ನವದೆಹಲಿ/ಬೆಂಗಳೂರು:ಸಾರ್ವಜನಿಕ ಪ್ರದೇಶಗಳನ್ನು ಒತ್ತುವರಿ ಮಾಡಿ ನಿರ್ವಿುಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದ್ದು, ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನಲ್ಲಿ ನಿರ್ವಿುಸಲಾಗಿರುವ ಲಕ್ಷಾಂತರ ಕಟ್ಟಡಗಳು ನೆಲಸಮವಾಗುವ ಸಾಧ್ಯತೆ ಇದೆ.
ಈಗಾಗಲೇ ಪಾರ್ಕಿಂಗ್​ ಜಾಗ ಕೊರತೆ ಸಹಿತ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಂಗಳೂರನ್ನು ಮತ್ತಷ್ಟು ಹಾಳಾಗಲು ಬಿಡುವುದಿಲ್ಲ ಎಂದು ಕೋರ್ಟ್ ಬಿಬಿಎಂಪಿಗೆ ಸ್ಪಷ್ಟವಾಗಿ ಹೇಳಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಸೋಮವಾರ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ವಿಭಾಗೀಯ ಪೀಠ, ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕುವ ಸಲುವಾಗಿ ಹೈಕೋರ್ಟ್ ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ ಎಂದು ಸ್ಪಷ್ಟಪಡಿಸಿತು.
ಬಿಬಿಎಂಪಿ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬೆಂಗಳೂರಿನ ಅಕ್ರಮ-ಸಕ್ರಮದ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಬಾಕಿ ಇರುವಾಗ ಹೈಕೋರ್ಟ್ ಇಂಥ ತೀರ್ಪು ನೀಡಬಾರದಿತ್ತು. ಒಂದು ವೇಳೆ ಸುಪ್ರೀಂಕೋರ್ಟ್ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಅವಕಾಶ ನೀಡಿದರೆ ಆಗೇನು ಮಾಡುವುದು? ಆದ್ದರಿಂದ, ಸದ್ಯ ಕಟ್ಟಡಗಳನ್ನು ತೆರವು ಮಾಡುವುದು ಬೇಡ ಎಂದು ಮನವಿ ಮಾಡಿದರು. ಆದರೆ, ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು.
2015ರಲ್ಲಿ ಬೆಂಗಳೂರಿನ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿದ್ದ ಬಿಬಿಎಂಪಿ, ಒಟ್ಟು 2.93 ಲಕ್ಷ ಅನಧಿಕೃತ ಸೈಟ್ ಮತ್ತು ಕಟ್ಟಡಗಳನ್ನು ಗುರುತಿಸಿತ್ತು. ಆದರೆ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ 1961 ಮತ್ತು ಕರ್ನಾಟಕ ಮುನ್ಸಿಪಾಲಿಟಿಸ್ ಕಾಯ್ದೆ-1964ಕ್ಕೆ ವಿವಿಧ ತಿದ್ದುಪಡಿಗಳನ್ನು ತರಲಾಗಿತ್ತು.
ಅಗತ್ಯ ನೆರವು ನೀಡಲು ಸೂಚನೆ:ಬೆಂಗಳೂರಲ್ಲಿ ಶೇ. 90 ಕಟ್ಟಡಗಳು ನಿಯಮಗಳನ್ನು ಉಲ್ಲಂಘಿಸಿವೆ. ಅಂಥ ಕಟ್ಟಡಗಳನ್ನು ತೆರವುಗೊಳಿಸಲು ಅಥವಾ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ಪಾಲಿಕೆ ಬಳಿ ಅಗತ್ಯ ಸಿಬ್ಬಂದಿ, ಹಣಕಾಸು ಇಲ್ಲ ಎಂದು ಬಿಬಿಎಂಪಿ ಹೈಕೋರ್ಟ್​ಗೆ ತಿಳಿಸಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಅನಧಿಕೃತ ಕಟ್ಟಡಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಯಥಾವತ್ತಾಗಿ ಪಾಲಿಸಬೇಕಿದೆ.
ತೆರವು ಕಾರ್ಯಾಚರಣೆಗೆ ಸಿಬ್ಬಂದಿ ಮತ್ತು ಹಣಕಾಸಿನ ನೆರವು ಕೋರಿ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪಾಲಿಕೆ ಕೇಳಿದ ನೆರವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಸ್ವತಂತ್ರವಾಗಿ ಯಾವುದೇ ಗುತ್ತಿಗೆದಾರರನ್ನು ಅಥವಾ ಹೊರಗುತ್ತಿಗೆ ಏಜೆನ್ಸಿಯನ್ನು ತೆರವು ಕಾರ್ಯಕ್ಕೆ ಬಳಸಬಾರದು. ಸರ್ಕಾರದ ಸಿಬ್ಬಂದಿಯನ್ನೇ ಬಳಸಬೇಕು ಎಂದು ಕೋರ್ಟ್ ಆದೇಶಿಸಿತ್ತು.
