ಬೆಂಗಳೂರು:ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಜನರ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮೇಲೆ ಕಾರ್ಯಭಾರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅವರಿಗಿರುವ ವಿಶೇಷ ಅಧಿಕಾರವಾದ ಅರೆಕಾಲಿಕ ನ್ಯಾಯಾಲಯದ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.ಸರ್ಕಾರದ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಈ ಮೂರು ಹಂತದ ಅಧಿಕಾರಿಗಳ ಮುಂದಿನ ಕಡತರಾಶಿ ಬೆಟ್ಟದಂತೆ ಬೆಳೆಯುತ್ತಲೇ ಇದೆ.ಅನ್ಯ ಕಾರ್ಯಗಳು, ಜವಾಬ್ದಾರಿಗಳು ಹೆಚ್ಚಾಗುತ್ತಿರುವುದರಿಂದ ಕಾರ್ಯದೊತ್ತಡದ ನಡುವೆ ನಿರಂತರ ಕೋರ್ಟ್ ನಡೆಸಲು ಸಾಧ್ಯವಾಗದೇ ಸುಸ್ತು ಹೊಡೆಯುತ್ತಿದ್ದಾರೆ. ಸರ್ಕಾರ ವಿಶೇಷ ಆಂದೋಲನ ರೀತಿ ಚಟುವಟಿಕೆ ನಡೆಸದೇ ಹೋದರೆ ಅಥವಾ ಪ್ರತ್ಯೇಕ ವ್ಯವಸ್ಥೆ ರೂಪಿಸದೇ ಹೋದಲ್ಲಿ ಈ ಮೂರು ಹಂತದ ಅಧಿಕಾರಿಗಳು ದೈಹಿಕವಾಗಿ, ಮಾನಸಿಕವಾಗಿ ನಜ್ಜುಗುಜ್ಜಾಗುವುದು ಖಂಡಿತ ಎಂಬ ಸ್ಥಿತಿ ಇದೆ. ಅಲ್ಲದೇ ಬೇರೆ ಜನಸ್ನೇಹಿ ಕಾರ್ಯನಿರ್ವಹಣೆಯೂ ಕಷ್ಟವಾಗಲಿದೆ.
ವಿಶೇಷ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯದಲ್ಲಿ 39 ಮಂದಿ ಡಿಸಿಗಳಿದ್ದಾರೆ. ಇವರ ಮುಂದೆ ಆಗಸ್ಟ್ ಅಂತ್ಯಕ್ಕೆ 14415 ಪ್ರಕರಣಗಳು ವಿಚಾರಣೆಯಲ್ಲಿವೆ. ಡಿಸಿಗಳು ಪ್ರತಿ ತಿಂಗಳು ಸರಾಸರಿ 600-650 ಪ್ರಕರಣ ವಿಲೇವಾರಿ ಮಾಡಲಷ್ಟೇ ಶಕ್ತರು. ಅಲ್ಲದೇ ಪ್ರತಿ ತಿಂಗಳೂ ಒಟ್ಟಾರೆ 450-500 ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುವ ಕಾರಣ ವಿಲೇವಾರಿಗೆ ವೇಗವೂ ಸಿಗುತ್ತಿಲ್ಲವಾಗಿದೆ.
ರಾಜ್ಯದಲ್ಲಿ 53 ಉಪವಿಭಾಗಾಧಿಕಾರಿಗಳಿದ್ದು ಅವರ ಮುಂದೆ ಬರೋಬ್ಬರಿ 60 ಸಾವಿರ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮಾಸಿಕ ಸರಾಸರಿ 4 ಸಾವಿರ ಪ್ರಕರಣ ಬಗೆಹರಿಸಲು ಮಾತ್ರ ಸಾಧ್ಯವಾಗುತ್ತಿದೆ.ಉಪ ವಿಭಾಗಾಧಿಕಾರಿ ಕೋರ್ಟ್ ಮುಂದೆ ದೊಡ್ಡ ಪ್ರಮಾಣದ ಪ್ರಕರಣಗಳು ಬಗೆಹರಿಯದೇ ಉಳಿದಿರುವ ಅಂಕೆ ಸಂಖ್ಯೆ ಗಮನಿಸುವುದಾದರೆ, ಆಗಸ್ಟ್ ಆರಂಭದಲ್ಲಿ 59719 ಪ್ರಕರಣಗಳಿದ್ದು, ಹೊಸದಾಗಿ 4447 ಪ್ರಕರಣ ಸೇರ್ಪಡೆಗೊಂಡಂತೆ ಒಟ್ಟು 64,166 ಪ್ರಕರಣಕ್ಕೆ ವಿಸ್ತರಣೆಯಾಗಿದೆ. ಅಕ್ಟೋಬರ್ ಆರಂಭದಲ್ಲಿ ಇದು 61137 ಸಂಖ್ಯೆಗೆ ಕುಗ್ಗಿದೆಯಾದರೂ ವಿಲೇವಾರಿ ಪ್ರಮಾಣಕ್ಕೆ ಹೋಲಿಸಿದರೆ ಬಾಕಿ ಪ್ರಕರಣದ ಸಂಖ್ಯೆ ಬೆಳೆಯುತ್ತಿದೆ.
