ಕಲಬುರಗಿ:ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕೆ 3 ಲಕ್ಷಕ್ಕೂ ಅಧಿಕ ರೈತರು ಹೆಸರು ನೋಂದಾಯಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಅವೈಜ್ಞಾನಿಕ ಮಿತಿಯಿಂದಾಗಿ 1.15 ಲಕ್ಷಕ್ಕೂ ಹೆಚ್ಚಿನ ರೈತರು ಖರೀದಿ ಪ್ರಕ್ರಿಯೆಯಿಂದ ವಂಚಿತರಾಗಲಿದ್ದಾರೆ. ಇದು ತೊಗರಿ ಕಣಜದ ಮಣ್ಣಿನ ಮಕ್ಕಳಲ್ಲಿ ಆತಂಕ ಸೃಷ್ಟಿಸಿದೆ.
ಈ ಬಾರಿ ತೊಗರಿ ಫಸಲು ಭರ್ಜರಿಯಾಗಿದ್ದು, 13-14 ಲಕ್ಷ ಟನ್ ಉತ್ಪಾದನೆಯಾಗಿದೆ. ಕಲಬುರಗಿಯಲ್ಲೇ 6 ಲಕ್ಷ ಟನ್ ಎಂಬ ಅಂದಾಜಿದೆ. ಆದರೆ ತಪ್ಪು ಮಾಹಿತಿಯಿಂದಾಗಿ ರಾಜ್ಯದಲ್ಲಿ 7.34 ಲಕ್ಷ ಟನ್ ಉತ್ಪಾದನೆ ಲೆಕ್ಕಾಚಾರವಿದೆ. ಈ ಪೈಕಿ ಶೇ.25 ಖರೀದಿಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಇದರಂತೆ 1.85 ಲಕ್ಷ ಟನ್ ತೊಗರಿ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿ ಆಗಲಿದೆ. ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿ ಮಿತಿ ಇದ್ದುದರಿಂದ ನೋಂದಾಯಿತರ ಪೈಕಿ 1.85 ಲಕ್ಷ ರೈತರಿಂದ ಖರೀದಿಯಾಗಲಿದೆ. ಉಳಿದವರು ಬೆಂಬಲ ಬೆಲೆಯಿಂದ ವಂಚಿತರಾಗಲಿದ್ದಾರೆ. ಈಗಾಗಲೇ 10 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿದೆ. ಈವರೆಗಿನ ಲಭ್ಯ ಮಾಹಿತಿಯಂತೆ 39,091 ರೈತರಿಂದ 3,45,106 ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ನೋಂದಣಿಗೆ ಫೆ.25ರವರೆಗೂ ಸಮಯ ಇರುವುದರಿಂದ ರೈತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಆದರೆ ಕೇಂದ್ರ ಸರ್ಕಾರ ಮಿತಿ ಹೆಚ್ಚಿಸದಿದ್ದರೆ ಸುಮಾರು 1.15 ಲಕ್ಷ ಬೆಳೆಗಾರರ ಟೊಂಕ ಮುರಿದಂತಾಗಲಿದೆ.
ಜಿಲ್ಲಾವಾರು ನೋಂದಾಯಿತ ವಿವರ:ರಾಜ್ಯದಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು (1,13,808) ರೈತರು ಮಂಗಳವಾರವರೆಗೆ ಹೆಸರು ನೋಂದಾಯಿಸಿದ್ದಾರೆ. ಬಾಗಲಕೋಟೆ 8,930, ಬೆಳಗಾವಿ 3,256, ಬಳ್ಳಾರಿ 485, ಬೀದರ್ 46,197, ಕೊಪ್ಪಳ 3,870, ವಿಜಯಪುರ 83,598, ರಾಯಚೂರು 22,618, ಯಾದಗಿರಿ 17,349 ಸೇರಿ 3,00,111 ರೈತರು ಹೆಸರು ನೋಂದಾಯಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸಿಗದ ಸೂಕ್ತ ಬೆಲೆ:ಬೆಂಬಲ ಬೆಲೆಯಲ್ಲಿ ತೊಗರಿ ಮಾರಿದರೆ ರೈತರಿಗೆ ಕೇಂದ್ರ ನಿಗದಿಪಡಿಸಿದ 5800 ರೂ. ಹಾಗೂ ರಾಜ್ಯದ 300 ರೂ. ಪ್ರೋತ್ಸಾಹಧನ ಸೇರಿ ಕ್ವಿಂಟಾಲ್​ಗೆ 6100 ರೂ. ಸಿಗುತ್ತದೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ 4800ರಿಂದ 5200 ರೂ. ಮಾತ್ರ ಸಿಗುತ್ತಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಮಾರಲು ರೈತರು ತುದಿಗಾಲಲ್ಲಿದ್ದಾರೆ. ಆದರೆ ಸರ್ಕಾರ ಕಾಫಿ, ರಾಗಿ, ಭತ್ತ ಬೆಳೆಗಾರರಿಗೆ ಹೋಲಿಸಿದರೆ ತೊಗರಿ ರೈತರನ್ನು ಎರಡನೇ ದರ್ಜೆಯಂತೆ ನಡೆಸಿಕೊಳ್ಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ವಿಧಿಸಿರುವ ಮಿತಿಯಿಂದ 1.15 ಲಕ್ಷಕ್ಕೂ ಹೆಚ್ಚಿನ ರೈತರು ಬೆಂಬಲ ಬೆಲೆ ಪಡೆಯುವ ಅವಕಾಶದಿಂದ ವಂಚಿತ ರಾಗಲಿದ್ದಾರೆ. ಹೀಗಾಗಿ ಕೂಡಲೇ ಸಿಎಂ ಯಡಿಯೂರಪ್ಪ ನೀಡಿದ ಭರವಸೆಯಂತೆ ಖರೀದಿ ಮಿತಿಯನ್ನು 20 ಕ್ವಿಂಟಾಲ್​ಗೆ ಹೆಚ್ಚಿಸಲು ಪ್ರಧಾನಿ ಮೇಲೆ ಒತ್ತಡ ಹೇರಬೇಕು. ಇಲ್ಲವೇ ರಾಜ್ಯದ ಬೊಕ್ಕಸದಿಂದಲೇ ಹಣ ನೀಡಿ ಖರೀದಿಸಿದರೆ ಮಾತ್ರ ತೊಗರಿ ಬೆಳೆಗಾರರಿಗೆ ಉಳಿಗಾಲವಿದೆ.
