| ಬಿ.ಆರ್​.ಲಕ್ಷ್ಮಣ್​ ರಾವ್​
ನಿಸಾರ್ ಅಹಮದ್ ಮೂಲತಃ ಕಾಸ್ಮೋಪಾಲಿಟಿನ್​ ಮತ್ತು ಸೆಕ್ಯೂಲರ್ ಮನೋಧರ್ಮದ ಕವಿ.
ಸರ್ವಧರ್ಮ ಸಮನ್ವಯವಾದದ ಆದರೂ ಆಳದಲ್ಲಿ ಆಜ್ಞೇಯವಾದದ (agnosticism) ಒಳಸುಳಿಗಳುಳ್ಳ ಉದಾರಮಾನವತಾವಾದ ನಿಸಾರರದ್ದೆನ್ನಬಹುದು. ಅವರ ಈವರೆಗಿನ ಕಾವ್ಯವನ್ನು ಅಭ್ಯಾಸ ಮಾಡಿದಾಗ ಅವರ ಮೇಲೆ ಉಳಿದೆಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಧರ್ಮ, ತತ್ವ, ಪುರಾಣ ಮತ್ತು ಸಾಹಿತ್ಯಗಳ ಅಗಾಧ ಪ್ರಭಾವ ಎದ್ದು ತೋರುತ್ತದೆ.
ನಿಸಾರರ ಮೊದಲೆರಡು ಕವನ ಸಂಕಲನಗಳಾದ ‘ಮನಸು ಗಾಂಧಿ ಬಜಾರು ಮತ್ತು ‘ನೆನೆದವರ ಮನದಲ್ಲಿ’ ವರೆಗೆ ಅವರಲ್ಲಿ ಸಂಸ್ಕೃತಿ ವಿಭಿನ್ನತೆಯ, ಪರಕೀಯ ಭಾವದ ಯಾವ ಸಂದಿಗ್ಧಗಳೂ ಆತಂಕಗಳೂ, ಸಂಘರ್ಷಗಳೂ ಕಂಡು ಬರುವುದಿಲ್ಲ. ಕೇವಲ ಅವರ ಹೆಸರಿನಿಂದ ಮತ್ತು ಅವರ ಕಾವ್ಯಭಾಷೆಯಲ್ಲಿ ಅಲ್ಲಲ್ಲಿ ಕಂಡು ಬರುವ ಪರ್ಷಿಯನ್, ಉರ್ದೂ ಪದ, ನುಡಿಗಟ್ಟುಗಳಿಂದ ಮಾತ್ರವೇ ನಾವು ಅವರ ಧರ್ಮದ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ದ್ವಂದ್ವವಿಲ್ಲದ, ಪರಿಪೂರ್ಣ ಭಾರತೀಯಪ್ರಜ್ಞೆ ಅವರ ಕವನಗಳ ಹಿಂದಿದೆ..? ಇದಕ್ಕೆ ಉದಾಹರಣೆಯಾಗಿ ಅವರ ‘ಮನಸು ಗಾಂಧಿ ಬಜಾರು ಸಂಕಲನದ ‘ಅತಿ ಸನಾತನ ಎಂಬ ಕವನ ನೋಡಬಹುದು.
ಅತಿ ಸನಾತನ ನಿನ್ನ ತಲೆಮಾರ ಚಾರಿತ್ರ್ಯ;ನಿನ್ನಲ್ಲಿ ಜನಿಸಿದುದೆ ನನಗ ಮಾನ
ಎಂದು ಪ್ರಾರಂಭವಾಗುವ ಕವನ ಈ ರೀತಿಯ ಧನ್ಯತಾಭಾವದಲ್ಲಿ ಕೊನೆಗೊಳ್ಳುತ್ತದೆ :
ಹಿರಿತನದ ಎದುರಿನಲಿ ಮೌನವೇ ಗುಣಗಾನಬಾಯಿಬಿಟ್ಟರೆ ಮಾತು ಅರ್ಥ ಹೀನನಿನ್ನಮರ ಸಂತಾನದಲ್ಲಿ ದೊರಕಿದೆ ಸ್ಥಾನಅದಕಿಂತ ಬೇಕಿಲ್ಲ ಬೇರೆ ಮಾನ.
