ಬೆಳಗಾವಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿ ರಾಜ್ಯದ ಐದು ವಿಮಾನ ನಿಲ್ದಾಣಗಳ ಹೆಸರು ಮರುನಾಮಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಳಗಾವಿ, ಮಂಗಳೂರು, ಕಲಬುರಗಿ, ಮೈಸೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಿ ಗೌರವ ಸಲ್ಲಿಸಲು ನಿರ್ಧರಿಸಿದೆ. ಜತೆಗೆ ಐತಿಹಾಸಿಕ ವ್ಯಕ್ತಿಗಳ ಹೆಸರು, ಸಾಧನೆ ಇನ್ನಿತರ ಸಮಗ್ರ ಮಾಹಿತಿ ಸಲ್ಲಿಸುವಂತೆ ಜಿಲ್ಲಾಡಳಿತಗಳಿಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.
ಮೈಸೂರು ಜಿಲ್ಲೆಯ ಮಂಡಕಳ್ಳಿ, ಮಂಗಳೂರಿನ ಬಜ್ಪೆ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಬೆಳಗಾವಿಯ ಸಾಂಬ್ರಾ, ಕಲಬುರಗಿಯ ಶ್ರೀನಿವಾಸ ಸರದಗಿ, ಬಳ್ಳಾರಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳ ವಿಮಾನ ನಿಲ್ದಾಣಗಳನ್ನು ಆಯಾ ಊರುಗಳ ಹೆಸರಿನಿಂದಲೇ ಕರೆಯಲಾಗುತ್ತಿದೆ. 2018ರಲ್ಲಿ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ರಾಜಕೀಯ ಇನ್ನಿತರ ಕಾರಣಗಳಿಂದ ಕೇಂದ್ರ ವಿಮಾನಯಾನ ಇಲಾಖೆ ಅನುಮತಿ ನಿರಾಕರಿಸಿತ್ತು. ಇದೀಗ ರಾಜ್ಯ ಸರ್ಕಾರ ಐತಿಹಾಸಿಕ ವ್ಯಕ್ತಿಗಳ ನಾಮಕರಣಕ್ಕೆ ಮುಂದಾಗಿರುವುದು ಕುತೂಹಲ ತರಿಸಿದೆ.
ನಾಮಕರಣಕ್ಕೆ ಕಾರಣ?: ಅಂತಾರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಮಾನ ನಿಲ್ದಾಣ ಪಟ್ಟಿಯಲ್ಲಿರುವ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಕಲಬುರಗಿ, ಮೈಸೂರು ವಿಮಾನ ನಿಲ್ದಾಣಗಳನ್ನು ಆಯಾ ಊರುಗಳ ಹೆಸರಿನಿಂದಲೇ ಕರೆಯಲಾಗುತ್ತಿದೆ. ಇದರಿಂದ ಆಯಾ ಊರುಗಳ ಹೆಸರು ಎಲ್ಲ ಕಡೆ ಪರಿಚಯವಾಗುತ್ತಿದೆ. ಆದರೆ, ಆ ಭಾಗದಲ್ಲಿನ ಸ್ವಾತಂತ್ರ್ಯ ಹೋರಾಟಗಾರ, ಐತಿಹಾಸಿಕ ವ್ಯಕ್ತಿಗಳ ಹೆಸರು ಜನರಿಂದ ದೂರವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಜನರಿಗೆ ಮಹಾನ್ ವ್ಯಕ್ತಿಗಳ ಇತಿಹಾಸ ಪರಿಚಯಿಸುವ ಉದ್ದೇಶದಿಂದ ಹೆಸರು ಬದಲಾವಣೆಗೆ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋರಾಟಗಾರರ ಸವಿನೆನಪಿಗಾಗಿ: 12ನೇ ಶತಮಾನದ ಕೂಡಲ ಸಂಗಮದ ಬಸವಣ್ಣ, ಅಕ್ಕ ಮಹಾದೇವಿ, ಸ್ವಾತಂತ್ರ್ಯ್ಕಾಗಿ ಬ್ರಿಟಿಷರ ವಿರುದ್ಧ ಯುದ್ಧ ನಡೆಸಿದ ಕಿತ್ತೂರು ರಾಣಿ ಚನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪ, ಮೈಸೂರಿನ
ಮಹಾರಾಜರು, ಸರ್ ಎಂ.ವಿಶ್ವೇಶ್ವರಯ್ಯ ಸೇರಿ ಇನ್ನಿತರ ಹೋರಾಟ ಗಾರರು ಆಯಾ ಭಾಗದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಹಾಗಾಗಿ ಇವರುಗಳ ಹೆಸರುಗಳನ್ನು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಿ ಗೌರವ ಸಲ್ಲಿಸಲು ಸರ್ಕಾರ ಮುಂದಾಗಿದೆ.
ರಾಜ್ಯದ ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರಿಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಚನ್ನಮ್ಮ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣಕ್ಕೆ ಇಡಬೇಕು.
| ಡಾ.ಪ್ರಭಾಕರ ಕೋರೆ ರಾಜ್ಯಸಭಾ ಸದಸ್ಯ
ವಿಮಾನ ನಿಲ್ದಾಣಗಳ ಮರುನಾಮಕರಣಕ್ಕೆ ಸರ್ಕಾರ ನಿರ್ಧರಿಸಿರುವ ಕ್ರಮ ಸರಿ. ಬೆಳಗಾವಿಗೆ ರಾಣಿ ಚನ್ನಮ್ಮ ಹೆಸರು ಇಡುವುದು ಸೂಕ್ತ.
| ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವ
ಮಂಜುನಾಥ ಕೋಳಿಗುಡ್ಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − three =
Remember me
