| ರಾಘವ ಶರ್ಮ ನಿಡ್ಲೆ, ನವದೆಹಲಿಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಂಘಟನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿರುವ ಬಿಜೆಪಿ ವರಿಷ್ಠರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಸಿ.ಟಿ. ರವಿ ಅವರನ್ನು ಹೊಸ ತಂಡದಿಂದ ಕೈಬಿಟ್ಟಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಹೊಸ ಜವಾಬ್ದಾರಿ ಕಾರಣದಿಂದ ಕೈಬಿಡಲಾಗಿದೆಯೋ ಅಥವಾ ಬೇರೆ ಕಾರಣವೋ ಎಂಬುದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಪ್ರಧಾನ ಕಾರ್ಯದರ್ಶಿಗಳ ಹುದ್ದೆ 3 ವರ್ಷದ ಅವಧಿಗಿರುತ್ತದೆ. 2020ರ ಸೆ.26ಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ರವಿ ಸೆ.26ಕ್ಕೆ ಮೂರು ವರ್ಷ ಪೂರ್ಣಗೊಳಿಸಬೇಕಿತ್ತು. ಕಾರ್ಯಾವಧಿ ಪೂರ್ಣಗೊಳ್ಳುವ 2 ತಿಂಗಳ ಮೊದಲೇ ಹೊಸ ತಂಡ ರಚನೆ ಮಾಡಲಾಗಿದ್ದು, ರವಿ ಅವರನ್ನು ಹುದ್ದೆಯಿಂದ ಕೈಬಿಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಿಂದ ಯಾರೂ ಆಯ್ಕೆಯಾಗಿರಲಿಲ್ಲ. ಸಿ.ಟಿ. ರವಿಗೆ ಈ ಅದೃಷ್ಟ ಒಲಿದುಬಂದಿತ್ತು. ಹೀಗಾಗಿ, ಅವರು ರಾಜ್ಯದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರ ಸಂಘಟನೆ ಸೇರಿಕೊಂಡಿದ್ದರು. ಮಹಾರಾಷ್ಟ್ರ, ತಮಿಳುನಾಡು ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ರವಿ ಸಕ್ರಿಯರಾಗಿದ್ದರು. ಆದರೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೊಸದಾಗಿ ರಚಿಸಿರುವ ತಂಡದಿಂದ ರವಿಯವರನ್ನು ಹೊರಗಿಡಲಾಗಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೊರತುಪಡಿಸಿದರೆ ರಾಜ್ಯದಿಂದ ಬೇರೆ ಯಾರಿಗೂ ಸ್ಥಾನ ಸಿಕ್ಕಿಲ್ಲ. ಬಿ.ಎಲ್.ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನ?:ಏತನ್ಮಧ್ಯೆ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೂ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿರುವ ಬಿಜೆಪಿ ವರಿಷ್ಠರು ರವಿಗೆ ಈ ಜವಾಬ್ದಾರಿ ನೀಡುತ್ತಾರೆಂಬ ಚರ್ಚೆ ಪಕ್ಷದಲ್ಲಿದೆ. ಒಕ್ಕಲಿಗ ಸಮುದಾಯದ ಸಿ.ಟಿ. ರವಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ, ರಾಜ್ಯಾದ್ಯಂತ ಬೆಂಬಲಿಗ ಕಾರ್ಯಕರ್ತ ವರ್ಗವನ್ನು ಹೊಂದಿದ್ದಾರೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದಿಂದ ರವಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಬಲವಾಗಿ ಕೇಳಿಬರುತ್ತಿದೆ. ಸಿ.ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ. ಈ ಬಗ್ಗೆ ಹೈಕಮಾಂಡ್ ಕೂಡ ತೀರ್ಮಾನ ಮಾಡಿದೆ ಎಂದು ಕೆಲ ದಿನಗಳ ಹಿಂದೆ ಪತ್ರಕರ್ತರೊಂದಿಗೆ ಮಾತನಾಡಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ರವಿಯವರನ್ನು ಕೇಂದ್ರ ಸಂಘಟನೆಯ ಜವಾಬ್ದಾರಿಯಿಂದ ತೆರವುಗೊಳಿಸಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಮುನ್ನುಗ್ಗುವ ಸ್ವಭಾವ:ವಿಧಾನಸಭೆ ಸೋಲಿನಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿ ಸಂಘಟನೆಗೆ ಶಕ್ತಿ ತುಂಬಬಲ್ಲ ನಾಯಕತ್ವ ಬೇಕಿದೆ. ಬಿಜೆಪಿಯಲ್ಲಿನ ದುರ್ಬಲ ನಾಯಕತ್ವ ಹಾಗೂ ಹೊಂದಾಣಿಕೆ ರಾಜಕಾರಣದಿಂದ ಹೈರಾಣಾಗಿರುವ ಕಾರ್ಯಕರ್ತ ವರ್ಗ ಆಕ್ರಮಣಕಾರಿ ಮತ್ತು ಮುನ್ನುಗ್ಗುವ ಸ್ವಭಾವದ ನಾಯಕನನ್ನು ಎದುರು ನೋಡುತ್ತಿದೆ. ಸಿ.ಟಿ. ರವಿ ಮತ್ತು ಶೋಭಾ ಕರಂದ್ಲಾಜೆಯವರಲ್ಲಿ ಈ ಧೋರಣೆಗಳಿರುವುದರಿಂದಲೇ ಅವರಿಬ್ಬರ ಹೆಸರು ಮುನ್ನೆಲೆಗೆ ಬಂದಿದೆ. ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಲು ಇಬ್ಬರೂ ಮಾನಸಿಕವಾಗಿ ಸಿದ್ಧರಾಗಿದ್ದು, ಹೈಕಮಾಂಡ್ ಆಯ್ಕೆ ಕುತೂಹಲ ಕೆರಳಿಸಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಒಕ್ಕಲಿಗರನ್ನು ಪರಿಗಣಿಸಿದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಲಿಂಗಾಯತ ಮುಖಂಡರಿಗೆ ನೀಡುವುದು ಅನಿವಾರ್ಯವಾಗಬಹುದು.

ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಾನು ಕೇಳಿ ಪಡೆದುಕೊಂಡಿದ್ದಲ್ಲ. ಪಕ್ಷದ ಹಿರಿಯರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಅವಧಿ ಪೂರ್ಣಗೊಳಿಸುವ ವೇಳೆ ಹುದ್ದೆಯನ್ನು ಮತ್ತೊಬ್ಬರಿಗೆ ನೀಡಿದ್ದಾರೆ. ನಾನು ಎಂದಿಗೂ ಪಕ್ಷಕ್ಕೆ ನಿಷ್ಠ. ಹೀಗಾಗಿ ಕೆಲಸ ಮಾಡುವವರಿಗೆ ಹುದ್ದೆಯ ಚಿಂತೆ ಇರುವುದಿಲ್ಲ.
| ಸಿ.ಟಿ. ರವಿ
ಪ್ರತಿಪಕ್ಷದ ನಾಯಕ ಯಾರು?:ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯದ ಪಾಲಾಗುವುದು ಬಹುತೇಕ ಸ್ಪಷ್ಟವಾಗಿರುವುದರಿಂದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಲಿಂಗಾಯತ ಸಮುದಾಯಕ್ಕೆ ಒಲಿಯುವ ಎಲ್ಲ ಸಾಧ್ಯತೆಗಳಿವೆ. ಬಸನಗೌಡ ಪಾಟೀಲ ಯತ್ನಾಳ್ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರನ್ನು ಪರಿಶೀಲನೆ ಮಾಡಲಾಗುತ್ತಿದೆ. ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಲಭ್ಯವಾಗಲಿದೆ. ಮೇಲ್ಮನೆಯಲ್ಲಿ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಘುನಾಥ ರಾವ್ ಮಲ್ಕಾಪುರೆ ಹೆಸರಿದೆ.
