ಕೀರ್ತಿನಾರಾಯಣ ಸಿ. ಬೆಂಗಳೂರು
ಪೊಲೀಸರು ಜನಸಾಮಾನ್ಯರನ್ನು ಹೆದರಿಸಿ ವಸೂಲಿ ಮಾಡುತ್ತಾರೆಂಬ ಆರೋಪ ಹಳೆಯದು. ಆದರೆ, ಇಲಾಖೆಯಲ್ಲಿ ಪೊಲೀಸರನ್ನೇ ಬೆದರಿಸಿ ಲಂಚ ಕೀಳುವ ‘ಪ್ರಭಾವಿ’ಗಳಿದ್ದಾರೆಂಬುದು ಹೊಸ ವಿಚಾರ! ಪೊಲೀಸ್ ಇಲಾಖೆಯ ಆಡಳಿತ ಕಚೇರಿಗಳಲ್ಲಿರುವ ಲಿಪಿಕಾಧಿಕಾರಿಗಳು, (ಕ್ಲರಿಕಲ್/ಮಿನಿಸ್ಟ್ರಿಯಲ್ ಸ್ಟಾಫ್) ಪೊಲೀಸರಿಗೆ ಸಂಬಂಧಿಸಿದ ಪತ್ರ ವ್ಯವಹಾರಗಳನ್ನು ಮುಂದುವರಿಸಿ ಅನುಮತಿ ಕೊಡಿಸಲು ಲಂಚಕ್ಕೆ ಬೇಡಿಕೆಯೊಡ್ಡುವ ಆರೋಪ ಕೇಳಿಬಂದಿದೆ.
ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರುವಂಥ ಇನ್​ಸ್ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಮತ್ತು ಕಾನ್​ಸ್ಟೆಬಲ್​ಗಳನ್ನು ಎತ್ತಂಗಡಿ ಮಾಡುವ ವ್ಯವಸ್ಥೆ ಪೊಲೀಸ್ ಇಲಾಖೆಯಲ್ಲಿದೆ. ಆದರೆ, ಪೊಲೀಸ್ ಅಧಿಕಾರಿಗಳ ಕಚೇರಿಗಳಲ್ಲಿ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಿಬ್ಬಂದಿ ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷಕೊಮ್ಮೆ ಕಡ್ಡಾಯ ವರ್ಗಾವಣೆ ನಿಯಮ ಇವರಿಗೆ ಅನ್ವಯವಾಗುತ್ತಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ, ಕಮಿಷನರ್ ಕಚೇರಿ, ಐಜಿಪಿ, ಡಿಸಿಪಿ, ಎಸ್ಪಿ, ಡಿವೈಎಸ್ಪಿ ಕಚೇರಿ ಹಾಗೂ ಕೆಎಸ್​ಆರ್​ಪಿ ಕಮಾಂಡೆಂಟ್ ಕಚೇರಿ ಸೇರಿ ರಾಜ್ಯಾದ್ಯಂತ ಇಲಾಖೆಯ ಬೇರೆಬೇರೆ ಕಚೇರಿಗಳಲ್ಲಿ ಅಂದಾಜು 1700ಕ್ಕೂ ಹೆಚ್ಚು ಎಫ್​ಡಿಎ ಮತ್ತು ಎಸ್​ಡಿಎ ಸಿಬ್ಬಂದಿಯಿದ್ದಾರೆ. ಬಹುತೇಕ ಸಿಬ್ಬಂದಿಗೆ ಹಲವು ವರ್ಷಗಳಿಂದ ವರ್ಗಾವಣೆ ಆಗಿಯೇ ಇಲ್ಲ ಎಂಬ ಮಾಹಿತಿ ಇದೆ.
