ಪ್ರತಿಮಾ (24) ಮಹಾರಾಷ್ಟದ ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ್ದಳು. ಬಿ.ಕಾಂ. ಪರೀಕ್ಷೆ ಉತ್ತೀರ್ಣಳಾದ ಕೂಡಲೇ ಅವಳಿಗೆ ಹೆಸರಾಂತ ಸಿಮೆಂಟ್ ತಯಾರಿಕಾ ಕಂಪನಿಯ ಮುಂಬೈನ ಕೇಂದ್ರ ಕಚೇರಿಯಲ್ಲಿ ನೌಕರಿ ಸಿಕ್ಕಿತು. ಅಕೌಂಟ್ಸ್ ವಿಭಾಗಕ್ಕೆ ನೇಮಕಾತಿಗೊಂಡ ಪ್ರತಿಮಾ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ತೋರಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರಳಾದಳು. ಆಕೆಗೆ 27 ವರ್ಷ ತುಂಬಿದಾಗ ಅವಳ ತಂದೆ-ತಾಯಿ ಅವಳನ್ನು ಖಾಸಗಿ ಕಂಪನಿಯೊಂದರಲ್ಲಿ ಅಧಿಕಾರಿಯಾಗಿದ್ದ ಕಿಶೋರ್ ಎನ್ನುವವನಿಗೆ ಕೊಟ್ಟು ಲಗ್ನ ಮಾಡಿದರು. ಆತನೂ ಮುಂಬೈನಲ್ಲಿಯೇ ಕೆಲಸಮಾಡುತ್ತಿದ್ದ. ಪತಿಪತ್ನಿಯರಿಬ್ಬರೂ ಒಂದು ಫ್ಲಾಟನ್ನು ಬಾಡಿಗೆಗೆ ಹಿಡಿದು ಅನ್ಯೋನ್ಯದಿಂದ ಜೀವಿಸತೊಡಗಿದರು. ಮದುವೆಯಾಗಿ ಮೂರು ವರ್ಷಗಳಾದರೂ ಅವರಿಗೆ ಮಕ್ಕಳಾಗಲಿಲ್ಲ.
ಏತನ್ಮಧ್ಯೆ ಪ್ರತಿಮಾಳಿಗೆ ಪದೋನ್ನತಿ ಕೊಟ್ಟ ಅವಳ ಸಂಸ್ಥೆ ಅವಳನ್ನು ಹೈದ್ರಾಬಾದಿನ ತನ್ನ ಕಚೇರಿಗೆ ವರ್ಗಾಯಿಸಿತು. ಪ್ರತಿಮಾಳಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಆಕೆ ತನ್ನ ನೌಕರಿಗೆ ರಾಜೀನಾಮೆ ಕೊಡಲು ನಿರ್ಧರಿಸಿದಳು. ಇದಕ್ಕೊಪ್ಪದ ಕಿಶೋರ್, ‘ನಿನ್ನ ಸಂಸ್ಥೆಯಲ್ಲಿ ನೀನು ಒಳ್ಳೆಯ ಹೆಸರನ್ನು ಗಳಿಸಿರುವೆ. ಉತ್ತಮ ಸಂಬಳ ಬರುತ್ತಿದೆ. ನಿನ್ನ ಕಂಪನಿ ಎಲ್ಲ ಸವಲತ್ತುಗಳನ್ನೂ ಕೊಡುತ್ತಿದೆ. ಇಂತಹ ಒಳ್ಳೆಯ ಕಂಪನಿಯನ್ನು ಬಿಡಬೇಡ. ಹೈದರಾಬಾದಿಗೆ ಹೋಗು, ಅಲ್ಲಿ ನಿಮ್ಮ ಕಂಪನಿಯ ಗೆಸ್ಟ್​ಹೌಸಿನಲ್ಲಿ ಕೆಲಕಾಲ ವಾಸಮಾಡು, ಆರೇ ತಿಂಗಳಲ್ಲಿ ನಾನೂ ವರ್ಗಾವಣೆ ಪಡೆದು ಅಲ್ಲಿಗೇ ಬರುತ್ತೇನೆ’ ಎಂದು ಅವಳ ಮನವೊಲಿಸಿ ತಾನೇ ಅವಳನ್ನು ಹೈದರಾಬಾದಿಗೆ ಬಿಟ್ಟು ಬಂದ.