‘ನೆನೆದವರ ಮನದಲ್ಲಿ ಸಂಕಲನದ ‘ಶ್ರೀ ಪುರಂದರದಾಸರು ಎಂಬ ಕವನ ಹಿಂದೂ ಮನೋಧರ್ಮ ಮತ್ತು ಸಂವೇದನೆಗಳಲ್ಲಿ ನಿಸಾರ್ ಎಷ್ಟು ತಾದಾತ್ಮ್ಯ ಸಾಧಿಸಿದ್ದಾರೆಂಬುದಕ್ಕೆ ಸ್ಪಷ್ಟ ನಿದರ್ಶನ. ಪುರಂದರದಾಸರ ಬಗ್ಗೆ ಇದಕ್ಕಿಂದ ಹೆಚ್ಚು ಸುಂದರವಾದ, ಭಾವಪೂರ್ಣ, ಅರ್ಥಪೂರ್ಣ ಕನವವೊಂದನ್ನು ಯಾರಾದರೊಬ್ಬ ಕನ್ನಡನಾಡಿನ ಹಿಂದೂ ರಚಿಸಬಲ್ಲನೆಂಬ ಬಗ್ಗೆ ನನಗೆ ಅನುಮಾನವಿದೆ. ಇದೇ ಸಂಕಲನದ ‘ಮದುವೆ ಎಂಬ ಕವಿತೆ ಸಹ ಹಿಂದೂ ರೀತಿನೀತಿಗಳಲ್ಲಿ ಕವಿಗಿರುವ ಗಾಢ ಅರಿವು ಮತ್ತು ಕವಿ ಸಾಧಿಸಿರುವ ಸಹಜ ತಾದಾತ್ಮ್ಯವನ್ನು ತೋರುತ್ತದೆ.
ಕವಿಯ ಅಂದಿನ ಧ್ವಂದ್ವಮುಕ್ತ ನಿರಾತಂಕ ಮನಸ್ಥಿತಿಗೆ, ಉದಾರ ಜೀವನ ದೃಷ್ಟಿಗೆ, ಬಹುಶಃ ಕವಿ ಬೆಳೆದು ಬಂದ ಅಂದಿನ ಪರಿಸರ, ಪಡೆದ ವಿದ್ಯಾಭ್ಯಾಸಗಳನ್ನು, ಕಾವ್ಯಾಭಿವ್ಯಕ್ತಿಗೆ ಆಯ್ದುಕೊಂಡ ಕನ್ನಡ ಭಾಷೆಯ ಸಂಸ್ಕೃತಿ, ಕವಿಯ ಗಮನದಲ್ಲಿದ್ದ ಓದುಗರು, ಶ್ರೋತೃಗಳು, ವಿಮರ್ಶಕರು ಇತ್ಯಾದಿ ಹಲವು ಕಾರಣಗಳನ್ನು ಊಹಿಸಬಹುದು.
ಆದರೆ ಸೂಕ್ಷ್ಮಜ್ಞನೂ ಸಂವೇದನಾಶೀಲನೂ ಆದ ಕವಿಯಲ್ಲಿ ತನ್ನ ಸ್ವೋಪಜ್ಞತೆ ಮತ್ತು ವಿಶಿಷ್ಟತೆಯ ಅರಿವು ತಡವಾಗಿಯಾದರೂ ಪ್ರಕಟಗೊಳ್ಳದೇ ಉಳಿಯಲಾರದು. ಇದಿಲ್ಲದೆ ಅವನ ಬೆಳವಣಿಗೆಯಿಲ್ಲ ಮತ್ತು ಕಾವ್ಯಕ್ಕೆ ಅನನ್ಯತೆಯ ಛಾಪು ಒದಗಲಾರದು.
