ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯ ಹಚ್ಚಹಸುರಿನ ಧಾರ್ವಿುಕ ತಾಣ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದು, ಮುಸ್ಲಿಮರಿಬ್ಬರಿಗೂ ಅವಕಾಶ ಕಲ್ಪಿಸುವ ಮೂಲಕ 50 ವರ್ಷಗಳ ವಿವಾದಕ್ಕೆ ‘ಸೌಹಾರ್ದಯುತ ಪರಿಹಾರ’ ಮಾರ್ಗವನ್ನು ರಾಜ್ಯ ಸರ್ಕಾರ ಕಂಡುಕೊಂಡಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಸಚಿವ ಸಂಪುಟದ ಉಪ ಸಮಿತಿ ಪ್ರಮುಖ ಐದು ಶಿಫಾರಸು ಒಳಗೊಂಡ ವರದಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯು ಈ ವರದಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಹೈಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿ ಅನುಮೋದನೆ ಪಡೆದುಕೊಂಡ ಬಳಿಕ ಜಾರಿಗೆ ತರಲಿದೆ.
ಹೈಕೋರ್ಟ್ ನಿರ್ದೇಶನ:ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಎಡೆಮಾಡಿಕೊಟ್ಟಿರುವ ಈ ವಿವಾದವನ್ನು ಬಗೆಹರಿಸಲು ಸರ್ಕಾರವೇ ಆಸಕ್ತಿ ವಹಿಸಿ, ಎರಡೂ ಕಡೆಯವರ ಜತೆಗೆ ಮಾತುಕತೆ ನಡೆಸಿ ಸೌಹಾರ್ದಯುತ ಮಾರ್ಗ ಕಂಡುಕೊಳ್ಳುವುದಾಗಿ ಹೈಕೋರ್ಟ್​ಗೆ ತಿಳಿಸಿತ್ತು. ಆರು ವಾರಗಳಲ್ಲಿ ತೀರ್ಮಾನ ತೆಗೆದುಕೊಂಡು ಪ್ರಮಾಣಪತ್ರ ಸಲ್ಲಿಸುವುದಾಗಿ ಸರ್ಕಾರ ಮಾಡಿದ್ದ ಮನವಿ ಪುರಸ್ಕರಿಸಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿತ್ತು.
ಅದರ ಬೆನ್ನಲ್ಲೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ನೇತೃತ್ವದಲ್ಲಿ ಗೃಹ ಮತ್ತು ಮುಜರಾಯಿ ಸಚಿವರನ್ನು ಒಳಗೊಂಡ ಸಚಿವ ಸಂಪುಟದ ಉಪ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಎರಡೂ ಸಮುದಾಯದವರ ಜತೆ ಮಾತುಕತೆ ನಡೆಸಿದ ನಂತರ ವರದಿ ಸಿದ್ಧಪಡಿಸಿದೆ.
ದತ್ತಪೀಠದ ವಿವಾದ ಪರಿಹರಿಸುವ ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದಿಂದ 4 ದಶಕಗಳ ಸುದೀರ್ಘ ಹೋರಾಟಕ್ಕೆ ಗೆಲುವು ದೊರೆತಿದೆ. ದತ್ತಪೀಠಕ್ಕೆ ಅರ್ಚಕರನ್ನು ನೇಮಿಸುವಂತೆ ಸುದೀರ್ಘ ಕಾಲದಿಂದ ಒತ್ತಾಯಿಸಲಾಗುತ್ತಿತ್ತು. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂದೂಗಳ ಈ ಕೋರಿಕೆಯನ್ನು ಪುರಸ್ಕರಿಸಲಿಲ್ಲ. ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರ ಇದಕ್ಕೆ ಮನ್ನಣೆ ನೀಡಿದೆ.
|ಸಿ.ಟಿ. ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ವಿವಾದದ ಹಿನ್ನೆಲೆ:ಇನಾಂ ದತ್ತಾತ್ರೇಯ ಪೀಠದಲ್ಲಿ ಹಿಂದು ಸಂಪ್ರದಾಯದಂತೆ ಪೂಜಾ ಕೈಂಕರ್ಯ ನೆರವೇರಿಸಲು ಮುಸ್ಲಿಮ್ ಮತದ ಮುಜಾವರ್ ನೇಮಕ ಮಾಡಿ ರಾಜ್ಯ ಸರ್ಕಾರ 2018ರ ಮಾ.19ರಂದು ಆದೇಶ ಹೊರಡಿಸಿತ್ತು. ನ್ಯಾ. ನಾಗಮೋಹನ್​ದಾಸ್ ಸಮಿತಿ ನೀಡಿದ ವರದಿಯನ್ನು ಅಂಗೀಕರಿಸಿ ಅಂದಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ
ಹೈಕೋರ್ಟ್​ಗೆ ಮೊರೆ ಹೋಗಿತ್ತು. ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಏಕಸದಸ್ಯಪೀಠವು ಹಿಂದು ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸಲು ಮುಜಾವರ್ ನೇಮಿಸುವ ಸರ್ಕಾರದ ಆದೇಶವನ್ನು ರದ್ದುಪಡಿಸಿ, 2021ರ ಫೆ.28ರಂದು ತೀರ್ಪು ನೀಡಿತ್ತು. ಜತೆಗೆ ನ್ಯಾ.ನಾಗಮೋಹನ್​ದಾಸ್ ಸಮಿತಿಯ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರಕರಣವನ್ನು ಕಾನೂನು ರೀತ್ಯ ಹೊಸದಾಗಿ ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಷಾ ಖಾದ್ರಿ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಆದೇಶಿಸಿತು. ನ್ಯಾಯಾಲಯದ ಆದೇಶವನ್ನು ಸರ್ಕಾರ ಒಪ್ಪಿಕೊಂಡು ಆರು ವಾರಗಳ ಕಾಲಾವಕಾಶ ಪಡೆದುಕೊಂಡಿತ್ತು.
