ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಕುರಿತಾದ ಸಂಸದೀಯ ಸಮಿತಿ ಶಿಫಾರಸು ಮಾಡಿರುವುದನ್ನು ಕರ್ನಾಟಕದ ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಅನ್ವಯ ಸಂಸದೀಯ ಸಮಿತಿ ಮಾಡಿರುವ ಈ ಶಿಫಾರಸು ಒಳ್ಳೆಯ ಬೆಳವಣಿಗೆ. ಆದರೆ, ಇನ್ನಷ್ಟು ಸ್ಪಷ್ಟತೆ ಮೂಡಿಸಲು ಪ್ರಾದೇಶಿಕ ಭಾಷೆ ಜತೆಗೆ ಸ್ಥಳೀಯ ಭಾಷೆ ಹಾಗೂ ರಾಜ್ಯ ಭಾಷೆ ಪದಗಳ ಬಳಕೆ ಕುರಿತು ಹೆಚ್ಚು ನಿಖರವಾಗಿ ಹೇಳಬೇಕು. ಆಗ ಸಮಿತಿ ಶಿಫಾರಸು ಮಾಡಿದಂತೆ ಅನುಷ್ಠಾನಕ್ಕೆ ತರಲು ಸಾಧ್ಯ. ಜತೆಗೆ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಕನ್ನಡದ ಬೋಧನಾ ಕ್ರಮ ಸುಲಭ ಹಾಗೂ ಸುಲಲಿತವಾಗುತ್ತದೆ. ಈ ಕಾರ್ಯವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.
ಐಐಟಿಗಳಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹಾಗೂ ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಹಿಂದಿ ಭಾಷೆಯನ್ನು, ಇನ್ನಿತರ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕು. ಜತೆಗೆ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಬೇಕು ಎಂದು ಅಮಿತ್ ಶಾ ನೇತೃತ್ವದ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕೆಲ ಶಿಕ್ಷಣ ತಜ್ಞರು ವಿಜಯವಾಣಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರಾದೇಶಿಕ ಭಾಷೆ ಬೋಧನಾ ಮಾಧ್ಯಮವಾಗ ಬೇಕೆಂಬ ಸಂಸದೀಯ ಸಮಿತಿ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಇದರಿಂದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಾತೃ ಭಾಷೆ ಯಲ್ಲಿ ಬೋಧಿಸುವುದೆಂದರೆ ಕನ್ನಡದಲ್ಲಿಯೇ ಮಾತನಾಡುವುದು, ಕನ್ನಡದಲ್ಲಿಯೇ ಬೋಧನೆ ಮಾಡುವುದು ಎಂದರ್ಥ. ನಾವು ಕೂಡ ಹಲವು ಶಾಲೆಗಳಲ್ಲಿ ಇದರ ಬಗ್ಗೆಯೇ ಕೆಲಸ ಮಾಡುತ್ತಿದ್ದೇವೆ. ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಅವರ ಮಾತೃ ಭಾಷೆಯಲ್ಲಿ ವಿವರಿಸಿ ಹೇಳಿದರೆ ಅರ್ಥವಾಗುವಷ್ಟು ಆಂಗ್ಲ ಭಾಷೆಯಲ್ಲಿ ಅರ್ಥ ಆಗುವುದಿಲ್ಲ. ಬೋಧನೆ ಪ್ರಾದೇಶಿಕ ಭಾಷೆಯಲ್ಲಿ ಇದ್ದರೆ ಕಲ್ಪನೆಗಳಿಗೆ, ಹೊಸ ಹೊಸ ಪದ ಪ್ರಯೋಗಕ್ಕೆ ಅನುಕೂಲವಾಗುತ್ತದೆ ಎಂದು ಶಿಕ್ಷಣ ತಜ್ಞ, ಚೈಲ್ಡ್ ರೈಟ್ಸ್ ಟ್ರಸ್ಟ್​ನ ನಿರ್ದೇಶಕ ನಾಗಸಿಂಹ ಜಿ ರಾವ್ ತಿಳಿಸಿದ್ದಾರೆ.
ಎನ್​ಇಪಿ ರೂಪಿಸುವಾಗಲೇ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಸ್ಪಷ್ಟಪಡಿಸಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಆ ರೀತಿ ನಡೆದುಕೊಳ್ಳಲಿಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆ ಯಾವ ರೀತಿ ಇದೆ ಎಂಬುದು ನಮ್ಮ ಸರ್ಕಾರಕ್ಕೆ ತಿಳಿದಿರಬೇಕಿತ್ತು. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ರಾಜ್ಯದ ಆಡಳಿತ ಭಾಷೆ ಇರುತ್ತದೆ. ಅದನ್ನು ಹೇಳದೆ ಮಾತೃ ಭಾಷೆ ಎಂಬ ಪದ ಬಳಸಿ ಗೊಂದಲ ಸೃಷ್ಟಿಸಲಾಗಿದೆ.
