|ಆರ್.ಕೃಷ್ಣಮೈಸೂರು
ಕರೊನಾ ಮಹಾಮಾರಿಯ ಬಳಿಕ ಅದ್ದೂರಿಯಾಗಿ ಜರುಗಿದ ಈ ಬಾರಿಯ ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಬುಧವಾರ ಕಿಕ್ಕಿರಿದು ಸೇರಿದ್ದ ಲಕ್ಷಾಂತರ ಜನರು ಕಣ್ಮುಂಬಿಕೊಂಡರು. ಶ್ರೀ ಚಾಮುಂಡೇಶ್ವರಿ ದೇವಿ ವಿರಾಜಮಾನಳಾಗಿದ್ದ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ‘ಅಭಿಮನ್ಯು’ ಆನೆ, ರಾಜಗಾಂಭೀರ್ಯವಾಗಿ ಅರಮನೆಯಿಂದ ಹೊರಟು, ಬನ್ನಿಮಂಟಪ ತಲುಪುತ್ತಿದ್ದಂತೆಯೇ ದ್ವಾರದಲ್ಲಿ ರಾಷ್ಟ್ರಗೀತೆ ಮೊಳಗಿಸುವ ಮೂಲಕ ಮೆರವಣಿಗೆ ಮುಕ್ತಾಯಗೊಂಡಿತು. ಕುಮ್ಕಿ ಆನೆಗಳಾದ ಚೈತ್ರಾ ಮತ್ತು ಕಾವೇರಿ ಅಕ್ಕಪಕ್ಕದಲ್ಲಿ ಸಾಗಿ ಅಭಿಮನ್ಯುವಿಗೆ ಸಾಥ್ ನೀಡಿದವು. ಬಳಿಕ ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತು ಪ್ರದರ್ಶನದ ಮೂಲಕ 413ನೇ ದಸರಾ ಸಂಪನ್ನಗೊಂಡಿತು. ಪೊಲೀಸ್ ಅಧಿಕಾರಿಗಳ ಅಂದಾಜಿನ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಜನರು ಈ ಬಾರಿ ದಸರಾ ವೀಕ್ಷಿಸಿದ್ದಾರೆ. ತೆರೆದ ಜೀಪಿನಲ್ಲಿ ಮುಖ್ಯಮಂತ್ರಿ ಮತ್ತವರ ಸಂಪುಟ ಸಹೋದ್ಯೋಗಿಗಳು ಅರಮನೆ ಆವರಣ ಪ್ರದೇಶಿಸುತ್ತಿದ್ದಂತೆಯೇ ಮೆರವಣಿಗೆ ಚಾಲನೆಗೊಂಡಿತು. ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿಗೆ ಸಂಜೆ 5.37ಕ್ಕೆ ಪುಷ್ಪಾರ್ಚನೆ ಮಾಡಿದರು. ಪುಷ್ಪಾರ್ಚನೆ ವೇಳೆ 21 ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತಲ್ಲದೆ, ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ಮೊಳಗಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್​ಕುಮಾರ್, ಮೇಯರ್ ಶಿವಕುಮಾರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಗರ ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಸಾಥ್ ನೀಡಿದರು.