ಇದೇ ವಾರದಲ್ಲಿ ಆಯ್ಕೆ ಸಾಧ್ಯತೆ:ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರ ಆಯ್ಕೆ ಬಹುತೇಕ ಇದೇ ವಾರದಲ್ಲಿಯೇ ನಡೆಯುವ ಸಾಧ್ಯತೆಗಳಿವೆ. ಆದರೆ, ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಾಗೂ ಇತರೆ ಪ್ರಕ್ರಿಯೆಗಳು ಮುಗಿಯುವ ತನಕ ಆಯ್ಕೆಗಳು ನಡೆಯುವುದಿಲ್ಲ ಎಂದೂ ಹೇಳಲಾಗುತ್ತಿದೆ.
ಲೋಕಸಭೆ ಸ್ಪರ್ಧೆಯತ್ತಲೂ ಕಣ್ಣು:ವಿಧಾನಸಭೆ ಸೋಲಿನ ಬಳಿಕ ಲೋಕಸಭೆ ಚುನಾವಣೆ ಮೇಲೂ ಸಿ.ಟಿ. ರವಿ ಕಣ್ಣಿಟ್ಟಿದ್ದಾರೆ. ಹೈಕಮಾಂಡ್ ಒಪ್ಪಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಶಯ ಅವರಲ್ಲಿದೆ. ಆದರೆ, ಈ ಎಲ್ಲ ಲೆಕ್ಕಾಚಾರಗಳು ಯಾರು ರಾಜ್ಯ ಬಿಜೆಪಿ ಅಧ್ಯಕ್ಷರಾಗುತ್ತಾರೆ ಎಂಬುದರ ಮೇಲಿದೆ.
ನವದೆಹಲಿ:ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಸರಿಪಡೆ ತನ್ನ ಕೇಂದ್ರ ಸಂಘಟನೆಯಲ್ಲೂ ಹಲವು ಬದಲಾವಣೆಗಳನ್ನು ಮಾಡಿದ್ದು, ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳ ಮುಖಂಡರನ್ನು ಸೇರಿಸಿಕೊಂಡು ಹೊಸ ತಂಡವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಚನೆ ಮಾಡಿದ್ದಾರೆ. ನಡ್ಡಾ ಹೊಸ ತಂಡದಲ್ಲಿ 9 ಪ್ರಧಾನ ಕಾರ್ಯದರ್ಶಿಗಳು. 13 ಉಪಾಧ್ಯಕ್ಷರು, 13 ಕಾರ್ಯದರ್ಶಿಗಳಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರಿಸಲಾಗಿದೆ. ಜಾತಿ ಸಮೀಕರಣ, ಒಬಿಸಿ ಪ್ರಭಾವ ಹಾಗೂ ಚುನಾವಣೆ ಲೆಕ್ಕಾಚಾರಗಳನ್ನು ಆಧರಿಸಿ ಆಯ್ಕೆಗಳು ನಡೆದಿವೆ. ಛತ್ತೀಸ್​ಗಢ ಮೂಲದ ಮೂವರಿಗೆ ಉಪಾಧ್ಯಕ್ಷ ಹುದ್ದೆ ಸಿಕ್ಕಿದೆ. ತೆಲಂಗಾಣದಿಂದ ಒಬ್ಬರು ಉಪಾಧ್ಯಕ್ಷರಾಗಿದ್ದರೆ, ಮತ್ತೊಬ್ಬರಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.
ಮೂವರು ಹೊಸ ಪ್ರಧಾನ ಕಾರ್ಯದರ್ಶಿಗಳಲ್ಲಿ ತೆಲಂಗಾಣ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಮತ್ತು ಉತ್ತರಪ್ರದೇಶದಿಂದ ರಾಧಾ ಮೋಹನ್ ಅಗರವಾಲ್ ಪ್ರಮುಖರಾಗಿದ್ದಾರೆ. ಬಂಡಿ ಸಂಜಯ್ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕಿಶನ್ ರೆಡ್ಡಿಯವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಹೀಗಾಗಿ, ಸಂಜಯ್ರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಲೋಕಸಭೆ ಸದಸ್ಯ ದಿಲೀಪ್ ಘೊಷ್, ಗುಜರಾತ್​ನ ಭಾರತಿ ಶಿಯಾಲ್ ಮತ್ತು ಬಿಹಾರದ ರಾಧಾ ಮೋಹನ್ ಸಿಂಗ್ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಹೊರಗಿಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆ ತಯಾರಿಗಾಗಿ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.