ಹೈದರಾಬಾದಿನ ಕಚೇರಿಯಲ್ಲಿ ಲೆಕ್ಕಪತ್ರ ವಿಭಾಗದಲ್ಲಿ 20 ನೌಕರರಿದ್ದು ಅವರ ತಂಡಕ್ಕೆ 51 ವರ್ಷದ ವಿವೇಕ್ ಮೇಲಧಿಕಾರಿಯಾಗಿದ್ದ. ಪ್ರತಿಮಾ ಅವನಿಗಿಂತ ಒಂದು ಸ್ತರ ಕೆಳಗಿದ್ದಳು. ಕೆಲಸಕ್ಕೆ ವರದಿ ಮಾಡಿಕೊಂಡ ದಿನವೇ ಪ್ರತಿಮಾಳತ್ತ ಆಕರ್ಷಣೆಗೊಂಡ ವಿವೇಕ್, ‘ಹೊಸ ಸ್ಥಳವೆಂದು ಹೆದರಬೇಡ, ನಿನಗೇನು ಸಹಾಯ ಬೇಕೋ ನನ್ನನ್ನು ಕೇಳು’ ಎಂದ. ಪ್ರತಿಮಾ ಥ್ಯಾಂಕ್ಸ್ ಎಂದು ಸುಮ್ಮನಾದಳು.
ಮಾರನೆಯ ದಿನ ವಿವೇಕ್ ಅವಳ ಗೆಸ್ಟ್​ಹೌಸಿಗೆ ಬಂದು ತನ್ನೊಡನೆ ಡಿನ್ನರ್​ಗೆ ಕರೆದ. ಅವನ ಆಹ್ವಾನ ತಿರಸ್ಕರಿಸಲಾರದೆ ಆಕೆ ಅವನೊಡನೆ ಹೋಟೆಲ್​ಗೆ ಹೋದಳು. ಕಾರಿನಲ್ಲಿ ತನ್ನ ಪಕ್ಕದಲ್ಲಿ ಅವಳನ್ನು ಕೂರಿಸಿಕೊಂಡ ವಿವೇಕ್, ವಿನಾಕಾರಣ ಅವಳ ಮೈಮುಟ್ಟುವುದು, ಅವಳನ್ನೇ ದುರುಗುಟ್ಟಿ ನೋಡುವುದು, ಖಾಸಗಿ ವಿಷಯಗಳನ್ನು ಪ್ರಸ್ತಾಪಿಸುವುದು ಮಾಡಿದ. ಅವನ ನಡವಳಿಕೆಯಿಂದ ಪ್ರತಿಮಾ ಹೇಸಿದಳು. ಮಾರನೆಯ ದಿನ ಪ್ರತಿಮಾಳ ಸಹೋದ್ಯೋಗಿಗಳು ವಿವೇಕ್ ಒಬ್ಬ ಹೆಣ್ಣುಬಾಕನೆಂದು ತಿಳಿಸಿ ಅವನ ಬಗ್ಗೆ ಎಚ್ಚರದಿಂದಿರಲು ಸೂಚಿಸಿದರು. ಆತ ಹೈದರಾಬಾದಿನವನೇ ಆಗಿದ್ದು ಪ್ರಭಾವಶಾಲಿಯೆಂದೂ ಎಚ್ಚರಿಸಿದರು.