ಎಡಕ್ಕೆ ವಾಲಿದ ಚಿನ್ನದ ಅಂಬಾರಿ:ಎರಡು ವರ್ಷಗಳ ಬಳಿಕ ಜರುಗಿದ ಅದ್ದೂರಿ ದಸರಾದಲ್ಲಿ ಚಿನ್ನದ ಅಂಬಾರಿ ಎಡಕ್ಕೆ ವಾಲಿತ್ತು. ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ಸಿಬ್ಬಂದಿ ಆನೆಯ ಮೇಲೆ ಅಂಬಾರಿಯನ್ನು ಪ್ರತಿವರ್ಷ ಕಟ್ಟುತ್ತಾರೆ. ಈ ಹಿಂದೆ ಮೊದಲಿಗೆ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಆದರೆ ಮೆರವಣಿಯಲ್ಲಿ ಚಿನ್ನದ ಅಂಬಾರಿ ಕೊನೆಯಲ್ಲಿ ತೆರಳಬೇಕಾಗಿರುವುದರಿಂದ ಸ್ತಬ್ಧಚಿತ್ರ, ಕಲಾತಂಡಗಳ ಬೃಹತ್ ಮೆರವಣಿಗೆ ಸಾಗುವವರೆಗೂ 750 ಕೆ.ಜಿ. ತೂಕದ ಅಂಬಾರಿಯನ್ನು ಹೊತ್ತು ಆನೆ ನಿಲ್ಲಬೇಕಾಗಿತ್ತು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಮೆರವಣಿಗೆ ಅರ್ಧ ಸಾಗಿದ ಮೇಲೆ ಅಂಬಾರಿ ಕಟ್ಟಿ, ಕೊನೆಯಲ್ಲಿ ಪುಷ್ಪಾರ್ಚನೆ ಮಾಡುವುದು ಕೆಲ ವರ್ಷದಿಂದ ನಡೆದು ಬಂದಿದೆ. ಆದರೆ ಈ ಬಾರಿ ಮೆರವಣಿಗೆ ತಡವಾಗಿದ್ದರಿಂದ ಚಿನ್ನದ ಅಂಬಾರಿ ಕಟ್ಟುವ ವೇಳೆ ಎಡಕ್ಕೆ ವಾಲಿದ್ದು, ಮಾವುತರು, ಕಾವಾಡಿಗಳು ಆಗಾಗ್ಗೆ ಸರಿಪಡಿಸುತ್ತಿದ್ದರು.
ಮೀರಿದ ಪುಷ್ಪಾರ್ಚನೆ ಮಹೂರ್ತ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆಗೆ ಮುಹೂರ್ತ ಮೀರಿತ್ತು. ಮೊದಲೇ ನಿಗದಿಯಾಗಿದ್ದಂತೆ ಸಂಜೆ 5.07ರಿಂದ 5.18ರಲ್ಲಿ ಸಲ್ಲುವ ಶುಭ ಮೀನಾ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸಬೇಕಾಗಿತ್ತು. ಆದರೆ ಮೆರವಣಿಗೆಯ ಅವ್ಯವಸ್ಥೆ, ಸ್ಥಬ್ಧಚಿತ್ರಗಳು, ಕಲಾವಿದರ ತಂಡ ಉದ್ದವಿತ್ತು. ಇದನ್ನು ಸಮಯಕ್ಕೆ ಸರಿಯಾಗಿ ತೆರಳುವಂತೆ ಸಮರ್ಪಕವಾಗಿ ನಿಭಾಯಿಸುವಲ್ಲಿ ಮೆರವಣಿಗೆ ಉಸ್ತುವಾರಿ ವಹಿಸಿದ್ದ ಪೊಲೀಸರು ವಿಫಲರಾದರು. ಹೀಗಾಗಿ ಪುಷ್ಪಾರ್ಚನೆಯ ಸಮಯ ಮೀರಿ 19 ನಿಮಿಷ ತಡವಾಗಿ ಸಂಜೆ 5.37ಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
3ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು:ಕ್ಯಾಪ್ಟನ್ ‘ಅಭಿಮನ್ಯು’ವಿಗೆ ಮೂರನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅನುಭವವಾಗಿದೆ. ‘ಅರ್ಜನ’ ಆನೆಯ ಉತ್ತರಾಧಿಕಾರಿಯಾಗಿ ಅಂಬಾರಿ ಹೊರುವ ಜವಾಬ್ದಾರಿ ನಿಭಾಯಿಸುತ್ತಿರುವ ಅಭಿಮನ್ಯು ಎರಡು ಬಾರಿ ಕರೊನಾದಿಂದ ಅರಮನೆ ಆವರಣದಲ್ಲಿಯೇ ಯಶಸ್ವಿಯಾಗಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. ಈಗ ಮೂರನೇ ಬಾರಿ, ಅದ್ದೂರಿ ದಸರಾದಲ್ಲಿ ಬನ್ನಿಮಂಟಪದವರೆಗೆ ಪ್ರಥಮ ಬಾರಿಗೆ ಭಾರಿ ತೂಕದ ಅಂಬಾರಿ ಹೊತ್ತು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಗಮನ ಸೆಳೆದ ಸ್ತಬ್ದಚಿತ್ರಗಳು, ಕಲಾತಂಡಗಳ ಮೆರವಣಿಗೆ:ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಇಲಾಖೆಗಳಿಗೆ ಸೇರಿದ ಒಟ್ಟು 48 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದರೆ, 77 ಕಲಾತಂಡಗಳು, ನಾದಸ್ವರ, ಪೊಲೀಸ್ ಬ್ಯಾಂಡ್, ಫಿರಂಗಿ ಗಾಡಿಗಳು ಗಮನ ಸೆಳೆದವು. ಈ ಬಾರಿ ವಿಶೇಷವಾಗಿ ರಾಜ್ಯದ ಕಲಾತಂಡಗಳ ಜತೆಗೆ ರಾಜಸ್ಥಾನದ ಚಕ್ರಿ, ಗೂಮರ್ ನೃತ್ಯ, ಪಶ್ವಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ, ತೆಲಂಗಾಣದ ಮಥುರಿ ನೃತ್ಯ, ಪಂಜಾಬ್​ನ ಬಾಂಗ್ರಾ ಮತ್ತು ಜಿಂದುವಾ ನೃತ್ಯ, ಜಮ್ಮು ಮತ್ತು ಕಾಶ್ಮೀರದ ಡೋಂಗ್ರಿ ನೃತ್ಯ, ತಮಿಳುನಾಡಿನ ತಪ್ಪೆಟಂ ನೃತ್ಯ ಆಕರ್ಷಿಸಿದವು. ವಿವಿಧ ಸಂದೇಶ, ಪ್ರಗತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು.
ಸಿಎಂ ಕೊಟ್ಟ ಹಸಿರು ಸೀರೆ:ಜಂಬೂಸವಾರಿ ಮೆರವಣಿಗೆಯ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಹಸಿರು ರೇಷ್ಮೆ ಸೀರೆಯನ್ನು ತೊಡಿಸಲಾಗಿತ್ತು. ನಾಡದೇವತೆ ಚಾಮುಂಡೇಶ್ವರಿ ಮೂರ್ತಿಗೆ ಸೀರೆ ತೊಡಿಸಲು ಗಣ್ಯರಲ್ಲಿಯೇ ಪ್ರತಿ ವರ್ಷ ಪೈಪೋಟಿ ನಡೆಯುವುದು ಸಾಮಾನ್ಯ. ಆದರೆ ಈ ಬಾರಿ ಬಸವರಾಜ ಬೊಮ್ಮಾಯಿ ಅವರೇ ನೀಡಿದ ಮೈಸೂರು ರೇಷ್ಮೆ ಸೀರೆ ತೊಡಿಸಲಾಗಿತ್ತು.