ಏತನ್ಮಧ್ಯೆ, ಛತ್ತೀಸ್​ಗಢದ ರಾಜ್ಯಸಭೆ ಸದಸ್ಯ ಸರೋಜ್ ಪಾಂಡೆ ಮತ್ತು ಮಾಜಿ ರಾಜ್ಯ ಸಚಿವೆ ಲತಾ ಉಸೇಂಡಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಈಗಾಗಲೇ ಪಕ್ಷದ ಉಪಾಧ್ಯಕ್ಷರಾಗಿದ್ದು, ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಅದೇ ರೀತಿ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಕೂಡ ಉಪಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪಸ್ಮಾಂಡ ಮುಸ್ಲಿಂಗೆ ಆದ್ಯತೆ:ಕೆಲ ದಿನಗಳ ಹಿಂದಷ್ಟೇ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ ಪಸ್ಮಾಂಡ ಮುಸ್ಲಿಮರನ್ನು ಕಾಂಗ್ರೆಸ್ ಸೇರಿ ವಿಪಕ್ಷಗಳು ಪೂರ್ಣ ನಿರ್ಲಕ್ಷ್ಯ ಮಾಡಿವೆ ಎಂದು ಆರೋಪಿಸಿದ್ದರು. ಪಸ್ಮಾಂಡ ಮುಸ್ಲಿಮರು ವೋಟ್​ಬ್ಯಾಂಕ್ ರಾಜಕಾರಣದ ಬಲಿಪಶುಗಳು. ಅವರನ್ನು ಎಂದಿಗೂ ಇತರೆ ಮುಸ್ಲಿಮರೊಂದಿಗೆ ಸಮಾನವಾಗಿ ಕಾಣಲಾಗಿಲ್ಲ. ಇದಕ್ಕೆ ವಿಪಕ್ಷಗಳ ಧೋರಣೆಯೇ ಕಾರಣ ಎಂದಿದ್ದ ಮೋದಿ, ವೋಟ್​ಬ್ಯಾಂಕ್ ಪ್ರಿಯರು ಪಸ್ಮಾಂಡ ಮುಸ್ಲಿಮರನ್ನು ಹಾಳು ಮಾಡಿದ್ದಾರೆ. ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗದಂತೆ ನೋಡಿಕೊಂಡಿರುವುದಲ್ಲದೆ, ಸಮಾನ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದ್ದಾರೆ. ಅವರನ್ನು ಅಸ್ಪೃ್ಯರೆಂದು ಪರಿಗಣಿಸಿರುವುದು ದುರಂತ ಎಂದು ಕಿಡಿಕಾರಿದ್ದರು. ತಾರಿಕ್ ಮನ್ಸೂರ್ ಶಿಕ್ಷಣ ತಜ್ಞರಾಗಿದ್ದು, ಬೌದ್ಧಿಕ ಮುಸ್ಲಿಮರ ಜಾಲ ಹೊಂದಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಕೇಂದ್ರ ಚಿಂತನೆ ನಡೆಸಿರುವ ಮಧ್ಯೆ ಮನ್ಸೂರ್ ನೇಮಕ ಮಹತ್ವ ಪಡೆದುಕೊಂಡಿದೆ.
ತಾರಿಕ್, ಅನಿಲ್ ಅಂಟನಿಗೆ ಸ್ಥಾನ:ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಉತ್ತರಪ್ರದೇಶದ ವಿಧಾನ ಪರಿಷತ್ ಸದಸ್ಯ ತಾರಿಕ್ ಮನ್ಸೂರ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಗಮನಾರ್ಹ. ಈಚೆಗಷ್ಟೇ ಬಿಜೆಪಿ ಸೇರಿದ್ದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ ಪುತ್ರ ಅನಿಲ್ ಆಂಟನಿ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + six =
Remember me
