಡೆಯುತ್ತೇವೆ ಎಂದರು.
ಅನೈತಿಕ ಸರ್ಕಾರ ಪದ ಬಳಕೆಗೆ ಪರಿಷತ್ತಿನಲ್ಲಿ ಗಲಾಟೆ:ಇದು ಅನೈತಿಕ ಸರ್ಕಾರವಾಗಿದ್ದು, ಈ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಮಾಡುವುದು ಕಷ್ಟ ಎಂದು ಕಾಂಗ್ರೆಸ್​ನ ಯು.ಬಿ. ವೆಂಕಟೇಶ್ ಹೇಳಿದ ಮಾತುಗಳು ಪರಿಷತ್ತಿನಲ್ಲಿ ಕೆಲ ಹೊತ್ತು ಚಕಮಕಿಗೆ ಕಾರಣವಾಯಿತು.
ಬಿಜೆಪಿಯ ಅರುಣ ಶಹಾಪುರ ಮಾತನಾಡಿ, ರಾಜ್ಯಪಾಲರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಯು.ಬಿ.ವೆಂಕಟೇಶ್, ಒಂದು ಕೆ.ಜಿ. ಅಕ್ಕಿ ಜಾಸ್ತಿ ನೀಡೋದಕ್ಕೆ ಇಷ್ಟೊಂದು ಮಾತನಾಡಬೇಕಾಗಿತ್ತಾ? ಇದರ ಹೊರತಾಗಿ ಬೇರೆ ಯಾವುದೇ ಯೋಜನೆ ಘೋಷಣೆ ಆಗಲಿಲ್ಲ. ಇದು ಅನೈತಿಕ ಸರ್ಕಾರವಾಗಿದ್ದು, ಈ ಸರ್ಕಾರಿಂದ ಅಭಿವೃದ್ಧಿ ನಿರೀಕ್ಷೆ ಮಾಡುವುದು ಕಷ್ಟ ಎಂದರು. ಈ ಅನೈತಿಕ ಪದ ಬಳಕೆ ಮಾಡುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಅರುಣ ಶಹಾಪುರ, ಭಾರತಿ ಶೆಟ್ಟಿ, ಪ್ರಾಣೇಶ್ ಅನೈತಿಕ ಸರ್ಕಾರದ ಪದದ ವಿರುದ್ಧ ಧ್ವನಿ ಎತ್ತಿದ್ದರು. ಇದು ಆಸಂವಿಧಾನತ್ಮಾಕವಾಗಿದ್ದು, ತಕ್ಷಣ ಇದನ್ನು ಕಡತದಿಂದ ತೆಗಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷದವರು, ಅನೈತಿಕ ಪದ ಬಳಕೆ ಸರಿಯಾಗಿದೆ. ನಮಗೆ ಪದಗಳ ಹಿತಿ-ಮಿತಿ ತಿಳಿದಿದೆ ಎಂದರು. ಆದರೂ, ಕೆಲ ನಿಮಿಷಗಳ ಕಾಲ ಜೋರು ಗಲಾಟೆ ನಡೆಯಿತು. ಸಭಾಪೀಠದಲ್ಲಿದ್ದ ಕೆ.ಟಿ.ಶ್ರೀಕಂಠೇಗೌಡ ಮಧ್ಯ ಪ್ರವೇಶಿ, ನಾನು ಎರಡು ತಿಂಗಳು ತರಬೇತಿ ಪಡೆದಿದ್ದೇನೆ. ಯಾವುದು ಸಂವಿಧಾನಿಕ ಮತ್ತು ಆಸಂವಿಧಾನಿಕ ಪದ ಎಂಬುದು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಇದು ಸಂವಿಧಾನಿಕ ಪದ. ವಿರೋಧ ಪಕ್ಷದವರು ಟೀಕಿಸಲು ಈ ಪದ ಬಳಕೆ ಮಾಡಿರುವುದರಲ್ಲಿ ತಪ್ಪಿಲ್ಲ ಎಂದರು.
ಬೆಂಗಳೂರು:ಕನಿಷ್ಠ ಬೆಂಬಲ ಬೆಲೆಯಡಿ ರಾಜ್ಯದಲ್ಲಿ 2.10 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಇನ್ನೂ 3 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗುತ್ತದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್​ನ ಕೃಷ್ಣ ಬೈರೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಹೆಚ್ಚುವರಿ ರಾಗಿ ಖರೀದಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಇನ್ನೂ ಅನುಮತಿ ನೀಡಿಲ್ಲ, ಆದರೆ ನೀಡಬಹುದೆಂಬ ವಿಶ್ವಾಸವಿದೆ ಎಂದರು.ದಯವಿಟ್ಟು ರೈತರು ಯಾರೂ ಕೂಡ ವ್ಯಾಪಾರಸ್ಥರಿಗೆ ಕಡಿಮೆ ದರದಲ್ಲಿ ರಾಗಿ ಮಾರಾಟ ಮಾಡಿ ನಷ್ಟ ಅನುಭವಿಸಿ ಬೇಡಿ ಎಂದು ಮನವಿ ಮಾಡಿದರು.
ಯಶಸ್ವಿನಿ ಯೋಜನೆ ಜಾರಿಗೆ ಜನರಿಂದ ಹೆಚ್ಚು ಬೇಡಿಕೆ ಬಂದಿರುವುದರಿಂದ ಮರಳಿ ಯೋಜನೆಯನ್ನು ಅನುಷ್ಠಾನ ಮಾಡಲು ಆಲೋಚಿಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಜೆಡಿಎಸ್​ನ ಮರಿತಿಬ್ಬೇಗೌಡ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ 2018ರಲ್ಲೇ ಅಂತ್ಯಗೊಂಡಿದೆ. ಇದರ ಯೋಜನೆ ಮರು ಆರಂಭವಾಗಿಸುವ ಬಗ್ಗೆ ಮನವಿ ಬಂದಿದೆ. ಇದನ್ನು ಮರು ಅನುಷ್ಠಾನ ಮಾಡಲು ಆಲೋಚಿಸಲಾಗುತ್ತಿದೆ. ಆದರೆ, ಇನ್ನೂ ಯೋಜನೆಯ ರೂಪು ರೇಷೆಗಳನ್ನು ಇನ್ನೂ ಸಿದ್ಧಪಡಿಸಿಲ್ಲವೆಂದು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಬಿಟ್ ಕಾಯಿನ್ ವಿಚಾರ ಸದ್ದು ಮಾಡಿತು. ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಶಾಸಕರು ನಡುವೆ ವಾಕ್ಸಮರಕ್ಕೂ ಕಾರಣವಾಯಿತು. ಬಿಜೆಪಿಯ ಪಿ.ರಾಜೀವ್ ಬಿಟ್ ಕಾಯಿನ್ ವಿಚಾರದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಆರೋಪವನ್ನೇ ಪ್ರತಿಪಕ್ಷ ಕಾಂಗ್ರೆಸ್ ಮಾಡಿತು. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಜೈಲಿನಲ್ಲಿ ದ್ದರೆ ಮತ್ತೊಬ್ಬ ಪುತ್ರ ಬಿಟ್ ಕಾಯಿನ್ ಸೂತ್ರ ದಾರಿ ಹ್ಯಾಕರ್ ಶ್ರೀಕಿ ಜತೆ ಚಾರ್ಟರ್ ವಿಮಾನದಲ್ಲಿ ಓಡಾಡುತ್ತಿದ್ದ. ಅಂದೇ ಶ್ರೀಕಿ ವಿಚಾರಣೆ ನಡೆಸಿದ್ದರೆ ಈ ಹಗರಣ ಬಯಲಾಗುತ್ತಿತ್ತು ಎಂದು ಮಾತಿನಲ್ಲೇ ತಿವಿದರು. ಈ ವೇಳೆ ಕಾಂಗ್ರೆಸ್ ಉಪನಾಯಕ ಯು.ಟಿ.ಖಾದರ್, ಕಾಂಗ್ರೆಸ್​ನ ಜಮೀರ್ ಅಹ್ಮದ್, ಭೀಮಾನಾಯ್್ಕ ಎಲ್ಲರೂ ಒಟ್ಟಿಗೆ ಎದ್ದು ನಿಂತು ನಲಪಾಡ್ ಜೈಲಿಗೆ ಹೋಗಿದ್ದು ಬಿಟ್ ಕಾಯಿನ್ ಪ್ರಕರಣದಲ್ಲಿ ಅಲ್ಲ. ಸುಳ್ಳುಸುಳ್ಳೇ ಆರೋಪ ಮಾಡಬೇಡಿ, ನಲಪಾಡ್​ನನ್ನು ಯುಬಿ ಸಿಟಿ ಗಲಭೆ ಕೇಸ್​ನಲ್ಲಿ ಪೊಲೀಸರ ಬಂಧಿಸಿದ್ದರು. ಸದನಕ್ಕೆ ಸುಳ್ಳು ಮಾಹಿತಿ ಕೊಡುವುದು ಬೇಡ, ಗೃಹಸಚಿವರೇ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
ಯಾರ ಪ್ರಭಾವ?:ಶ್ರೀಕಿ ಬಂಧಿಸದಂತೆ ಪೊಲೀಸರ ಮೇಲೆ ಯಾರು ಪ್ರಭಾವ ಬೀರಿದ್ದರು? ಅಂದೇ ಆತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರೆ ಅವತ್ತೆ ಬಿಟ್ ಕಾಯಿನ್ ಪ್ರಕರಣ ಹೊರಬೀಳುತ್ತಿತ್ತು ಎಂದ ರಾಜೀವ್, ಸರ್ಕಾರದ ಮೇಲೆ ಜವಾಬ್ದಾರಿಯುತ ಪ್ರತಿಪಕ್ಷ ಕಾಂಗ್ರೆಸ್ ಯಾವುದೇ ಆಧಾರವಿಲ್ಲದ, ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆರೋಪಿಸಿದ್ದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಡಬಲ್ ಇಂಜಿನ್ ಸಮರ್ಥನೆ!:ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ‘ಡಬಲ್ ಇಂಜಿನ್’ ಸರ್ಕಾರ ಎಂಬುದನ್ನು ಶಾಸಕ ಪಿ.ರಾಜೀವ್ ಸಮರ್ಥಿಸಿಕೊಂಡರು. ಬಿಎಸ್​ವೈ ಸರ್ಕಾರದಂತೆ ಅಭಿವೃದ್ಧಿ ವೇಗದಲ್ಲೇ ಬೊಮ್ಮಾಯಿ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿದೆ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಇಂಜಿನ್ ಜತೆಗೆ ಬೊಮ್ಮಾಯಿ ಸರ್ಕಾರವು ಡಬಲ್ ಇಂಜಿನ್​ನಲ್ಲಿ ಸಾಗುತ್ತಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ಪರೋಕ್ಷತಿರುಗೇಟು ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