ವಿಜಯಯಾತ್ರೆ ನಡೆಸಿದ ಯದುವೀರ:ವಜ್ರಮುಷ್ಠಿ ಕಾಳಗದ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆ ಅಂಗಳದಲ್ಲಿ ಬುಧವಾರ ವಿಜಯಯಾತ್ರೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಗ್ಗೆ 11 ಗಂಟೆಗೆ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ಮುಗಿದ ನಂತರ 11.13ಕ್ಕೆ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇಗುಲಕ್ಕೆ ವಿಜಯಯಾತ್ರೆ ಹೊರಟರು. ಬಳಿಕ ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಹಾಕಾಳಿಯಮ್ಮನವರ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಹೊರಟ ಯದುವೀರ ವಿಜಯಯಾತ್ರೆ ಮುಂದುವರಿಸಿ ಅರಮನೆ ತಲುಪಿದರು. ಈ ಮೂಲಕ ರಾಜಮನೆತನದ ವಿಜಯದಶಮಿಯ ಪೂಜಾ ಕೈಂಕರ್ಯಗಳಿಗೆ ಅಂತಿಮ ತೆರೆಬಿತ್ತು. ಸರ್ಕಾರದಿಂದ ನಾಡಹಬ್ಬವಾಗಿ ದಸರಾ ಉತ್ಸವವನ್ನು ಅಂಬಾವಿಲಾಸ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಿದರೆ, ಅರಮನೆ ಒಳಗೆ ಯದುವಂಶಸ್ಥರಿಂದಲೂ ಧಾರ್ವಿುಕ, ವಿಧಿವಿಧಾನದೊಂದಿಗೆ ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅನ್ಯರಾಜ್ಯಗಳ ಕಲೆಯ ದರ್ಶನ:ಅನ್ಯ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಶ್ರೀಮಂತಿಕೆ ಕೂಡ ಅನಾವರಣಗೊಂಡಿತು. ರಾಜಸ್ಥಾನದ ಚಕ್ತಿ ಮತ್ತು ಗೂಮರ್ ನೃತ್ಯ, ಪಶ್ಚಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ ಆಕರ್ಷಿಸಿತು. ತೆಲಂಗಾಣದ ಮಥುರಿ ನೃತ್ಯ, ಪಂಜಾಬ್​ನ ಬಾಂಗ್ರಾ ಮತ್ತು ಜಿಂದುವಾ ನೃತ್ಯ ಬಿಂದಾಸ್ ಆಗಿತ್ತು. ಜಮ್ಮು-ಕಾಶ್ಮೀರದ ಡೋಂಗ್ರಿ ನೃತ್ಯ, ತಮಿಳುನಾಡಿನ ತಪ್ಪೆಟಂ ನೃತ್ಯ ದರ್ಶನವಾಯಿತು.
ವಿಶೇಷ ಬಿಗಿ ಭದ್ರತೆ:ಅದ್ದೂರಿ ದಸರಾಕ್ಕೆ ಈ ಬಾರಿ ವಿಶೇಷ ಭದ್ರತೆ ಕೈಗೊಳ್ಳಲಾಗಿತ್ತು. ಮೈಸೂರಿನ 1255, ಹೊರ ಜಿಲ್ಲೆಗಳಿಂದ 3580 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, 650 ಗೃಹ ರಕ್ಷಕರು ಸೇರಿದಂತೆ ಒಟ್ಟು 5,485 ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೊಬೈಲ್ ಕಮಾಂಡ್ ಸೆಂಟರ ಬಸ್, 300ಕ್ಕೂ ಹೆಚ್ಚಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ದಸರಾ ಉದ್ಘಾಟಿಸಿದ್ದ ರಾಷ್ಟ್ರಪತಿ:ಇದೇ ಪ್ರಥಮ ಬಾರಿಗೆ ರಾಷ್ಟ್ರಪತಿಯಿಂದ ದಸರಾ ಉದ್ಘಾಟಿಸಲಾಗಿತ್ತು. ದ್ರೌಪದಿ ಮುಮು ಅವರು ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ಹತ್ತು ದಿನಗಳ ನಾಡಹಬ್ಬಕ್ಕೆ ಚಾಲನೆ ನೀಡಿದ್ದರು. ಹಿಂದೆಲ್ಲ ಸಾಹಿತಿಗಳು, ಚಿತ್ರನಟರು, ಗಣ್ಯರು ದಸರಾ ಉದ್ಘಾಟಿಸಿಕೊಂಡು ಬರುತ್ತಿದ್ದರು.