ನಿಸಾರರಲ್ಲಿ ಈ ವಿಶಿಷ್ಟತೆಯ ಅರಿವು ಸಹಜವಾಗಿ, ಅನಿವಾರ್ಯವಾಗಿ ಮೂಡಿದೆಯಾದರೂ, ಕೆಲವು ನೋವಿನ ಸಂಕಟದ ಅಹಿತ ಅನುಭವಗಳು ಅವರ ಅರಿವನ್ನು ತ್ವರಿತಗೊಳಿಸಿರಬಹುದಾದ ಸ್ಪಷ್ಟ ಸೂಚನೆಗಳು ‘ಸುಮಹೂರ್ತದಿಂದಾಚೆಗಿನ ಅವರ ಸಂಕಲನಗಳ ಕೆಲವು ಕವನಗಳಲ್ಲಿ ದೊರೆಯುತ್ತವೆ. ‘ಸುಮುಹೂರ್ತ ಸಂಕಲನದ ‘ಉಭಯ ಕಷ್ಟ ಎಂಬ ಕವನದಲ್ಲಿ ಭಾರತ ದೇಶದಲ್ಲಿನ ಒಬ್ಬ ಮುಸಲ್ಮಾನ ಅವನು ತನ್ನ ಜನ್ಮಭೂಮಿಯಾದ ಭಾರತದ ಬಗ್ಗೆ ಎಷ್ಟೇ ಪ್ರೀತಿ, ನಿಷ್ಠೆಯಿಂದಿದ್ದರೂ ಅವನನ್ನು ಸದಾ ಗುಮಾನಿಯಿಂದಲೇ ನೋಡುತ್ತಾ ಕೆದಕುತ್ತಾ, ಚುಚ್ಚುತ್ತಾ, ಕೆಣಕುವ ವಿದ್ಯಾವಂತರು ಬುದ್ಧಿಜೀವಿಗಳು ಅನ್ನಿಸಿಕೊಂಡ ಮತಾಂಧರಿಂದ ನೊಂದಿರುವ ಪರಿಯನ್ನು ಕವಿ ಹೀಗೆ ಹೇಳುತ್ತಾರೆ :
ರಾಷ್ಟ್ರದ ಕವಾಯ್ತಿನಲಿ ತಪ್ಪುಗಾಲನು ಹಾಕಿಸತ್ಯವನು ಮಂಡಿಸಲೆ ?ಗಲ್ಲು ; ದೇಶದ್ರೋಹಿ.ನರಿ ತೋಳಗಳ ಜೊತೆಯಲ್ಲೆ ಆಡು ಆಕಳ ಬಲಿಯಅನ್ಯಾಯ ಖಂಡಿಸಲೆ ?ಲೇಬಲ್ಲು : ಸ್ವಧರ್ಮ ಮೋಹಿ.
ಆದ್ದರಿಂದಲೇ ಕವಿ, ಇದೇ ಸಂಕಲನದ ‘ವಾಸ್ತವಿಕ ಎಂಬ ಕವನದಲ್ಲಿ ಒಬ್ಬ ಮನುಷ್ಯನ ನಿಜವಾದ ವಾಸ್ತವಿಕವೇನು ಎಂಬ ಬಗ್ಗೆ ಹೀಗೆ ಹೇಳುತ್ತಾರೆ :
