–ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಜಲಪೂರ್ಣ ತ್ರಯೋದಶೀ(23-10-2022) ಆಶ್ವಯುಜ ಕೃಷ್ಣ ತ್ರಯೋದಶಿಯಂದು ಸಾಯಂಕಾಲ ಸೂರ್ಯಾಸ್ತವಾದ ನಂತರ ಮನೆಯ ಹೊರಗೆ ಯಮದೀಪವನ್ನು ಹಚ್ಚುವ ಸಂಪ್ರದಾಯವಿದೆ. ಅಪಮೃತ್ಯು ಪರಿಹಾರಕ್ಕಾಗಿ ಯಮದೇವರಲ್ಲಿ ಪ್ರಾರ್ಥಿಸಿ ಈ ದೀಪವನ್ನು ದಕ್ಷಿಣಾಭಿಮುಖವಾಗಿ ಬೆಳಗಬೇಕು. ಆ ದಿನದಿಂದ ಐದು ದಿನಗಳವರೆಗೆ ತುಳಸಿ ಕಟ್ಟೆ ಹಾಗೂ ಆಕಳಿನ ಕೊಟ್ಟಿಗೆಯಲ್ಲಿ ಶ್ರೀ ಮಹಾಲಕ್ಷ್ಮಿಯ ವಿಶೇಷ ಸನ್ನಿಧಾನ ಇರುತ್ತದೆ. ನಿತ್ಯ ಸೂರ್ಯೋದಯಕ್ಕೆ ಮುಂಚೆ, ಸೂರ್ಯಾಸ್ತದ ನಂತರ ಪ್ರಣತಿದೀಪ ಹಚ್ಚಬೇಕು. ಅಷ್ಟದಳಾಕಾರದಲ್ಲಿರುವ ಆಕಾಶಬುಟ್ಟಿಯನ್ನು ಮನೆಯ ಮುಂಬಾಗಿಲಿಗೆ ಹಾಕಬೇಕು. ಆ ದಿನ ಮನೆಯಲ್ಲಿ ಸಂಜೆ ಗಂಗಾಪೂಜೆ ಮಾಡಬೇಕು. ಕೊಡದಲ್ಲಿ ನೀರು ತುಂಬಿಸಿ ಗಂಗೆಯನ್ನು ಆವಾಹಿಸಿ ವಿಧಿವತ್ತಾಗಿ ಷೋಡಶೋಪಚಾರದಿಂದ ಪೂಜಿಸಬೇಕು. ಆ ನೀರನ್ನು ಮರುದಿನ ಚತುರ್ದಶಿಯಂದು ಅಭ್ಯಂಗಸ್ನಾನಕ್ಕೆ ಬಳಸಬೇಕು. ಗ್ರಾಮ್ಯಭಾಷೆಯಲ್ಲಿ ಈ ದಿನವನ್ನು ನೀರು ತುಂಬೋ ಹಬ್ಬ ಎನ್ನುತ್ತಾರೆ.

