ಬೆಂಗಳೂರು:ರಾಜ್ಯದ ಪ್ರಮುಖ ನಾಯಕರ ‘ಪ್ರತಿಷ್ಠೆ’, ಅಡ್ಡ ಮತದಾನದ ‘ಆತಂಕ’, ಹೆಚ್ಚುವರಿ ಸ್ಥಾನ ಗಳಿಸಲು ರಾಷ್ಟ್ರೀಯ ಪಕ್ಷಗಳ ‘ಪೈಪೋಟಿ’, ಜೆಡಿಎಸ್- ಕಾಂಗ್ರೆಸ್​ನ ‘ಏಟು-ಎದಿರೇಟಿ’ಗೆ ಸಾಕ್ಷಿಯಾಗಿ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯುತ್ತಿದೆ.
ವಿಧಾನಸೌಧದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ನಡೆದಿದ್ದು, ರಾಜ್ಯದಲ್ಲಿ 224 ಜನಪ್ರತಿನಿಧಿಗಳು ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. ಪ್ರತಿ ಶಾಸಕರ ಮತಕ್ಕೆ ಮೌಲ್ಯ ನಿಶ್ಚಯವಾಗಿದ್ದು, ಪ್ರಥಮ ಪ್ರಾಶಸ್ತ್ಯ ಜತೆ ದ್ವಿತೀಯ ಪ್ರಾಶಸ್ತ್ಯ ಮತ ಚಲಾಯಿಸಲು ಅವಕಾಶವಿದೆ. ನಾಲ್ಕು ಸ್ಥಾನಕ್ಕೆ ಆರು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ಅಖಾಡ ಕುತೂಹಲಕಾರಿಯಾಗಿದೆ. ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಕಣದಲ್ಲಿರುವುದರಿಂದ ರಾಷ್ಟ್ರದ ಗಮನವೂ ಈ ಚುನಾವಣೆ ಮೇಲಿದೆ. ಉಳಿದಂತೆ ಬಿಜೆಪಿಯಿಂದ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಿತ್ರನಟ ಜಗ್ಗೇಶ್, ಮೂರನೇ ಅಭ್ಯರ್ಥಿ ಲೆಹರ್ ಸಿಂಗ್, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಕಣದ ಕಾವು ಹೆಚ್ಚಿಸಿದ್ದಾರೆ.
ಪ್ರಥಮ ಪ್ರಾಶಸ್ತ್ಯ ಮತದ ಮೇಲೆ ಪ್ರತಿ ಅಭ್ಯರ್ಥಿ ಗೆಲುವಿಗೆ 45 ಮತ ಅಗತ್ಯ. ಬಿಜೆಪಿ ಬಳಿ ಒಟ್ಟು 122 ಮತಗಳಿದ್ದು, ಕಾಂಗ್ರೆಸ್ ಬಳಿ 70 ಹಾಗೂ ಜೆಡಿಎಸ್ ತೆಕ್ಕೆಯಲ್ಲಿ 32 ಮತಗಳಿವೆ. ತಲಾ 45 ಮತಗಳಂತೆ ಬಿಜೆಪಿ ಎರಡು ಸ್ಥಾನವನ್ನು ಗಳಿಸಬಹುದು. ಕಾಂಗ್ರೆಸ್ ಒಂದು ಸ್ಥಾನವನ್ನು ನಿರಾಯಾಸವಾಗಿ ಗೆಲ್ಲಬಹುದು. ಆದರೆ, 32 ಶಾಸಕರ ಬಲ ಹೊಂದಿರುವ ಜೆಡಿಎಸ್​ಗೆ ಗೆಲುವಿನ ದಡ ತಲುಪಲು ಇತರೆ ಎರಡು ಪಕ್ಷದ ಹೆಚ್ಚುವರಿ ಮತಗಳ ಅಗತ್ಯವಿದೆ.
ಅಡ್ಡ ಮತದಾನ ಹೇಗೆ?:ಮೂರೂ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡಿವೆ. ಪಕ್ಷದ ನಿರ್ಧಾರವನ್ನೂ ಮೀರಿ ಶಾಸಕರು ಬೇರೆ ಬೇರೆ ಕಾರಣಕ್ಕೆ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಫಲಿತಾಂಶ ಬದಲಿಸಿದ ಉದಾಹರಣೆಗಳಿವೆ. ಈ ರೀತಿ ಅಡ್ಡ ಮತದಾನದ ಭೀತಿ ಈ ಬಾರಿಯೂ ಇದೆ. ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಯತ್ನಿಸಿವೆ. ಈ ಪ್ರಯತ್ನ ಫಲ ಕೊಟ್ಟರೆ ಲೆಕ್ಕಾಚಾರ ಬದಲಾಗಿ ಗೆಲ್ಲಬಹುದಾದ ಅಭ್ಯರ್ಥಿಗಳು ನೆಲಕಚ್ಚಬಹುದು.
