ಬೆಂಗಳೂರು:ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಉಪಾಧಿಗಳ ಜತೆಗೆ ರಾಜಧಾನಿ ಬೆಂಗಳೂರು ಸೈಬರ್ ವಂಚಕರಿಗೆ ನೆಲೆಯಾಗುತ್ತಿದೆ. ಆನ್​ಲೈನ್​ನಲ್ಲಿ ವಿವಿಧ ಆಮಿಷವೊಡ್ಡಿ ಮೋಸ ಮಾಡುವ ನೂರಾರು ವಂಚಕರಿರುವ ಕುಖ್ಯಾತಿಗೆ ಪಾತ್ರವಾಗಿರುವ ಜಾರ್ಖಂಡ್​ನ ‘ಜಮತಾರಾ’ ಪ್ರದೇಶವನ್ನು ಮೀರಿಸಿ ಇಲ್ಲಿ ಆನ್​ಲೈನ್ ವಂಚನೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ 854 ಕೋಟಿ ರೂ. ವಂಚನೆಯ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ ಬೆನ್ನಲ್ಲೇ ಸಿಬಿಐ ಪೊಲೀಸರು ನಡೆಸಿದ ತನಿಖೆಯಲ್ಲೂ ಸೈಬರ್ ವಂಚಕರು ಬೆಂಗಳೂರನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ಸುಲಭವಾಗಿ ಸಾಲ ಸಿಗುತ್ತೆ, ಕೈತುಂಬಾ ವೇತನ ಬರುವ ನೌಕರಿ ಸಿಗುತ್ತೆ, ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಬರುತ್ತೆ ಎಂಬ ಅಂತಾರಾಷ್ಟ್ರೀಯ ಆನ್​ಲೈನ್ ಕಂಪನಿಗಳ ಜಾಹೀರಾತಿನ ಆಮಿಷಕ್ಕೆ ಒಳಗಾಗುವ ಮುನ್ನ ಹುಷಾರ್. ಏಕೆಂದರೆ ಆಮಿಷವೊಡ್ಡುವ ಯೋಜನೆಗಳನ್ನು (ಪೋಂಜಿ ಸ್ಕೀಮ್ ನಂಬಿ ಹಣ ಹೂಡಿಕೆ ಮಾಡಿದರೆ ಮೋಸ ಹೋಗುವುದು ನಿಶ್ಚಿತ. ಕೋಟ್ಯಂತರ ರೂ. ವಂಚನೆ ಮಾಡಿರುವ ಆರ್ಥಿಕ ಅಪರಾಧ ಪ್ರಕರಣಗಳನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದಾರೆ. ವಂಚನೆಯಿಂದ ಕಬಳಿಸಿದ ದುಡ್ಡಲ್ಲಿ ನಕಲಿ ದಾಖಲಾತಿಗಳನ್ನು ಬಳಸಿ ಚಿನ್ನ ಖರೀದಿ ಹಾಗೂ ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ಮಾಡಿಕೊಂಡಿರುವುದು ದೃಢಪಟ್ಟಿದೆ.
‘ಬೆಂಗಳೂರು’ ವ್ಯಾಪಾರಿಯೊಬ್ಬ ಈ ವಂಚನೆ ಕಾರ್ಯಾಚರಣೆಯ ಕೇಂದ್ರವಾಗಿದ್ದಾನೆ. ದೇಶದಲ್ಲಿ ವಂಚನೆಯಲ್ಲಿ ತೊಡಗಿದ್ದ 137 ನಕಲಿ ಕಂಪನಿಗಳನ್ನು ಸಿಬಿಐ ಗುರುತಿಸಿದೆ. ಇದರಲ್ಲಿ ಬಹುತೇಕ ಕಂಪನಿಗಳು ಬೆಂಗಳೂರಿನಲ್ಲೇ ನೋಂದಣಿಯಾಗಿವೆ. ಅಲ್ಲದೆ, ಈ ಕಂಪನಿಗಳ ಹಲವು ನಿರ್ದೇಶಕರು ಬೆಂಗಳೂರು ಮೂಲದವರಾಗಿದ್ದಾರೆ. ಇವರೆಲ್ಲ ಬೆಂಗಳೂರಿನ ವ್ಯಾಪಾರಿಯೊಬ್ಬನ ಜತೆಗೆ ವ್ಯಾವಹಾರಿಕ ಸಂಪರ್ಕ ಹೊಂದಿರುವ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಿಗೆ ಬಂದಿದೆ. ಇದಲ್ಲದೆ ಇಡೀ ವಂಚನೆ ಕಾರ್ಯಾ ಚರಣೆಯ ಕೇಂದ್ರವಾಗಿರುವ ಈ ವ್ಯಾಪಾರಿ ಬೇರೆಬೇರೆ ಬ್ಯಾಂಕ್​ಗಳಲ್ಲಿ 16 ಖಾತೆಗಳನ್ನು ನಿರ್ವಹಿಸಿದ್ದು, ಬರೋಬ್ಬರಿ 357 ಕೋಟಿ ರೂ. ಹರಿದು ಬಂದಿದೆ.
