ಬೆಂಗಳೂರು:ಸಂಪುಟ ವಿಸ್ತರಣೆ ಬಳಿಕ ಇದೀಗ ಪವರ್ ಪುಲ್ ಖಾತೆ ಪಡೆಯಲು ಲಾಬಿ ನಡೆಸುತ್ತಿರುವ ನೂತನ ಸಚಿವರು, ತಮಗೆ ಇಂಥದ್ದೆ ಖಾತೆ ಬೇಕು ಎಂದು ಮುಖ್ಯಮಂತ್ರಿಗಳ ಮೇಲೆ ಪರೋಕ್ಷವಾಗಿ ಒತ್ತಡ ಹೇರುವ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಗೃಹ ಖಾತೆ ಬದಲು?:ಗೃಹ ಖಾತೆ ಬದಲಾವಣೆ ಆಗುವ ಸಾಧ್ಯತೆಗಳು ಇದ್ದು, ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ಪ್ರಮುಖ ಖಾತೆ ನೀಡುವ ಸಾಧ್ಯತೆ ಇದೆ. ಅರವಿಂದ ಲಿಂಬಾವಳಿಗೆ ಗೃಹ ಖಾತೆ ವಹಿಸಿದರೆ ಹೇಗೆ? ಎನ್ನುವ ನಿಟ್ಟಿನಲ್ಲಿಯೂ ಚರ್ಚೆಗಳು ನಡೆದಿವೆ. ಆದರೆ, ಈ ಬಗ್ಗೆ ಹೈಕಮಾಂಡ್ ಹಾಗೂ ಸಿಎಂ ತೆಗೆದುಕೊಳ್ಳುವ ತೀರ್ವನವೇ ಅಂತಿಮ ವಾಗಿರುವ ಕಾರಣ, ಎಲ್ಲರ ಚಿತ್ತ ಅತ್ತ ನೆಟ್ಟಿದೆ.
ಯಾವುದಕ್ಕೆ ಯಾರಿಂದ ಒತ್ತಡ:ಮುಖ್ಯಮಂತ್ರಿಗಳ ಬಳಿಯೇ ಇರುವ ಇಂಧನ ಖಾತೆ ಮೇಲೆ ಹಲವರ ಕಣ್ಣಿದೆ. ಲಭ್ಯ ಮಾಹಿತಿ ಪ್ರಕಾರ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ನಡುವೆ ತೆರೆ ಮರೆಯಲ್ಲಿ ಪೈಪೋಟಿ ನಡೆದಿದೆ. ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಹಿಂದಿನ ಜಲ ಸಂಪನ್ಮೂಲ ಖಾತೆಗೆ ಒತ್ತಡ ಹಾಕಿದ್ದಾರೆ, ಈಶ್ವರಪ್ಪ ಇಂಧನ ಖಾತೆಗೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಬೊಮ್ಮಾಯಿ ಅವರಿಗೆ ಇಂಧನ ಖಾತೆ ನೀಡಬಹುದೆಂದು ಹೇಳಲಾಗುತ್ತಿದೆ. ಇಂಧನ ಖಾತೆ ಸಿಗದಿದ್ದರೆ ಕೈಗಾರಿಕಾ ಖಾತೆಯನ್ನಾದರೂ ನೀಡುವಂತೆ ಮುರುಗೇಶ್ ನಿರಾಣಿ ಕೋರಿದ್ದಾರೆನ್ನಲಾಗಿದೆ. ತಮಗೆ ವಸತಿ ಖಾತೆಯೇ ಬೇಕೆಂದು ಎಂಟಿಬಿ ನಾಗರಾಜ್ ಕೇಳಿದ್ದಾರೆ. ಅದಕ್ಕಿಂತ ಒಳ್ಳೆಯ ಖಾತೆ ನೀಡುವುದಾಗಿ ಎಂಟಿಬಿಗೆ ಬಿಎಸ್​ವೈ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಬೆಂಗಳೂರಿಗೆ ಒತ್ತಡ:ಬೆಂಗಳೂರು ಅಭಿವೃದ್ಧಿ ಖಾತೆ ಹಾಗೂ ನಗರ ಜಿಲ್ಲೆ ಉಸ್ತುವಾರಿಗಾಗಿ ಮೂವರು ಸಚಿವರ ನಡುವೆ ಪೈಪೋಟಿ ಆರಂಭವಾಗಿದೆ. ಉಪ ಮುಖ್ಯಮಂತ್ರಿ ಡಾ. ಸಿ.ಎಸ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ್ ಹಾಗೂ ನೂತನ ಸಚಿವ ಅರವಿಂದ ಲಿಂಬಾವಳಿ ಅವರು ಪ್ರಯತ್ನ ನಡೆಸಿದ್ದಾರೆ.
ಹಿರಿಯರ ಜತೆ ರ್ಚಚಿಸಿ ಖಾತೆಗಳ ಬದಲಾವಣೆ:ಅಮಿತ್ ಷಾ ರಾಜ್ಯ ಪ್ರವಾಸಕ್ಕೆ ಮುನ್ನ ಇಲ್ಲವೇ ನಂತರ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಈ ಮೊದಲು ಷಾ ಬಂದು ಹೋದ ನಂತರ ಖಾತೆಗಳನ್ನು ಹಂಚಿಕೆ ಮಾಡಬೇಕೆಂದಿದ್ದೆ. ಆದರೆ ಷಾ ಭೇಟಿಗೆ ಮುನ್ನವೇ ಖಾತೆಗಳ ಹಂಚಿಕೆಯಾಗಬಹುದು ಎಂದರು. ಹಿರಿಯರೊಂದಿಗೆ ರ್ಚಚಿಸಿದ ಬಳಿಕ ಖಾತೆಗಳ ಬದಲಾವಣೆ ಬಗ್ಗೆ ನಿರ್ಧರಿಸುವೆ ಎಂದು ಹೇಳುವ ಮೂಲಕ ಹಾಲಿ ಸಚಿವರ ಖಾತೆಗಳ ಬದಲಾವಣೆ ಬಗ್ಗೆ ಸುಳಿವು ನೀಡಿದರು.