ಟಿ.ಎಸ್.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಅಮಿತಾ ಷಾ ನೇತೃತ್ವದ ಸಮಿತಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಓದಿ ನನಗೆ ದೊಡ್ಡ ಆಘಾತವೇ ಆಯಿತು. ಸರ್ವಾಧಿಕಾರಿ ಮನಃಸ್ಥಿತಿಯಿಂದ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕಿ ಇಡೀ ದೇಶದ ಮೇಲೆ ಹಿಂದಿ ಹೇರಿ ಬಹುತ್ವದ ಭಾರತವನ್ನು ’ಹಿಂದಿಸ್ಥಾನ್’ ಮಾಡುವ ಹುನ್ನಾರ ಇದರ ಹಿಂದಿದೆ.
ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಸಂಸದೀಯ ಸಮಿತಿ ಶಿಫಾರಸು ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರಾದೇಶಿಕ ಭಾಷೆ ಅನ್ನುವುದಕ್ಕಿಂತ ರಾಜ್ಯ ಭಾಷೆ ಅಥವಾ ಮಾತೃ ಭಾಷೆ ಎಂದು ಹೇಳಬೇಕಾಗುತ್ತದೆ. ಏಕೆಂದರೆ, ಪ್ರಾದೇಶಿಕ ಭಾಷೆ ಅಂದರೆ ಬೇರೆ ಅರ್ಥ ಕೊಡುತ್ತದೆ. ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕು ಎಂಬುದು ಜಗತ್ತಿನ ಎಲ್ಲ ಸಂಶೋಧನೆಗಳ ಒತ್ತಾಯವಾಗಿದೆ. ಮಾತೃ ಭಾಷೆಯಲ್ಲಿ ಮಗು ಶಿಕ್ಷಣವನ್ನು ಕಲಿಯುವಾಗ ಸೃಜನಾತ್ಮಕವಾಗಿ ಕಲಿಯುತ್ತದೆ. ಜತೆಗೆ ಮಗುವಿಗೆ ತನ್ನ ಭಾಷೆಯಲ್ಲಿ ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. 2ನೇ ಅಥವಾ 3ನೇ ಭಾಷೆ ಕಲಿಯಬೇಕಾದರೆ ಮೊದಲು ಮಾತೃ ಭಾಷೆ ಕಲಿಯಬೇಕಾಗುತ್ತದೆ. ಮಾತೃ ಭಾಷೆ ಕಲಿಯದಿದ್ದರೆ ಬೇರೆ ಭಾಷೆಯನ್ನು ಕಲಿಯಲು ಸಾಧ್ಯವಾಗದು. ಬೇರೆ ಭಾಷೆ ಕಲಿಯಬೇಕಾದರೆ ಮಾತೃ ಭಾಷೆ ಮೇಲೆ ಹಿಡಿತ ಹೊಂದಿರಬೇಕು. ಏಕೆಂದರೆ ಎರಡನೇ ಭಾಷೆಯ ಕಲಿಕೆಯ ಪ್ರಕ್ರಿಯೇ ಹಾಗೆ ಇರುತ್ತದೆ. ಹೀಗಾಗಿ ಸಂಸದೀಯ ಸಮಿತಿ ಶಿಫಾರಸು ಮಾಡಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಶಿಕ್ಷಣ ತಜ್ಞ ಪ್ರೊ. ವಿ.ಪಿ. ನಿರಂಜನಾರಾಧ್ಯ ತಿಳಿಸಿದ್ದಾರೆ.
ಎನ್​ಇಪಿ ಕೂಡ ಕನಿಷ್ಠ 8ನೇ ತರಗತಿವರೆಗೆ ಆಯಾ ಮಾತೃ ಭಾಷೆ ಮತ್ತು ರಾಜ್ಯ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು ಅಂಥ ಹೇಳಿದೆ. ಈಗ ಇವೆರಡು ಒಂದೇ ರೀತಿಯ ಹೇಳಿರುವುದರಿಂದ ಇದನ್ನು ತ್ವರಿತವಾಗಿ ಪ್ರಾರಂಭ ಮಾಡಬೇಕು. ಇದರಿಂದ ಮಕ್ಕಳಿಗೆ ಬೇರೆ ಬೇರೆ ಹಂತಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − nine =
Remember me
