ಪೊ›ಫೆಸರ್ ಹಿತೇಶ್ ಪಟೇಲ್ ತಮ್ಮ ಪತ್ನಿ ರೋಹಿಣಿ ಮತ್ತು 19 ವರ್ಷದ ಒಬ್ಬನೇ ಮಗ ಕಿರಣ್ ಜತೆಗೆ ಗುಜರಾತ್​ನ ಆನಂದ್ ನಗರದಲ್ಲಿ ವಾಸಿಸುತ್ತಿದ್ದರು. 2023ರ ಒಂದು ಮಧ್ಯಾಹ್ನ 12.30ಕ್ಕೆ ಅವರ ಮೊಬೈಲ್ ಫೋನ್​ಗೆ ಕರೆಯೊಂದು ಬಂತು. ಕರೆ ಮಾಡಿದಾತ, ‘ಪೊ›. ಪಟೇಲ್, ನಾನು ಗುಜರಾತ್ ಸಿಐಡಿ ಸೈಬರ್ ಪೊಲೀಸ್ ದಳದ ಇನ್ಸ್​ಪೆಕ್ಟರ್ ಭಾವೇಶ್, ನಿಮಗೊಂದು ಕಹಿ ಸುದ್ದಿ ತಿಳಿಸಬೇಕಾಗಿದೆ’ ಎಂದ. ಗಾಬರಿಯಾದ ಹಿತೇಶ್ ‘ಏನದು’ ಎಂದು ಕೇಳಿದಾಗ ಆ ವ್ಯಕ್ತಿ, ‘ನಿಮ್ಮ ಮಗ ಕಿರಣ್​ನ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಅವನು ನಮ್ಮ ವಶದಲ್ಲಿದ್ದಾನೆ’ ಎಂದ. ‘ನನ್ನ ಮಗ ಇಂತಹ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ, ನೀವು ಬೇರೆ ಯಾರನ್ನೋ ಬಂಧಿಸಿರಬಹುದು’ ಎಂದು ಉತ್ತರಿಸಿದರು ಹಿತೇಶ್. ‘ಪ್ರತಿಯೊಬ್ಬ ಮಾತಾಪಿತರೂ ತಮ್ಮ ಮಕ್ಕಳು ಮುಗ್ಧರು, ತಪ್ಪನ್ನೇ ಮಾಡುವುದಿಲ್ಲ ಎನ್ನುವುದು ಸಾಮಾನ್ಯ. ನಮ್ಮ ವಶದಲ್ಲಿರುವುದು ನಿಮ್ಮ ಮಗ ಕಿರಣ್ ಅಲ್ಲದೇ ಬೇರಾರೂ ಅಲ್ಲ ಅಂತ ನಾವು ಖಾತ್ರಿ ಪಡಿಸಿಕೊಂಡೇ ನಿಮಗೆ ಕರೆ ಮಾಡಿದ್ದು. ಕಿರಣ್ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಕ್ಕೆ ಗುರಿಯಾಗಿ ಅವನ ಮೇಲೆ ಪೋಕ್ಸೋ ಕಾಯ್ದೆಯ ಪ್ರಕರಣ ದಾಖಲಾಗಿದೆ. ಇದು ಗಂಭೀರ ಕಾಯ್ದೆಯಾಗಿದ್ದು ಸಂತ್ರಸ್ತೆ ಕೋರ್ಟಿನಲ್ಲಿಯೂ ನಿಮ್ಮ ಮಗನ ವಿರುದ್ಧ ಸಾಕ್ಷಿ ಕೊಟ್ಟರೆ ಅವನಿಗೆ 10 ವರ್ಷಗಳ ಜೈಲುಶಿಕ್ಷೆಯಾಗುತ್ತದೆ. ನೀವು ಸಮಾಜದಲ್ಲಿ ಮರ್ಯಾದೆಯ ಸ್ಥಾನವನ್ನು ಹೊಂದಿರುವುದರಿಂದ ನಿಮಗೆ ಮುಜುಗರ ಉಂಟು ಮಾಡಬಾರದೆಂದು ನಾನು ನಿಮಗೆ ಕರೆ ಮಾಡುತ್ತಿದ್ದೇನೆ. ಬೇರೆಯವರಿಗಾದರೆ ನೇರವಾಗಿ ಮ್ಯಾಜಿಸ್ಟ್ರೇಟರ ಮುಂದೆಯೇ ಹಾಜರು ಮಾಡುತ್ತಿದ್ದೆವು’ ಎಂದ.