ಅಪರಾಧ ಶಾಖೆ, ಸಿಬ್ಬಂದಿ ಶಾಖೆ ಮತ್ತು ವೇತನ ಶಾಖೆಗಳಲ್ಲಿ ಗುಮಾಸ್ತ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಮೂರು ಶಾಖೆಗಳಡಿಯಲ್ಲಿ 10ಕ್ಕೂ ಹೆಚ್ಚು ಉಪ ವಿಭಾಗಗಳು ಬರಲಿದ್ದು, ತಲಾ ಶಾಖೆಗೆ ಸಹಾಯಕ ಆಡಳಿತಾಧಿಕಾರಿ (ಎಎಒ), ಶಾಖಾಧೀಕ್ಷಕ (ಸೆಕ್ಷನ್ ಸೂಪರಿಂಟೆಂಡೆಂಟ್) ಹಾಗೂ ಕ್ಲರ್ಕ್​ಗಳಿದ್ದಾರೆ. ಜಿಲ್ಲಾ ಕಚೇರಿಯಲ್ಲಿ ಒಬ್ಬ ಎಎಒ, ಮೂವರು ಶಾಖಾಧೀಕ್ಷಕರು ಇರುತ್ತಾರೆ. ಶಾಖಾಧಿಕಾರಿಗೆ ಒಂದೊಂದು ಶಾಖೆ ಜವಾಬ್ದಾರಿ ನೀಡಲಾಗಿರುತ್ತದೆ. ಈ ಅಧಿಕಾರಿ ಕೈಕೆಳಗೆ 10 ರಿಂದ 12 ಎಸ್​ಡಿಎ ಹಾಗೂ ಎಫ್​ಡಿಎಗಳಿದ್ದಾರೆ.
ಅನುದಾನದಲ್ಲೂ ಗೋಲ್ಮಾಲ್: ಪ್ರಯಾಣ ಭತ್ಯೆ, ಆಹಾರ ಭತ್ಯೆ ವಸತಿ ಗೃಹಗಳ ದುರಸ್ತಿ, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಗೌರವ ಧನ, ಸ್ಟಿಚಿಂಗ್ ಚಾರ್ಜ್, ಸ್ಟೋರ್ ಗಣಕ ಖರೀದಿ, ಕಚೇರಿ ನವೀಕರಣ ಹೀಗೆ ಇನ್ನಿತರ ಉದ್ದೇಶಗಳಿಗೆ ಪ್ರತಿ ವರ್ಷ ಪೊಲೀಸ್ ಇಲಾಖೆಗೆ ಸಾಕಷ್ಟು ಅನುದಾನ ಬರುತ್ತದೆ. ಆದರೆ, ಈ ಅನುದಾನ ಪೊಲೀಸರು ಮತ್ತು ಅವರ ಕುಟುಂಬಕ್ಕೆ ಬೇಕಾದ ಸೌಲಭ್ಯಗಳಿಗೆ ನ್ಯಾಯಸಮ್ಮತವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.
ವರ್ಗಾವಣೆಗೂ ಡೀಲ್!: ಎಸ್​ಡಿಎ ಹಾಗೂ ಎಫ್​ಡಿಎ ಸಿಬ್ಬಂದಿ ಹಿರಿಯ ಅಧಿಕಾರಿಗಳ ಜತೆ ನೇರ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಕೆಳಹಂತದ ಸಿಬ್ಬಂದಿಗೆ ವರ್ಗಾವಣೆ ಮಾಡಿಸಿಕೊಡುವ ಹೆಸರಿನಲ್ಲಿ ಲಂಚ ಪಡೆಯುವ ಆರೋಪವೂ ಕೇಳಿಬಂದಿದೆ. ಕಾನ್​ಸ್ಟೆಬಲ್​ನಿಂದ ಹಿಡಿದು ಡಿವೈಎಸ್ಪಿವರೆಗೆ ತಮ್ಮನ್ನು ವರ್ಗಾವಣೆ ಮಾಡಿಸಿಕೊಡುವಂತೆ ಎಸ್​ಡಿಎ/ಎಫ್​ಡಿಎ ಸಿಬ್ಬಂದಿಯನ್ನು ಸಂರ್ಪಸುತ್ತಾರೆ ಎಂಬುದನ್ನು ಖುದ್ದು ಪೊಲೀಸರೇ ಹೇಳುತ್ತಾರೆ.