ನರಕ ಚತುರ್ದಶಿ(24-10-2022) ವರಾಹದೇವರ ಬೆವರಿನ ಒಂದು ಹನಿ ಭೂದೇವಿಯ ಮೇಲೆ ಬಿದ್ದಾಗ, ಆ ಸ್ಪರ್ಶದಿಂದ ಹುಟ್ಟಿದವನೇ ನರಕಾಸುರ. ಮಹಾಲೋಕಕಂಟಕ. ಇಂದ್ರಲೋಕವನ್ನೂ ಬಿಡದೆ ಎಲ್ಲೆಡೆ ಹಿಂಸೆ ಕೊಡಲಾರಂಭಿಸಿದ. 16000 ಅಗ್ನಿಪುತ್ರಿಯರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟ. ಅವರೆಲ್ಲರೂ ತಮ್ಮನ್ನು ಬಂಧನದಿಂದ ಬಿಡಿಸಬೇಕೆಂದು ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ತಕ್ಷಣವೇ ಕೃಷ್ಣ ತೆರಳಿ ನರಕಾಸುರನನ್ನು ಸಂಹರಿಸಿ ಬಂಧನದಲ್ಲಿರುವ ಅಗ್ನಿಪುತ್ರಿಯರನ್ನೆಲ್ಲ ಮುಕ್ತಗೊಳಿಸುತ್ತಾನೆ. ಆದರೆ ನರಕಾಸುರನ ಸೆರಮನೆಯಲ್ಲಿದ್ದ ನಮ್ಮನ್ನು ಇನ್ನು ಮುಂದೆ ಯಾರು ಸ್ವೀಕರಿಸುತ್ತಾರೆ ಎಂದು ಕೃಷ್ಣನನ್ನು ಕೇಳುತ್ತಾರೆ. ತಕ್ಷಣವೇ ಕೃಷ್ಣ ನಾನೇ ನಿಮ್ಮನ್ನೆಲ್ಲ ವಿವಾಹವಾಗುತ್ತೇನೆ ಎಂದು ಸಂತೈಸಿ ವಿವಾಹವಾಗಿ ಅವರ ಪಾವಿತ್ರ್ಯತೆಯನ್ನು ಸೂಚಿಸುತ್ತಾನೆ. ಹೀಗೆ ನರಕಾಸುರನನ್ನು ಸಂಹರಿಸಿ, 16000 ಹೆಂಗಳೆಯರನ್ನು ವರಿಸಿ ಚಂದ್ರ ಇನ್ನೂ ಅಸ್ತಂಗತನಾಗದ, ಸೂರ್ಯ ಇನ್ನೂ ಉದಯಿಸದ ಮಧ್ಯಕಾಲದಲ್ಲಿ ದ್ವಾರಕೆಗೆ ಮರಳುತ್ತಾನೆ. ದ್ವಾರಕಾ ನಿವಾಸಿಗಳೆಲ್ಲ ನಗರದ ತುಂಬ ದೀಪಗಳನ್ನು ಬೆಳಗಿಸಿ ಕೃಷ್ಣನನ್ನು ಸ್ವಾಗತಿಸುತ್ತಾರೆ. ರುಕ್ಮಿಣೀದೇವಿಯು ಕೃಷ್ಣನಿಗೆ ಆ ಸಮಯದಲ್ಲಿ ಆರತಿ ಮಾಡಿ ಸುವಾಸಿತ ತೈಲ ಹಚ್ಚಿ ಅಭ್ಯಂಜನ ಮಾಡಿಸುತ್ತಾಳೆ. ಅಂದಿನಿಂದ ಚತುರ್ದಶಿಯಂದು ಬೆಳಗಿನಜಾವ ಮನೆಯಲ್ಲಿ ಸ್ತ್ರೀಯರಿಂದ ತೈಲಲೇಪನ ಮಾಡಿಸಿಕೊಂಡು ಆರತಿ ಮಾಡಿಸಿಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ. ಅಭ್ಯಂಜನದ ನಂತರ ನೂತನ ವಸ್ತ್ರಗಳನ್ನು ಧರಿಸಿ ಹಿರಿಯರ ಆಶೀರ್ವಾದ ಪಡೆಯಬೇಕು. ದುಷ್ಟರನ್ನು ಸಂಹರಿಸಿ ತನ್ನನ್ನು ನಂಬಿದವರನ್ನು ಕೃಷ್ಣ ಪೊರೆಯುವಂತೆ ನಾವು ನಮ್ಮನ್ನು ನಂಬಿದವರಿಗೆ ಸದಾ ವಿಶ್ವಾಸದ ಬೆಳಕನ್ನು ಚೆಲ್ಲಬೇಕೆಂಬುದೇ ಈ ಆಚರಣೆಯ ಸಂಕೇತ.