ಈ ಮಾತುಗಳನ್ನು ಕೇಳಿದ ಹಿತೇಶ್ ಪಟೇಲ್ ಬೆವೆತುಹೋದರು. ‘ಸರ್, ಈಗಲೂ ನನಗೆ ನನ್ನ ಮಗ ಕಿರಣ್ ನೀವು ಹೇಳಿದಂತಹ ಘೊರ ಅಪರಾಧವೆಸಗಿದ್ದಾನೆ ಎಂದೆನಿಸುತ್ತಿಲ್ಲ. ಅವನಿಗೊಂದು ವೇಳೆ ಗರ್ಲ್ ಫ್ರೆಂಡ್ ಇದ್ದಿದ್ದರೆ ನಮಗೆ ತಿಳಿಯುತ್ತಿರಲಿಲ್ಲವೇ? ಅವನ ನಡವಳಿಕೆಯಲ್ಲಿ ನಮಗೆ ಬದಲಾವಣೆ ಕಾಣುತ್ತಿರಲಿಲ್ಲವೇ?’ ಎಂದು ಕೇಳಿದರು. ‘ನಿಮಗೆ ನಾನು ಸುಳ್ಳು ಹೇಳುತ್ತಿರುವೆ ಎಂದೆನಿಸಿದೆ ಅಲ್ಲವೇ? ನಾನು ಈಗ ಈ ಫೋನನ್ನು ನಿಮ್ಮ ಮಗ ಕಿರಣ್​ಗೇ ಕೊಡುತ್ತೇನೆ ಅವನೊಡನೆ ಮಾತನಾಡಿ’ ಎಂದರು ಆ ಅಧಿಕಾರಿ.
ಫೋನ್​ನಲ್ಲಿ ಕಿರಣ್ ಗಳಗಳನೆ ಅಳುತ್ತಾ, ‘ನಾನು ತಪ್ಪು ಮಾಡಿದೆ, ನನ್ನನ್ನು ಕ್ಷಮಿಸಿ’ ಎಂದು ಹೇಳುವಷ್ಟರಲ್ಲಿ ಲೈನಿಗೆ ಬಂದ ಆ ಅಧಿಕಾರಿ, ‘ಸರ್, ಈಗಲಾದರೂ ನಿಮಗೆ ನಿಮ್ಮ ಮಗ ನಮ್ಮ ವಶದಲ್ಲಿರುವುದು ಖಾತ್ರಿಯಾಯಿತಲ್ಲವೇ?’ ಎನ್ನುತ್ತಾ, ‘ಕಿರಣ್ ಇಲ್ಲಿಯ ಪಾರ್ಕೆಂದರಲ್ಲಿ ಬಾಲಕಿ ಜತೆ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಅವರನ್ನು ನೋಡಿದವರೊಬ್ಬರು ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿ ತಿಳಿಸಿದರು. ಅವರು ಇಬ್ಬರನ್ನೂ ತಮ್ಮ ಜೀಪಿನಲ್ಲಿ ಕೂರಿಸಿಕೊಂಡು ನಮ್ಮ ಕಚೇರಿಗೆ ತಂದು ಬಿಟ್ಟಿದ್ದಾರೆ. ಇಲ್ಲಿ ವಿಚಾರಣೆ ನಡೆದಾಗ ಕಿರಣ್ ನಿಮ್ಮ ಮಗನೆಂದೂ ಆಕೆ ಅವನಿಗೆ ಪರಿಚಯವಿರುವ 16 ವರ್ಷ ವಯಸ್ಸಿನ ಹುಡುಗಿಯೆಂದೂ ತಿಳಿಯಿತು. ನಿಮ್ಮ ಮಗ ಕಾಲೇಜಿಗೆ ಹೋಗುವುದನ್ನು ತಪ್ಪಿಸಿ ಎಂತಹ ಕೆಲಸವನ್ನು ಮಾಡಿದ್ದಾನೆ ನೋಡಿ’ ಎಂದ.