ಬೆಂಗಳೂರು: ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ‘ಚುನಾವಣೆ ಜ್ವರ’ವನ್ನು ‘ನಮ್ಮ ಕ್ಲಿನಿಕ್’ಗಳ ಮೂಲಕ ಉಪಶಮನ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಸೇರಿ ರಾಜ್ಯದ ಎಲ್ಲ ನಗರ-ಪಟ್ಟಣಗಳಲ್ಲಿ ‘ನಮ್ಮ ಕ್ಲಿನಿಕ್’ ತೆರೆಯಲು ಹಾಗೂ ಪೌರ ಕಾರ್ವಿುಕರಿಗೆ ಮಾಸಿಕ 2,000 ರೂ. ಸಂಕಷ್ಟ ಭತ್ಯೆ ಮಂಜೂರು ಮಾಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಬೆಂಗಳೂರಿನ 243 ವಾರ್ಡ್​ಗಳಿಗೆ ತಲಾ ಒಂದು, ರಾಜ್ಯದ ಇನ್ನುಳಿದ ನಗರ-ಪಟ್ಟಣಗಳಲ್ಲಿ 195 ಸೇರಿ 438 ನಮ್ಮ ಕ್ಲಿನಿಕ್​ಗಳು ಸ್ಥಾಪನೆಯಾಗಲಿವೆ. ಅಷ್ಟೇ ಅಲ್ಲ, ಪ್ರಾಥಮಿಕ, ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಆಸರೆಯಾಗಲಿವೆ. ಒಟ್ಟಾರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೇರವಾಗಿ ಜನರಿಗೆ ತಲುಪುವ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಮತ್ತೆರಡು ‘ಜನಪ್ರಿಯ’ ಭಕ್ಷೀಸು ನೀಡಿದೆ.
ದತ್ತ ಪೀಠ ವಿವಾದ ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಉಪ ಸಮಿತಿ ಶಿಫಾರಸು ಸಹಿತ ಸಲ್ಲಿಸಿದ ವರದಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಹೈಕೋರ್ಟ್​ಗೆ ಅಫಿಡವಿಟ್ ಮೂಲಕ ಸಲ್ಲಿಸಲಾಗುವುದು.
|ಜೆ.ಸಿ.ಮಾಧುಸ್ವಾಮಿಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಬಜೆಟ್ ಘೋಷಿಸಿದಂತೆ ಕ್ರಮ:ಬಜೆಟ್​ನಲ್ಲಿ ಘೋಷಿಸಿದಂತೆ ಬೆಂಗಳೂರಿನ ಎಲ್ಲ ವಾರ್ಡ್​ಗಳು, ರಾಜ್ಯದ ಇನ್ನುಳಿದ ನಗರ-ಪಟ್ಟಣಗಳು ಸೇರಿ 438 ‘ನಮ್ಮ ಕ್ಲಿನಿಕ್’ ಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಈ ಕೇಂದ್ರಗಳಲ್ಲಿ ವೈದ್ಯರು ಒಳಗೊಂಡು 1300ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳ ಸೃಜನೆ, ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಈ ಪೈಕಿ ತಲಾ 438 ವೈದ್ಯಾಧಿಕಾರಿ, ನರ್ಸ್ ಹಾಗೂ ಡಿ ವೃಂದದ ಹುದ್ದೆಗಳಿವೆ. ಒಟ್ಟು 103.73 ಕೋಟಿ ರೂ.ಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.
ಸಂಕಷ್ಟ ಭತ್ಯೆ:ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಪೌರಕಾರ್ವಿುಕರು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದು, ಇದೇ ವೇಳೆ ಸರ್ಕಾರ ಮಾಸಿಕ ತಲಾ 2,000 ರೂ. ಸಂಕಷ್ಟ ಪರಿಹಾರ ನೀಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ 54 ಸಾವಿರ ಗುತ್ತಿಗೆ ಪೌರ ಕಾರ್ವಿುಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಅಂದಾಜು 17,000 ಜನರು ಬೆಂಗಳೂರು ವ್ಯಾಪ್ತಿಯಲ್ಲಿದ್ದಾರೆ.
ಮುಂದಿನ ತಿಂಗಳು ಅಧಿವೇಶನ:ವಿಧಾನ ಮಂಡಲದ ಮಳೆಗಾಲದ ಅಧಿವೇಶನವನ್ನು ಜುಲೈ ಬದಲಿಗೆ ಆಗಸ್ಟ್​ನಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಇದೇ ಕಾರಣಕ್ಕೆ ಶುಕ್ರವಾರದ ಸಚಿವ ಸಂಪುಟ ಸಭೆ ಕಾರ್ಯಸೂಚಿಯಲ್ಲಿ ಈ ವಿಷಯ ರ್ಚಚಿಸಲಿಲ್ಲವೆಂದು ಮಾಧುಸ್ವಾಮಿ ತಿಳಿಸಿದರು.
ಪ್ರಿಯಕರನ ಜತೆ ಸೇರಿ ಪತಿಯನ್ನು ಸುಟ್ಟು ಕೊಂದ ಪತ್ನಿ: ಆರೋಪಿಗಳಿಬ್ಬರ ಬಂಧನ

‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