ಕಳಚಿ ಒಂದೊಂದೇ : ಕನ್ನಡದ ಗಡಿಯಾರಚೈನು ಕೆರ ಪೋಷಾಕು-ದಿಗಂಬರತೆ ವಾಸ್ತವಿಕ.ಕಳಚಿ ದೇಶ ಸಮಾಜ ಧರ್ಮ ಮತ ವರ್ಗಗಳ,ನಿರ್ಮಮತೆ ವಾಸ್ತವಿಕಕಳಚಿದ್ದನೆಣಿಸದಿರಿ ಹಾಕಿ ಲೆಕ್ಕಾಚಾರ,ಉಳಿದದ್ದು ವಾಸ್ತವಿಕನಿಲ್ಲಿ, ಹುಟ್ಟಿದ ಹಾಗೆ ಗೊಮ್ಮಟನನುಕರಿಸಿ,ನೋಡಿ ಕನ್ನಡಿಯಲ್ಲಿ ನಿಮ್ಮ ಮುಖ :ಚರ್ಮ ಚಕ್ಕಳ ಮಾಂಸದಾಚೆ ಕಾಣದ ಪ್ರಾಣಅದರರಿವೆ ವಾಸ್ತವಿಕ
ನಿಸಾರರ ಕಾವ್ಯದಲ್ಲಿ ಸಂಸ್ಕೃತಿ ವಿಭಿನ್ನತೆ ತೋರುವ, ಸಂಪೂರ್ಣ ಮುಸ್ಲಿಂ ಎನ್ನಬಹುದಾದ ಅನುಭವವೊಂದರ ಬಗ್ಗೆ ಬಂದ ಮೊಟ್ಟ ಮೊದಲ ಕವನ, ಅವರ ‘ಸಂಜೆ ಐದರ ಮಳೆ ಸಂಕಲನದ ‘ಅಮ್ಮ, ಆಚಾರ, ನಾನು; ಹೆಂಗಸರಿಗೆ ಬುರ್ಕಾ ತೊಡಿಸುವಂಥ ತಾನು ಒಪ್ಪದ ಒಂದು ಮುಸ್ಲಿಂ ಕಂದಾಚಾರವನ್ನು ಇಲ್ಲಿ ಕವಿ ಲೇವಡಿ ಮಾಡಿದ್ದಾರೆ. ಆ ಕಂದಾಚಾರವನ್ನು ವಿಚಾರ ವಿಮರ್ಶೆಗೆ ಈಡು ಮಾಡುವಷ್ಟು ದಿಟ್ಟತನ ಆ ಕಾಲಕ್ಕೆ ಕವಿಯಲ್ಲಿರಲಿಲ್ಲವೆಂದು ತೋರುತ್ತದೆ. ಮಾರ್ಮಿಕವಾದ ಅನುಭವವೊಂದಕ್ಕೆ ಹಾಸ್ಯದ ಲೇಪ ಕೊಟ್ಟು ತೇಲಿಸಿಬಿಟ್ಟಿದ್ದಾರೆ. ಇದೇ ಸಂಕಲನದ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ ಎಂಬ ಕವನ ‘ಉಭಯ ಕಷ್ಟದ ಧಾಟಿಯಲ್ಲೇ ಇದೆ. ಆದರೆ ಇಲ್ಲಿನ ಪರಕೀಯತೆಯ ಅನುಭವದಲ್ಲಿ ಇನ್ನಷ್ಟು ತೀವ್ರತೆ, ವ್ಯಂಗ್ಯ, ವಿಷಾದ, ಹತಾಶೆ ಇವೆ. ಆದರೆ ‘ಉಭಯ ಕಷ್ಟ ದಂತೆಯೇ ಈ ಕವನವೂ ಸಹ ಆತ್ಮಾನುಕಂಪ ಮತ್ತು ವೈಯಕ್ತಿಕ ಪ್ರತಿಕ್ರಿಯೆಗಳ ಮಟ್ಟ ಮೀರಿ ಸಾರ್ವತ್ರಿಕ ಎತ್ತರಕ್ಕೆ ಏರುವುದಿಲ್ಲ.