ದೀಪಾವಳಿ ಅಮಾವಾಸ್ಯೆ(25-10-2022) ಅಂದು ಸಾಯಂಕಾಲ ಶ್ರೀಮಹಾಲಕ್ಷ್ಮಿಯ ಪೂಜೆ ಮಾಡಬೇಕು. ದೀಪಗಳನ್ನು ಬೆಳಗಿಸಿ ಯಥಾಯೋಗ್ಯವಾಗಿ ಯಥಾವಿಧಿಯಾಗಿ ಪೂಜೆ ಮಾಡಿದರೆ ಅಲಕ್ಷ್ಮಿಯ ನಾಶವಾಗುತ್ತದೆ. ಮತ್ಸ್ಯಪುರಾಣದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಸಾಯಂಕಾಲ ಯಾರು ದೀಪಗಳನ್ನು ಪ್ರಜ್ವಲಿಸುತ್ತಾರೋ ಅವರ ಮನೆಗೆ ಸಂತಸದಿಂದ ಮಹಾಲಕ್ಷ್ಮಿ ಪ್ರವೇಶಿಸುತ್ತಾಳೆ. ಒಂದು ತಟ್ಟೆಯಲ್ಲಿ ಅಕ್ಕಿ ಹರಡಿ ಮಧ್ಯದಲ್ಲಿ ಧಾನ್ಯ ತುಂಬಿದ ಕಳಶ ಇಡಬೇಕು. ಸುತ್ತಲೂ ಮತ್ತು ಕಳಶದಲ್ಲಿ ನಾಣ್ಯಗಳನ್ನು ಹಾಕಬೇಕು. ಮಹಾಲಕ್ಷ್ಮಿಯ ಚಿಂತನೆಯನ್ನು ಮಾಡಿ ಪೂಜಿಸಬೇಕು. ಮನೆಯಲ್ಲಿ ಹಾಗೂ ವ್ಯಾಪಾರದಲ್ಲಿ ಏಳಿಗೆಗಾಗಿ ಈ ಲಕ್ಷ್ಮೀಪೂಜೆಯನ್ನು ಬಹಳ ವೈಭವದಿಂದ ಮಾಡುತ್ತಾರೆ. ಇದನ್ನು ಕೆಲವೆಡೆ ಕುಬೇರ ಪೂಜೆ ಎಂದೂ ಕರೆಯುತ್ತಾರೆ.

ಬಲಿಪಾಡ್ಯ(26-10-2022)
ಬಲಿಪ್ರತಿಪತ್ ದಿನದಂದು ವಾಮನನು ತ್ರಿವಿಕ್ರಮರೂಪಿಯಾಗಿ ಬಲಿಚಕ್ರವರ್ತಿಯನ್ನು ಸುತಲಲೋಕಕ್ಕೆ ಕಳುಹಿಸಿದ ದಿನ. ಮಹಾಧಾರ್ಮಿಕನಾದ ಬಲಿಮಹಾರಾಜನಿಗೂ ತಾನು ಎಲ್ಲವನ್ನು ಗೆದ್ದ ಮಹಾಚಕ್ರವರ್ತಿ ಎಂಬ ಅಹಂಕಾರ ಬಂತು. ಆ ಅಹಂಕಾರವನ್ನು ನಾಶಗೊಳಿಸಬೇಕೆಂದೇ ನಾರಾಯಣನು ವಾಮನರೂಪಿಯಾಗಿ ಬಂದು ಮೂರು ಪಾದ ಭೂಮಿಯನ್ನು ದಾನವಾಗಿ ಕೇಳಿದನು. ಸರ್ವಸ್ವವೂ ನನ್ನಾಧೀನದಲ್ಲಿರುವಾಗ ಬೇಕಾದ್ದನ್ನು ಕೊಡುವೆ ಎಂಬ ಅಹಂಕಾರದಿಂದ ಬಲಿಯು ಹೇಳುತ್ತಾನೆ. ಅದಕ್ಕೆ ವಾಮನನು ಒಂದು ಪಾದದಿಂದ ಭೂಲೋಕ, ಇನ್ನೊಂದು ಪಾದದಿಂದ ಸಮಸ್ತ ಆಕಾಶವನ್ನೇ ಅಳೆದ. ಇನ್ನು ಮೂರನೇ ಪಾದಕ್ಕೆ ಅವಕಾಶವೇ ಇಲ್ಲದಂತಾಯಿತು. ಆಗ ಬಲಿಚಕ್ರವರ್ತಿ ತನ್ನ ಶಿರದ ಮೇಲೆಯೇ ಮೂರನೇ ಪಾದ ಇಡಲು ಪ್ರಾರ್ಥಿಸಿದ. ಹೀಗೆ ವಾಮನನು ವಿರಾಟ್ ತ್ರಿವಿಕ್ರಮನಾಗಿ ಬಲಿಯ ಶಿರದ ಮೇಲೆ ಪಾದವನ್ನಿಟ್ಟು ಅವನನ್ನು ಸುತಲಲೋಕಕ್ಕೆ ಕಳುಹಿಸಿದ. ಇತಿಹಾಸದಲ್ಲೇ ಯಾರೂ ಕೊಡದಂತೆ ದಾನವನ್ನು ಕೊಟ್ಟ ಬಲಿಚಕ್ರವರ್ತಿಗೆ ಕಾರ್ತಿಕ ಶುದ್ಧ ಪ್ರತಿಪತ್ ದಿನವು ನಿನ್ನ ಹೆಸರಿನಿಂದಲೇ ಪ್ರಸಿದ್ಧವಾಗಲಿ ಎಂದು ವಾಮನನು ಬಲಿಗೆ ವರವನ್ನು ನೀಡಿ ಅನುಗ್ರಹಿಸಿದ. ಆದ್ದರಿಂದಲೇ ಈ ದಿನವನ್ನು ಬಲಿಪ್ರತಿಪದಾ ಅಥವಾ ಬಲಿಪಾಡ್ಯಮೀ ಎಂದು ಕರೆಯುತ್ತಾರೆ. ಈ ದಿನದಂದು ಯಾರು ದೀಪ ಬೆಳಗಿಸಿ ದೀಪದಾನ ಮಾಡುತ್ತಾರೋ ಅವರಲ್ಲಿ ಶ್ರೀಮಹಾಲಕ್ಷ್ಮೀ ಸ್ಥಿರವಾಗಿ ನೆಲೆಸುವಂತಾಗಲಿ ಎಂದು ಬಲಿಚಕ್ರವರ್ತಿಯು ವಾಮನನಲ್ಲಿ ವರ ಬೇಡಿದ. ಭೂಮಿ ಮತ್ತು ಆಕಾಶ ನಮ್ಮ ಅಧೀನ, ನಮ್ಮ ಬುದ್ಧಿಶಕ್ತಿಗೆ ಮಿಗಿಲಾದ್ದು ಏನೂ ಇಲ್ಲವೆಂದು ಅಹಂಕಾರದಿಂದ ಬೀಗುವ ಮನುಷ್ಯರಿಗೆ, ಸರ್ವಸ್ವವೂ ದೇವರ ಅಧೀನವೇ ಎಂದು ತೋರಿಸುವ ಸಾಂಕೇತಿಕ ಅರ್ಥವೇ ಈ ಬಲಿಪಾಡ್ಯದ ಆಚರಣೆ. ಬಲಿಪಾಡ್ಯಮಿಯಂದು ತೈಲಾಭ್ಯಂಜನ (ಎಣ್ಣೆಸ್ನಾನ) ಮಾಡಬೇಕು. ಬಲಿಯನ್ನು ನೆನೆದು ದೀಪ ಬೆಳಗಿಸಿ ದೇವರ ಸ್ವಾತಂತ್ರ್ಯವನ್ನು ಅನುಸಂಧಾನಕ್ಕೆ ತರಬೇಕು. ಇದಕ್ಕೆ ತ್ರೇತಾಯುಗದ ಹಿನ್ನೆಲೆಯೂ ಇದೆ. ವಿಜಯದಶಮಿಯಂದು ರಾವಣನನ್ನು ಸಂಹರಿಸಿ ರಾಮನು ಸೀತೆ ಮತ್ತು ಹನುಮಂತನೊಡನೆ ಅಯೋಧ್ಯೆಗೆ ಮರಳಿದ ಸುದಿನವೇ ಈ ಪಾಡ್ಯ. ದ್ವಾಪರದ ಹಿನ್ನೆಲೆ ನೋಡುವುದಾದರೆ, ವನವಾಸ ಮುಗಿಸಿ ಮಹಾನವಮಿಯಂದು ಶಮೀವೃಕ್ಷದಿಂದ ಆಯುಧಗಳನ್ನಿಳಿಸಿ ಪೂಜಿಸಿ, ವಿಜಯದಶಮಿಯಂದು ವಿರಾಟ ರಾಜನ ಗೋವುಗಳನ್ನು ಕದ್ದ ದುರ್ಯೋಧನಾದಿಗಳನ್ನು ಪಾಂಡವರು ಸೋಲಿಸಿದರು. ನಂತರ ಪಾಂಡವರು ಹಸ್ತಿನಾಪುರಕ್ಕೆ ಮರಳಿದ ಸಂತಸದ ದಿನವೇ ಈ ಪಾಡ್ಯ. ಹೀಗೆ ಎಲ್ಲ ಯುಗಗಳಲ್ಲಿಯೂ ದುಷ್ಟರ ನಿಗ್ರಹ ಮಾಡಿ ವಿಜಯದ ಸಂಕೇತವನ್ನು ಹೊಂದಿದ ವಿಶಿಷ್ಟ ದಿನ ಈ ಬಲಿಪ್ರತಿಪದೆ.


