ಬೆಂಗಳೂರು:ಪ್ರತಿಪಕ್ಷಗಳ ಗದ್ದಲ, ಧರಣಿ, ಸಭಾತ್ಯಾಗದ ನಡುವೆಯೂ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸುವ ಕಠಿಣ ನಿಯಮವನ್ನೊಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಸರ್ಕಾರ ಜಾರಿಗೆ ತರಲು ಹೊರಟಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರೈತ ದೃಷ್ಟಿಕೋನದಲ್ಲಿ ಪರಾಮರ್ಶಿಸಿರುವ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಸರ್ಕಾರಕ್ಕೆ ಸಲಹೆ ಜತೆಗೆ ಪರಾಮರ್ಶೆ ವೇಳೆ ಮೂಡಿದ ಪ್ರಶ್ನೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕ ಮರುದಿವನೇ ಈ ಕಾಯ್ದೆ ಬಗ್ಗೆ ಮೂಡಿದ 13 ಅಂಶಗಳನ್ನು ಎಚ್‌ಡಿಕೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅದರ ಪೂರ್ಣ ಮಾಹಿತಿ ಇಲ್ಲಿದೆ.
1ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕಾಂಗ್ರೆಸ್‌-ಬಿಜೆಪಿಗೆ ಮತಬ್ಯಾಂಕ್‌ನದ್ದೇ ಆದ್ಯತೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿರುವ 24 ಲಕ್ಷ ರೈತ ಕುಟುಂಬಗಳಿಗೆ ಕಾಯ್ದೆ ವಿಚಾರವಾಗಿ ಇರುವ ಅನುಮಾನ, ಆತಂಕಗಳನ್ನು ಜೆಡಿಎಸ್‌ ನಿಷ್ಪಕ್ಷಪಾತವಾಗಿ ವಿಮರ್ಶಿಸಲು ಬಯಸುತ್ತದೆ. ಈ ಹಿಂದೆಯೇ ಹೇಳಿದಂತೆ ಜೆಡಿಎಸ್‌ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ, ರೈತ ಪ್ರತಿನಿಧಿಯಾಗಿ ಕೆಲಸ ಮಾಡಲಿಚ್ಚಿಸುತ್ತದೆ.
2ಸರ್ಕಾರ ಗೋಹತ್ಯೆ ನಿಷೇಧಿಸುವ ಕಾಯ್ದೆಯನ್ನು ರೂಪಿಸಿದೆ. ಆದರೆ, ಗೋಹತ್ಯೆ ನಿಷೇಧದ ಜತೆಗೆ ಗೋಮಾತೆಯನ್ನು ರಕ್ಷಿಸುವ, ಗೋಮಾತೆಯನ್ನೇ ನಂಬಿದ ರೈತರನ್ನು ರಕ್ಷಿಸುವ ಕಾನೂನಾಗಿಯೂ ಇವತ್ತಿನ ಈ ಕಾಯ್ದೆ ವರ್ತಿಸಬೇಕು ಎಂಬುದು ರೈತರ ಪ್ರತಿನಿಧಿಯಾದ ಜೆಡಿಎಸ್‌ನ ಒತ್ತಾಯ. ಈ ವಿಚಾರವಾಗಿ ಯಾರದ್ದೂ ತಕರಾರು ಇಲ್ಲ ಎಂದು ನಾವು ಭಾವಿಸುತ್ತೇವೆ.
3ನಾವೆಲ್ಲರೂ ಹಸುಗಳನ್ನು ಪೂಜಿಸುತ್ತೇವೆ. ಆದರೆ, ರೈತ ಮಾತ್ರ ಅದನ್ನು ಪೋಷಿಸುವ ಹೊಣೆ ಹೊತ್ತಿದ್ದಾನೆ. ಮತ್ತು, ಅದರ ಮೇಲೆಯೇ ಅವನ ಜೀವನ ನಿರ್ವಹಣೆಯೂ ಅವಲಂಬಿತವಾಗಿದೆ. ಗೋವಿನ ಪೋಷಣೆ ಎಂಬುದೇ ಆರ್ಥಿಕ ಹೊರೆಗೆ ಕಾರಣವಾದರೆ, ಆತನ ನೆರವಿಗೆ ನಿಲ್ಲುವವರು ಯಾರು? ಇದು ಸಾಮಾನ್ಯ ರೈತನಿಗೆ ಇರುವ ಪ್ರಶ್ನೆ. ಸರ್ಕಾರ ಇದಕ್ಕೆ ಪರಿಹಾರ ಹುಡುಕಬೇಕು.