ಈ ಪರಕೀಯತೆ, ಈ ದ್ವಂದ್ವ ಕವಿಯ ಅಂತರಂಗದಲ್ಲಿ ಒಂದು ಅಸ್ಪಷ್ಟ ಅನುಭವವಾಗಿ ಕಾಡಿ, ಅವರನ್ನು ಇನ್ನೂ ಅನಿಶ್ಚಿತ ಸ್ಥಿತಿಯಲ್ಲೇ ನಿಲ್ಲಿಸಿರುವ ಚಿತ್ರ ‘ನಾನೆಂಬ ಪರಕೀಯ ಕಿರುಗವನದಲ್ಲಿದೆ. ಈ ಅನಿಶ್ಚಿತತೆಯನ್ನು ದಾಟಿ, ತನ್ನ ಸಂಸ್ಕೃತಿ ವಿಭಿನ್ನತೆಯನ್ನು ಒಂದು ಸವಾಲಾಗಿ, ತನ್ನ ವ್ಯಕ್ತಿತ್ವದ ಒರೆಗಲ್ಲಾಗಿ ಸ್ವೀಕರಿಸಿ, ಖಚಿತವಾಗಿ ಗುಣಾತ್ಮಕವಾದ ನಿಲುವುಗಳಿಗೆ ಕವಿ ತಲುಪಿರುವ ಸ್ಪಷ್ಟ ಸೂಚನೆ ‘ನಾನೆಂಬ ಪರಕೀಯ ಸಂಕಲನದ ಇಬ್ಬಂದಿ ಕವನದ ಕೊನೆಯ ಈ ಸಾಲುಗಳಲ್ಲಿದೆ :
ನನ್ನ ಲೋಕೋದಾರದನ್ಯತೆಯ ಕಾಫರತನಕ್ಕೆದೆ ಕುಸಿದು ಅತ್ತರೀಗಸಂತೈಸದು ವಿಗ್ರಹ, ಬಾ ಎನ್ನದು ಕಾಬಾ.ಸತ್ತರಗ್ನಿ ಸಂಸ್ಕಾರವಿತ್ತ, ಗುಣಿ ಮಣ್ಣ ಭಾರವತ್ತ ;ವಾಮಕ್ಕೆ ಸಂಸ್ಕೃತ, ಬಲಕ್ಕರಬ್ಬೀ-ಸಮನ್ವತಿನಾನೆತ್ತ ?ನಿರ್ಧರಿಸುವೆನೀಗ ರಂಜಾನಿನ ಬ್ರಾಹ್ಮೀ ಮುಹೂರ್ತದಲ್ಲಿ:ಹಸಿರು ಬಾವುಟವತ್ತ, ಭಗವಾ ಧ್ವಜವಿತ್ತ ;ಇಲ್ಲಿ ಕದಂಬವಲ್ಲಿ ಖರ್ಚೂರಒಂದೆ ಭೂಖಂಡದ ಪಿಂಡವೆರಡು.ಆರಣ್ಯಕ ಶಾಂತ ವೇದವೀ ಕಡೆಆ ಕಡೆಗೆ ಗುಹಾಂತರದ ಜ್ವಲಂತ ಬೋಧ-ಖನಿಜ ವ್ಯತ್ಯಸ್ತತೆಯ ಜೋಡಿ ಕೋಡು.ನಿರ್ಧರಿಸುವೆನೀಗ ಬ್ರಾಹ್ಮೀ ಮುಹೂರ್ತದ ರಂಜಾನಿನಲ್ಲಿಎದೆ ಸೀಯುವಾತಂಕದಲ್ಲಿ :ಸಮಜಾಯಿಷಿಯ ಸುಲಭೋಪಾಯದಲ್ಲಿ ಕೊರಗುವುದಿಲ್ಲ :ವಿರುದ್ಧಗಳನೊಪ್ಪುವೆ, ಆದರೆ-ಕೂಡಿಸದೆ,ಭಿನ್ನತೆಯನರಿಯುವೆ, ಆದರೆ-ತಿಕ್ಕಾಡಿಸದೆ