ಯಮದ್ವಿತೀಯಾ(27-10-2022) ಬಲಿಪಾಡ್ಯದ ಮರುದಿನ ದ್ವಿತೀಯಾದಂದು ಯಮನನ್ನು ಮತ್ತು ಯಮದೂತರಾದ ಚಿತ್ರಗುಪ್ತಾದಿಗಳನ್ನು ಪೂಜಿಸುವ ಸಂಪ್ರದಾಯ ಇದೆ. ಈ ದಿನ ಯಮನು ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಅವಳ ಕೈಯಿಂದ ಭೋಜನ ಸ್ವೀಕರಿಸಿದ. ಅವಳಿಗೆ ದೀರ್ಘಸೌಮಂಗಲ್ಯವನ್ನು ಹಾರೈಸಿದ. ಹೀಗೆ ಈ ದಿನ ಅಣ್ಣ-ತಮ್ಮಂದಿರು ತಮ್ಮ ಅಕ್ಕ-ತಂಗಿಯರ ಮನೆಗೆ ಹೋಗಿ ಭೋಜನ ಮಾಡಿದರೆ ಸೋದರ-ಸೋದರಿಯರ ಆಯುಷ್ಯಾಭಿವೃದ್ಧಿಯ ಜತೆಗೆ ಸೋದರಿಯ ಸೌಮಂಗಲ್ಯಾಭಿವೃದ್ಧಿಯಾಗುತ್ತದೆ. ಈ ದಿನವನ್ನು ಕೆಲವು ಕಡೆ ಭಾವು ಬಿದಗಿ ಎಂದು ಕರೆಯುತ್ತಾರೆ. ಮರಾಠಿಯಲ್ಲಿ ಭಾವು ಎಂದರೆ ಅಣ್ಣ ಅಥವಾ ತಮ್ಮ. ಶಿಥಿಲಗೊಂಡ ಸಂಬಂಧವನ್ನು ಬೆಸೆದು ಪರಿವಾರವನ್ನು ಒಂದೆಡೆ ಸೇರಿಸುವ ಪರ್ವ. ಹಿರಿಯರ ನೆರಳಿನಲ್ಲಿಯೇ ನಿಜವಾದ ಪರಿವಾರ ಮತ್ತು ಆಚರಣೆ ಎಂಬುದನ್ನು ಸಾರುವ ಪರ್ವ. ಹಣತೆಗಳನ್ನು ಬೆಳಗಿಸಿ ಪಟಾಕಿ ಸಿಡಿಸುವುದಷ್ಟೇ ಹಬ್ಬವಲ್ಲ. ತಮಸೋ ಮಾ ಜೋತಿರ್ಗಮಯ – ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯಬೇಕು ಎಂದು ಸಾರುವ ಸಂಸ್ಕೃತಿ ನಮ್ಮದು. ಅಜ್ಞಾನವನ್ನು ಕಳೆದು ಶ್ರೀ ಮಹಾಲಕ್ಷ್ಮಿಯು ಸುಜ್ಞಾನದ ಬೆಳಕನ್ನು ನೀಡಲಿ ಎಂಬ ಪ್ರಾರ್ಥನೆಯೇ ಸಾರ್ಥಕ ದೀಪಾವಳಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 6 =
Remember me
