ಶಿವಮೊಗ್ಗ:ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದವರು ಡಿ.ಬಿ. ಚಂದ್ರೇಗೌಡ. ತುರ್ತು ಪರಿಸ್ಥಿತಿ ಬಳಿಕ ಇಂದಿರಾ ಗಾಂಧಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ನ್ಯಾಯಾಲಯ ಆದೇಶ ನೀಡಿತು. ಆದರೆ ಅವರ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆ ಉದ್ಭವವಾದಾಗ ಅದಕ್ಕಾಗಿ ಕ್ಷೇತ್ರತ್ಯಾಗ ಮಾಡಿದವರು ಚಂದ್ರೇಗೌಡ.
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಡಿಬಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾ ಗಾಂಧಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದರು. ಆ ಚುನಾವಣೆಯಲ್ಲಿ ಗೆದ್ದ ಇಂದಿರಾ ಮತ್ತೊಮ್ಮೆ ದೇಶದ ಪ್ರಧಾನಿಯಾದರು. ಇತ್ತ ಚಂದ್ರೇಗೌಡರ ರಾಜಕೀಯ ಗ್ರಾಫ್ ಕೂಡ ಮೇಲಕ್ಕೇರಿತು.
ಅಪಾರ ಕಾನೂನು ಪಾಂಡಿತ್ಯ ಹೊಂದಿದ್ದ ಚಂದ್ರೇಗೌಡರು ಡಿಬಿಸಿ ಎಂದೇ ಪ್ರಸಿದ್ಧ. ನೇರ ನಡೆ, ನುಡಿಯಿಂದಲೇ ಗುರುತಿಸಿಕೊಂಡಿದ್ದ ಅವರು, ರಾಜಕೀಯದ ಎಲ್ಲ ಪಟ್ಟುಗಳು ಕರಗತವಾಗಿದ್ದರೂ ಕೇಂದ್ರದಲ್ಲಿ ಸಚಿವರಾಗಬೇಕೆಂಬ ಅವರ ಮಹದಾಸೆ ಕೊನೆಗೂ ಕೈಗೂಡಲಿಲ್ಲ.
ವಿಶಿಷ್ಟ ಚಿಂತನೆ, ಅಪಾರ ಜ್ಞಾನ, ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದ ಡಿಬಿಸಿ ಸದನದಲ್ಲಿ ಮಾತಿಗೆ ನಿಂತರೆ ಸ್ವಪಕ್ಷೀಯರು ಮಾತ್ರವಲ್ಲದೆ ಪ್ರತಿಪಕ್ಷದವರನ್ನೂ ಸೆಳೆಯುತ್ತಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರಾಗಿದ್ದರಿಂದ ಸದನದ ಕಲಾಪಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ನಾಲ್ಕೈದು ದಶಕಗಳ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿದ್ದ ಚಂದ್ರೇಗೌಡರು, 2014ರ ಬಳಿಕ ರಾಜಕೀಯದಿಂದ ವಿಶ್ರಾಂತಿ ಪಡೆದರು.
ಕೌಟುಂಬಿಕ ಮಾಹಿತಿ:ಡಿ.ಬಿ.ಚಂದ್ರೇಗೌಡ 1966ರ ಮೇ 22ರಂದು ಪೂರ್ಣಾ ಅವರನ್ನು ವಿವಾಹ ವಾದರು. ಚಂದ್ರೇಗೌಡ ಹಾಗೂ ಪೂರ್ಣಾ ದಂಪತಿಗೆ ನಾಲ್ವರು ಪುತ್ರಿಯರಿದ್ದಾರೆ. ಮೊದಲ ಪುತ್ರಿ ಪಲ್ಲವಿ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ. ಎರಡನೇ ಪುತ್ರಿ ಡಾ. ಶ್ರುತಿ ಮತ್ತು ನಾಲ್ಕನೇ ಪುತ್ರಿ ಸಂಗೀತಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಮೂರನೇ ಪುತ್ರಿ ವೀಣಾ ಮುಂಬೈನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ. ಡಿ.ಬಿ.ಚಂದ್ರೇಗೌಡ ಅವರು ‘ನನ್ನ ಗೋಪಾಲ’ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು ಎನ್ನುವುದು ವಿಶೇಷ.
ನಿರ್ವಹಿಸಿದ ಹುದ್ದೆಗಳು:ಡಿ.ಬಿ.ಚಂದ್ರೇಗೌಡ ಸಚಿವರಾಗಿ, ವಿಪಕ್ಷ ನಾಯಕರಾಗಿ, ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1978ರಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಕಾಂಗ್ರೆಸ್ ತ್ಯಜಿಸಿ ಕರ್ನಾಟಕ ಕ್ರಾಂತಿರಂಗಕ್ಕೆ ಸೇರ್ಪಡೆಗೊಂಡು 1980-81ರಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಿದರು. 1983ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾದ ಅವರು 1983ರಿಂದ 85ರವರೆಗೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಲ್ಲದೆ ಉತ್ತಮ ಸಂಸದೀಯ ಪಟು ಎಂಬ ಗೌರವಕ್ಕೂ ಪಾತ್ರರಾದರು. 1999ರ ವೇಳೆಗಾಗಲೇ ಮರಳಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅವರು ಶೃಂಗೇರಿ ಕ್ಷೇತ್ರದಿಂದ ಶಾಸಕರಾಗಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದರು.