‘ಅನಾಮಿಕ ಆಂಗ್ಲರು ಸಂಕಲನದ ವೇಳೆಗೆ ಕವಿಯಲ್ಲಿ ತನ್ನ ಸಂಸ್ಕೃತಿ ವಿಭಿನ್ನತೆಯ ಮತ್ತು ವಿಶಿಷ್ಟತೆಯ ಸ್ಪಷ್ಟ ಖಚಿತ ಅರಿವು ಮೂಡಿದೆ. ಈಗ ಅವರಲ್ಲಿ ಆತ್ಮಮರುಕವಿಲ್ಲ, ಆತ್ಮಾಭಿಮಾನವಿದೆ. ಪರಕೀಯತೆಯ ಅನುಮಾನ, ಆತಂಕಗಳಿಲ್ಲ. ತನ್ನ ನಿಷ್ಕಲ್ಮಷ ದೇಶಪ್ರೇಮದ ಬಗ್ಗೆ, ಆತ್ಮೀಯತೆಯ ಬಗ್ಗೆ ದೃಢನಂಬಿಕೆಯಿದೆ, ಹೆಮ್ಮೆಯಿದೆ ಆದ್ದರಿಂದಲೇ ‘ಸ್ವಜನೋದ್ಧಾರಕರು, ಕವನದಲ್ಲಿ ಕಾಲಿಟ್ಟ ಕಡೆ ಹಗೆಯ ಹೆಬ್ಬುನಾದಿಯ ಮೇಲೆ ಅಶ್ರುಮಂದಿರಗಳನು ಮೆರೆಸುವ, ಮತಾಂಧರಾದ ತನ್ನ ‘ಕೋಮಿನ ಕಂತ್ರಾಟುದಾರರನ್ನು ಚಾಟಿ ಮಾತುಗಳಿಂದ ಹಳಿದು ಟೀಕಿಸುವ ನಿರ್ಭೀತ ನಿಷ್ಪಕ್ಷಪಾತ ದಿಟ್ಟತನವನ್ನು ಕವಿ ತೋರಿಸಿದ್ದಾರೆ.
‘ರಂಗೋಲಿ ಮತ್ತು ಮಗ ಕವನದಲ್ಲಿ, ಹಾಗೂ ‘ಅಮ್ಮ, ಆಚಾರ ನಾನು ಕವನದಲ್ಲಿನಂತೆ ಸಂಸ್ಕೃತಿ ವಿಭಿನ್ನತೆಯ ಒಂದು ಮಾರ್ಮಿಕ ಅನುಭವವನ್ನು ಹಾಸ್ಯದ ಲೇಪಕೊಟ್ಟು ಜಾಣ ಮಾತುಗಾರಿಕೆಯಲ್ಲಿ ತೇಲಿಸಿಬಿಡದೆ, ದಿಟ್ಟತನದ ಆತ್ಮಪರೀಕ್ಷೆಗೆ ಕವಿ ತನ್ನನ್ನು ಒಡ್ಡಿಕೊಂಡಿದ್ದಾರೆ. ಆಧುನಿಕರ ಧಾರ್ಮಿಕಾಚರಣೆಗಳ ಪೊಳ್ಳುತನದ ಬಗ್ಗೆ ಧ್ವನಿಪೂರ್ಣವಾದ ಗಂಭೀರ ವಿಮರ್ಶೆ ಚಿಂತನೆ ನಡೆಸಿದ್ದಾರೆ. ಹಾಗೆಯೇ ಭಾರತದ ಇಂದಿನ ಅವನತಿಗೆ ಕಾರಣರಾದ ಭ್ರಷ್ಟ ಭಾರತೀಯರೆಲ್ಲರನ್ನೂ ಕಟು ಮಾತುಗಳಿಂದ ಟೀಕಿಸುವ ಬಿಚ್ಚುಮನಸ್ಸೂ ಕವಿಗೊದಗಿದೆ: ಉದಾಹರಣೆಗೆ ‘ಮುತ್ತೈದೆಯ ಮುದ್ದುಗಾರರು ಕವನದ ಕೊನೆಯ ಈ ಸಾಲುಗಳನ್ನು ನೋಡಬಹುದು :
ದಂತ ವೈದ್ಯರ ಕಪಿಲೆ ನಮ್ಮ ಮುತ್ತೈದೆ ಮುಖ !ಈ ಸ್ವತಂತ್ರೆಗೆ ಸ್ವಂತದವರಿಂದ ಸಿಗಲಿಲ್ಲ ಸುಖ.ಯಮಯಾತನೆಯ ಜೊತೆಗೆ ತಾಯಿಗಂಡರ ಸಹಿಸಿ,ಹಲ್ಲು ಕಿರಿದಿದ್ದಾಳೆ ಅರೆ ಹುಚ್ಚಿ ಗಹಗಹಿಸಿ.