| ಮಾರುತಿ ಮಾನ್ಪಡೆ ಕೆಪಿಆರ್​ಎಸ್ ರಾಜ್ಯ ಉಪಾಧ್ಯಕ್ಷ
ಯಾರೊಬ್ಬರೂ ವಂಚಿತರಾಗದಂತೆ ಖರೀದಿ ಮಿತಿ 30 ಲಕ್ಷ ಕ್ವಿಂಟಾಲ್​ಗೆ ಹೆಚ್ಚಿಸುವ ಸಾಧ್ಯತೆ ಇದೆ. ರೈತರ ಬೇಡಿಕೆ ನೋಡಿ ಸಕಾಲಕ್ಕೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.
| ಡಾ.ರಿತೇಂದ್ರನಾಥ ಸೂಗೂರ ಜಂಟಿ ಕೃಷಿ ನಿರ್ದೇಶಕ
3.45 ಕ್ವಿಂಟಾಲ್ ತೊಗರಿ ಖರೀದಿ
ಬೆಂಗಳೂರು: ರಾಜ್ಯ ಸರ್ಕಾರ ಫೆ.18ರವರೆಗೆ 39,091 ರೈತರಿಂದ 3,45,106 ಕ್ವಿಂಟಾಲ್ ತೊಗರಿ ಖರೀದಿಸಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಬೆಂಬಲ ಬೆಲೆ ಯೋಜನೆಯಲ್ಲಿ ತೊಗರಿ ಖರೀದಿಯನ್ನು 10 ಕ್ವಿಂಟಾಲ್​ನಿಂದ 20ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್​ನ ವಿಜಯ ಸಿಂಗ್ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಫೆ.18ರ ಅಂತ್ಯಕ್ಕೆ 3,00,111 ರೈತರು ಖರೀದಿ ಸಂಸ್ಥೆಯೊಂದಿಗೆ ನೋಂದಣಿ ಮಾಡಿಕೊಂಡಿದ್ದಾರೆ ಹಾಗೂ 3,45,106 ಕ್ವಿಂಟಾಲ್ ತೊಗರಿಯನ್ನು 39,091 ರೈತರಿಂದ ಖರೀದಿಸಿದ್ದೇವೆ. 2019-20ನೇ ಸಾಲಿನಲ್ಲಿ ರಾಜ್ಯದ 13.35 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಅಂದಾಜು 12.02 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆಯಿದೆ. ತೊಗರಿ ಉತ್ಪನ್ನದ ಮಾದರಿ ಧಾರಣೆ 3,344 ರೂ.ಗಳಿಂದ 5,059ರೂ. ವರೆಗೂ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಗುಣಮಟ್ಟದ ತೊಗರಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್​ಗೆ 5,800 ರೂ. ಬೆಂಬಲಬೆಲೆ ಘೊಷಿಸಲಾಗಿದೆ. ಗರಿಷ್ಠ 1,82,875 ಮೆಟ್ರಿಕ್ ಟನ್ ಖರೀದಿ ಪ್ರಮಾಣ ನಿಗದಿಪಡಿಸಿ, ನಫೆಡ್ ಮೂಲಕ ಖರೀದಿಸಲು ಅನುಮೋದಿಸಲಾಗಿದೆ. ತೊಗರಿ ಬೆಳೆಯುವ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ನಫೆಡ್ ರಾಜ್ಯ ಸರ್ಕಾರದ ಮಾರ್ಕ್​ಫೆಡ್ ಹಾಗೂ ತೊಗರಿ ಅಭಿವೃದ್ಧಿ ಮಂಡಳಿ ಮೂಲಕ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
| ಬಾಬುರಾವ ಯಡ್ರಾಮಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 14 =
Remember me