ನಾಗೇಶ್​ಗೆ ಟಿಕೆಟ್ ಆಫರ್:ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ ಸದ್ಯ ಆಡಳಿತ ಪಕ್ಷದ ಜತೆಗೆ ಗುರುತಿಸಿಕೊಂಡಿದ್ದು, ಅವರ ಓಲೈಕೆಗೆ ಕಾಂಗ್ರೆಸ್ ಹಿರಿಯ ನಾಯಕರು ಹರಸಾಹಸ ಪಟ್ಟಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಕೇಳಿದ ಕ್ಷೇತ್ರದಲ್ಲಿ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಡೆಯಿಂದಲೂ ಕರೆ ಹೋಗಿದೆ. ಆದರೆ, ನಾಗೇಶ್ ಆಡಳಿತ ಪಕ್ಷದ ಜತೆಯೇ ಉಳಿಯುವ ನಿರ್ಧಾರ ತಿಳಿಸಿದ್ದಾರೆ. ಇದೇ ವೇಳೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ನಾಗೇಶ್ ಬೇಡಿಕೆ ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಮನೆಗೆ ಗುಬ್ಬಿ ಶಾಸಕ:ಎಚ್.ಡಿ. ಕುಮಾರಸ್ವಾಮಿ ಜತೆ ಅಂತರ ಕಾಯ್ದುಕೊಂಡಿರುವ ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರನ್ನು ಸಿದ್ದರಾಮಯ್ಯ ಮನೆಗೆ ಕರೆಸಿಕೊಂಡು ಮನವೊಲಿಸುವ ಕೆಲಸ ನಡೆಸಿದರು. ಕೈ ಶಾಸಕ ರಂಗನಾಥ್ ಜತೆಗೆ ಕಾಣಿಸಿಕೊಂಡಿದ್ದರು. ತಾನು ಜೆಡಿಎಸ್​ನಿಂದ ಗೆದ್ದಿದ್ದು, ಪಕ್ಷದ ನಾಯಕರು ಕಡೆಗಣಿಸಿದರೂ ತಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಈ ಮುನ್ನ ಹೇಳಿದ್ದರು.
ಸಿದ್ದರಾಮಯ್ಯ ‘ಆತ್ಮಸಾಕ್ಷಿ’ ಆಪರೇಷನ್:ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್​ನಲ್ಲಿ ಉಂಟಾಗಿರುವ ಬಿರುಕುಗಳ ಲಾಭ ಪಡೆಯಲು ಸಿದ್ದರಾಮಯ್ಯ ಪ್ರಯತ್ನಿಸಿದ್ದು, ಜೆಡಿಎಸ್​ನ ಹಲವು ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಕೋರಿದ್ದಾರೆ. ಜತೆಗೆ ಬಿಜೆಪಿಯ ಕೆಲವು ಶಾಸಕರನ್ನು ಸಹ ಸಂರ್ಪಸುವ ಪ್ರಯತ್ನ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. ಜೆಡಿಎಸ್​ನ ಶಾಸಕ ಗೌರಿಶಂಕರ್ ವಿದೇಶ ಪ್ರವಾಸದಲ್ಲಿದ್ದು ಮತದಾನಕ್ಕೆ ಬರುತ್ತಾರಾ ಎಂಬ ಕುತೂಹಲವಿದೆ. ಜಿ.ಟಿ. ದೇವೇಗೌಡ ತಾವು ಜೆಡಿಎಸ್​ಗೆ ಮತ ಹಾಕುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಜೆಡಿಎಸ್ ಶಾಸಕರಿಗೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ.
|ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ರಾಜ್ಯಸಭೆ ಮತಮೌಲ್ಯ ಸೂತ್ರದ ಪ್ರಕಾರ ನಾಲ್ಕನೇ ಸೀಟಿನಲ್ಲಿ ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯ ಮತಮೌಲ್ಯ ಹೆಚ್ಚಿಗೆ ಬರಲಿದ್ದು ಲೆಹರ್ ಸಿಂಗ್​ಗೆ ಮೇಲುಗೈಯಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಶಾಸಕರು ಚಲಾಯಿಸುವ ಒಂದು ಮತದ ಮೌಲ್ಯ 100 ಆಗಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಆಯ್ಕೆ ಮಾಡಬೇಕಾಗಿದ್ದು, ಅದರ ಸೂತ್ರ ಪ್ರಕಾರ ಒಬ್ಬ ಅಭ್ಯರ್ಥಿ ಗೆಲುವಿಗೆ 4,481 ಮತಮೌಲ್ಯದ ಅಗತ್ಯ ಇದೆ. ಅಂದರೆ ಒಂದು ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತದಾರರು (ಶಾಸಕರು) ಮತ ಚಲಾಯಿಸಬೇಕು. ಒಂದು ಮತದ ಮೌಲ್ಯ 100ರಂತೆ ಈ 45 ಮತಗಳ ಮೌಲ್ಯ 4,500 ಆಗಿರುತ್ತದೆ. ಆದರೆ, ನಾಲ್ಕು ಸ್ಥಾನಗಳಿಗೆ ಚುನಾವಣೆಯ ಮತ ಸೂತ್ರದಂತೆ ಬೇಕಾಗಿರುವುದು 4,481 ಮತಮೌಲ್ಯ. ಅಂದರೆ 19 ಮತಮೌಲ್ಯ ಹೆಚ್ಚುವರಿಯಾಗಿ ಗೆದ್ದ ಅಭ್ಯರ್ಥಿಗೆ ಬಿದ್ದಂತಾಗುತ್ತದೆ.
ಆ ಹೆಚ್ಚುವರಿ 19 ಮತಮೌಲ್ಯವನ್ನು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಮತಕ್ಕೆ ಸೇರಿಸಲಾಗುತ್ತದೆ. ಅದನ್ನು ನಾಲ್ಕನೇ ಸ್ಥಾನದ ಅಭ್ಯರ್ಥಿ ಪರ ಹಾಕಲಾಗುವ ಮೊದಲ ಪ್ರಾಶಸ್ತ್ಯ ಮತಕ್ಕೆ ಸೇರಿಸಲಾಗುತ್ತದೆ. ಹಾಗಿದ್ದಾಗ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ಬೀಳಲಿದೆ. ಆಗ ಎರಡನೇ ಪ್ರಾಶಸ್ತ್ಯ ಮತಗಳನ್ನು ಲೆಕ್ಕ ಹಾಕುವ ಅಗತ್ಯವೂ ಇರುವುದಿಲ್ಲ ಎಂಬ ನಂಬಿಕೆ ಬಿಜೆಪಿಯದ್ದು. ಈ ಸೂತ್ರದ ಪ್ರಕಾರ ಬಿಜೆಪಿ ಮೊದಲ ಅಭ್ಯರ್ಥಿಗೆ 46 ಮತಗಳನ್ನು ಹಾಕಲು ನಿರ್ಧರಿಸಿದೆ. ಮೊದಲ ಪ್ರಾಶಸ್ತ್ಯ ಮತ ಹೆಚ್ಚಳವಾದಷ್ಟು ಮೌಲ್ಯವೂ ಹೆಚ್ಚಲಿದೆ. ಜತೆಗೆ ತಾಂತ್ರಿಕ ಸಮಸ್ಯೆ ತಲೆದೋರದಂತೆ ಎಚ್ಚರಿಕೆವಹಿಸಿದೆ.
ಎರಡನೇ ಪ್ರಾಶಸ್ತ್ಯ ಮತಗಳ ಪರಿಗಣನೆ ಅಂದರೆ ಎಲಿಮಿನೇಷನ್ ಸುತ್ತು ಆರಂಭವಾದಂತೆಯೇ ಲೆಕ್ಕ. ಆ ಪ್ರಕಾರ ಮೊದಲ ಎಲಿಮಿನೇಟರ್ ಮೊದಲ ಪ್ರಾಶಸ್ತ್ಯ ಮತ ಹಾಗೂ ಮೌಲ್ಯ ಕಡಿಮೆಯಿರುವವರು ಹೊರ ಬೀಳುತ್ತಾರೆ. ನಂತರ ಈ ಮತಗಳೆಲ್ಲ ಮುಂದಿರುವ ಅಭ್ಯರ್ಥಿಗೆ ವರ್ಗಾವಣೆಯಾಗಲಿದ್ದು, ಮತ್ತೊಬ್ಬ ಅಭ್ಯರ್ಥಿಯೂ ಎಲಿಮಿನೇಟ್ ಆಗಿ ನಾಲ್ಕನೇ ಸ್ಥಾನ ಭರ್ತಿಯಾಗಲಿದೆ.