ಈಗ ಕವಿ ಕೇವಲ ವೈಯಕ್ತಿಕ ಪ್ರತಿಕ್ರಿಯೆಗಳ ಮಟ್ಟದಲ್ಲೇ ನಿಲ್ಲದೆ, ತನ್ನಂಥ, ವಿಭಿನ್ನ ಸಂಸ್ಕೃತಿಯವರಾದರೂ ನಿಷ್ಕಲ್ಮಷ ಮನಸ್ಸಿನಿಂದ ತಾಯ್ನಾಡನ್ನು ಪ್ರೀತಿಸುವ ಎಲ್ಲ ವರ್ಗದವರ ಪ್ರತಿನಿಧಿಯಾಗಿದ್ದಾರೆ. ಕವಿಯ ಇಂದಿನ ಅಚಲ ನಿಲುವು ಅವರ ‘ಸವತಿ ಮಕ್ಕಳ ಹಾಗೆ ಕವನದ ಈ ಕೊನೆಯ ಸಾಲುಗಳಲ್ಲಿ ಖಚಿತವಾಗಿ ರೂಪಿತವಾಗಿದೆ:
ಬೆಳಕ ಕಂಡೆವು ಇಲ್ಲೆ, ಬಾಡಿ ಬೀಳುವೆವಿಲ್ಲೆ,ಏನಾಟ ನಡೆದರೂ ನಿನ್ನಡಿಯ ಗಡಿಯಲ್ಲೆ,ಮರಳ ಸಣ್ಣಾಗಿ ಬಾಳ್ದೊರೆಯ ತಡಿಯಲ್ಲೆಸುಡುಬಿಸಿಲನುಂಡರೂ, ಕೈ ನೀಡಿನೆಡೆಯಲ್ಲೆಹರಿದ ನೀರನು ಕಂಡು, ನೀರಡಿಕೆ ಉಲ್ಬಣಿಸಿ,ನಿನ್ನ ಹಳಿಯುವ ಖೋಡಿ ತಿಳಿಗೇಡಿಗಳ ಹರಸಿ-ತೆಗೆದು ಇವರನ್ನೂ ಲೆಕ್ಕಕ್ಕೆ ತಾಯೆಪರದೆಯೆಳಿ ಇವರೆದೆಯ ದುಃಖಕ್ಕೆ ತಾಯೆ,ಸವತಿ ಮಕ್ಕಳ ಹಾಗೆ ಕಾಡಬೇಡವ್ವಸವತಿ ಮಕ್ಕಳ ಹಾಗೆ ಕಾಡಬೇಡ.
ಒಟ್ಟಾರೆ ತಮ್ಮ ಸಂಸ್ಕೃತಿ ವಿಭಿನ್ನತೆಯ ಅರಿವಿನ ಪ್ರಾರಂಭಿಕ ಹಂತಗಳಲ್ಲಿ ಕವಿನಿಸಾರರನ್ನು ಪರಿಕೀಯತೆ ಮತ್ತು ವಿಕ್ಷಿಪ್ತತೆಯ ನೋವು, ಅನುಮಾನ, ಆತಂಕಗಳು ನರಳಿಸಿವೆಯಾದರೂ ಈಗಿನ ಅವರ ಅರಿವು ತಿಳಿಯಾಗಿ, ಭಾವೋದ್ವೇಗ ಸಮಸ್ಥಿತಿಗೆ ಬಂದಿದೆ. ಸಂಸ್ಕೃತಿ ವಿಭಿನ್ನತೆ ಈಗ ಅವರಿಗೊಂದು ಅನನ್ಯತೆ, ವಿಶಿಷ್ಟತೆ ನೀಡಿರುವ ಗುಣಾತ್ಮಕಮೌಲ್ಯವಾಗಿ, ಅವರ ಕಾವ್ಯಕ್ಕೆ ಸ್ವಾಗತಾರ್ಹವಾದ ಒಂದು ವಿಶೇಷ ಅರ್ಥವಂತಿಕೆ ಮತ್ತು ಆಯಾಮ ನೀಡಿದೆ.
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:15 − 1 =
Remember me