‘ಸರ್, ಏನಾದರೂ ಮಾಡಿ ಕಿರಣ್​ನನ್ನು ಬಿಟ್ಟುಬಿಡಿ. ಈ ವಿಷಯವೇನಾದರೂ ಹೊರಗೆ ಬಂದರೆ ನಾನು ತಲೆ ಎತ್ತಿ ಮನೆಯಿಂದ ಹೊರಗೆ ಬರುವ ಹಾಗೆಯೇ ಇಲ್ಲ. ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ. ಕಿರಣ್​ನ ಇಡೀ ಭವಿಷ್ಯವೇ ಡೊಲಾಯಮಾನ ಸ್ಥಿತಿಗೆ ಬಂದು ತಲಪುತ್ತದೆ. ನಮ್ಮ ಕುಟುಂಬ ಛಿದ್ರಛಿದ್ರವಾಗುತ್ತದೆ’ ಎಂದರು ಪೊ›. ಹಿತೇಶ್. ‘ಇದೇ ಕಾರಣಕ್ಕೇ ಅಲ್ಲವೇ ನಾನು ನಿಮಗೆ ಫೋನ್ ಮಾಡಿದ್ದು. ನಾನು ಆ ಬಾಲಕಿಯ ತಂದೆಯನ್ನು ಕರೆಸಿ ಮಾತನಾಡಿದ್ದೇನೆ. ಹತ್ತು ಲಕ್ಷ ರೂ. ಕೊಟ್ಟರೆ ತನ್ನ ಮಗಳು ದೂರು ಕೊಡದಂತೆ ನೊಡಿಕೊಳ್ಳುವೆ ಎನ್ನುತ್ತಿದ್ದಾನೆ ಆತ. ಏನಾದರೂ ರಾಜಿ ಮಾಡಿಕೊಳ್ಳಲು ಸಾಧ್ಯವೇ ನೋಡಿ. ಆಗ ನಿಮ್ಮ ಮಗನ ಮೇಲಿನ ಎಫ್​ಐಆರ್ ನಾವು ನ್ಯಾಯಾಲಯಕ್ಕೆ ಕಳಿಸದೇ ಇಲ್ಲಿಯೇ ಹರಿದುಹಾಕುತ್ತೇವೆ. ಮುಂದೆ ಏನೂ ಆಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂದ ಫೋನ್ ಮಾಡಿದಾತ.
‘ನನ್ನ ಬಳಿ ಈಗ ಅಷ್ಟು ಹಣವಿಲ್ಲ. ಬೇಕಾದರೆ ನಾಡಿದ್ದು ಕೊಡುವ ವ್ಯವಸ್ಥೆ ಮಾಡುವೆ’ ಎಂದರು ಹಿತೇಶ್. ‘ಪೊ›ಫೆಸರ್, ನಾನು ಹೇಳಿದ್ದು ನಿಮಗೆ ಅರ್ಥವಾಗಲಿಲ್ಲ ಎನಿಸುತ್ತದೆ. ನಿಮ್ಮ ಮಗನ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ನಮ್ಮ ಹಿರಿಯ ಅಧಿಕಾರಿ ಇನ್ನೊಂದು ಗಂಟೆಯ ಒಳಗೆ ಇಲ್ಲಿಗೆ ಬರುತ್ತಾರೆ. ಅವರು ಬರುವ ಮೊದಲೇ ನಾನು ಎಫ್​ಐಆರ್ ಕೋರ್ಟಿಗೆ ರವಾನಿಸಿ ನಿಮ್ಮ ಮಗನನ್ನು ಮತ್ತು ಸಂತ್ರಸ್ತೆಯನ್ನು ಮೆಡಿಕಲ್ ಟೆಸ್ಟ್​ಗೆ ಕಳಿಸಿ ಮಧ್ಯಾಹ್ನದೊಳಗೆ ಕಿರಣ್​ನನ್ನು ಮ್ಯಾಜಿಸ್ಟ್ರೇಟ್ ಬಳಿ ಹಾಜರು ಮಾಡದಿದ್ದರೆ ನನ್ನ ಕೆಲಸ ಹೋಗುತ್ತದೆ. ನಿಮಗಿರುವುದು ಇನ್ನು 30 ನಿಮಿಷ ಮಾತ್ರ. ಅಷ್ಟರಲ್ಲಿ ನೀವು ಕನಿಷ್ಠ 5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟ ಹಣವನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಿಮ್ಮ ವಿಶ್ವವಿದ್ಯಾಲಯದ ಅಂಚೆ ಕಚೇರಿಯ ಮುಂದೆ ಬಂದು ನಿಲ್ಲಿ. ಜೀನ್ಸ್ ಪ್ಯಾಂಟ್, ನೀಲಿ ಷರ್ಟ್ ಮತ್ತು ಕೆಂಪು ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ನಿಮ್ಮ ಬಳಿಗೆ ಬಂದು ಲಕೋಟೆಯನ್ನು ಸ್ವೀಕರಿಸುತ್ತಾನೆ. ಹಣ ಮುಟ್ಟಿದ ಕೂಡಲೇ ಎಫ್​ಐಆರ್ ಹರಿದುಹಾಕಿ ನಿಮ್ಮ ಮಗನನ್ನು ಮತ್ತು ಸಂತ್ರಸ್ತೆಯನ್ನು ಠಾಣೆಯಿಂದ ಹೊರಗೆ ಕಳುಹಿಸಿಬಿಡುತ್ತೇನೆ. ನೀವು ತಡಮಾಡಿದರೆ ನಾನು ಏನೂ ಮಾಡಲು ಬರುವುದಿಲ್ಲ’ ಎಂದ ಆ ವ್ಯಕ್ತಿ ಫೋನ್ ಕಟ್ ಮಾಡಿದ.
ಗಾಬರಿಯಾದ ಪಟೇಲ್ ತಾವು ಮುಂದೆ ತೆಗೆದುಕೊಳ್ಳಬೇಕಾದ ತರಗತಿಯನ್ನು ಬಿಟ್ಟು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿಯೇ ಇದ್ದ ಬ್ಯಾಂಕಿಗೆ ಓಡಿದರು. ತಮ್ಮ ಖಾತೆಯಲ್ಲಿದ್ದ 5 ಲಕ್ಷ ರೂ.ಗಳನ್ನು ವಿತ್​ಡ್ರಾ ಮಾಡಿ ಲಕೋಟೆಯೊಂದರಲ್ಲಿ ಹಾಕಿಕೊಂಡು ಪೋಸ್ಟ್ ಆಫೀಸಿನ ಮುಂದೆ ಹೋಗಿ ನಿಂತರು. ಬೈಕೊಂದರಲ್ಲಿ ಬಂದ ಒಬ್ಬ ವ್ಯಕ್ತಿ ಅವರ ಬಳಿಗೆ ಬಂದು ಹಣವನ್ನು ಪಡೆದು ಹೊರಟುಹೋದ. ಐದು ನಿಮಿಷಗಳ ನಂತರ ಮೊದಲು ಫೋನ್ ಮಾಡಿದ್ದ ವ್ಯಕ್ತಿ ಮತ್ತೊಮ್ಮೆ ಕರೆ ಮಾಡಿ, ‘ಥ್ಯಾಂಕ್ಸ್, ನಿಮ್ಮ ಮಗನನ್ನು ಬಿಡುಗಡೆ ಮಾಡಿದ್ದೇವೆ’ ಎಂದು ಹೇಳಿದ. ಆನಂತರ ಪಟೇಲ್​ರಿಗೆ ತಮ್ಮ ಕಚೇರಿಯಲ್ಲಿ ಕೆಲಸ ಮಾಡಲು ಮನಸ್ಸಾಗಲಿಲ್ಲ, ಅವರು ತಮ್ಮ ಮಗನನ್ನು ನೋಡಬೇಕೆಂದು ಮನೆಗೆ ಧಾವಿಸಿದರು.
