| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು
ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿ, ವಿವಿಧ ದೇಶಗಳ ಗಮನವನ್ನು ತನ್ನತ್ತ ಸೆಳೆದಿದ್ದ, ರಾಜ್ಯ ರಾಜಕೀಯ ನಾಯಕರು ಹಾಗೂ ಐಪಿಎಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವ ‘ಬಿಟ್ ಕಾಯಿನ್’ ಹಗರಣದ ದಿಕ್ಕನ್ನೇ ಬದಲಿಸುವ ಸ್ಪೋಟಕ ವಿಚಾರ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಗೂ ಮುನ್ನವೇ ಬಿಟ್ ಕಾಯಿನ್ ಹ್ಯಾಕಿಂಗ್​ನಲ್ಲಿ ಕೈಚಳಕ ತೋರಿ ಭೂಗತನಾಗಿದ್ದ ಇನ್ನೊಬ್ಬ ಅಂತಾರಾಷ್ಟ್ರೀಯ ಹ್ಯಾಕರ್​ನನ್ನು ವಿಶೇಷ ತನಿಖಾ ದಳ (ಎಸ್​ಐಟಿ) ಬೇಟೆಯಾಡಿದೆ. ಇದೇ ವೇಳೆ ಹಗರಣ ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್​ಐಟಿ ತಂಡವು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೋರಿರುವುದರಿಂದ ಶೀಘ್ರದಲ್ಲೇ ತನಿಖೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ.
ಪಂಜಾಬ್​ನ ರಾಜೇಂದ್ರ ಸಿಂಗ್ ಬಂಧಿತ ಹ್ಯಾಕರ್. ಬರೋಬ್ಬರಿ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಂಜಾಬ್​ನಲ್ಲಿ ಬಂಧಿಸುವಲ್ಲಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ತಂಡ ಯಶಸ್ವಿಯಾಗಿದೆ. ರಾಜೇಂದ್ರ ಸಿಂಗ್ ಹಗರಣದ ಕಿಂಗ್​ಪಿನ್ ಎಂದು ಹೇಳಲಾಗುತ್ತಿದ್ದು, ವಿಚಾರಣೆ ಸಂದರ್ಭದಲ್ಲಿ ಈತ ಬಾಯ್ಬಿಡುವ ಸಂಗತಿಗಳಿಂದ ಪ್ರಕರಣ ಇನ್ನಷ್ಟು ಗಂಭೀರತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಆರೋಪಿಯನ್ನು ಈಗಾಗಲೇ ಪಂಜಾಬ್​ನಿಂದ ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇಶ, ವಿದೇಶದ ಸರ್ಕಾರಿ ಮತ್ತು ಖಾಸಗಿ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸುತ್ತಿದ್ದ ಗ್ಯಾಂಗ್​ನಲ್ಲಿ ಈವರೆಗೆ ಶ್ರೀಕಿಯೇ ಕಿಂಗ್​ಪಿನ್ ಎನ್ನಲಾಗಿತ್ತು. ಆದರೆ, ಶ್ರೀಕಿಗೂ ಮೊದಲೇ ರಾಜೇಂದ್ರ ಸಿಂಗ್ ಈ ಗ್ಯಾಂಗ್ ಜತೆಗೆ ಕೈ ಜೋಡಿಸಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ. ಮೊದಲಿಗೆ ರಾಜೇಂದ್ರ ಸಿಂಗ್ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುತ್ತಿದ್ದ. ಆನಂತರ ಶ್ರೀಕಿ ಈ ಗ್ಯಾಂಗ್​ಗೆ ಪರಿಚಯವಾಗಿ ಸಕ್ರಿಯನಾಗಿದ್ದ.
