ಶ್ರೀಕಾಂತ್ ಶೇಷಾದ್ರಿಬೆಂಗಳೂರು:ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಆಡಳಿತ ವಿರೋಧ ಅಲೆ ತೀವ್ರತರವಾಗಿ ಎಬ್ಬಿಸಲು ಪ್ರತಿಪಕ್ಷ ಕಾಂಗ್ರೆಸ್ ಹೆಚ್ಚಿನ ಶ್ರಮ ಹಾಕುತ್ತಿದೆ. ಇದೆ ವೇಳೆ ಆಡಳಿತ ಪಕ್ಷ ಬಿಜೆಪಿಯು ನಕಾರಾತ್ಮಕ ಅಂಶಗಳನ್ನು ಕಡಿಮೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ.
ಈ ಪರಸ್ಪರ ವೈರುಧ್ಯದ ಬೆಳವಣಿಗೆಯಲ್ಲಿ ತಮ್ಮ ಪಕ್ಷದ ಪರವಾದ ವಾತಾವರಣ ಯಾವ ಮಟ್ಟದಲ್ಲಿದೆ ಎಂದು ಅರಿಯುವ, ಚರ್ಚೆ ನಡೆಸುವ, ವಿಮಶಿಸುವ ಬೆಳವಣಿಗೆ ಎರಡೂ ಪಕ್ಷದಲ್ಲಿದೆ.
ಈ ಚುನಾವಣೆಯಲ್ಲಿ ಎರಡೂ ಪಕ್ಷಗಳು ಕಾರ್ಪೆರೇಟ್ ಕಂಪನಿಗಳು ಹಾಗೂ ಪಕ್ಷ ನಿಷ್ಠರಿಂದ ಆಗಿಂಗಾಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು, ಜನರ ಮನಸ್ಸಿನಲ್ಲಿ ಸರ್ಕಾರದ ಪರ ಹಾಗೂ ವಿರುದ್ಧ ಯಾವ ರೀತಿಯ ಅಭಿಪ್ರಾಯವಿದೆ ಎಂದು ಲೆಕ್ಕಾಚಾರ ಹಾಕುವ ಪರಿಪಾಠ ಬೆಳೆಸಿಕೊಳ್ಳಲಾಗುತ್ತಿದೆ.
ಕಳೆದ 4-5 ತಿಂಗಳಿನಿಂದಲೂ ಸರ್ವೆಗಳು, ಅಭಿಪ್ರಾಯ ಸಂಗ್ರಹಕ್ಕೆ ಹೆಚ್ಚು ಒತ್ತುಕೊಡಲಾಗಿದ್ದು, ಮುಖ್ಯವಾಗಿ ಸರ್ಕಾರ ಪರ ಹಾಗೂ ವಿರುದ್ಧದ ಅಲೆಯನ್ನು ಗ್ರಹಿಸುವ ಕೆಲಸ ನಡೆದಿದೆ. ತಮಗೆ ಬರುವ ಹಿಮ್ಮಾಯಿತಿಯನ್ನು ಆಧರಿಸಿ ಪಕ್ಷದ ವೇದಿಕೆಗಳಲ್ಲಿ ವಿಮರ್ಶೆ ನಡೆಸಲಾಗಿದೆ. ವಿಜಯವಾಣಿಯು ಎರಡೂ ಪಕ್ಷದ ತಲಾ ಇಬ್ಬರು ಪ್ರಮುಖರನ್ನು ಈ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿಸಿದ್ದು, ಪಕ್ಷದೊಳಗಿನ ಚರ್ಚೆಯ ಹೂರಣವನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
ಸರ್ಕಾರದ ಪರ-ವಿರೋಧದ ಅಲೆಯ ಏರಿಳಿತವನ್ನು ಎರಡೂ ಪಕ್ಷದ ನಾಯಕರು ಗ್ರಹಿಸಿದ್ದು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ, ಪಠ್ಯ ಪುಸ್ತಕ ವಿವಾದ, ಶಾಲೆಯಲ್ಲಿ ಬುರ್ಕಾ ವಿವಾದ ವಿಚಾರ ಇದ್ದಾಗ ಯಾವ ಪರಿಸ್ಥಿತಿ ಇತ್ತು, ಯಾವ ರೀತಿ ವಾತಾವರಣದಲ್ಲಿ ಏರಿಳಿತ ಕಾಣಿಸಿತು ಎಂಬುದನ್ನು ವಿವರಿಸಿದರು.