4ರೈತ ತಾನು ಪೂಜಿಸುವ, ಪೋಷಿಸುವ, ಜೀವನಾಧಾರವನ್ನಾಗಿ ನಂಬಿರುವ ಗೋವು ಈ ಕಾಯ್ದೆ ಮೂಲಕ ಆತನಿಗೆ ಹೇಗೆ ಹೊರೆಯಾಗುತ್ತದೆ? ತಾನು ಸಾಕಿದ ಹಸು ಗಂಡುಕರು ಹಾಕಿದಾಗ, ಹಸುವಿಗೆ ವಯಸ್ಸಾದಾಗ, ಕಾಯಿಲೆ ಬಿದ್ದಾಗ ಅದರ ನಿರ್ವಹಣೆ ಕಷ್ಟ. ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಈ ಹೊರೆ ಜೀವನ್ಮರಣದ ಪ್ರಶ್ನೆಯಾಗಲೂಬಹುದು ಎಂಬುದನ್ನು ಸರ್ಕಾರ ಮರೆತಂತಿದೆ.
5ರೈತರು ಈಗ ಹಾಲು ಉತ್ಪಾದನೆಗಾಗಿ ಪೋಷಿಸುತ್ತಿರುವ ಹಸುಗಳ ಗಂಡುಕರುಗಳನ್ನು ಸಾಕುವುದು ಆರ್ಥಿಕವಾಗಿ ಹೊರೆ. ಅದು ಬೆಳೆದರೂ ಕೃಷಿ ಕಾರ್ಯಗಳ ಬಳಕೆಗೆ ಯೋಗ್ಯವಲ್ಲ. ಹೀಗಾದಾಗ ಹೈನುಗಾರಿಕೆಗೆ ಹೊಡೆತ ಬೀಳುತ್ತದೆ. ಕ್ರಮೇಣ ರೈತರು ಹೈನುಗಾರಿಕೆಯಿಂದಲೇ ವಿಮುಖವಾಗಬಹುದು. ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ಗಮನಿಸಲೇಬೇಕು.
6ಸದ್ಯ ಸರ್ಕಾರ ತಂದಿರುವ ಕಾಯ್ದೆಯು ರೈತರು ಗಂಡುಕರುಗಳನ್ನು, ವಯಸ್ಸಾದ ರಾಸುಗಳನ್ನು, ರೋಗಕ್ಕೀಡಾದ ಹಸುಗಳನ್ನು ಪೋಷಿಸಲೇಬೇಕಾದ ಷರತ್ತಿಗೆ ದೂಡುತ್ತದೆ. ಪ್ರಾಯೋಗಿಕವಲ್ಲದ ಷರತ್ತುಗಳ ಮೂಲಕ ಸರ್ಕಾರ ರೈತರ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸಿದರೆ, ರೈತರು ಹೈನುಗಾರಿಕೆಯಿಂದ ದೂರ ಸರಿಯಬಹುದು. ಆಗ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ.
7ಜಾನುವಾರುಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಬೇಕು ಎಂದು ಹೇಳಲಾಗಿದೆ. ಚಿಕಿತ್ಸೆಗೆ ಈಗ ಪಶುವೈದ್ಯರ ಲಭ್ಯತೆ ಇಲ್ಲ. ಇನ್ನು ಪ್ರಮಾಣಪತ್ರಕ್ಕೆ ಲಭ್ಯರಾಗುವರೆ? ಪ್ರಮಾಣಪತ್ರ, ಅನುಮತಿ ಪಡೆಯುವ ಪ್ರಕ್ರಿಯೆ ದಂಧೆಯ ರೂಪ ತಾಳದೆ? ರೈತರ ಶೋಷಣೆ ನಡೆಯುವುದಿಲ್ಲವೆ?
8ಪೊಲೀಸರು, ಅಧಿಕಾರಿಗಳಿಗೆ ರೈತರ ಡೈರಿ ಪರಿಶೀಲನೆಯ ಅವಕಾಶ ನೀಡಲಾಗಿದೆ. ಇದರಿಂದ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವ ಸಾಧ್ಯತೆಗಳು ಸೃಷ್ಟಿಯಾಗುವ ಆತಂಕವಿದೆ. ರೈತರಲ್ಲಿ ಭಯದ ವಾತಾವರಣವೂ ಮೂಡುತ್ತದೆ. ಈ ನಿಯಮವನ್ನು ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದು ಹಳ್ಳಿಗಳ ಸೌಹಾರ್ದ ವಾತಾವರಣವನ್ನೇ ಹಾಳು ಮಾಡಬಹುದಲ್ಲವೆ?
9ಜಾನುವಾರುಗಳನ್ನು ಸಾಗಿಸಲು ಪಶುಸಂಗೋಪನಾ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದು ಮುಂದೊಂದು ದಿನ ಲೈಸನ್ಸ್‌ ರಾಜ್‌ ಪದ್ಧತಿಗೆ ಕಾರಣವಾಗುವುದಿಲ್ಲವೆ? ಅಧಿಕಾರಿಗಳು ಇದರಲ್ಲಿ ಭ್ರಷ್ಟಾಚಾರ ನಡೆಸದೆ ಇರಲಾರರು ಎಂದು ಹೇಳಲು ಸಾಧ್ಯವೆ? ಒಂದು ವೇಳೆ ಇಂಥ ಪರವಾನಗಿಗೆ ರೈತರಿಂದ ಲಂಚ ಪಡೆಯುವ ಪರಿಸ್ಥಿತಿ ಸೃಷ್ಟಿಯಾದರೆ ಅದು ರೈತರ ಶೋಷಣೆಯಲ್ಲವೆ?
