ಬೆಂಗಳೂರು:ಕೇವಲ 25 ಸಾವಿರ ರೂ.ಗಳಲ್ಲಿ ಮುಗಿಯುತ್ತಿದ್ದ ಕೆಲಸಕ್ಕೆ ಈಗ ಮೂರು ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಭರಿಸಬೇಕಾಗಿದೆ. ಇಡೀ ರಾಜ್ಯವನ್ನು ಭೀಕರ ಬರ ಆವರಿಸಿದೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸದೆ ವಿದ್ಯುತ್ ಹೆಸರಿನಲ್ಲಿ ಅವರಿಂದಲೇ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿಸುತ್ತಿದೆ. ಅತ್ತ, ಬೆಳೆಯನ್ನೂ ಉಳಿಸಿಕೊಳ್ಳಲಾಗದೆ ಇತ್ತ ಹಣವನ್ನು ಭರಿಸಲಾಗದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನ ಕಳೆದಂತೆ ‘ವಿದ್ಯುತ್ ಆಘಾತ’ಕ್ಕೆ ಒಳಗಾತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಸಮಸ್ಯೆ ಏನು?:ಉದಾಹರಣೆ ಸಹಿತ ಸಮಸ್ಯೆ ವಿವರಿಸುವುದಾದರೆ, ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದ ಸಿದ್ದಪ್ಪ ಕುಂಡ್ರುಕ ಎಂಬುವರ ಜಮೀನಿನಲ್ಲಿ 63 ಕೆವಿ ಸಾಮರ್ಥ್ಯದ ಟಿಸಿ ಅಳವಡಿಸಿದ್ದು, 30 ರೈತರಿಗೆ ಕೃಷಿ ಪಂಪ್​ಸೆಟ್​ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ನೀಡಿದ್ದಾರೆ. ಆದರೆ, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಒಂದು ಟಿಸಿ ಮೇಲೆ ಅಧಿಕ ಲೋಡ್ ಇರುವುದರಿಂದ ವಾರದಲ್ಲಿ ಎರಡು ಬಾರಿ ಟಿಸಿ ಸುಟ್ಟು ಹಾಳಾಗುತ್ತಿದೆ. ಹೀಗಾಗಿ 80 ರಿಂದ 100 ಕೆವಿ ಸಾಮರ್ಥ್ಯದ ಹೊಸ ಟಿಸಿ ಅಳವಡಿಸುವಂತೆ ರೈತರು ವಿನಂತಿಸಿದ್ದಾರೆ. ಆದರೆ, 2.80 ಲಕ್ಷ ರೂ. ಕಟ್ಟಿದರೆ ಮಾತ್ರ ಹೆಚ್ಚು ಸಾಮರ್ಥ್ಯದ ಹೊಸ ಟಿಸಿ ಅಳವಡಿಸುತ್ತೇವೆ ಹಾಗೂ ಪ್ರತಿ ವಿದ್ಯುತ್ ಕಂಬಕ್ಕೆ 25 ಸಾವಿರ ರೂ. ನೀಡಬೇಕು.
ಕಂಬ, ಟಿಸಿ ಸಾಗಣೆಗೆ ವಾಹನ ಬಾಡಿಗೆ, ಮೇಸ್ತ್ರಿಗಳ ಕೂಲಿಯನ್ನು ರೈತರೇ ಭರಿಸಬೇಕು ಎಂಬುದು ಹೆಸ್ಕಾಂ ಅಧಿಕಾರಿಗಳು ನೀಡುವ ವಿವರಣೆ. ಇನ್ನು, 24 ಗಂಟೆಯಲ್ಲಿ ಟಿಸಿ ದುರಸ್ತಿ ಮಾಡಲು 5 ಸಾವಿರ ರೂ. ಹೆಚ್ಚುವರಿ ಕಟ್ಟಬೇಕು. ಇಲ್ಲದಿದ್ದರೆ 10 ರಿಂದ 15 ದಿನಗಳವರೆಗೆ ಕಾಯಬೇಕು. ಕೇಳಿದಷ್ಟು ಹಣ ನೀಡದಿದ್ದರೆ ಕೃಷಿ ಪಂಪ್​ಸಟ್​ಗಳಿಗೆ ವಿದ್ಯುತ್ ಸಂಪರ್ಕ ಬಂದ್ ಮಾಡುತ್ತಾರೆ ಎಂದು ಹೆಸ್ಕಾಂ ವಿರುದ್ಧ ರೈತರು ಆರೋಪಿಸಿದ್ದಾರೆ.