ಕೆಲಕಾಲದ ನಂತರ ವಿವೇಕ್, ಚಿಕ್ಕಪುಟ್ಟ ಕಾರಣಗಳಿಗೆ ಪ್ರತಿಮಾಳನ್ನು ತನ್ನ ಕೋಣೆಗೆ ಕರೆಸುವುದು, ಕೆಲಸವಿಲ್ಲದಿದ್ದರೂ ತನ್ನೆದುರು ಬಹಳ ಕಾಲ ಕೂರಿಸಿಕೊಳ್ಳುವುದು, ಚಹಾ ತರಿಸಿ ಅವಳೊಡನೆ ಕುಡಿಯುವುದು, ಅವಳು ಕೆಲಸದಲ್ಲಿ ಮಾಡಿದ ಸಣ್ಣ ತಪ್ಪುಗಳನ್ನು ಹುಡುಕುವುದು ಮುಂತಾದವನ್ನು ಮಾಡತೊಡಗಿದ. ತನ್ನೊಡನೆ ಮಧ್ಯಾಹ್ನದ ಊಟ ಮಾಡಲು ಅಥವಾ ಕಾಫಿ ಕುಡಿಯಲು ಬರಲು ಬಲವಂತ ಮಾಡುತ್ತಿದ್ದ. ಬೇಕೆಂತಲೆ ಕಚೇರಿ ಕೆಲಸ ಮುಗಿದ ಬಳಿಕವೂ ಅವಳನ್ನು ಕೆಲಸವಿದೆ ಎಂದು ತನ್ನ ಕ್ಯಾಬಿನ್​ನಲ್ಲಿಯೇ ಕೂರಿಸಿಕೊಳ್ಳುತ್ತಿದ್ದ.
ವಿವೇಕ್ ವರ್ತನೆಯಿಂದ ಬೇಸತ್ತ ಪ್ರತಿಮಾ, ಈ ಎಲ್ಲ ವಿಷಯಗಳನ್ನೂ ಪತಿ ಕಿಶೋರ್​ಗೆ ತಿಳಿಸಿದಳು. ಆತ ಅವಳಿಗೆ ತಾಳ್ಮೆ ಕಳೆದುಕೊಳ್ಳದಿರಲು ಸೂಚಿಸಿದ. ಅಂತೆಯೇ ಪ್ರತಿಮಾ ವಿವೇಕ್​ನ ದೈನಂದಿನ ಕಿರುಕುಳವನ್ನು ಮೌನದಿಂದ ಸಹಿಸಿಕೊಂಡಿದ್ದಳು. ಒಂದು ದಿನ ಕಚೇರಿಯ ವೇಳೆ ಮುಗಿದು ಎಲ್ಲರೂ ನಿರ್ಗಮಿಸಿದ ನಂತರ ಏನೋ ಕೆಲಸವಿದೆ ಎಂದು ಪ್ರತಿಮಾಳನ್ನು ತನ್ನ ಕ್ಯಾಬಿನ್​ಗೆ ಕರೆದ ವಿವೇಕ್, ಬಾಗಿಲನ್ನು ಮುಚ್ಚಿ ಅವಳನ್ನು ಬಿಗಿದಪ್ಪಿ ಚುಂಬಿಸಿದ. ಆಘಾತಗೊಂಡ ಪ್ರತಿಮಾ ಜೋರಾಗಿ ಕಿರುಚಿದಳು. ಆ ಸಮಯದಲ್ಲಿ ಕಚೇರಿಯ ವಾಚ್​ವುನ್ ಏನಾಯಿತು ಎಂದು ನೋಡಲು ಅಲ್ಲಿಗೆ ಬಂದ. ಅವನನ್ನು ಕಂಡಕೂಡಲೇ ಪ್ರತಿಮಾ ಕಚೇರಿ ಹೊರಗೆ ಓಡಿದಳು. ಗೆಸ್ಟ್​ಹೌಸಿಗೆ ಹೋಗಿ ಗಂಡನಿಗೆ ಫೋನ್ ಮೂಲಕ ವಿಷಯವನ್ನು ತಿಳಿಸಿದಳು. ರಾಜೀನಾಮೆಯನ್ನಿತ್ತು ಮಾರನೆಯ ದಿನವೇ ಮುಂಬೈಗೆ ಬರುವುದಾಗಿ ಹೇಳಿದಳು.
‘ನೀನು ಕೆಲಸಕ್ಕೆ ರಾಜೀನಾಮೆ ಇತ್ತರೆ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತದೆ. ನಡೆದ ವಿಷಯದ ಬಗ್ಗೆ ಮೇಲಧಿಕಾರಿಗಳಿಗೆ ನಾಳೆಯೇ ಲಿಖಿತದೂರನ್ನು ಕೊಡು. ಅಲ್ಲದೆ ಹೈದರಾಬಾದಿನಿಂದ ಬೇರೆ ಕಚೇರಿಗೆ ವರ್ಗಾವಣೆಯನ್ನು ಕೋರು’ ಎಂದು ಸೂಚಿಸಿದ. ಕಿಶೋರ್ ಹೇಳಿದಂತೆ ಪ್ರತಿಮಾ ಕಚೇರಿಯ ಶಾಖಾ ಮ್ಯಾನೇಜರ್​ಗೆ ಮಾರನೆಯ ದಿನವೇ ದೂರನ್ನಿತ್ತು ವರ್ಗಾವಣೆ ಕೋರಿದಳು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕಾಯ್ದೆಯನ್ವಯ ಅವಳ ದೂರನ್ನು ವಿಚಾರಿಸಲು ಸಮಿತಿ ರಚಿಸಲಾಯಿತು. ಹೈದರಾಬಾದ್​ನ ಕಚೇರಿಯಲ್ಲಿ ವಿವೇಕ್​ನಿಗಿಂತ ಹಿರಿಯ ದರ್ಜೆಯ ಮಹಿಳಾ ಉದ್ಯೋಗಿಯಿರದ ಕಾರಣ, ಚೆನ್ನೈ ಕಚೇರಿ ಯಿಂದ ಅಧಿಕಾರಿಯೊಬ್ಬರನ್ನು ಕರೆಸಿ ಅವರನ್ನು ವಿಚಾರಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಆ ಸಮಿತಿ ಪ್ರತಿಮಾಳ ಮತ್ತು ಸಂಬಂಧಿಸಿದ ಸಾಕ್ಷಿಗಳ ಹೇಳಿಕೆಯನ್ನು ತೆಗೆದುಕೊಂಡಿತು. ಈ ಪ್ರಕರಣಕ್ಕಿದ್ದ ಒಬ್ಬನೇ ಪ್ರತ್ಯಕ್ಷದರ್ಶಿ ಕಚೇರಿಯ ವಾಚ್​ವುನ್ ಆಗಿದ್ದ. ಆದರೆ ಆತ ತನ್ನ ಸಾಕ್ಷ್ಯದಲ್ಲಿ ಪ್ರತಿಮಾ ಆರೋಪಿಸಿದ ಘಟನೆಯೇ ನಡೆದಿಲ್ಲ ಎಂದ. ಇತರರೂ ಪ್ರತಿಮಾಳನ್ನು ಬೆಂಬಲಿಸಲಿಲ್ಲ. ‘ಕೆಲಸದಲ್ಲಿ ಆಸಕ್ತಿ ತೋರದ ಕಾರಣ ನಾನು ಪ್ರತಿಮಾಳಿಗೆ ಮೆಮೋಗಳನ್ನು ಕೊಟ್ಟಿರುವೆ, ಹೀಗಾಗಿ ಆಕೆ ಸುಳ್ಳು ದೂರನ್ನಿತ್ತಿದ್ದಾಳೆ’ ಎಂದ ವಿವೇಕ್. ತನ್ನ ವರದಿಯಲ್ಲಿ ಪ್ರತಿಮಾಳ ದೂರು ಸಾಬೀತಾಗಿಲ್ಲ ಎಂದು ಸಮಿತಿ ಹೇಳಿತು.