ರಾಜಪಥದಲ್ಲಿ ದೃಶ್ಯಕಾವ್ಯ:ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂತಿಮ ಘಟ್ಟವಾದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ವಿವಿಧ ಪ್ರದರ್ಶನ ಕಲೆಗಳ ವೈಭೋಗ ಸಿರಿ ಗರಿಬಿಚ್ಚಿತು. ವಿವಿಧ ಕಲಾಸಂಸ್ಕೃತಿಯ ಸಿರಿತನದ ದಿಬ್ಬಣ ಲಕ್ಷಾಂತರ ಜನರ ಕಣ್ಣು ಕೋರೈಸಿತು. ಕರೊನಾ ಸಂಕ್ರಮಣದಿಂದ ಕಳೆದ ಎರಡು ವರ್ಷ ಅರಮನೆಗೆ ಮಾತ್ರ ಸೀಮಿತವಾಗಿದ್ದ ಜಂಬೂಸವಾರಿ ಮೆರವಣಿಗೆ ಈ ಬಾರಿ ಎಂದಿನಂತೆ ಬನ್ನಿಮಂಟಪದವರೆಗೆ ವರ್ಣರಂಜಿತವಾಗಿ ನೆರವೇರಿತು. ಇದರೊಂದಿಗೆ ಹೆಜ್ಜೆ ಹಾಕಿದ ಸಾಂಸ್ಕೃತಿಕ ಕಲಾತಂಡಗಳ ನೃತ್ಯ, ಸಂಗೀತದ ಮನಮೋಹಕತೆಗೆ ನೆರೆದಿದ್ದ ಜನಸ್ತೋಮ ಮನಸೋತಿತು. ನಂದಿಪೂಜೆಗೆ ಪೂಜೆ ಸಲ್ಲಿಸುತ್ತಿದ್ದಂತೆ ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆ ಚಾಲನೆಗೊಂಡಿತು. ನಿಶಾನೆ ಆನೆ ಅರ್ಜುನ, ನೌಪತ್ ಆನೆಯಾಗಿ ಮೊದಲ ಬಾರಿಗೆ ಮಹೇಂದ್ರ, ಸಾಲಾನೆಯಾಗಿ ಭೀಮ, ವಿಜಯ, ಗೋಪಾಲಸ್ವಾಮಿ, ಗೋಪಿಯೊಂದಿಗೆ ಕಲಾತಂಡಗಳು ಹಿಮ್ಮೇಳದಂತೆ ಹೆಜ್ಜೆ ಹಾಕಿದವು. ಆಗ ಜಾನಪದ ಕಲೆಯ ದೃಶ್ಯವೈಭವ, ನೆತ್ತಿ ಸುಡುವ ಬಿಸಿಲಿನಲ್ಲೂ ಕಲಾವಿದರ ರಣ ಉತ್ಸವ, ಕರ್ನಾಟಕ ಸಾಂಸ್ಕೃತಿಕ ಕಲೆಯ ದರ್ಶನ, ಅನ್ಯ ರಾಜ್ಯಗಳ ಸಾಂಪ್ರದಾಯಿಕ ನರ್ತನ ಕಣ್ಮನ ಸೆಳೆಯಿತು.