ಸ್ವಯಂ ಹಣಕಾಸು ಯೋಜನೆ:ಅಕ್ರಮ- ಸಕ್ರಮದಡಿ 10 ಸಾವಿರ ರೂ. ಠೇವಣಿ ಕಟ್ಟಿರುವ ಅರ್ಜಿದಾರರ ಸಂಖ್ಯೆ ಅಂದಾಜು 14,141 ಇದೆ. ಅನುದಾನ ಬಂದಿಲ್ಲದ ಕಾರಣ ಹೊಸದನ್ನು ಅಳವಡಿಸಿಲ್ಲ. ಸ್ವಯಂ ಹಣಕಾಸು ಯೋಜನೆಯಡಿ ರೈತರೇ ಟಿಸಿ ಅಳವಡಿಸಿಕೊಳ್ಳಲು ಲಕ್ಷಾಂತರ ರೂ. ಖರ್ಚಾಗಲಿದ್ದು, ನಿಗದಿತ ಸಾಮರ್ಥ್ಯದ ಟಿಸಿ ಅಳವಡಿಕೆಗೆ ಎಸ್ಟಿಮೇಟ್ ಅನುಗುಣವಾಗಿ ಹಣ ಭರಿಸಬೇಕಿದೆ. ಅಂಥವರಿಗೆ ಆರ್​ಆರ್ ನಂಬರ್ ಕೊಡಲಾಗುವುದು ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.
ಸಾವಿರಾರು ರೂ. ಖರ್ಚು ಮಾಡಿ ಕಬ್ಬು, ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಬೆಳೆಯಲಾಗಿದೆ. ಆದರೆ, ಮಳೆಯ ಅಭಾವ, ವಿದ್ಯುತ್ ಕಣ್ಣುಮುಚ್ಚಾಲೆಯಿಂದ ಬೆಳೆಗಳು ನಾಶವಾಗಿವೆ. ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೇ ಹೆಸ್ಕಾಂ ಅಧಿಕಾರಿಗಳು ಟಿಸಿ, ವಿದ್ಯುತ್ ಕಂಬಗಳಿಗೆ ದುಬಾರಿ ವೆಚ್ಚ ಕೇಳುತ್ತಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಟಿಸಿ, ವಿದ್ಯುತ್ ಕಂಬ ಅಳವಡಿಕೆ ಸಮಸ್ಯೆ ಪರಿಹರಿಸದಿದ್ದರೆ ರೈತರ ಜೀವಕ್ಕೆ ಆಗುವ ಹಾನಿಗೆ ಹೆಸ್ಕಾಂ ಹೊಣೆ ಎಂದು ನೂರಾರು ರೈತರು ಮುಖ್ಯಮಂತ್ರಿ, ಇಂಧನ ಸಚಿವರು, ಜಿಲ್ಲಾಧಿಕಾರಿ ಹಾಗೂ ಹೆಸ್ಕಾಂ ಎಂಡಿಗೆ ಪತ್ರ ಬರೆದಿದ್ದಾರೆ.
ಈವರೆಗೆ ವಿದ್ಯುತ್ ಸಂಪರ್ಕ ಬಯಸುವ ರೈತರಿಂದ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಇಂತಿಷ್ಟು ಮೊತ್ತವನ್ನು ಪಾವತಿಸಿಕೊಳ್ಳಲಾಗುತ್ತಿತ್ತು. ನಂತರ ಅಗತ್ಯ ಸಿದ್ಧತೆಗಳನ್ನು ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳೇ ಮಾಡಿಕೊಳ್ಳುತ್ತಿದ್ದರು. ಈ ವ್ಯವಸ್ಥೆ ರೈತರಿಗೆ ಭಾರವಾಗಿರಲಿಲ್ಲ. ಆದರೆ, ಈ ವ್ಯವಸ್ಥೆಯೀಗ ಇತಿಹಾಸವಾಗಿದೆ. ಪರಿಣಾಮ ರೈತರು ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ.
