ಬೀದರ್:ಪ್ರತಿ ವಾರ ತಹಸೀಲ್ದಾರ್ ಕಚೇರಿಗೆ ಆಯಾ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ, ಸ್ಥಳೀಯರ ಸಮಸ್ಯೆ ಆಲಿಸುವ ಜತೆಗೆ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಮೂರು ದಿನದಲ್ಲಿ ಆದೇಶ ಹೊರಡಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಅಂಗವಾಗಿ ಔರಾದ್ ತಾಲೂಕಿನ ವಡಗಾಂವ್(ದೇ)ನಲ್ಲಿ ಶುಕ್ರವಾರ ಗ್ರಾಮವಾಸ್ತವ್ಯ ಹೂಡಿದ್ದ ಸಚಿವರು, ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮವಾಸ್ತವ್ಯದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ತಹಸೀಲ್ದಾರ್ ಕಚೇರಿಗೆ ಡಿಸಿ ಭೇಟಿ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾರಕ್ಕೊಮ್ಮೆ ತಹಸಿಲ್ ಕಚೇರಿಗೆ ಡಿಸಿ ಭೇಟಿ ನೀಡಿ ಪರಿಶೀಲಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಪ್ರತಿಯೊಂದು ಗ್ರಾಮವಾಸ್ತವ್ಯದಲ್ಲಿ ಒಂದೊಂದು ರೀತಿ ಸುಧಾರಣೆ ತರಲಾಗುತ್ತಿದೆ. ಜಮೀನು ಇಲ್ಲದ ದಲಿತರಿಗೆ ಉಳುಮೆ ಮಾಡಲು ಉಚಿತವಾಗಿ ಜಮೀನು ಕೊಡಲಾಗುವುದು. ಮಹಿಳೆ ಹೆಸರಿನಲ್ಲಿ ಭೂಮಿ ನೋಂದಣಿ ಮಾಡಿಕೊಡಲಾಗುವುದು. ಮುಂದಿನ ವಾಸ್ತವ್ಯ ಗ್ರಾಮವಾದ ಚಿತ್ರದುರ್ಗ ಜಿಲ್ಲೆಯಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದರು.
ದಲಿತರ ಮನೆಯಲ್ಲಿ ಊಟ:ಶುಕ್ರವಾರ ಗ್ರಾಮವಾಸ್ತವ್ಯ ಮಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಆರ್.ಅಶೋಕ್, ಶನಿವಾರ ಬೆಳಗ್ಗೆ ಜಾಗಿಂಗ್ ಡ್ರೆಸ್​ನಲ್ಲಿ ವಾಯುವಿಹಾರ ನಡೆಸುತ್ತ ಊರ ಪ್ರದಕ್ಷಿಣೆ ಹಾಕಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಬೆಳಗ್ಗೆ ಎದ್ದು ಪತ್ರಿಕೆಗಳನ್ನು ಓದಿದ ಸಚಿವರು, ಗ್ರಾಮದ ಹೋಟೆಲ್​ನಲ್ಲಿ ಸಾರ್ವಜನಿಕರೊಂದಿಗೆ ಬ್ಲ್ಯಾಕ್ ಟೀ ಸವಿಯುತ್ತ ಜನರೊಂದಿಗೆ ಚರ್ಚೆ ನಡೆಸಿದರು. ವಿವಿಧ ಬೀದಿಗಳಲ್ಲಿ ಸುತ್ತಾಡಿ ಬುಟ್ಟಿ ಹೆಣೆಯುವ ಸುಶೀಲಾಬಾಯಿ ಮನೆಗೆ ತೆರಳಿ ಸಮಸ್ಯೆ ಆಲಿಸಿದರು. ವಡಗಾಂವ್ ಪಕ್ಕದ ಬಿಬಾನಾಯಕ ತಾಂಡಾದ ದಲಿತ (ಲಂಬಾಣಿ) ಸಮುದಾಯದ ಪ್ರೇಮಲಾಬಾಯಿ ಶಿವಾಜಿ ಜಾಧವ್ ಮನೆಯಲ್ಲಿ ಉತ್ತರ ಕರ್ನಾಟಕ ಶೈಲಿಯ ಕಡಲೆ, ಅವರೆ ಮತ್ತು ಹೆಸರು ಕಾಳಿನ ಗುಗರಿ (ಪಲ್ಯದ ರೀತಿ), ಮೊಸರು, ಉಪ್ಪಿನಕಾಯಿ ಜತೆ ಜೋಳದ ರೊಟ್ಟಿ ಸವಿದರು. ಇದರೊಂದಿಗೆ ಅವಲಕ್ಕಿ ಹಾಗೂ ಅಳ್ಳಿನ ಸುಸಲಾ ಸೇವಿಸಿದರು. ಬಡವರ ಮನೆಯಲ್ಲಿ ಊಟ ಚಂದ… ಎಂಬ ನಾಣ್ಣುಡಿಯಂತೆ ಪ್ರೀತಿ, ಶ್ರದ್ಧೆಯಿಂದ ಮಾಡಿದ ಹಳ್ಳಿ ಊಟ ಸ್ವಾದಿಷ್ಟವಾಗಿದೆ ಎಂದು ಹೇಳಿದರು. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಡಿಸಿ ಗೋವಿಂದರಡ್ಡಿ ಇತರರಿದ್ದರು.
ವಡಗಾಂವ್​ಗೆ ಭೇಟಿ ನೀಡಿರುವುದು ಸಂತಸ ತಂದಿದೆ. ಗ್ರಾಮವಾಸ್ತವ್ಯ ಎನ್ನುವುದು ಒಂದು ಪಾಠಶಾಲೆ ಇದ್ದಂತೆ. ಒಂದೊಂದು ಕಡೆ ವಿಭಿನ್ನ ರೀತಿಯ ಅನುಭವ ಆಗುತ್ತಿದೆ. ವಾಸ್ತವ್ಯ ಮಾಡುವ ಗ್ರಾಮಕ್ಕೆ ಒಂದು ಕೋಟಿ ರೂ. ಅನುದಾನ ನೀಡಿದ್ದು, ಎಲ್ಲ ಕೆಲಸ ಪೂರ್ಣಗೊಂಡ ನಂತರ ಖುದ್ದಾಗಿ ನಾನೇ ಪರಿಶೀಲಿಸಲು ಮತ್ತೆ ಇಲ್ಲಿಗೆ ಬರುವೆ.
|ಆರ್.ಅಶೋಕ್ಕಂದಾಯ ಸಚಿವ
ಜನರ ಮನೆ ಬಾಗಿಲಿಗೆ ಸರ್ಕಾರವೇ ಬಂದು ಜನರ ಸಮಸ್ಯೆ ಪರಿಹರಿಸುವುದು ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶ. ನನ್ನ ಕ್ಷೇತ್ರದಲ್ಲಿ ಅಶೋಕ್ ವಾಸ್ತವ್ಯ ಮಾಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದು ಬಹಳಷ್ಟು ಖುಷಿಯಾಗಿದೆ.
|ಪ್ರಭು ಚವ್ಹಾಣ್ಪಶು ಸಂಗೋಪನೆ ಸಚಿವ
ಯಾವ ಹುಡ್ಗಿಯೂ ಮದ್ವೆಗೆ ಒಪ್ಪಲಿಲ್ಲ ಎಂದು ಬೇಸತ್ತ ಯುವಕ ಆತ್ಮಹತ್ಯೆ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + twenty =
Remember me