ತನಿಖಾಧಿಕಾರಿಗಳಿಗೆ ಹಣದ ಮೂಲ ಸಿಗಬಾರದು ಎಂಬ ಕಾರಣಕ್ಕೆ 16 ಖಾತೆಗಳಲ್ಲಿದ್ದ 357 ಕೋಟಿ ರೂ. ಅನ್ನು ಮತ್ತೆ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಸಿಬಿಐ ಪರಿಶೀಲನೆಯಲ್ಲಿ ದೃಢಪಟ್ಟಿದೆ. ನಕಲಿ ಕಂಪನಿಗಳ ನಿರ್ದೇಶಕರಿಗೆ ಸೇರಿದ ಬೆಂಗಳೂರು, ಕೊಚ್ಚಿ ಮತ್ತು ಗುರುಗ್ರಾಮನ ವಿವಿಧ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ಅ.20ರಂದು ದಾಳಿ ನಡೆಸಿ ಪರಿಶೀಲಿಸಿದಾಗ ವಂಚನೆಗೆ ಸಂಬಂಧಿಸಿದಂತೆ ಮಹತ್ವದ ಪುರಾವೆಗಳು ಸಿಕ್ಕಿವೆ. ಅಲ್ಲದೆ, ವಿದೇಶಿ ಪ್ರಜೆಗಳ ಕೈವಾಡವಿರುವುದು ದೃಢಪಟ್ಟಿದೆ.
ನಕಲಿ ಕಂಪನಿಗಳ ನೋಂದಣಿ ಹಾಗೂ ನಿರ್ದೇಶಕರಿಗೆ ಸಂಬಂಧಿಸಿದ ದಾಖಲೆ ಸೃಷ್ಟಿ, ಮಾರ್ಪಡಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ಸ್ ಪಾತ್ರವಿರುವುದು ಗೊತ್ತಾಗಿದೆ. ಇಮೇಲ್​ನಲ್ಲಿ ಮಾತುಕತೆ, ವಾಟ್ಸ್​ಆಪ್ ಚಾಟ್ಸ್, ಕೆಲ ದಾಖಲೆಪತ್ರಗಳು ಲಭ್ಯವಾಗಿದ್ದು, ಇವರಿಬ್ಬರೂ ಅವ್ಯವಹಾರ ಜಾಲದಲ್ಲಿ ತೊಡಗಿದ್ದಾರೆ ಎಂಬುದನ್ನು ಸಾಕ್ಷೀಕರಿಸಿದೆ. ತನಿಖೆ ದೃಷ್ಟಿಯಿಂದ ಸಿಬಿಐ ಅಧಿಕಾರಿಗಳು ಆಪಾದಿತರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.
ವಂಚನೆಯಿಂದ ಗಳಿಸಿದ ಹಣ ಯಾವುದೇ ಬ್ಯಾಂಕ್ ಖಾತೆಗೆ ವರ್ಗಾವಣೆಯಾದರೂ ಸೈಬರ್ ಪೊಲೀಸರ ಸಹಾಯದಿಂದ ಅದನ್ನು ಪತ್ತೆಹಚ್ಚಿ, ಖಾತೆ ಫ್ರೀಜ್ ಮಾಡುವ ಮೂಲಕ ಆರೋಪಿಗಳ ಕೈ ಸೇರದಂತೆ ತಡೆಯಬಹುದು. ಈ ಕಾರಣಕ್ಕಾಗಿಯೇ ಆರೋಪಿಗಳು ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಮಾರ್ಪಾಡು ಮಾಡಿದರೆ ಪತ್ತೆಹಚ್ಚುವುದು ಕಷ್ಟ. ಅಲ್ಲದೆ, ಚಿನ್ನ ಖರೀದಿಸುವುದರಿಂದ ಅದನ್ನೂ ಪತ್ತೆಹಚ್ಚಲು ಆಗಲ್ಲ. ಇದೇ ಕಾರಣಕ್ಕಾಗಿ ಆರೋಪಿಗಳ ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನ್​ಲೈನ್ ಇನ್ವೆಸ್ಟ್​ಮೆಂಟ್ ವಂಚನೆಯ ಹಿಂದೆ ವಿದೇಶಿಗರು ಭಾಗಿಯಾಗಿದ್ದಾರೆ. ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡಿದ್ದು, ಬಂದ ಹಣ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಸ್ಥಳೀಯ ವ್ಯಕ್ತಿಗಳನ್ನು ಬಳಸಿಕೊಂಡು ವಂಚನೆ ಜಾಲ ನಡೆಸ ಲಾಗುತ್ತಿದ್ದು, ಸಿಬಿಐ ತನಿಖೆ ಮುಂದುವರಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