ಪ್ರತಿಮಾಳಿಗೆ ಬುದ್ಧಿ ಕಲಿಸಬೇಕು ಎಂದು ತೀರ್ವನಿಸಿದ ವಿವೇಕ್ ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಅವಳ ವಿರುದ್ಧ ಎತ್ತಿಕಟ್ಟಿದ. ಇದಲ್ಲದೆ ಅವಳ ಕೆಲಸದಲ್ಲಿ ಯಾವುದೋ ಹುಳುಕು ಕಂಡುಹಿಡಿದು ಮೇಲಧಿಕಾರಿಗಳಿಗೆ ವರದಿ ನೀಡಿದ. ಪ್ರತಿಮಾಳಿಗೆ ವಾರ್ನಿಂಗ್ ನೋಟಿಸ್ ಬಂದಿತು. ಇದರಿಂದ ಪ್ರತಿಮಾ ವಿಚಲಿತಳಾದಳು. ಅವಳ ವರ್ಗಾವಣೆ ಬಗ್ಗೆಯೂ ಕೇಂದ್ರ ಕಚೇರಿಯಿಂದ ಯಾವ ತೀರ್ವನವೂ ಬರಲಿಲ್ಲ.
ಏತನ್ಮಧ್ಯೆ ಪ್ರತಿಮಾಗೆ ತನ್ನ ಫೋನನ್ನು ವಿವೇಕ್ ಟ್ಯಾಪ್ ಮಾಡುತ್ತಿದ್ದಾನೆಂಬ ಸಂಶಯ ಬಂದಿತು. ಆಕೆ ಈ ವಿಷಯವನ್ನು ಗಂಡನಿಗೆ ಹೇಳಿದಾಗ, ‘ಸಾಮಾನ್ಯ ಜನರಿಗೆ ಫೋನ್ ಟ್ಯಾಪ್ ಮಾಡುವುದು ಸಾಧ್ಯವಿಲ್ಲ. ಆದರೆ ನಿನಗೆ ಬಲವಾದ ಸಂಶಯವಿದ್ದರೆ ಪೊಲೀಸರಿಗೆ ದೂರು ಕೊಡು’ ಎಂದ. ಮಾರನೆ ದಿನವೇ ಪ್ರತಿಮಾ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರಿತ್ತಳು. ಒಂದು ತಿಂಗಳ ತನಿಖೆಯ ನಂತರ ಪೊಲೀಸರು ಪ್ರತಿಮಾಳ ದೂರನ್ನು ಸುಳ್ಳೆಂದು ತೀರ್ವನಿಸಿದರು.
ಪ್ರತಿಮಾಳ ವಿರುದ್ಧ ಇನ್ನಷ್ಟು ರೋಸಿದ ವಿವೇಕ್, ಕಚೇರಿಯಲ್ಲಿ ಪ್ರತಿಮಾಳಿಗೆ ಕೊಡುತ್ತಿದ್ದ ಕಿರುಕುಳವನ್ನು ಹೆಚ್ಚು ಮಾಡಿದ. ಅವಳಿಗೆ ಯಾವುದೇ ಕೆಲಸ ಕೊಡದೆ ಮನಬಂದಂತೆ ಎಲ್ಲರೆದುರೂ ನಿಂದಿಸುತ್ತಿದ್ದ. ಪ್ರತಿಮಾಳಿಗೆ ಕೆಲಸ ಮಾಡುವುದೇ ದುಸ್ತರವಾಯಿತು. ಕಡೆಗವಳು ರಾಜೀನಾಮೆ ಕೊಡಲು ನಿರ್ಧರಿಸಿದಳು. ಆದರೆ ಕಿಶೋರ್, ‘ನೀನು ಸ್ವಲ್ಪ ತಾಳ್ಮೆಯಿಂದಿರು. ಹೈದರಾಬಾದಿಗೆ ನನ್ನ ವರ್ಗಾವಣೆಯೇ ಇನ್ನೇನು ಆಗಲಿದೆ. ನೀನು ಸ್ವಲ್ಪ ದಿನ ರಜೆ ಹಾಕಿ ಇಲ್ಲಿಗೇ ಬಾ’ ಎಂದ.