10ಜಾನುವಾರಿನ ವಧೆಯಾದ ಪ್ರಕರಣದಲ್ಲಿ ಮಾರಾಟ ಮಾಡಿದ ರೈತನನ್ನೂ ಹೊಣೆಗಾರನನ್ನಾಗಿಸುವ ನಿಯಮವಿದೆ. ರೈತ ತಾನು ಮಾರಾಟ ಮಾಡಿದ ಜಾನುವಾರು ವಧಾಸ್ಥಳಕ್ಕೆ ಹೋಗುತ್ತದೆ ಎಂಬುದನ್ನು ಅಂದಾಜಿಸಲು ಹೇಗೆ ಸಾಧ್ಯ? ಈ ನಿಯಮಗಳು ರೈತ ಸರ್ಕಾರ ಕಚೇರಿಗಳಿಗೆ ಅಲೆಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಕೊನೆಗೆ ಇದು ಹೈನುಗಾರಿಕೆಗೆ ಪೆಟ್ಟು ಕೊಡುತ್ತದೆ.
11ಗೋಹತ್ಯೆ ನಿಷೇಧ ಕಾಯ್ದೆಯು ಗೋವಿನ ಹತ್ಯೆಯನ್ನು ತಡೆಯುವ ಸ್ವರೂಪದ್ದಾಗಿದೆಯಾದರೂ, ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಸಾಕಷ್ಟು ಸನ್ನಿವೇಶಗಳನ್ನೂ ಬಲವಂತವಾಗಿ ಸೃಷ್ಟಿ ಮಾಡುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಲೇಬೇಕು. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ, ಮಾರ್ಗೋಪಾಯಗಳನ್ನು ಸೂಚಿಸಬೇಕು. ಇಲ್ಲವಾದರೆ ಇದು ರೈತ ವಿರೋಧಿಯಾಗಲಿದೆ.
12ಗೋವುಗಳು ಹೇಗೆ ನಮಗೆ ಪೂಜನೀಯವೋ, ರೈತನೂ ಪೂಜನೀಯವೆ. ಗೋಹತ್ಯೆ ತಡೆಯುವ ನಮ್ಮ ಪ್ರಯತ್ನದಲ್ಲಿ ರೈತನನ್ನು ಶೋಷಿಸುವ ವ್ಯವಸ್ಥೆಗೆ ದೂಡುವುದು ಯಾವ ನ್ಯಾಯ? ಕಾಯ್ದೆಯು ರೈತನ್ನು ಸಂಕಷ್ಟಕ್ಕೆ ದೂಡಬಾರದು ಎಂಬುದಷ್ಟೇ ನನ್ನ ಆಶಯ. ಜೆಡಿಎಸ್‌ಗೆ ಈ ವಿಚಾರದಲ್ಲಿ ಯಾವ ಮತಬ್ಯಾಂಕ್‌ನ ಓಲೈಕೆಯೂ ಬೇಕಿಲ್ಲ. ರೈತನ ಹಿತ ರಕ್ಷಣೆಯಾದರೆ ಸಾಕು.
13ರೈತ ತಾನು ಪೋಷಿಸಿದ ಗೋವನ್ನು ಅಥವಾ ಯಾವುದೇ ಪ್ರಾಣಿಯನ್ನು ವಧೆಗಾಗಿ ಕೊಡಲು ಮನಃಪೂರ್ವಕವಾಗಿ ಒಪ್ಪಲಾರ. ಆದರೆ, ಅದು ಅವನಿಗೆ ಅನಿವಾರ್ಯ. ಗೋಹತ್ಯೆಯನ್ನು ನಿಷೇಧಿಸಬೇಕಿದ್ದರೆ, ಆತನ ಅನಿವಾರ್ಯತೆಯನ್ನು ನಾವು ಹೋಗಲಾಡಿಸಬೇಕು. ರೈತನಿಗೆ ಹೊರೆ ಸೃಷ್ಟಿಸುವ ಜಾನುವಾರುಗಳ ರಕ್ಷಣೆಯನ್ನು ಸರ್ಕಾರವೇ ಮಾಡಲಿ. ಗೋವಿನ ಜತೆಗೆ ರೈತನನ್ನೂ ರಕ್ಷಿಸಲಿ.
ಗೋಹತ್ಯೆ ನಿಷೇಧ ವಿಧೇಯಕ ಪಾಸ್​: 5 ಲಕ್ಷ ರೂ. ದಂಡ, 7 ವರ್ಷ ಜೈಲು ಶಿಕ್ಷೆಗೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + nine =
Remember me
