ಹಾವೇರಿ:‘ಇದು ನನ್ನ 13ನೇ ಗ್ರಾಮ ವಾಸ್ತವ್ಯ. ಸತತವಾಗಿ 24 ಗಂಟೆಗಳ ಕಾಲ ಇದೇ ಊರಿನಲ್ಲಿ ಇರುತ್ತೇನೆ’ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಾಗಿ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮಕ್ಕೆ ಶನಿವಾರ ಸಂಜೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ರಾಮ ವಾಸ್ತವ್ಯ ಬರೀ ದಾಖಲೆಗೆ ಅಲ್ಲ. ಕಾರ್ಯಕ್ರಮದಲ್ಲಿ 28 ಸಾವಿರ ಫಲಾನುಭವಿಗಳಿಗೆ ಸ್ಥಳದಲ್ಲೇ ಸೌಲಭ್ಯ ವಿತರಣೆ ಮಾಡುತ್ತೇವೆ. ಕಂದಾಯ ಇಲಾಖೆಯ ದಾಖಲೆ, ಪಿಂಚಣಿ ಸೇರಿ ಜನರ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಕಲಬುರಗಿ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಹಿಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕಿಂತಲೂ ಬಾಡದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತೇವೆ. ಈ ಮೂಲಕ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂದರು.
ಸ್ಥಳದಲ್ಲೇ ಸವಲತ್ತುಗಳನ್ನು ಜನರಿಗೆ ಒದಗಿಸುವ ಯೋಜನೆಯನ್ನು ಗ್ರಾಮ ವಾಸ್ತವ್ಯದ ಮೂಲಕ ಸಾಕಾರ ಮಾಡಲಾಗುತ್ತಿದೆ. ಇದೊಂದು ಅಪರೂಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹಾಗಾಗಿ ಇದು ಮತ್ತಷ್ಟು ವಿಶೇಷತೆ ಪಡೆದುಕೊಂಡಿದೆ. ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಒಂದೊಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಬಾಡದಲ್ಲಿ ಹಿಂದೆಂದೂ ಕಾಣದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಗ್ರಾಮದ ತುಂಬ ಓಡಾಡಿ, ಜನರ ಜತೆ ಬೆರೆತು ಎಲ್ಲ ಸಮಸ್ಯೆಗಳನ್ನು ಆಲಿಸುತ್ತೇನೆ. ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಮೂಲಕ ಜನರ ನಿರೀಕ್ಷೆಯನ್ನು ಮುಟ್ಟುತ್ತೇನೆ ಎಂದು ತಿಳಿಸಿದರು.
ಈ ಹಿಂದೆ ಜನರು ತಮ್ಮ ಸೌಲಭ್ಯಕ್ಕಾಗಿ ಸರ್ಕಾರಿ ಕಚೇರಿಗಳಿಗೆ ವರ್ಷಗಟ್ಟಲೆ ಓಡಾಡಬೇಕಾಗಿತ್ತು. ಆದರೆ, ಗ್ರಾಮ ವಾಸ್ತವ್ಯದಲ್ಲಿ ಸ್ಥಳದಲ್ಲೇ ಸೌಲಭ್ಯ ಒದಗಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸೌಲಭ್ಯ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ ಎಂದ ಸಚಿವರು, ಕಾರ್ಯಕ್ರಮದಲ್ಲಿ ಒಟ್ಟು 36 ಸಾವಿರಕ್ಕೂ ಹೆಚ್ಚು ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಿದ್ದಾರೆ. ವಿಶೇಷ ಚೇತನರು ಸೇರಿ 150 ಜನರಿಗೆ ವೇದಿಕೆಯಲ್ಲಿ ಪ್ರಮಾಣ ಪತ್ರ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಗ್ರಾಮಕ್ಕೆ ಕೋಟಿ ರೂ. ಕೊಡುಗೆ:ವಾಸ್ತವ್ಯ ಹಮ್ಮಿಕೊಂಡ ಗ್ರಾಮಕ್ಕೆ ಕಂದಾಯ ಇಲಾಖೆಯಿಂದ ಒಂದು ಕೋಟಿ ರೂಪಾಯಿ ನೀಡುತ್ತೇನೆ. ಈಗಾಗಲೆ ರಾಜ್ಯದ 12 ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಾಗಿದೆ. ಈ ಗ್ರಾಮಗಳಿಗೆ ತಲಾ ಒಂದು ಕೋಟಿ ರೂಪಾಯಿಯಂತೆ ಒಟ್ಟು 12 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆಯಾ ಗ್ರಾಮದವರು ತೀರ್ಮಾನ ಮಾಡಿ ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಾರೆ ಎಂದು ಆರ್. ಅಶೋಕ್ ತಿಳಿಸಿದರು. ತಾಲೂಕಿನ ಬಡವರಿಗೆ ಪೆನ್ಶನ್, ಪೋತಿ ಖಾತಾ, ಕಂದಾಯ, ಕೃತಕ ಕಾಲು ಜೋಡಣೆ, ಕಿವಿ ಕೇಳಿಸದವರಿಗೆ ಶ್ರವಣ ಸಾಧನ ವಿತರಣೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಚಕ್ಕಡಿಯಲ್ಲಿ ಸಚಿವರ ಮೆರವಣಿಗೆ:ತಳಿರು, ತೋರಣಗಳಿಂದ ಸಿಂಗಾರಗೊಂಡ ಚಕ್ಕಡಿ ಗಾಡಿ ಮೇಲೆ ಸಚಿವರು ಮೆರವಣಿಗೆ ಹೊರಟರು. ಪೂರ್ಣಕುಂಭ ಹೊತ್ತ 250ಕ್ಕೂ ಅಧಿಕ ಮಹಿಳೆಯರು, ಜಾಂಜ್ ಮೇಳ, ಡೊಳ್ಳು ಕುಣಿತ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಯ ಸಿರಿ ಹೆಚ್ಚಿಸಿದ್ದವು. ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮಸ್ಥರಿಂದ ಭವ್ಯ ಸ್ವಾಗತ:ಕನಕದಾಸರ ಜನ್ಮಸ್ಥಳವಾದ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಸಚಿವ ಆರ್.ಅಶೋಕ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಸಿಎಂ ಸ್ವಕ್ಷೇತ್ರದಲ್ಲಿ ಈ ಬಾರಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ರಂಗೇರಿದ್ದು, ಸುತ್ತಮುತ್ತಲ ಹಳ್ಳಿಗಳಿಂದ ಸಹಸ್ರಾರು ಜನರು ಆಗಮಿಸಿದ್ದಾರೆ. ಬಾಡ ಗ್ರಾಮಕ್ಕೆ ಬಂದ ಸಚಿವರಿಗೆ ಹೂವಿನ ಮಾಲೆ ಹಾಕಿ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿದರು. ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಕನಕದಾಸರ ಪುತ್ಥಳಿಗೆ ಆರ್.ಅಶೋಕ್ ಮಾಲಾರ್ಪಣೆ ಮಾಡುವ ಮೂಲಕ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು.
ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆಯಾಗಿ ನೀಡಿದ ಭಿಕ್ಷುಕಿ; 20 ವರ್ಷಗಳಿಂದ ಅದೇ ದೇವಳದ ಮುಂದೆ ಭಿಕ್ಷೆ ಬೇಡುತ್ತಿದ್ದ ವೃದ್ಧೆ

ರೈಲಲ್ಲಿ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ; ತಿಂಡಿಗೆ ಆಮ್ಲೆಟ್​ ತಿಂದಿದ್ದ ಇನ್ನೊಬ್ಬ ಪ್ರಯಾಣಿಕನಿಗೂ ಪಶ್ಚಾತ್ತಾಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