ಮೈ ನವಿರೇಳಿಸಿದ ವಜ್ರಮುಷ್ಠಿ ಕಾಳಗ:ಸಂಪ್ರದಾಯದಂತೆ ಅಂಬಾವಿಲಾಸ ಅರಮನೆಯಲ್ಲಿ ಬುಧವಾರ ನಡೆದ ಪಾರಂಪರಿಕ ವಜ್ರಮುಷ್ಠಿ ಕಾಳಗ ಮೈನವಿರೇಳುವಂತೆ ಮಾಡಿತು. ಕಾತರದಿಂದ ಗಂಟೆಗಟ್ಟಲೆ ಕಾದು ಕುಳಿತಿದ್ದವರು ಕಾಳಗವನ್ನು ಕಣ್ತುಂಬಿಕೊಂಡಿದ್ದು 15 ಸೆಕೆಂಡ್​ಗಳು ಮಾತ್ರ! ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿದ ಕೂಡಲೇ ಕಾಳಗ ಪ್ರಾರಂಭಗೊಂಡಿತು. ಈ ಬಾರಿ ಮೊದಲ ಜೋಡಿಯಾಗಿ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಅವರ ಮಗ ವಿಷ್ಣು ಜಟ್ಟಿ ಮತ್ತು ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಶಿಷ್ಯ ತಾರಾನಾಥ ಜಟ್ಟಿ. ಎರಡನೇ ಜೋಡಿಯಾಗಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ಅಚ್ಯುತ್ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಮನೋಜ್ ಜಟ್ಟಿ ನಡುವೆ ಕಾಳಗ ನಡೆಯಿತು. ಈ ಪೈಕಿ ಮನೋಜ್ ಜಟ್ಟಿ ಮತ್ತು ಅಚ್ಯುತ್ ಜಟ್ಟಿ ನಡುವಿನ ಕಾಳಗ ರೋಮಾಂಚಕಾರಿಯಾಗಿತ್ತು. ಮದಗಜಗಳಂತೆ ಒಬ್ಬರ ಮೇಲೊಬ್ಬರು ಎರಗಿ ಮುಷ್ಠಿ ಪ್ರಯೋಗಕ್ಕೆ ಮುಂದಾಗುತ್ತಿದ್ದರು. ಆದರೆ, ಹುರಿಗಟ್ಟಿದ ಮೈಯನ್ನು ಅರಳಿಸುತ್ತ, ಕೆಂಗಣ್ಣಿನಿಂದ ದಿಟ್ಟಿಸುತ್ತ ಮನೋಜ್ ಜಟ್ಟಿ ಛಂಗನೆ ಎಗರಿ ಮಿಂಚಿನ ವೇಗದಲ್ಲಿ ಎದುರಾಳಿ ಅಚ್ಯುತ್ ಜಟ್ಟಿ ತಲೆಯ ಭಾಗಕ್ಕೆ ವಜ್ರನಖದಿಂದ ಹೊಡೆದು 15 ಸೆಕೆಂಡಿನಲ್ಲೇ ರಕ್ತ ಚಿಮ್ಮಿಸಿದರು. ಇನ್ನು ವಿಷ್ಣು ಜಟ್ಟಿ ಮತ್ತು ತಾರಾನಾಥ ಜಟ್ಟಿ ನಡುವಿನ ಕಾಳಗವೂ ರೋಚಕವಾಗಿತ್ತು. ಆದರೆ, ಮನೋಜ್ ಜಟ್ಟಿ ಮತ್ತು ಅಚ್ಯುತ್ ಜಟ್ಟಿ ನಡುವಿನ ಕಾಳಗದಲ್ಲೇ ರಕ್ತ ಚಿಮ್ಮಿದ ಕಾರಣ ಶುಭಸೂಚಕ ಎಂಬಂತೆ ಅಲ್ಲಿಗೆ ಕಾಳಗಕ್ಕೆ ಮಂಗಳ ಹಾಡಲಾಯಿತು. ದಶ ಮಂದಿಗಳಾಗಿ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಜಟ್ಟಿ ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಇತರರು ಇದ್ದರು. ಪ್ರಮೋದಾದೇವಿ ಒಡೆಯರ್, ತ್ರಿಷಿಕಾಕುಮಾರಿ ಸೇರಿದಂತೆ ರಾಜವಂಸ್ಥರು ಕಾಳಗ ವೀಕ್ಷಿಸಿದರು. ಪ್ರತಿವರ್ಷ ವಿಜಯದಶಮಿ ದಿನದಂದು ಯದುವಂಶದ ಅರಸರು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ದೇವಮಲ್ಲ ಜಟ್ಟಿಗಳ ‘ವಜ್ರಮುಷ್ಠಿ’ ಕಾಳಗ ನಡೆಯುತ್ತದೆ.
ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