2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್​ಮೆಂಟ್ ವೆಬ್​ಸೈಟ್ ಹ್ಯಾಕ್ ಮಾಡಿ 11 ಕೋಟಿ ರೂ. ಎಗರಿಸಲಾಗಿತ್ತು. ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಬಂದಿದ್ದ ಡ್ರಗ್ಸ್ ಪಾರ್ಸೆಲ್ ಪಡೆಯಲು ಬಂದ್ದಿದ್ದಾಗ ಡ್ರಗ್ಸ್ ಪೆಡ್ಲರ್​ಗಳು ಸೆರೆಯಾಗಿದ್ದರು. ಈ ಸಂಬಂಧ ಕೆಂಪೇಗೌಡನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ಆರಂಭವಾದ ನಂತರ ಬಿಟ್ ಕಾಯಿನ್ ಹಗರಣ, ಸ್ಯಾಂಡಲ್​ವುಡ್ ಡ್ರಗ್ಸ್ ದಂಧೆ, ಇ-ಪ್ರೊಕ್ಯೂರ್​ವೆುಂಟ್ ಹ್ಯಾಕಿಂಗ್ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಪೊಲೀಸರಿಗೆ ಸಿಕ್ಕಿಬಿದ್ದ ನಂತರ ಬಂಧನದ ಸುಳಿವು ಅರಿತ ರಾಜೇಂದ್ರ ಸಿಂಗ್ ನಾಪತ್ತೆಯಾಗಿದ್ದ. ಪ್ರಕರಣದಲ್ಲಿ ಈತನಿರುವ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ತನಿಖಾ ಸಂಸ್ಥೆಗಳಿಗೆ ಮೊರೆ:ಬಿಟ್ ಕಾಯಿನ್, ಎಕ್ಸ್​ಚೇಂಜ್ ಕಂಪನಿಗಳ ಪ್ರಧಾನ ಕಚೇರಿಗಳು ವಿದೇಶದಲ್ಲಿರುವ ಕಾರಣಕ್ಕೆ ಕೇಂದ್ರ ತನಿಖಾ ಸಂಸ್ಥೆಗಳ ಸಹಾಯಕ್ಕಾಗಿ ಎಸ್​ಐಟಿ ಮೊರೆ ಹೋಗಿದೆ. ಈಗಾಗಲೇ ಸಿಬಿಐ, ಇಂಟರ್ ಪೋಲ್ ಮುಖಾಂತರ ಕ್ರಿಪ್ಟೋ ಕರೆನ್ಸಿ ಕಂಪನಿಗಳ ಆಡಳಿತಾಧಿಕಾರಿಗಳನ್ನು ಸಂಪರ್ಕ ಮಾಡಲಾಗಿದೆ. ಬಿಟ್ ಕಾಯಿನ್ ಹ್ಯಾಕ್ ಬಗ್ಗೆ, ಯಾವ ವ್ಯಾಲೆಟ್​ನಿಂದ ಯಾರ ವ್ಯಾಲೆಟ್​ಗೆ ವರ್ಗಾವಣೆ ಆಗಿವೆ? ಕರೆನ್ಸಿ ರೂಪ ಪಡೆದುಕೊಂಡಿದೆಯೇ ಹೀಗೆ ಸಾಕಷ್ಟು ಮಾಹಿತಿ ಕೋರಲಾಗಿದೆ. ವಿದೇಶಿ ಕಂಪನಿ, ವಿದೇಶ ತನಿಖಾ ಸಂಸ್ಥೆಗಳಿಂದ ಮಾಹಿತಿ ಬರಲು ಸಾಕಷ್ಟು ಸಮಯ ಬೇಕಾಗಲಿದೆ. ಈ ವರದಿಗಳು ಕೈ ಸೇರಿದರೆ ಇಡೀ ಪ್ರಕರಣದ ದಿಕ್ಕು ಬದಲಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
9 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್:ಹ್ಯಾಕರ್ ಶ್ರೀಕಿ ಕಡೆಯಿಂದ ಸಿಸಿಬಿ ಪೊಲೀಸರು 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್​ಗಳನ್ನು ವಶಕ್ಕೆ ಪಡೆದಿದ್ದರು. ಇದೇ ಪ್ರಕರಣದ ಕುರಿತು ಈಗ ಎಸ್​ಐಟಿ ತನಿಖೆ ಆರಂಭಿಸಿದಾಗ ಪ್ರಕರಣದಲ್ಲಿ ರಾಜೇಂದ್ರ ಸಿಂಗ್ ಎಂಬಾತ ಭಾಗಿಯಾಗಿರುವ ಮಾಹಿತಿ ಸಿಕ್ಕಿತ್ತು. ಆತನ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಎಸ್​ಐಟಿ ಅಧಿಕಾರಿಗಳು ಇತ್ತೀಚೆಗೆ ಪಂಜಾಬ್​ನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಹ್ಯಾಕಿಂಗ್ ಹೇಗೆ?:ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್​ಎ, ಇಥೆರಿಯಂ ಖಾತೆಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಕರೆನ್ಸಿಯನ್ನು ದೋಚಲಾಗಿತ್ತು. ಆನ್​ಲೈನ್ ಗೇಮ್ಳ ವೆಬ್​ಸೈಟ್ ಹ್ಯಾಕ್ ಮಾಡಿ, ಬೆದರಿಸಿ ಬಿಟ್ ಕಾಯಿನ್ ಸುಲಿಗೆ ಮಾಡಿರುವುದು ಗೊತ್ತಾಗಿದೆ. ಪೋಕರ್ ವೆಬ್​ಸೈಟ್​ಗಳು, ಮಾಲ್​ವೇರ್
ಎಕ್ಸ್​ಪ್ಲೋಟೆಡ್ ಹ್ಯಾಕ್ ಮಾಡಿದ್ದ ವಿಷಯ ಬೆಳಕಿಗೆ ಬಂದಿತ್ತು. ಈ ಬಿಟ್ ಕಾಯಿನ್​ಗಳನ್ನೇ ಬಳಸಿ ಡಾರ್ಕ್ ವೆಬ್​ಸೈಟ್​ಗಳಲ್ಲಿ ವಿದೇಶಿ ಪೆಡ್ಲರ್​ಗಳನ್ನು ಸಂಪರ್ಕ ಮಾಡಿ ಅವರಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿ ದಂಧೆ ನಡೆಸುತ್ತಿದ್ದರೆಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಿಜಿಟಲ್ ಸಾಕ್ಷ್ಯಾಧಾರಗಳ ಸಂಗ್ರಹ:ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಕಾಟನ್​ಪೇಟೆ ಠಾಣೆಯ ಬಿಟ್ ಕಾಯಿನ್ ಪ್ರಕರಣ ಮತ್ತು ಸಿಐಡಿ ಸೈಬರ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದ್ದ ಇ-ಪ್ರಾಕ್ಯೂರ್​ವೆುಂಟ್ ವೆಬ್​ಸೈಟ್ ಕನ್ನ ಪ್ರಕರಣಗಳನ್ನು ಒಟ್ಟಾಗಿ ಎಸ್​ಐಟಿ ತನಿಖೆ ಕೈಗೊಂಡಿದೆ. ಶ್ರೀಕಿ ವ್ಯಾಲೆಟ್ ಮತ್ತು ಇತರ ವ್ಯಾಲೆಟ್​ಗಳಲ್ಲಿ ಪ್ರೖೆವೇಟ್ ಕೀ ಬಳಸಿ ಬಿಟ್ ಕಾಯಿನ್​ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ಈ ತನಿಖೆ ಮೇರೆಗೆ ಶ್ರೀಕಿ ಸೇರಿ ಮೂವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಡಿಜಿಟಲ್ ಮಾಹಿತಿ, ಬ್ಯಾಂಕ್ ಖಾತೆ ವಿವರ ಕಲೆ ಹಾಕಲಾಗಿದೆ. ಸಾಕಷ್ಟು ರಿಕವರಿ ಸಹ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