ದೇವೇಗೌಡರಿಗೆ ನಾವು ಬೆಂಬಲಿಸಿದ್ದರಿಂದ ಪ್ರಧಾನಿಯಾದರು ಅಲ್ವಾ? ಹೀಗಾಗಿ ಈಗ ಜೆಡಿಎಸ್​ನವರು ನಮಗೆ ಸಹಾಯ ಮಾಡಬೇಕೋ ಬೇಡ್ವೋ?
|ಸಿದ್ದರಾಮಯ್ಯವಿಧಾನಸಭೆ ವಿರೋಧ ಪಕ್ಷದ ನಾಯಕ
ಕ್ರಾಸ್ ಓಟಿಂಗ್ ಮಾಡಿಸಿ ದರೂ ಕಾಂಗ್ರೆಸ್ ಗೆಲ್ಲಲ್ಲ. ನಮಗೆ ಆತಂಕವೂ ಇಲ್ಲ. ಜೆಡಿಎಸ್ ಶಾಸಕರಿಗೆ ಮತ ನೀಡುವಂತೆ ಕೋರಿ ಸಿದ್ದರಾಮಯ್ಯ ಪತ್ರ ಬರೆದಿರುವುದು ನಾಚಿಕೆಗೇಡು.
|ಎಚ್.ಡಿ. ಕುಮಾರಸ್ವಾಮಿಜೆಡಿಎಸ್ ನಾಯಕ
16 ಸ್ಥಾನಗಳಿಗೆ ಎಲೆಕ್ಷನ್:ನವದೆಹಲಿ: 15 ರಾಜ್ಯಗಳ ಒಟ್ಟು 57 ರಾಜ್ಯಸಭೆ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಉತ್ತರಪ್ರದೇಶದಲ್ಲಿ 11 ಸ್ಥಾನಗಳು, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು, ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ಥಾನ, ಕರ್ನಾಟಕದಿಂದ ತಲಾ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 57ರಲ್ಲಿ 41 ಮಂದಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಕೈ-ದಳ ಪರಸ್ಪರ ಮತಯಾಚನೆ:ಮತದಾನಕ್ಕೆ ಒಂದು ದಿನ ಮುನ್ನ ‘ನೀವು ನಮ್ಮನ್ನು ಬೆಂಬಲಿಸಿ’ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಮನವಿ ಮಾಡಿಕೊಂಡರು. ನಾಯಕರ ಮಟ್ಟದಲ್ಲಿ ಎಲ್ಲ ರೀತಿಯ ಮಾತುಕತೆ ಮುಗಿದ ಬಳಿಕ ಈ ‘ಪ್ರಹಸನ ಯಾವುದೇ ಪರಿಣಾಮ ಬೀರಿದಂತೆ ಕಾಣಿಸಲಿಲ್ಲ. ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದಾರೆ.
ಬದಲಾಗಲಿದೆ ಬಲಾಬಲ:ದೇಶದ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯುತ್ತಿದೆ. 12 ನಾಮ ನಿರ್ದೇಶನ ಸದಸ್ಯರನ್ನೂ ಒಳಗೊಂಡಂತೆ 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಶುಕ್ರವಾರ ಬಲಾಬಲ ವ್ಯತ್ಯಾಸ ವಾಗಲಿದೆ. ಪ್ರಸ್ತುತ 119 ಎನ್​ಡಿಎ ಸದಸ್ಯರಿದ್ದರೆ, 122 ಯುಪಿಎ ಮತ್ತು 74 ಮಂದಿ ತಟಸ್ಥರಾಗಿದ್ದಾರೆ (ಚುನಾ ವಣೆ ನಡೆಯುವಾಗ 4 ಸ್ಥಾನ ಖಾಲಿ ಉಳಿದಿತ್ತು).
ಸೇಫ್ ಝೋನ್
1. ನಿರ್ಮಲಾ ಸೀತಾರಾಮನ್
2. ಜೈರಾಮ್ ರಮೇಶ್
3. ಜಗ್ಗೇಶ್
ರಿಸ್ಕ್ ಝೋನ್
1.ಲೆಹರ್ ಸಿಂಗ್
2. ಕುಪೇಂದ್ರ ರೆಡ್ಡಿ
3. ಮನ್ಸೂರ್
ನವದೆಹಲಿ:ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 18ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿದ್ದು, ಜುಲೈ 21ರಂದು ಮತ ಎಣಿಕೆಯಾಗಲಿದೆ. ಒಟ್ಟು 4,809 ಜನಪ್ರತಿನಿಧಿಗಳು ಮತಾಧಿಕಾರ ಹೊಂದಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.
ಮಗಳ ಕಣ್ಮುಂದೆಯೇ ಸಾವಿಗೀಡಾದ ತಂದೆ, ಭೀಕರ ಅಪಘಾತದಲ್ಲಿ ಪುತ್ರಿಗೆ ಗಾಯ..

ಯುವತಿಯನ್ನು ಬೆಂಗಳೂರಿಗೆ ಕರೆದೊಯ್ಯಲು 3 ಆ್ಯಂಬುಲೆನ್ಸ್, ಶಿವಮೊಗ್ಗದಿಂದಲೇ ಜೀರೋ ಟ್ರಾಫಿಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + seventeen =
Remember me