980 ಅನಧಿಕೃತ ಕಟ್ಟಡಗಳಿಗೆ ನೋಟಿಸ್
ನಗರದಲ್ಲಿ ಅನಧಿಕೃತವಾಗಿ ನಿರ್ವಿುಸಿದ್ದ 980 ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಲು ನೊಟೀಸ್ ನೀಡಲಾಗಿತ್ತು. ಬೆಂಗಳೂರು ದಕ್ಷಿಣ ವಲಯದಲ್ಲಿ 274, ಮಹದೇವಪುರ 176, ಯಲಹಂಕ 136, ಪೂರ್ವ ವಲಯ 108, ಆರ್.ಆರ್. ನಗರ 103, ಬೊಮ್ಮನಹಳ್ಳಿ 92, ಪಶ್ಚಿಮ ವಲಯ 88 ಹಾಗೂ ದಾಸರಹಳ್ಳಿಯಲ್ಲಿ 3 ಕಾನೂನು ಬಾಹಿರ ಕಾನೂನು ಬಾಹಿರ ಕಟ್ಟಡಗಳಿಗೆ ಪಾಲಿಕೆ ನೋಟಿಸ್ ಜಾರಿಗೊಳಿಸಲಾಗಿತ್ತು. ಈಗ ಕೋರ್ಟ್ ಆದೇಶದಂತೆ ಅನಧಿಕೃತ ಕಟ್ಟಡಗಳ ತೆರವಿಗೆ ಮುಹೂರ್ತ ಬಂದಂತಾಗಿದೆ.
ಕಾನೂನು ಪ್ರಕಾರ ತೆರವಿಗೆ ಆದೇಶ
ಅನಧಿಕೃತ ಕಟ್ಟಡಗಳ ತೆರವಿಗೆ ಮುಂದಾಗುವ ಪಾಲಿಕೆ ಪ್ರತಿ ಬಾರಿಯೂ ಬಡವರ ಸಣ್ಣಪುಟ್ಟ ಮನೆಗಳನ್ನೇ ಮೊದಲು ತೆರವುಗೊಳಿಸುತ್ತದೆ. ಈ ಹಿಂದೆಯೂ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದ್ದ ಬಿಬಿಎಂಪಿ ಕಳೆದ 3 ವರ್ಷಗಳಲ್ಲಿ ಒತ್ತುವರಿ ಮಾಡಲಾದ 2626 ಮನೆಗಳನ್ನು ಗುರುತಿಸಿ 1600 ಮನೆಗಳನ್ನು ನೆಲಸಮಗೊಳಿಸಿತ್ತು. ಆದರೆ, ರಾಜಕಾಲುವೆಗಳ ಮೇಲೆ ಮನೆ ನಿರ್ಮಾಣ ಮಾಡಿದ್ದ ಶ್ರೀಮಂತರು ಪಾಲಿಕೆ ನೀಡಿದ್ದ ತೆರವು ನೋಟಿಸ್​ಗೆ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದರು.
ಇದನ್ನು ತಪ್ಪಿಸುವ ಸಲುವಾಗಿ ಕಾನೂನು ಪ್ರಕಾರವೇ ಕಟ್ಟಡಗಳ ತೆರವು ಮಾಡಬೇಕೆಂದು ಆದೇಶಿಸಿರುವ ಹೈಕೋರ್ಟ್, ಮೊದಲು ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು. ಅನಧಿಕೃತ ಕಟ್ಟಡಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿ, ಅವರ ಅಹವಾಲುಗಳನ್ನೂ ಆಲಿಸಬೇಕು. ಆ ನಂತರವೇ ತೆರವು ಕಾರ್ಯಾಚರಣೆ ನಡೆಸಬೇಕು. ಕೋರ್ಟ್ ಆದೇಶವಿದೆ ಎಂಬ ಮಾತ್ರಕ್ಕೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಪಾಲಿಕೆಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಹೈಕೋರ್ಟ್ ಆದೇಶವೇನು?
ಅನಧಿಕೃತ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ. 25ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಸಾರ್ವಜನಿಕ ಪ್ರದೇಶಗಳನ್ನು ಒತ್ತುವರಿ ಮಾಡಿ ನಿರ್ವಿುಸಿರುವ ಕಟ್ಟಡಗಳು ಹಾಗೂ ನಕ್ಷೆ ಮಂಜೂರಾತಿ ಪಡೆಯದ, ಮಂಜೂರಾತಿ ಪಡೆದು ನಕ್ಷೆ ಹಾಗೂ ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಗುರುತಿಸಲು ಹೊಸದಾಗಿ ಸಮೀಕ್ಷೆ ನಡೆಸಬೇಕು. ಮೊದಲ ಹಂತದಲ್ಲಿ ಸಮೀಕ್ಷೆ ನಡೆಸಿ ಅನಧಿಕೃತ ಕಟ್ಟಡಗಳನ್ನು ಗುರುತಿಸಬೇಕು.