ಪ್ರವೀಣ್ ನೆಟ್ಟಾರ್ ಹತ್ಯೆ, ಗುತ್ತಿಗೆದಾರರ ಸಂಘದ ಕಮೀಷನ್ ಆರೋಪ, ಪೊಲೀಸ್ ನೇಮಕ ಅಕ್ರಮದ ಬಹಿರಂಗವಾದ ವೇಳೆ ಸರ್ಕಾರದ ವಿರುದ್ಧ ಪ್ರತಿಪಕ್ಷದ ದನಿ ಗಟ್ಟಿಯಾಗಿತ್ತು, ಇದು ಕಾಂಗ್ರೆಸ್ ಪರಿಸ್ಥಿತಿಯನ್ನು ಉತ್ತಮ ಪಡಿಸಿತ್ತು ಎಂದು ಕೈ ನಾಯಕರು ಹೇಳಿಕೊಂಡಿದ್ದಾರೆ. ಈ ವೇಳೆ ನಡೆದ ಸರ್ವೆಯಲ್ಲಿ 120-130 ಸ್ಥಾನದವರೆಗೂ ಗೆಲ್ಲಬಹುದೆಂಬ ಹಿಮ್ಮಾಯಿತಿ ಪಕ್ಷಕ್ಕೆ ಸಲ್ಲಿಕೆಯಾಗಿತ್ತು. ಬಿಜೆಪಿ ಕೂಡ ಇದೇ ವೇಳೆ ಪಡೆದುಕೊಂಡ ವರದಿಯಂತೆ 60-65 ಸ್ಥಾನಗಳನ್ನಷ್ಟೇ ಸುಲಭವಾಗಿ ಗೆಲ್ಲಬಹುದು, ಹೆಚ್ಚಿನ ಶ್ರಮ ಹಾಕಿದರೆ 20 ಸ್ಥಾನ ವೃದ್ಧಿಸಲಷ್ಟೇ ಸಾಧ್ಯ ಎಂದು ಅಂದಾಜಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಪ್ರವಾಸ, ಸರಣಿ ಜನಸಂಕಲ್ಪ ಸಭೆಗಳು, ಮಳೆ ತಗ್ಗಿದ ಬಳಿಕ ಒಂದಷ್ಟು ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆ ಆರಂಭವಾಗುತ್ತಿದ್ದಂತೆ ಸರ್ಕಾರದ ಬಗೆಗಿನ ನಕಾರಾತ್ಮಕ ಬೆಳವಣಿಗೆ ಕಡಿಮೆಯಾಗಿದೆ ಎಂದು ಬಿಜೆಪಿ ನಾಯಕರು ವಿಶ್ಲೇಷಿಸುತ್ತಾರೆ.
ಒಂದು ಮಹತ್ವದ ಸಂಗತಿ ಎಂದರೆ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎರಡೂ ಪಕ್ಷದ ನಾಯಕರು ಈ ಹಂತದಲ್ಲಿ ತಾವು 100 ಸ್ಥಾನಗಳನ್ನು ಗೆಲ್ಲಬಹುದಾದ ಸ್ಥಿತಿಯಲ್ಲಿದ್ದೇವೆ ಎಂದು ವಿಶ್ಲೇಷಿಸಿದ್ದರು. ಇದೀಗ ಮೀಸಲು ಹೋರಾಟದ ಕಾವನ್ನು ತಗ್ಗಿಸುವಂತಹ ತೀರ್ವನಗಳು, ಮಹದಾಯಿಗೆ ಒಪ್ಪಿಗೆ ನೀಡುವ ಆದೇಶ ಪ್ರಕಟವಾದ ನಂತರ ಬಿಜೆಪಿಗೆ ಮುಂಚೆ ಇದ್ದ ಕರಿಛಾಯೆ ತಗ್ಗಿದೆ ಎಂದು ಆ ಪಕ್ಷದ ಪ್ರಮುಖ ನಾಯಕರು ಊಹಿಸುತ್ತಾರೆ.