ತಹಶೀಲ್ದಾರ್ ನ್ಯಾಯಾಲಯದಲ್ಲಿ ದೀರ್ಘಕಾಲಿನ ಅವಧಿಯಲ್ಲಿ ಸಾಕಷ್ಟು ಪ್ರಕರಣ ಉಳಿದಿದೆ. ರಾಜ್ಯದಲ್ಲಿ 236 ತಾಲೂಕುಗಳಿದ್ದು, 224 ಮಂದಿ ತಹಶೀಲ್ದಾರರಿದ್ದಾರೆ. ಒಟ್ಟಾರೆ, 15527 ಪ್ರಕರಣಗಳನ್ನು ಪರಿಹರಿಸಬೇಕಾದ ಸವಾಲು 224 ತಹಶೀಲ್ದಾರರ ಮುಂದಿದೆ.ತಹಶೀಲ್ದಾರ್ ಮುಂದಿರುವ ವಿವಾದಾಸ್ಪದ ಮ್ಯುಟೇಷನ್ ಪ್ರಕರಣಗಳು 17,719 ಇದೆ. ಆಗಸ್ಟ್ ಆರಂಭದಲ್ಲಿ 22,487 ಪ್ರಕರಣ ಬಾಕಿ ಇದ್ದು, ಹೊಸದಾಗಿ 4601 ಸೇರ್ಪಡೆಯಾಗಿತ್ತು. ಇಡೀ ತಿಂಗಳಲ್ಲಿ 9369 ಪ್ರಕರಣ ವಿಲೇವಾರಿ ಮಾಡಲಾಗಿದೆ. ಮಾಸಿಕ ಸರಾಸರಿ ಐದೂವರೆ ಸಾವಿರದಷ್ಟು ಸಾಧ್ಯವಾಗುತ್ತಿದೆ. ವಿಪತ್ತು ನಿರ್ವಹಣೆ ಅಥವಾ ಅನಿವಾರ್ಯ ಕಾರ್ಯದೊತ್ತಡ ಬಂದಾಗ ವಿಲೇವಾರಿ ಕುಂಠಿತವಾಗುವುದು ಸಹಜವಾಗಿದೆ. ಹೆಚ್ಚೆಚ್ಚು ಪ್ರಕರಣ ಬಾಕಿ ಇರುವುದು ಬೆಂಗಳೂರು (2010), ರಾಯಚೂರು (1560), ಬೆಳಗಾವಿ (1368), ಮಂಡ್ಯ (1271), ಮೈಸೂರು (1131) ಜಿಲ್ಲೆಗಳಲ್ಲಿ.ವಿವಾದಾಸ್ಪದ ಮ್ಯುಟೇಷನ್ ಪ್ರಕರಣ ಪರಿಹಾರ ಅಷ್ಟು ಸಲೀಸಲ್ಲದ ಕೆಲಸ. ಅನೇಕ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡುವ ಅನಿವಾರ್ಯತೆ ಹೆಚ್ಚಿರುತ್ತದೆ. ಅಲ್ಲದೇ ಇನ್ನು ಕೆಲವು ಪ್ರಕರಣಗಳಲ್ಲಿ ಕೆಳಹಂತದ ಸಿಬ್ಬಂದಿ ಮಾಡುವ ತಪ್ಪನ್ನು ತಹಶೀಲ್ದಾರ್ ಸರಿಪಡಿಸಲು ಭಗೀರಥ ಪ್ರಯತ್ನವನ್ನೇ ಮಾಡಬೇಕಾಗುತ್ತದೆ.
ಮುಖ್ಯ ಸಂಗತಿ1. ತಹಶೀಲ್ದಾರ್ ಕೋರ್ಟ್‌ನಲ್ಲಿ ಆರು ತಿಂಗಳಿಂದ ಒಂದು ವರ್ಷ ಅವಧಿಯ 3530, ಒಂದು ವರ್ಷದಿಂದ 2 ವರ್ಷ ಅವಧಿದ್ದು 1273 ಇವೆ.2. ಎಸಿ ಕೋರ್ಟ್ ಮುಂದೆ ಐದು ವರ್ಷಕ್ಕಿಂತ ಹಳೆಯದಾದ ಪ್ರಕರಣಗಳು- 15,967, 2ರಿಂದ ಐದು ವರ್ಷದವು 13,433 ಪ್ರಕರಣಗಳು.3. ಡಿಸಿ ಕೋರ್ಟ್ ಮುಂದೆ ಇರುವ 14415 ಪ್ರಕರಣಗಳಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟವು 4628, ಎರಡರಿಂದ ಐದು ವರ್ಷದವು 2487 ಪ್ರಕರಣಗಳು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