ನಾಲ್ಕೂ ಸದನದ ಪ್ರತಿನಿಧಿತ್ವ:ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಹೀಗೆ ನಾಲ್ಕು ಸದನಗಳಿಗೂ ಆಯ್ಕೆಯಾದ ಕೆಲವೇ ರಾಜಕಾರಣಿಗಳಲ್ಲಿ ಡಿ.ಬಿ.ಚಂದ್ರೇಗೌಡ ಸಹ ಒಬ್ಬರು. 1971ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. 1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯಾದರು. ಆದರೆ ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗಾಗಿಯೇ ಕಾಂಗ್ರೆಸ್ ಇವರನ್ನು 1978ರಲ್ಲಿ ಕರ್ನಾಟಕ ವಿಧಾನ ಪರಿಷತ್​ಗೆ ಆಯ್ಕೆ ಮಾಡಿತು. ಬಳಿಕ ಕಾಂಗ್ರೆಸ್ ತೊರೆದ ಚಂದ್ರೇಗೌಡ 1983ರಲ್ಲಿ ಜನತಾ ಪಕ್ಷದಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. 1986ರಲ್ಲಿ ಜನತಾ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು. ಮತ್ತೆ ರಾಜ್ಯ ರಾಜಕಾರಣಕ್ಕೆ ಹಿಂತಿರುಗಿ, 1989ರಲ್ಲಿ ಜನತಾದಳದಿಂದ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಚುನಾಯಿತರಾದರು. 1999ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಅವರು ತೀರ್ಥಹಳ್ಳಿ ಕ್ಷೇತ್ರ ತೊರೆದು ಶೃಂಗೇರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಬಳಿಕ ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡು ಬೆಂಗಳೂರು ಉತ್ತರ ಕ್ಷೇತ್ರದಿಂದ 2009ರಲ್ಲಿ ಸಂಸದರಾಗಿ ಆಯ್ಕೆಯಾದರು.
ಆರಂಭಿಕ ಹಾದಿ:ಮೂಡಿಗೆರೆ ತಾಲೂಕು ದಾರದಹಳ್ಳಿ ಡಿ.ಎ. ಭೈರೇಗೌಡ ಹಾಗೂ ಪುಟ್ಟಮ್ಮ ದಂಪತಿ ಮಗನಾಗಿ 1936ರ ಆ. 26ರಂದು ಜನಿಸಿದ ಡಿ.ಬಿ. ಚಂದ್ರೇಗೌಡ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎಸ್​ಸಿ ಪದವಿ ಪೂರ್ಣಗೊಳಿಸಿದರು. ಇದಾದ ಬಳಿಕ ಬೆಳಗಾವಿಯ ಆರ್​ಎನ್ ಕಾಲೇಜಿನಲ್ಲಿ ಎಲ್​ಎಲ್​ಬಿ ಪೂರ್ಣಗೊಳಿಸಿ ವಕೀಲಿ ವೃತ್ತಿ ಆರಂಭಿಸಿದರು. ವಿದ್ಯಾರ್ಥಿದೆಸೆಯಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಚಂದ್ರೇಗೌಡ ಬೆಂಗಳೂರು ರೇಣುಕಾಚಾರ್ಯ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ, ಲಾ ಓದುವಾಗ ಬೆಳಗಾವಿ ಆರ್.ಎನ್. ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ವಕೀಲರಾಗಿದ್ದ ಡಿ.ಬಿ.ಚಂದ್ರೇಗೌಡ 1967ರಲ್ಲಿ ಪ್ರಜಾಸೋಷಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರಾದರೂ ಬಳಿಕ ಕಾಂಗ್ರೆಸ್ ಸೇರಿ 1971ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಆ ನಂತರ ಚಂದ್ರೇಗೌಡ ಹಿಂತಿರುಗಿ ನೋಡಿದ್ದೇ ಇಲ್ಲ.
ಮೂಡಿಗೆರೆ:ಅತ್ಯುತ್ತಮ ಸಂಸದೀಯ ಪಟು, ವಿಧಾನಸಭೆ ಮಾಜಿ ಅಧ್ಯಕ್ಷ, ನಾಲ್ಕೂ ಸದನಗಳಿಗೂ ಪದಾರ್ಪಣೆ ಮಾಡಿದ್ದ ರಾಜ್ಯದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಡಿ.ಬಿ. ಚಂದ್ರೇಗೌಡ (87) ಸೋಮವಾರ ತಡರಾತ್ರಿ ಅನಾರೋಗ್ಯದಿಂದ ಮೂಡಿಗೆರೆ ತಾಲೂಕು ದಾರದಹಳ್ಳಿಯ ತೋಟದ ಮನೆಯಲ್ಲಿ ನಿಧನರಾದರು. ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೂಡಿಗೆರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ದಾರದಹಳ್ಳಿಯಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ದಾರದಹಳ್ಳಿಯಲ್ಲಿ ಇಂದು ಮಧ್ಯಾಹ್ನ (ಬುಧವಾರ) ಅಂತ್ಯಕ್ರಿಯೆ ನೆರವೇರಲಿದೆ. ಅವರು ಪತ್ನಿ ಪೂರ್ಣಾ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!

ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 5 =
Remember me