ಎರಡನೇ ಹಂತದಲ್ಲಿ ಅನಧಿಕೃತ ಕಟ್ಟಡಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಬೇಕು. ಮೂರನೇ ಹಂತದಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಬೇಕು. ಅದಕ್ಕಾಗಿ ಕಾಲಮಿತಿಯ ಯೋಜನೆ ರೂಪಿಸಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಆದೇಶಿಸಿತ್ತು.
ಅಕ್ರಮಕ್ಕೆ ಕಡಿವಾಣ?
ರಾಜಕಾರಣಿಗಳು, ಬಿಬಿಎಂಪಿ ಅಧಿಕಾರಿಗಳು, ರಿಯಲ್ ಎಸ್ಟೇಟ್ ಮಾಫಿಯಾ ಜತೆಯಾಗಿ ಅಕ್ರಮ ಕಟ್ಟಡಗಳ ತಾಣವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇಂಥ ಅಕ್ರಮಕ್ಕೆ ಸುಪ್ರೀಂಕೋರ್ಟ್ ಆದೇಶದಿಂದ ಕಡಿವಾಣ ಬೀಳುವ ಸಾಧ್ಯತೆ ಇದೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಕಟ್ಟಡ ಕಿರಿಕಿರಿ, ಕಸ ನಿರ್ವಹಣೆ ಸೇರಿ ಅನೇಕ ಸಮಸ್ಯೆಗಳ ಮೂಲವಾಗಿರುವ ಅತಿಕ್ರಮಣಕ್ಕೆ ಬ್ರೇಕ್ ಬೀಳುವ ಆಶಯ ವ್ಯಕ್ತವಾಗಿದೆ.
ಅನಧಿಕೃತ ಕಟ್ಟಡಗಳು ಯಾವವು?
ಕೆರೆ ಪ್ರದೇಶ, ರಾಜಕಾಲುವೆ, ಸಾರ್ವಜನಿಕ ರಸ್ತೆ, ಉದ್ಯಾನ ಸೇರಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿ ನಿರ್ವಿುಸಿರುವ ಕಟ್ಟಡಗಳು, ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಾಣ ಮಾಡಿರುವ ಕಟ್ಟಡಗಳು, ಮಂಜೂರಾತಿ ಪಡೆದು ನಕ್ಷೆ ಹಾಗೂ ನಿಯಮ ಉಲ್ಲಂಘಿಸಿದ ಕಟ್ಟಡಗಳು ಅನಧಿಕೃತ ಕಟ್ಟಡಗಳೆನಿಸಿಕೊಳ್ಳುತ್ತವೆ. ಸರ್ಕಾರಿ ಜಮೀನು ಅತಿಕ್ರಮಿಸಿಕೊಂಡು ನಿರ್ವಿುಸಲಾಗಿರುವ ಕಟ್ಟಡಗಳು ಹಾಗೂ ಶೇ.100 ಹಾಗೂ ಅದನ್ನೂ ಮೀರಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳ ತೆರವಿಗೆ ಪಾಲಿಕೆ ಮೊದಲ ಆದ್ಯತೆ ನೀಡಬೇಕಿದೆ.
6-7 ಸಾವಿರ ಕೋಟಿ ರೂ. ಸಂಗ್ರಹ ನಿರೀಕ್ಷೆ
ಭೂ ಒತ್ತುವರಿ ತೆರವು ಹಾಗೂ ನಗರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ವಿುಸಿರುವ ಮನೆಗಳನ್ನು ಸಕ್ರಮ ಮಾಡುವ ಮೂಲಕ 6-7 ಸಾವಿರ ಕೋಟಿ ರೂ.ಗಳನ್ನು ಹೆಚ್ಚ್ಚುವರಿಯಾಗಿ ಸಂಗ್ರಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭೂ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನೇಮಕ ಮಾಡಿರುವ ಕೆ.ಜಿ. ಬೋಪಯ್ಯ ಸಮಿತಿ ವರದಿ ಮೂರು ತಿಂಗಳಿನಲ್ಲಿ ಕೈ ಸೇರಲಿದೆ. ಆ ನಂತರ ಒತ್ತುವರಿ ತೆರವಿನಿಂದ ಸುಮಾರು 6 ಸಾವಿರ ಕೋಟಿ ರೂ.ಗಳ ನಿರೀಕ್ಷೆ ಮಾಡಲಾಗುತ್ತಿದೆ ಎಂದರು. ಅಕ್ರಮವಾಗಿ ನಿರ್ವಿುಸಿರುವ ಮನೆಗಳನ್ನು ಒಡೆದು ಹಾಕಲು ಸಾಧ್ಯವಿಲ್ಲ. ಅವುಗಳನ್ನು ದಂಡದೊಂದಿಗೆ ಸಕ್ರಮ ಮಾಡಬೇಕಾಗುತ್ತದೆ. ಆ ರೀತಿ ಮಾಡುವುದರಿಂದ 1 ಸಾವಿರ ಕೋಟಿ ರೂ.ಗಳು ಬರಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