ಸರ್ಕಾರ ಸೆ.22ರಂದು ಹೊರಡಿಸಿರುವ ಆದೇಶದಲ್ಲಿ ವಿದ್ಯುತ್ ಸಂಪರ್ಕಕ್ಕೆ ತಗಲುವ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಶೇ.10ರಷ್ಟು ಹಣವನ್ನು ಕಂಪನಿಗೆ ಕಟ್ಟಿದರೆ ಕಂಪನಿಯವರು ಅದಕ್ಕೆ ಬೇಕಾದ ಎಲ್ಲ ಎಸ್ಟಿಮೇಟ್​ಗಳನ್ನು ತಯಾರಿಸಿಕೊಡುತ್ತಾರೆ. ಪರಿಕರಗಳಿಗೆ ಮಾಡಬೇಕಾದ ಎಲ್ಲ ಖರ್ಚನ್ನು ಗುತ್ತಿಗೆದಾರರಿಗೆ ಕೊಟ್ಟು ಕಾಮಗಾರಿಯನ್ನು ರೈತ ಮಾಡಿಸಿಕೊಳ್ಳಬೇಕಾಗಿದೆ.
ಕೃಷಿ ಪಂಪ್​ಸೆಟ್​ಗಳಿಗೆ ಕಡಿಮೆ ವೋಲ್ಟೇಜ್ ವಿದ್ಯುತ್ ಪೂರೈಕೆಯಿಂದಾಗಿ ಟಿಸಿಗಳು ಆಗಾಗ ಸುಟ್ಟು ಹೋಗುತ್ತಿವೆ. ರೈತರು ತಲಾ ಇಂತಿಷ್ಟು ಹಣ ಸಂಗ್ರಹಿಸಿ ಸಂಬಂಧಪಟ್ಟ ಸೆಕ್ಷನ್ ಅಧಿಕಾರಿಗಳಿಗೆ ನೀಡದಿದ್ದರೆ ಟಿಸಿ ರಿಪೇರಿಯಾಗುವುದೇ ಇಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಬಳಕೆಯ ಟಿಸಿ ಸುಟ್ಟರೆ 24 ತಾಸಿನೊಳಗೆ ದುರಸ್ತಿ ಮಾಡಬೇಕು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ( ಕೆಇಆರ್​ಸಿ) ಕಾಯ್ದೆ ಹೇಳುತ್ತದೆ. ಆದರೆ, ಇದಕ್ಕೆ ಬೆಲೆಯೇ ಇಲ್ಲದಂತಾಗಿದೆ.
ಈ ಹಿಂದೆ ರೈತರಿಂದ 25 ಸಾವಿರ ರೂ. ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಎಲ್ಲವನ್ನೂ ನಾವೇ ವ್ಯವಸ್ಥೆ ಮಾಡುತ್ತಿದ್ದೆವು. ಸರ್ಕಾರದ ಹೊಸ ಆದೇಶದ ಪ್ರಕಾರ ಹೊಸದಾಗಿ ಟಿಸಿ, ವಿದ್ಯುತ್ ಕಂಬಗಳಿಗೆ ರೈತರೇ ಮೊತ್ತ ಪಾವತಿಸಬೇಕು. ಆಯಾ ಪ್ರದೇಶಕ್ಕೆ ಅನುಗುಣವಾಗಿ 1 ರಿಂದ 2 ಲಕ್ಷ ರೂ. ವರೆಗೆ ಖರ್ಚು ಬರಬಹುದು.
| ಪ್ರವೀಣಕುಮಾರ ಚಿಕ್ಕಾಡೆಹೆಸ್ಕಾಂ ಬೆಳಗಾವಿ ಗ್ರಾಮೀಣ ವೃತ್ತ ಅಧೀಕ್ಷಕ
ಮೊದಲೇ ಬರಕ್ಕೆ ಸಿಕ್ಕಿ ಬದುಕು ಬರ್ಬಾದ್ ಆಗಿದೆ. ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ಸರ್ಕಾರ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕದ ಶುಲ್ಕವೆಲ್ಲವನ್ನೂ ನಮ್ಮ ತಲೆಗೆ ಕಟ್ಟಿದೆ. ಒಂದು ಟಿಸಿ ಪಡೆದುಕೊಳ್ಳಲು ಈಗಾಗಲೇ ನಾನು 1.10 ಲಕ್ಷ ರೂ. ಖರ್ಚು ಮಾಡಿದ್ದೇನೆ. ಹೀಗಾದರೆ ರೈತರು ಜೀವನ ಸಾಗಿಸುವುದು ಹೇಗೆ?
| ಮರಿಗೌಡ ಪಾಟೀಲ ಕ್ಯಾಡ ಗ್ರಾಮ, ಬಾದಾಮಿ ತಾಲೂಕು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