ಎಡವಟ್ಟು ರಿಪೀಟ್ ಇಲ್ಲ…:ಕೋವಿಡ್ ಸಂಕಷ್ಟ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ವಿಲೀನ ಮಾಡಿದ್ದ ಸಿಎಂ ಇನ್ನು ಮುಂದೆ ಎರಡನ್ನೂ ಒಬ್ಬರಲ್ಲೇ ಮುಂದುವರಿಸಲು ನಿರ್ಧರಿಸಿದ್ದಾರೆ. ಎಸ್.ಎಂ. ಕೃಷ್ಣ ಈ ಹಿಂದೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಬೇರೆ ಬೇರೆ ಮಾಡಿದ್ದು ನಂತರದ ದಿನಗಳಲ್ಲಿ ಹಲವು ಸಮಸ್ಯೆಗಳಿಗೆ ಕಾರಣ ವಾಗಿತ್ತು. ದಶಕಗಳ ಸಮಸ್ಯೆಗೆ ಕರೊನಾ ಕಠಿಣ ಸ್ಥಿತಿ ಪರಿಹಾರ ನೀಡಿತ್ತು. ಎರಡೂ ವಿಭಾಗಗಳು ಒಂದೇ ಕಡೆ ನಿರ್ವಹಣೆಯಾದರೆ ಅನಗತ್ಯ ವೆಚ್ಚ, ಗೊಂದಲ ನಿವಾರಣೆಯಾಗಲಿದೆ ಎಂಬುದು ಖಚಿತವಾಗಿರುವ ಕಾರಣ ಡಾ. ಸುಧಾಕರ್ ಅವರನ್ನೇ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಗ್ರಾ.ಪಂ. ಚುನಾವಣೆಯ ಯಶೋಗಾಥೆ, ಜನ ಸೇವಕ ಸಮಾವೇಶಕ್ಕೆ ಉತ್ತಮ ಸ್ಪಂದನೆ, ಸಚಿವ ಸ್ಥಾನ ವಂಚಿತರ ಅಸಮಾಧಾನದ ಹೊಸ್ತಿಲಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್​ನಲ್ಲಿ ಶನಿವಾರ ರಾತ್ರಿ 7.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮಕ್ಷಮ ಸಭೆ ನಡೆಯಲಿರುವ ಕಾರಣ ಎಲ್ಲಿಲ್ಲದ ಮಹತ್ವ ಬಂದಿದ್ದು, ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿಎಂ ಬಿ.ಎಸ್. ಯಡಿಯೂರಪ್ಪ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಕೋರ್ ಕಮಿಟಿ ಸಭೆಗೆ ಮುನ್ನ ಅಥವಾ ನಂತರ ಷಾ ಮುಂದೆ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಯಡಿಯೂರಪ್ಪ ಸ್ವಯಂ ಪ್ರೇರಿತವಾಗಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಸಚಿವ ಸಂಪುಟ ವಿಸ್ತರಣೆಗೆ ಮುನ್ನ, ನಂತರದಲ್ಲಿ ಕೆಲವು ಶಾಸಕರ ಮಾತು-ವರ್ತನೆ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಿದ್ದರೂ ಯಾವುದೇ ಕ್ರಮವಿಲ್ಲ ಎಂಬ ಅಸಮಾಧಾನವನ್ನು ಸಿಎಂ ಬಿಎಸ್​ವೈ ನಿವೇದಿಸಿಕೊಂಡರೂ ಅಚ್ಚರಿಯಿಲ್ಲ. ಎಲ್ಲೆಮೀರಿ ಹೇಳಿಕೆ ನೀಡುವ ಶಾಸಕರಿಗೆ ಪಕ್ಷದಿಂದ ಕನಿಷ್ಠ ನೋಟಿಸ್ ಕೂಡ ನೀಡಿಲ್ಲ. ಇದು, ಬಾಯಿ ಸಡಿಲು ಬಿಟ್ಟು ಮಾತನಾಡುವವರಿಗೆ ಉತ್ತೇಜಿಸಿದೆ. ರಾಜ್ಯ ಹಾಗೂ ಕೇಂದ್ರದ ಕೆಲವು ನಾಯಕರ ಬಗ್ಗೆ ಅಪಾರ್ಥಕ್ಕೆ ಕಾರಣವಾಗಿದೆ ಎನ್ನುವ ಅಂಶದತ್ತ ಗಮನಸೆಳೆಯಬಹುದು ಎನ್ನಲಾಗುತ್ತಿದೆ.
ಸಂಭಾವ್ಯ ಚರ್ಚೆ:ಬೆಳಗಾವಿ ಲೋಕಸಭೆ, ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರು, ಜಿಲ್ಲಾ ಹಾಗೂ ತಾಲೂಕು ಚುನಾವಣೆ ತಯಾರಿ ಕುರಿತು ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. ಸಂಘಟನಾ ಚಟುವಟಿಕೆಗಳು ವಿಶ್ಲೇಷಣೆಯಾಗಲಿವೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಾಗಿದೆ. ಲವ್ ಜಿಹಾದ್ ಮಸೂದೆ ರೂಪಿಸಲು ಮಾಡಿಕೊಂಡ ಸಿದ್ಧತೆ, ಸರ್ಕಾರದ ಕೆಲವೊಂದು ನೀತಿ-ನಿರ್ಧಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 2 =
Remember me