ಮಧ್ಯಾಹ್ನದ ವೇಳೆಗೇ ಮನೆಗೆ ಬಂದ ಪತಿಯನ್ನು ನೋಡಿ ಆಶ್ಚರ್ಯಗೊಂಡ ರೋಹಿಣಿ ಏನಾಯಿತೆಂದು ಕೇಳಿದರು. ನಡೆದ ವಿಷಯವನ್ನು ತಿಳಿಸಿದರು ಪಟೇಲ್. ‘ಇದೇನ್ರೀ ಹೀಗೆ ಹೇಳುತ್ತಿದ್ದೀರಿ? ಈಗ ಒಂದು ಗಂಟೆಯ ಮುಂಚೆ ಕಿರಣ್ ನನಗೆ ಕರೆ ಮಾಡಿ ತನ್ನ ಮುಂದಿನ ತರಗತಿಗಳು ರದ್ದಾಗಿರುವುದರಿಂದ ಮಧ್ಯಾಹ್ನದ ಊಟಕ್ಕೆ ಮನೆಗೇ ಬರುವೆ, ನನಗಿಷ್ಟವಾದ ಬಜ್ಜಿ ಮಾಡಿಡು ಎಂದಿದ್ದಾನೆ. ನೀವು ನೋಡಿದರೆ ಅವನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು ಎಂದೆಲ್ಲ ಹೇಳುತ್ತಿರುವಿರಿ, ನಿಮ್ಮ ದೇಹಸ್ಥಿತಿ ಸರಿಯಾಗಿದೆ ತಾನೇ?’ ಎಂದರು ರೋಹಿಣಿ. ಗಾಬರಿಯಾದ ಪಟೇಲ್, ‘ನಾನೇ ಕಿರಣ್ ಜತೆಗೆ ಈಗ ಒಂದೂವರೆ ಗಂಟೆ ಹಿಂದೆ ಮಾತನಾಡಿದ್ದೆ. ಆತ ಪೊಲೀಸ್ ಠಾಣೆಯಲ್ಲಿ ಸೈಬರ್ ಪೊಲೀಸರ ವಶದಲ್ಲಿದ್ದ’ ಎಂದು ಹೇಳಿದಾಗ ಇಬ್ಬರೂ ಕಕ್ಕಾಬಿಕ್ಕಿಯಾದರು.
ಕೂಡಲೇ ರೋಹಿಣಿ ಮಗನ ಮೊಬೈಲ್​ಗೆ ಕರೆ ಮಾಡಿದರು. ಆತ ತಕ್ಷಣವೇ ಕರೆ ಸ್ವೀಕರಿಸಿ ‘ಇನ್ನು ಹತ್ತು ನಿಮಿಷದಲ್ಲಿ ಮನೆಗೆ ಬರುತ್ತಿದ್ದೇನೆ’ ಎಂದ. ಆತ ಮನೆಗೆ ಬಂದ ಕೂಡಲೇ ಹಿತೇಶ್ ಪಟೇಲ್ ಅವನಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಆಶ್ಚರ್ಯಗೊಂಡ ಕಿರಣ್ ತನಗೆ ಯಾರೂ ಗರ್ಲ್ ಫ್ರೆಂಡ್ ಇಲ್ಲವೆಂದೂ, ತಾನು ಯಾವುದೇ ರ್ಪಾಗೆ ಹೋಗಿಲ್ಲವೆಂದು ಹೇಳಿ ಬೆಳಿಗ್ಗೆಯಿಂದ ಮನೆ ಹಾಗೂ ಕಾಲೇಜಿನ ಹೊರತಾಗಿ ಬೇರೆಲ್ಲಿಗೂ ಹೋಗಿಲ್ಲ ಎಂದ. ತನ್ನ ಹೇಳಿಕೆಯ ಸಬೂತಾಗಿ ತನ್ನ ಫೋನ್​ನ ಜಿಪಿಎಸ್ ತೋರಿಸಿದ.