ಪ್ರತಿಮಾ ರಜೆ ಹಾಕಿದಳು, ಆದರೆ ಮುಂಬೈಗೆ ಹೋಗಲಿಲ್ಲ. ತನ್ನ ಕೋಣೆಯಲ್ಲಿಯೇ ಏಕಾಂಗಿಯಾಗಿ ಕಾಲ ಕಳೆಯತೊಡಗಿದಳು. ಕೆಲ ದಿನಗಳಾದ ನಂತರ ಖಿನ್ನತೆಗೆ ಜಾರಿದಳು. ಒಂದು ಭಾನುವಾರ ಬೆಳಗ್ಗೆ ಕಿಶೋರ್ ಪ್ರತಿಮಾಳಿಗೆ ಕರೆ ಮಾಡಿದಾಗ ಆಕೆ ಉತ್ತರಿಸಲಿಲ್ಲ. ಎರಡು, ಮೂರು ಬಾರಿ ಪ್ರಯತ್ನಿಸಿದ ಆತ, ಅವಳ ಗೆಸ್ಟ್​ಹೌಸಿನ ಮ್ಯಾನೇಜರ್​ನನ್ನು ಸಂರ್ಪಸಿ ಪ್ರತಿಮಾಳ ಕೋಣೆಗೆ ಹೋಗಿ ನೋಡಲು ಸೂಚಿಸಿದ. ಆತ ಸೇವಕನೊಬ್ಬನನ್ನು ಪ್ರತಿಮಾಳ ಕೋಣೆಗೆ ಕಳಿಸಿದ. ಎಷ್ಟೇ ಬಡಿದರೂ ಪ್ರತಿಮಾ ಬಾಗಿಲು ತೆಗೆಯಲಿಲ್ಲ. ಕಡೆಗೆ ಮ್ಯಾನೇಜರ್ ತನ್ನ ಡೂಪ್ಲಿಕೇಟ್ ಕೀಲಿಕೈನಿಂದ ರೂಮಿನ ಬಾಗಿಲನ್ನು ತೆಗೆದಾಗ ಪ್ರತಿಮಾ ಫ್ಯಾನ್​ಗೆ ಹಗ್ಗವನ್ನು ಕಟ್ಟಿ ನೇಣುಹಾಕಿಕೊಂಡು ಮೃತಪಟ್ಟಿದ್ದನ್ನು ನೋಡಿದ. ಕೂಡಲೇ ಪೊಲೀಸರಿಗೆ ದೂರು ನೀಡಿದ. ಪೊಲೀಸರು ಸ್ಥಳಕ್ಕೆ ಬಂದರು. ಪ್ರತಿಮಾ ಟೇಬಲ್ ಮೇಲೆ ತನ್ನ ಡೆತ್​ನೋಟ್ ಬರೆದಿಟ್ಟಿದ್ದಳು. ಅದರಲ್ಲಿ ವಿವೇಕ್ ಮತ್ತಿತರ ಸಹೋದ್ಯೋಗಿಗಳು ತನಗೆ ನೀಡಿದ ಕಿರುಕುಳದ ಕಾರಣದಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಳು. ಕಚೇರಿಯಲ್ಲಿ ನಡೆದಿದ್ದ ಎಲ್ಲ ಕಿರುಕುಳದ ಘಟನೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದಳು. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ತನಿಖೆ ಮಾಡತೊಡಗಿದರು. ಏತನ್ಮಧ್ಯೆ ಹೈದರಾಬಾದಿಗೆ ಬಂದ ಕಿಶೋರ್, ಪ್ರತಿಮಾ ತನ್ನ ಆತ್ಮಹತ್ಯೆ ನೋಟ್​ನಲ್ಲಿ ದೂರಿದ್ದ ಎಲ್ಲರ ಮೇಲೂ ಆತ್ಮಹತ್ಯೆ ಪ್ರಚೋದನೆಯ ಪ್ರಕರಣ ದಾಖಲಿಸಬೇಕೆಂದು ಒತ್ತಡ ಹಾಕಿದ. ಅದೂ ದಾಖಲಾಯಿತು. ಪ್ರತಿಮಾ ತನ್ನ ಕೊನೆಯ ಫೋನ್ ಕರೆಯನ್ನು ತನ್ನ ಸೋದರಿಗೆ ಮಾಡಿದ್ದಳು. ಆಕೆ ಪ್ರತಿಮಾ ತನ್ನ ಡೆತ್​ನೋಟಿನಲ್ಲಿ ಏನನ್ನು ಬರೆದಿದ್ದಳೋ ಅದನ್ನೇ ತನಗೆ ತಿಳಿಸಿದಳೆಂದು ಪೊಲೀಸರಿಗೆ ಹೇಳಿ, ತಾನು ಪ್ರತಿಮಾಳಿಗೆ ಕೆಲಕಾಲ ಸಮಾಧಾನದಿಂದಿರಲು ಸೂಚಿಸಿದ್ದೆ ಎಂದಳು. ಎರಡು ತಿಂಗಳಾದರೂ ಯಾವುದೇ ಆರೋಪಿತರನ್ನು ಬಂಧಿಸದಿದ್ದಾಗ ಕಿಶೋರ್ ಪ್ರಕರಣವನ್ನು ತನಿಖೆಗಾಗಿ ರಾಜ್ಯದ ಸಿ.ಐ.ಡಿಗೆ ವಹಿಸಬೇಕೆಂದು ಮನವಿಯಿತ್ತ. ಸಿ.ಐ.ಡಿ ತನಿಖೆ ಮುಗಿಸಿ ಆರೋಪಿತರ ವಿರುದ್ಧ ಸಾಕ್ಷ್ಯಾಧಾರ ಸಿಗಲಿಲ್ಲವೆಂದು ಬಿ ರಿಪೋರ್ಟ್ ಹಾಕಿತು. ಪ್ರತಿಮಾಗೆ ನ್ಯಾಯ ಸಿಗಲಿಲ್ಲ. ಕಚೇರಿ, ಕಾರ್ಖಾನೆ ಮತ್ತಿತರ ಕಾರ್ಯಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ನಿಯಂತ್ರಣಕ್ಕೆ ಕಾನೂನು ರೂಪಿತವಾಗಿದ್ದರೂ ಸ್ತ್ರೀಯರಿಗೆ ನ್ಯಾಯ ದೊರೆಯದಿರುವುದು ವಿಷಾದನೀಯ. ಹೀಗಾಗಿಯೇ ಅಮೆರಿಕದ ಕಾದಂಬರಿಕಾರ ಐಸಾಕ್ ಬಷೇವಿಸ್ ಸಿಂಗರ್, ‘ಎಲ್ಲಿಯವರೆಗೆ ಪುರುಷನು ತನ್ನ ಕೈಯಲ್ಲಿ ಚಾಕು ಅಥವಾ ಬಂದೂಕನ್ನು ಹಿಡಿದು ತನಗಿಂತ ಕಡಿಮೆ ಬಲವಿರುವವರನ್ನು ನಾಶಮಾಡಲು ಹೊರಡುತ್ತಾನೆಯೋ ಅಲ್ಲಿಯವರೆಗೆ ನ್ಯಾಯವಿರುವುದಿಲ್ಲ’ ಎಂದ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + 20 =
Remember me