ಮುಂದಿನ ವಾರದಲ್ಲಿ ಎರಡೂ ಪಕ್ಷದ ಮಹತ್ವದ ಸಭೆಗಳು ನಡೆಯುವುದಿದೆ. ಕಾಂಗ್ರೆಸ್​ನ ರಾಜ್ಯ ಪ್ರವಾಸ ಆರಂಭ, ಮಧ್ಯ ಕರ್ನಾಟಕ ಕೇಂದ್ರೀಕರಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರಾಜ್ಯ ಪ್ರವಾಸ ನಡೆಯುವುದಿದೆ. ಒಟ್ಟಾರೆ ತಮ್ಮ ಪರವಾದ ಅಲೆ ಎಬ್ಬಿಸಿಕೊಳ್ಳಲು ಎರಡೂ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ.
ವಿಸ್ತಾರಕ ಚಟುವಟಿಕೆ ಆರಂಭ
ಬಿಜೆಪಿಯು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತಾರಕನ್ನು ನೇಮಿಸಿದ್ದು, ಚುನಾವಣೆ ದೃಷ್ಟಿಯಿಂದ ಅವರು ಕ್ಷೇತ್ರದಲ್ಲಿ ಸುತ್ತಾಡಲಿದ್ದಾರೆ. ಪಕ್ಷ ನಿಷ್ಠ ಕಾರ್ಯಕರ್ತರು, ಪರಿವಾರದ ಕಾರ್ಯಕರ್ತರಿಗೆ ವಿಸ್ತಾರಕರ ಜವಾಬ್ದಾರಿ ನೀಡಿದ್ದು, ಅವರು ಪಕ್ಷದ ರಾಜ್ಯ ಘಟಕಕ್ಕೆ ನೇರ ವರದಿ ಮಾಡಲಿದ್ದಾರೆ. ಅಭ್ಯರ್ಥಿ ಆಯ್ಕೆ, ಪಕ್ಷ ಸಂಘಟನೆ, ವೈಮನಸ್ಯ ದೂರ ಮಾಡುವುದು, ಸಮೀಕರಣಗಳನ್ನು ರೂಪಿಸುವ ಕೆಲಸ ಮಾಡಲಿದ್ದಾರೆ. ವಿಸ್ತಾರಕರು ಯಾವ ರೀತಿ ಕೆಲಸ ಮಾಡಬೇಕೆಂಬ ಬಗ್ಗೆ ದೆಹಲಿ ನಾಯಕರು ಇತ್ತಿಚೆಗಷ್ಟೇ ತರಬೇತಿಯನ್ನೂ ನೀಡಿದ್ದಾರೆ.
ಪ್ರಜಾಧ್ವನಿ ಮೇಲೆ ಹೆಚ್ಚಿನ ನಿರೀಕ್ಷೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒಟ್ಟಾಗಿ ನಡೆಸುವ ರಾಜ್ಯ ಪ್ರವಾಸಕ್ಕೆ ಪ್ರಜಾಧ್ವನಿ ಎಂದು ಹೆಸರು ನೀಡಿದ್ದು, ಜನವರಿ 11ರಂದು ಚಾಲನೆ ದೊರೆಯಲಿದೆ. ಚುನಾವಣೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಹಮ್ಮಿಕೊಂಡಿರುವ ಯಾತ್ರೆಯಲ್ಲಿ ಎಲ್ಲ ನಾಯಕರು ಒಟ್ಟಾಗಿ ಕಾಣಿಸಿಕೊಳ್ಳುವರು. ಯಾತ್ರೆಯಲ್ಲಿ ಜನರ ಕೊರತೆಯಾಗಬಾರದು ಹಾಗೂ ವ್ಯವಸ್ಥೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮನ್ವಯ ಸಮಿತಿಯ ಜವಾಬ್ದಾರಿಯನ್ನು ಬಸವರಾಜ ರಾಯರೆಡ್ಡಿ ಅವರಿಗೆ ವಹಿಸಲಾಗಿದೆ. ಈ ಸಮಿತಿಯಲ್ಲಿ 21 ಸದಸ್ಯರಿದ್ದು, ಪರಿಷತ್ ಸದಸ್ಯರು, ಮಾಜಿ ಸದಸ್ಯರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ನೇತೃತ್ವದಲ್ಲಿ ದಕ್ಷಿಣ ಕರ್ನಾಟಕಕ್ಕೆ ಮತ್ತೊಂದು ಸಮಿತಿ ರಚಿಸಲಾಗಿದ್ದು, 28 ಮಂದಿ ಸಮಿತಿಯಲ್ಲಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − 7 =
Remember me