ಆಗ ಹಿತೇಶ್ ಪಟೇಲ್​ಗೆ ತಾವು ಬೇಸ್ತು ಬಿದ್ದು ಐದು ಲಕ್ಷ ರೂ. ಕಳೆದುಕೊಂಡದ್ದು ತಿಳಿಯಿತು. ತಮ್ಮಿಂದ ಹಣ ಪಡೆದ ವ್ಯಕ್ತಿಯ ಬೈಕ್ ನಂಬರನ್ನೂ ಗುರುತು ಹಾಕಿಕೊಳ್ಳಲಿಲ್ಲವಲ್ಲ ಎಂದು ಅವರು ಕೈಕೈ ಹಿಸುಕಿಕೊಂಡರು. ಗುಜರಾತ್ ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ನಂಬರ್​ಗೆ ಕರೆ ಮಾಡಿದರು. ಅದು ಸ್ವಿಚ್ ಆಫ್ ಆಗಿತ್ತು. ಕೂಡಲೇ ಅವರು ತಮಗೆ ಪರಿಚಯವಿದ್ದ ಹಿರಿಯ ಪೊಲೀಸ್ ಅಧಿಕಾರಿಯ ಕಚೇರಿಗೆ ಹೋಗಿ ಅವರಿಗೆ ನಡೆದ ವಿಷಯ ತಿಳಿಸಿದರು. ‘ಪೊ›ಫೆಸರ್, ಈ ರೀತಿಯ ಸ್ಕ್ಯಾಮ್ಳು ತುಂಬಾ ನಡೆಯುತ್ತಿವೆ. ಮಕ್ಕಳು ಶಾಲೆ, ಕಾಲೇಜಿಗೆ ಹೋಗುವ ಸಮಯದಲ್ಲಿ ಅಂದರೆ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯೊಳಗೆ ವಂಚಕರು ಕರೆ ಮಾಡಿ ನಿಮ್ಮ ಮಗ ಇಲ್ಲವೇ ಮಗಳನ್ನು ತಾವು ಅಪಹರಿಸಿರುವುದಾಗಿ ಹೇಳಿ ಹಣ ಕೊಡಲು ಬಲವಂತ ಮಾಡುತ್ತಾರೆ. ಇದು ಸೈಬರ್ ಕಿಡ್​ನ್ಯಾಪಿಂಗ್. ನಿಮ್ಮ ಪ್ರಕರಣ ಸೈಬರ್ ಚೀಟಿಂಗ್. ಎರಡೂ ಬಗೆಯ ಕೇಸುಗಳಲ್ಲಿ ವಂಚಕರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಉಪಯೋಗಿಸಿ ನಿಮ್ಮ ಮಗ ಇಲ್ಲವೇ ಮಗಳ ದನಿಯನ್ನು ನಕಲು ಮಾಡಿ ನಿಮಗೆ ಕೇಳಿಸುತ್ತಾರೆ. ನೀವು ಎರಡನೆಯ ಬಗೆಯ ಕ್ರೈಮ್ೆ ಬಲಿಯಾಗಿದ್ದೀರಿ’ ಎಂದು ತಿಳಿಸಿ ಸೈಬರ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದರು. ಹಿತೇಶ್ ಪಟೇಲ್ ದೂರು ದಾಖಲಿಸಿದರೂ ವಂಚಕರು ಪತ್ತೆಯಾಗಿಲ್ಲ.
ಫಿಲಿಪೀನ್ಸ್​ನ ಲೇಖಕ ರೋಜಿನೆಲ್ ರೇಯೆಸ್ ಹೇಳುವಂತೆ, ಕೇಳಿದ್ದೆಲ್ಲವನ್ನೂ ಸತ್ಯವೆಂದು ಭಾವಿಸುವುದು ಎಲ್ಲ ನಿರಾಶೆಗಳಿಗೂ ಕಾರಣ. ಹೀಗಾಗಲು ಬಿಡದೆ ವಂಚಕರಿಗೆ ಹಣವನ್ನು ಹಸ್ತಾಂತರಿಸುವ ಮೊದಲು ಒಮ್ಮೆ ನಿಮ್ಮ ಮಕ್ಕಳಿಗೋ, ಅವರ ಸ್ನೇಹಿತರಿಗೋ, ಶಾಲೆಗೋ ಫೋನ್ ಮಾಡಿ ಅವರೆಲ್ಲಿದ್ದಾರೆಂದು ತಿಳಿಯುವುದು ಸೂಕ್ತ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

IND vs SL 1st T20: ಲಂಕಾ ವಿರುದ್ಧ ಭಾರತಕ್ಕೆ 43 ರನ್​ಗಳ ಗೆಲುವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