ಕೆಲ ಜಿಲ್ಲೆಗಳಲ್ಲಂತೂ ಲಿಪಿಕಾಧಿಕಾರಿ ಮತ್ತು ಸಿಬ್ಬಂದಿಯ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿ ಕ್ರಮ ತೆಗೆದುಕೊಂಡರೆ ಅವರನ್ನೇ ಎತ್ತಂಗಡಿ ಮಾಡುವಷ್ಟು ಪ್ರಬಲರು ಎಂದು ಪೊಲೀಸರು ಹೇಳುತ್ತಾರೆ. ಬೆಂಗಳೂರು ಕಮೀಷನರ್ ಕಚೇರಿ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ನಿಶಾ ಜೇಮ್್ಸ ವಿಚಾರದಲ್ಲಿ ಕ್ಲರಿಕಲ್ ಸಿಬ್ಬಂದಿಯ ಪ್ರಭಾವ ಬಹಿರಂಗಗೊಂಡಿದೆ. ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದ ನಿಶಾ ಜೇಮ್ಸ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆಂಬ ಕಾರಣಕ್ಕೆ ಅವರ ವಿರುದ್ಧ 40ಕ್ಕೂ ಅಧಿಕ ಕ್ಲರಿಕಲ್ ಸಿಬ್ಬಂದಿ ಸುಳ್ಳು ದೂರು ಬರೆದು ಎತ್ತಂಗಡಿ ಮಾಡಿಸಿದರು ಎಂಬುದು ಪೊಲೀಸರ ವಾದ.
ಡಿಜಿಪಿ ಪ್ರಧಾನ ಕಚೇರಿ-42, ಕೆಎಸ್​ಆರ್​ಪಿ ಬೆಟಾಲಿಯನ್-2 -2, ಕೆಎಸ್​ಆರ್​ಪಿ ಬೆಟಾಲಿಯನ್ 3 – 3, ಎಫ್​ಎಸ್​ಎಲ್ ಮಡಿವಾಳ – 4, ಬೆಂಗಳೂರು ನಗರ- 259, ಬೆಂಗಳೂರು ಜಿಲ್ಲೆ- 18, ಬೀದರ್- 10, ಬಾಗಲಕೋಟೆ- 13, ಬಳ್ಳಾರಿ- 13, ಬೆಳಗಾವಿ- 62, ಚಾಮರಾಜನಗರ- 6, ಚಿಕ್ಕಬಳ್ಳಾಪುರ- 8, ಚಿಕ್ಕಮಗಳೂರು- 9, ಚಿತ್ರದುರ್ಗ- 5, ಸಿಐಡಿ- 38, ಕರಾವಳಿ ಭದ್ರತೆ- 3, ದಕ್ಷಿಣ ಕನ್ನಡ- 21, ದಾವಣಗೆರೆ-19, ಧಾರವಾಡ-9, ಗದಗ-9, ಹಾಸನ-14, ಹಾವೇರಿ-12, ಹುಬ್ಬಳ್ಳಿ-ಧಾರವಾಡ-9, ಕೆಜಿಎಫ್-9, ಕಲಬುರ್ಗಿ-29, ರೈಲ್ವೆ ಇಲಾಖೆ-10, ಕೊಡಗು-6, ಕೋಲಾರ-8, ಕೊಪ್ಪಳ-19, ಮಂಡ್ಯ-8, ಮಂಗಳೂರು-20, ಮೈಸೂರು ನಗರ-20, ಮೈಸೂರು ಜಿಲ್ಲೆ-12, ರಾಯಚೂರು-13, ರಾಮನಗರ-10, ಶಿವಮೊಗ್ಗ-15, ತುಮಕೂರು-10, ಉಡುಪಿ-13, ಉತ್ತರ ಕನ್ನಡ-10, ವಿಜಯಪುರ-19, ಯಾದಗಿರಿ-8.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + fifteen =
Remember me
